ಹರ್ನಿಯಾ: ಶಸ್ತ್ರಚಿಕಿತ್ಸೆ ಕುರಿತು ನಿರ್ಲಕ್ಷ್ಯ ಬೇಡ (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿ
ಹರ್ನಿಯಾ ವಯಸ್ಕರನ್ನು ಕಾಡುವ ಸಾಮಾನ್ಯ ಶಸ್ತ್ರಕ್ರಿಯೆಯ (surgical) ಆರೋಗ್ಯ ಸಮಸ್ಯೆಯಾಗಿದ್ದರೂ ಇದು ನವಜಾತ ಶಿಶುವಿನಿಂದ ಹಿಡಿದು ಯಾರನ್ನಾದರೂ ಕಾಡಬಹುದಾಗಿದೆ.
Published: 29th January 2022 10:06 AM | Last Updated: 29th January 2022 02:52 PM | A+A A-

ಹರ್ನಿಯಾ (ಸಾಂಕೇತಿಕ ಚಿತ್ರ)
ಹರ್ನಿಯಾ ವಯಸ್ಕರನ್ನು ಕಾಡುವ ಸಾಮಾನ್ಯ ಶಸ್ತ್ರಕ್ರಿಯೆಯ (surgical) ಆರೋಗ್ಯ ಸಮಸ್ಯೆಯಾಗಿದ್ದರೂ ಇದು ನವಜಾತ ಶಿಶುವಿನಿಂದ ಹಿಡಿದು ಯಾರನ್ನಾದರೂ ಕಾಡಬಹುದಾಗಿದೆ.
ಹಾಗಾದರೆ ಹರ್ನಿಯಾ ಎಂದರೇನು?
ದೇಹದ ಭಾಗಗಳು ತಮ್ಮ ಸುತ್ತಲಿನ ದುರ್ಬಲ ಭಾಗವೊಂದರ ಮೂಲಕ ಹೊರಜಾರಿ ಬರುವುದನ್ನು ನಾವು ಹರ್ನಿಯಾ ಎಂದು ಗುರುತಿಸುತ್ತೇವೆ. ಹರ್ನಿಯಾಗಳಿಗೆ ಕಾರಣ ಹಲವು. ಹರ್ನಿಯಾ ಕಾಣಿಸಿಕೊಳ್ಳಬಹುದಾದ ರೀತಿ ಕೂಡ ವೈವಿಧ್ಯ. ಕೇವಲ ಉಬ್ಬಿದಂತೆ ಇದು ನಮ್ಮ ಅನುಭವಕ್ಕೆ ಬರಬಹುದು. ದಿನನಿತ್ಯ ಬದುಕಿನಲ್ಲಿ ಈ ಉಬ್ಬು ಗಮನಕ್ಕೆ ಬಂದರೂ ನಾವು ಅದನು ನಿರ್ಲಕ್ಷಿಸುವ ಸಾಧ್ಯತೆ ಇರುತ್ತದೆ. ದುರದೃಷ್ಟವಶಾತ್ ಕೆಲವೊಮ್ಮೆ ಈ ಹರ್ನಿಯಾ ಜೀವ ತೆಗೆದುಕೊಳ್ಳಬಹುದಾದ ಅಪಾಯಕಾರಿ ಹಂತವನ್ನು ಸಹ ತಲುಪಬಲ್ಲದ್ದಾಗಿದೆ. ಈ ಸಮಸ್ಯೆಗೆ ಶಸ್ತ್ರಕ್ರಿಯೆಯೇ ಪರಿಹಾರ. ಹಾಗಾಗಿ ಈ ತೊಂದರೆಯನ್ನು ಗುಣಪಡಿಸಿಕೊಳ್ಳಲು ಅಪರೇಷನ್ ಭಯದಿಂದಾಗಿ ಹಿಂಜರಿಯುವವರು ಅನೇಕ ಮಂದಿ. ಹರ್ನಿಯಾ ಸಮಸ್ಯೆಯುಳ್ಳವರು ದಿನದೂಡಿದಷ್ಟು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಹರ್ನಿಯಾಗಳನ್ನು ಅವು ಉದ್ಭವಿಸುವ ದೇಹದ ಭಾಗಕ್ಕೆ ಅನುಗುಣವಾಗಿ ಹೆಸರಿಸಲಾಗುತ್ತದೆ. ಹರ್ನಿಯಾದ ಸಮಸ್ಯೆ ಸಾಮಾನ್ಯವಾದವು. ಇದು ನಿರ್ಲಕ್ಷ್ಯಕ್ಕೊಳಪಡುವುದು ಸಹ ಅತಿ ಸಾಮಾನ್ಯ.
ಹರ್ನಿಯಾ ಉಂಟಾಗಲು ಕಾರಣವೇನು?
ಹರ್ನಿಯಾ ಉಂಟಾಗಲು ಸ್ನಾಯುಗಳ ದೌರ್ಬಲ್ಯ ಕಾರಣ. ಸ್ನಾಯುಗಳು ದುರ್ಬಲಗೊಳ್ಳಲು ಹಾಗೂ ಅವುಗಳ ಮೇಲೆ ಒತ್ತಡ ಹೆಚ್ಚಲು ಕಾರಣಗಳು ಹಲವು. ಹರ್ನಿಯಾವನ್ನು ಶಸ್ತ್ರಕ್ರಿಯೆ ಮೂಲಕ ದುರಸ್ತಿಗೊಳಿಸಿದ ನಂತರವೂ ಈ ಕಾರಣಗಳನ್ನು ಗುರುತಿಸದಿದ್ದಲ್ಲಿ ಇವು ಮರುಕಳಿಸುವ ಸಾಧ್ಯತೆ ಇರುತ್ತದೆ.
ಬೊಜ್ಜು, ದೀರ್ಘಾವಧಿ ಕೆಮ್ಮು, ಮಲಬದ್ಧತೆ ಹರ್ನಿಯಾಕ್ಕೆ ಕಾರಣವಾಗಬಲ್ಲವು. ವಯಸ್ಕರಲ್ಲಿ ಸ್ನಾಯುಗಳ ಬಲ ಕುಂದುವುದರಿಂದ ಹಾಗೂ ಗರ್ಭಿಣಿಯರಲ್ಲಿ ಸ್ನಾಯುಗಳ ಮೇಲೆ ಒತ್ತಡ ಹೆಚ್ಚುವುದರಿಂದ ಹರ್ನಿಯಾ ಉಂಟಾಗಬಲ್ಲದು. ದೇಹದ ಅಂಗಾಂಗ ರಚನೆಯಲ್ಲಿ ಕೆಲ ಸ್ವಾಭಾವಿಕವಾದ ದುರ್ಬಲ ಭಾಗಗಳಿವೆ. ಕೆಲ ಆನುವಂಶೀಯ ಕಾರಣಗಳಿಂದಾಗಿ ಕೊಲಾಜೆನ್ (Collagen)ಗಳ ದುರ್ಬಲತೆಯುಂಟಾಗುತ್ತದೆ. ಸ್ನಾಯುಗಳಿಗೆ ಉಂಟಾಗುವ ಅಘಾತವೂ ಅವುಗಳನ್ನು ದುರ್ಬಲಗೊಳಿಸುತ್ತದೆ. ನರ ಹಾಗೂ ಸ್ನಾಯು ಸಂಬಂಧಿ ಕಾಯಿಲೆಗಳು ಅವುಗಳನ್ನು ನಿಶ್ಯಕ್ತಿಗೊಳಿಸುತ್ತದೆ. ಹೊಟ್ಟೆಯ ಅಂತರಿಕ ಒತ್ತಡ (Intra-abdominal pressure) ಹೆಚ್ಚಳ ಹರ್ನಿಯಾಗಳಿಗೆ ಪೂರಕವಾಗುತ್ತದೆ.
ಹರ್ನಿಯಾ ಯಾರಿಗೆ ಬರಬಹುದು?
ಹರ್ನಿಯಾ ಯಾರಲ್ಲಾದರೂ ಕಾಣಿಸಿಕೊಳ್ಳಬಹುದು. ಧೂಮಪಾನಿಗಳಲ್ಲಿ ಇದರ ಅಪಾಯ ಅಧಿಕವಾಗಿರುತ್ತದೆ. ದೀರ್ಘಕಾಲ ಧೂಮಪಾನ ಮಾಡುವವರಲ್ಲಿ ವಯಸ್ಸಾದಂತೆ ಅಲರ್ಜಿ, ಅಸ್ತಮಾ, ಕೆಮ್ಮಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಕೆಮ್ಮಿನಿಂದಾಗಿ ಹೊಟ್ಟೆಯ ಅಂತರಿಕ ಒತ್ತಡ ಹೆಚ್ಚುತ್ತದೆ. ಮಲಬದ್ಧತೆ (abhomen) ಹಾಗೂ ಪ್ರೋಸ್ಟೇಟ್ (Prostate) ಸಮಸ್ಯೆಯುಳ್ಳವರು ಮೂತ್ರ ಹಾಗೂ ಮಲ ವಿಸರ್ಜನೆಗಾಗಿ ತಿಣುಕಾಡಬೇಕಾಗುತ್ತದೆ. ಇದು ಕೂಡ ಹೊಟ್ಟೆ ಭಾಗದ ಸ್ನಾಯುಗಳ ಮೇಲೆ ಒತ್ತಡ ಹೇರುತ್ತದೆ. ಭಾರವಾದ ವಸ್ತುಗಳನ್ನು ಎತ್ತುವ ಕೆಲಸದಲ್ಲಿ ನಿರತವಾದ ಕೂಲಿಗಳಲ್ಲಿ ಮತ್ತು ಸೈನಿಕರಲ್ಲಿ ಈ ಸಮಸ್ಯೆ ಹೆಚ್ಚಾಗಿ ತಲೆದೋರುತ್ತದೆ.
ಹರ್ನಿಯಾ ವೈವಿಧ್ಯ
ಹರ್ನಿಯಾಗಳು ದೇಹದ ವಿವಿಧ ಭಾಗಗಳಲ್ಲಿ ಸಾಮಾನ್ಯ ಉಬ್ಬು (swelling) ಆಗಿ ಕಾಣಿಸಿಕೊಳ್ಳುತ್ತವೆ. ಕಿಬ್ಬೊಟ್ಟೆ (abhomen) ತೊಡೆಯ ಸಂದಿ (inguinal) ಮೇಲು ಹೊಟ್ಟೆ (epigastric) ಹೊಕ್ಕಳು (umbilical) ತೊಡೆ (femoral) ಶಸ್ತ್ರಕ್ರಿಯೆಯ ಗಾಯ (incisional)- ಇವು ಹರ್ನಿಯಾ ಉದ್ಭವಿಸುವ ಸಾಮಾನ್ಯ ಭಾಗಗಳಾಗಿವೆ. ಸಣ್ಣ ಉಬ್ಬಾಗಿ ಮೊದಮೊದಲು ಕಾಣಿಸುವ ಹರ್ನಿಯಾ ದಿನೇ ದಿನೇ ಗಾತ್ರದಲ್ಲಿ ಹಿಗ್ಗುತ್ತಾ ಹೋಗುತ್ತದೆ.
ಕಿಬ್ಬೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳುವ ಹರ್ನಿಯಾಗಳಲ್ಲಿ ಹೊಟ್ಟೆಯ ಕೊಬ್ಬಿನಂಶ, ಕರುಳು ಸಿಲುಕಬಲ್ಲದು. ಕೊಬ್ಬಿನಂಶವೂ ಸಿಲುಕಿದಾಗ ನೋವು ಉಂಟಾಗುತ್ತದೆ. ಆದರೆ ಕರುಳುಗಳು ಹೊರಜಾರಿದಾಗ ಅವುಗಳ ರಕ್ತ ಸರಬರಾಜು ಜಖಂಗೊಳ್ಳುವ ಸ್ಥಿತಿಯುಂಟಾಗುತ್ತದೆ. ರಕ್ತ ಸಂಚಲನ ಕಡಿತಗೊಂಡಾಗ ಆ ಭಾಗ ಕೊಳೆಯಲು (gangrene) ಆರಂಭವಾಗುತ್ತದೆ. ರೋಗಿಯಲ್ಲಿ ವಾಂತಿ, ಮಲಬದ್ಧತೆ, ತೀವ್ರನೋವು ಕಾಣಿಸಿಕೊಳ್ಳಬಲ್ಲದು. ಈ ಸಂದರ್ಭಗಳಲ್ಲಿ ತುರ್ತು ಶಸ್ತ್ರಕ್ರಿಯೆ ಅಗತ್ಯವಾಗುತ್ತದೆ. ಸ್ಥೂಲಕಾಯ ಹಾಗೂ ಬೊಜ್ಜು ದೇಹಿಗಳಲ್ಲಿ ಇದರ ಅಪಾಯ ಹೆಚ್ಚು. ಹರ್ನಿಯಾಗಳು ಅತಿ ಹೆಚ್ಚಾಗಿ ತೊಡೆ-ಸಂದಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಮೂಲಕ ಜಾರಿಕೊಳ್ಳುವ ಹರ್ನಿಯಾ ವೃಷಣಚೀಲ (ಪುರುಷರಲ್ಲಿ) ಮತ್ತು ಸ್ತ್ರೀಯರಲ್ಲಿ ಯೋನಿಯ ಹೊರ ಮಡಿಕೆಗಳ ತನಕವೂ ಚಾಚಬಲ್ಲದು, ತೊಡೆಸಂದಿಯ ಹರ್ನಿಯಾ ಭಾರ ಎತ್ತುವವರಲ್ಲಿ ಹಾಗೂ ವಯಸ್ಸಾದಂತೆ ಹೆಚ್ಚಾಗಿ ಕಾಣಿಸಿಕೊಳ್ಳುವ ಸಂಭವವಿರುತ್ತದೆ. ಪರುಷರಲ್ಲಿ ಹರ್ನಿಯಾಗಳು ಮಹಿಳೆಯರಿಗಿಂತಲೂ ಎರಡರಿಂದ ಮೂರು ಪಾಲು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಹೊಟ್ಟೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವ ಹರ್ನಿಯಾ ಹೆಚ್ಚಾಗಿ ಮಧ್ಯ ವಯಸ್ಕರಲ್ಲಿ ಸ್ನಾಯುಗಳ ದೌರ್ಬಲ್ಯದಿಂದ ತಲೆದೋರುತ್ತದೆ. ತೊಡೆಯ ಭಾಗದ ಹರ್ನಿಯಾಗಳು ಸ್ತ್ರೀಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನವಜಾತ ಹಾಗೂ ಚಿಕ್ಕ ಮಕ್ಕಳಲ್ಲೂ ಹರ್ನಿಯಾಗಳು ಕಾಣಿಸಿಕೊಳ್ಳಬಲ್ಲದು. ಹೊಕ್ಕಳಿನ ಹರ್ನಿಯಾ ಕೆಲವೊಮ್ಮೆ ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುವುದು. ಮಾತ್ರವಲ್ಲದೇ ತನ್ನಿಂದ ತಾನೇ ಸ್ನಾಯುಗಳು ಬೆಳವಣಿಗೆಯಾದಂತೆ ಶಮನಗೊಳ್ಳುತ್ತವೆ. ಹಿಂದೆ ಶಸ್ತ್ರಕ್ರಿಯೆ ಆಗಿದ್ದಲ್ಲಿ ಆ ಭಾಗದ ಸ್ನಾಯುಗಳ ದುರ್ಬಲತೆಯಿಂದಾಗಿ ಹಲವಾರು ವರ್ಷಗಳ ನಂತರ ಹರ್ನಿಯಾ ಉಂಟಾಗುವ ಸಾಧ್ಯತೆ ಇರುತ್ತದೆ. ಹರ್ನಿಯಾವನ್ನು ಪತ್ತೆ ಹಚ್ಚಲು ಯಾವುದೇ ಆಧುನಿಕ ಉಪಕರಣಗಳ ಅಗತ್ಯತೆ ಇಲ್ಲ. ಆದರೆ ಹರ್ನಿಯಾಕ್ಕಿರುವ ಚಿಕಿತ್ಸೆ ಶಸ್ತ್ರಕ್ರಿಯೆಯಾದ್ದರಿಂದ ಅದಕ್ಕೆ ಪೂರ್ವತಯಾರಿಯಾಗಿ ವೈದ್ಯರು ರೋಗಿಗೆ ಕೆಲ ರಕ್ತ ತಪಾಸಣೆ. ಎಕ್ಸ್-ರೇ, ಇ.ಸಿ.ಜಿ.ಗೆ ಒಳಗಾಗುವಂತೆ ಹೇಳಬಹುದು. ಹಿಂದೆ ಬಳಸಲಾಗುತ್ತಿದ್ದ TRUSS ಎಂಬ ಪಟ್ಟಿ ಅಥವಾ ಇಲಾಸ್ಟಿಕ್ ಬ್ಯಾಂಡ್ ಹರ್ನಿಯಾಕ್ಕೆ ಪರಿಣಾಮಕಾರಿ ಚಿಕಿತ್ಸೆಯಲ್ಲ. ಅದು ಹರ್ನಿಯ ಹೊರಜಾರದಂತೆ ತಡೆಯುವ ಮಾರ್ಗ ಮಾತ್ರ.
ಹರ್ನಿಯಾ ಶಸ್ತ್ರಚಿಕಿತ್ಸೆ
ಹರ್ನಿಯಾಕ್ಕೆ ಶಸ್ತ್ರಚಿಕಿತ್ಸೆಯೇ ಪರಿಹಾರ. ಆದರೆ ಯಾವ ಹರ್ನಿಯಾದ ಶಸ್ತ್ರಕ್ರಿಯೆಗೆ ಹೇಗೆ ಹಾಗೂ ಯಾವಾಗ ಮುಂದಾಗಬೇಕಾಗುತ್ತದೆ ಎಂಬುದನ್ನು ವೈದ್ಯರ ಸಲಹೆಯ ನಂತರವೇ ನಿರ್ಧರಿಸುವುದೊಳಿತು. ಈ ಬಗೆಯ ಶಸ್ತ್ರಕ್ರಿಯೆಯನ್ನು ರೋಗಿಯ ಆರೋಗ್ಯವನ್ನಾಧರಿಸಿ ಪೂರ್ಣ ಅಥವಾ ಸ್ಥಳೀಯ ಅರಿವಳಿಕೆ ನೀಡಿ ನಡೆಸಲಾಗುತ್ತದೆ. ಹರ್ನಿಯಾ ಶಸ್ತ್ರಕ್ರಿಯೆಯನ್ನು ಸಾಂಪ್ರದಾಯಕವಾದ (open) ರೀತಿಯಲ್ಲಿ ಅಥವಾ ಲ್ಯಾಪರೋಸ್ಕೋಪಿಕ್ ಮೂಲಕ ಮಾಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಹರ್ನಿಯಾ ಮರುಕಳಿಸದಂತೆ ತಡೆಯಲು ಜಾಲರಿ (mesh) ಗಳನ್ನು ಅಳವಡಿಸಲಾಗುತ್ತದೆ. ಈ ಜಾಲರಿಗಳು ನಾನಾ ಗಾತ್ರದಲ್ಲಿ ಲಭ್ಯವಿದೆ. ಲ್ಯಾಪರೋಸ್ಕೋಪಿಕ್ ಮೂಲಕ ಮಾಡುವ ಶಸ್ತ್ರಕ್ರಿಯೆಯಲ್ಲಿರೋಗಿ ಬೇಗನೆ ಚೇತರಿಸಿಕೊಳ್ಳುತ್ತಾನೆ. ಶಸ್ತ್ರಕ್ರಿಯೆಯ ನಂತರ ರೋಗಿ 6 ರಿಂದ 8 ವಾರದವರೆಗೆ ಭಾರ ಎತ್ತಕೂಡದು. ಶಸ್ತ್ರಕ್ರಿಯೆಯೊಡನೆ ರೋಗಿಯ ಕೆಮ್ಮು. ಮಲಬದ್ಧತೆ, ಮೂತ್ರ ಸಂಬಂಧಿ ಸಮಸ್ಯೆಗಳ ಶಮನಕ್ಕೂ ಸೂಕ್ತ ವೈದ್ಯಕೀಯ ಸಲಹೆ ಪಡಯಬೇಕು. ಈ ಬಗೆಯ ಶಸ್ತ್ರಕ್ರಿಯೆಯಲ್ಲೂ ಸೋಂಕು ರಕ್ತಸ್ರಾವದ ಅಪಾಯವಿದ್ದೇ ಇರುತ್ತದೆ. ಆದರೆ ಹರ್ನಿಯಾ ಶಸ್ತ್ರಕ್ರಿಯೆಯನ್ನು ಅಲಕ್ಷಿಸದೆ ಇದನ್ನು ನಿರ್ಲಕ್ಷಿಸುತ್ತಾ ಹೋದರೆ ಅಪಾಯಕ್ಕೆ ಸಿಲುಕುವ ಸಂಭವ ಇದ್ದೇ ಇರುತ್ತದೆ. ಆದರೆ ಎಲ್ಲಾ ಹರ್ನಿಯಾಗಳಿಗೆ ಶಸ್ತ್ರಕ್ರಿಯೆ ಮಾಡಬೇಕಾದ ಅಗತ್ಯವಿಲ್ಲ. ವಯಸ್ಸು, ಹರ್ನಿಯಾದ ಗುಣಲಕ್ಷಣಗಳನ್ನಾಧರಿಸಿ ವೈದ್ಯರು ಸರ್ಜರಿಯ ಅಗತ್ಯತೆಯನ್ನು ನಿರ್ಧರಿಸುತ್ತಾರೆ. ಹರ್ನಿಯಾ ನಾವು ಭಯಪಡಬೇಕಾದ ಕಾಯಿಲೆಯಲ್ಲ, ಇದು ನಮ್ಮ ದೇಹದ ಅಂಗಾಂಗ ರಚನೆಯಲ್ಲಿ ಉಂಟಾದ ದುರ್ಬಲತೆಯಿಂದ ಉಂಟಾಗುವಂತಹದ್ದು. ಹಾಗಾಗಿ ದುರ್ಬಲತೆಯನ್ನು ನಾವು ನಿರ್ಲಕ್ಷಿಸಬಾರದು.
ಡಾ. ವಸುಂಧರಾ ಭೂಪತಿ,
ಇ-ಮೇಲ್: bhupathivasundhara@gmail.com
ಫೋನ್: 9986840477