ಹೊಸ ಜಾಗತಿಕ ಆಟದಲ್ಲಿ ಹಣಕ್ಕಿಂತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪಾತ್ರವೇ ದೊಡ್ಡದು!

ಹಣಕ್ಲಾಸು-311

-ರಂಗಸ್ವಾಮಿ ಮೂಕನಹಳ್ಳಿ

Published: 02nd June 2022 03:00 AM  |   Last Updated: 02nd June 2022 12:01 PM   |  A+A-


AI (file pic)

ಕೃತಕ ಬುದ್ಧಿಮತ್ತೆ (ಸಂಗ್ರಹ ಚಿತ್ರ)

ಎರಡು ಸಾವಿರದ ಇಪ್ಪತ್ತನೇ ಇಸವಿಯ ಪ್ರಾರಂಭದಲ್ಲಿ ನಾವೆಲ್ಲಾ ಹೊಸ ವರ್ಷವನ್ನ ಎಂದಿನಂತೆ ಬಹಳ ಖುಷಿಯಿಂದ ಸ್ವಾಗತಿಸಿದ್ದೆವು. ವಿಶ್ವಕ್ಕೆ ಕೊರೋನದಂತಹ ಘಟನೆ ಘಟಿಸಬಹುದು ಎನ್ನುವ ಕಿಂಚಿತ್ತೂ ಅರಿವು ನಮಗಿರಲಿಲ್ಲ. ಚೀನಾ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಒಂದಷ್ಟು ಜನರಿಗೆ ಬಿಟ್ಟರೆ, ವಿಶ್ವಕ್ಕೆ ಇದು ಒಂದು ರೀತಿಯ ಆಶ್ಚರ್ಯ ಎನ್ನುವುದು ಸುಳ್ಳಲ್ಲ. ಕಷ್ಟ ಕಾಲದಲ್ಲಿ ಮನುಷ್ಯನಲ್ಲಿರುವ ನಿಜವಾದ ಶಕ್ತಿಯ ಅನಾವರಣವಾಗುತ್ತದೆ ಎನ್ನುವುದನ್ನ ನಾವು ಕೇಳುತ್ತಾ ಬೆಳೆದವರು. ಕೊರೋನದಂತಹ ಅತ್ಯಂತ ಕಠಿಣ ಸಮಯವನ್ನ ಕಳೆದ ನೂರು ವರ್ಷದಲ್ಲಿ ಯಾರೂ ಕಂಡಿಲ್ಲ. ಜಗತ್ತಿನ ಎಲ್ಲಾ ದೇಶಗಳಲ್ಲೂ ಒಂದಲ್ಲ ಒಂದು ಸಮಸ್ಯೆಯನ್ನ ಅನುಭವಿಸಿರುವುದು ವೇದ್ಯ. ಆದರೆ ಪೂರ್ಣ ವಿಶ್ವ ತಿಂಗಳುಗಟ್ಟಲೆ ಸ್ತಬ್ಧವಾಗಿದ್ದು ಇತಿಹಾಸದಲ್ಲಿ ಇದೆ ಮೊದಲು. ಜಗತ್ತಿನಲ್ಲಿ ಹಣದ ಹರಿವು ಸರಿಯಾಗಿದ್ದರೆ ಮಾತ್ರ ಎಲ್ಲವೂ ಸುಲಲಿತವಾಗಿ ನಡೆದುಕೊಂಡು ಹೋಗುತ್ತದೆ. ಇದರಲ್ಲಿ ಸ್ವಲ್ಪ ಏರುಪೇರಾದರೂ ಆರ್ಥಿಕ ಮಂದಗತಿ ಎನ್ನುವ ಮಾತುಗಳನ್ನ ನಾವು ಸಮಾಜದಲ್ಲಿ ಕೇಳಲು ಶುರು ಮಾಡುತ್ತೇವೆ. ವಸ್ತುಸ್ಥಿತಿ ಹೀಗಿದ್ದಾಗ ಆರೇಳು ತಿಂಗಳು ಪೂರ್ಣ ವ್ಯಾಪಾರ-ವಹಿವಾಟು ನಿಂತು ಬಿಟ್ಟರೆ? ಉಳ್ಳವರು ಕಥೆ ಬೇರೆ, ಇಲ್ಲದವರ, ಸಮಾಜದ ಅತ್ಯಂತ ಕೆಳ ಸ್ತರದಲ್ಲಿ ಕೆಲಸ ಮಾಡುವ ಜನರ ಪಾಡೇನು? ಈ ವರ್ಗದ ಜನರಲ್ಲಿ ಬಹುತೇಕರು ಅಂದಿನ ದಿನದ ಆದಾಯದ ಮೇಲೆ ಅವಲಂಬಿತರು. ಭಾರತದಂತಹ ದೊಡ್ಡ ದೇಶದಲ್ಲಿ ಇದು ದೊಡ್ಡ ಸಮಸ್ಯೆಯಾಗಬೇಕಿತ್ತು. ಹಣಕಾಸಿನ ಚುಕ್ಕಾಣಿ ಹಿಡಿದವರು ಏತಕ್ಕಾಗಿ ಈ ರೀತಿಯ ದಿಗ್ಬಂಧನಕ್ಕೆ ಯಸ್ ಎಂದಿರಬಹುದು?

ಮೊದಲೇ ಹೇಳಿದಂತೆ ಈ ಶತಮಾನದಲ್ಲಿ ದೇಶಗಳನ್ನ ಹೀಗೆ ಲಾಕ್ ಡೌನ್ ಅಂದರೆ ಪೂರ್ಣ ವ್ಯಾಪಾರ ವಹಿವಾಟು ನಿಲ್ಲಿಸಿ ಮನುಷ್ಯರ ಓಡಾಟಕ್ಕೂ ನಿರ್ಬಂಧ ಹೇರಿದ ಉದಾಹರಣೆ ನಮ್ಮ ಮುಂದಿಲ್ಲ. ಜಗತ್ತಿನ ಬಹುತೇಕ ರಾಷ್ಟ್ರಗಳು ಹೀಗೆ ತನ್ನ ಪ್ರಜೆಗಳನ್ನ ಗೃಹ ಬಂಧನದಲ್ಲಿರಿಸಿತು. ಹಾಗಾದರೆ ಮನುಷ್ಯನ ಬದುಕಿಗೆ ಭರವಸೆ ಇಲ್ಲವೇ? ಬದುಕಿಗೆ ನಂಬಿಕೆಗಳು ಇರಲಾರವೇ? ಎನ್ನುವ ಪ್ರಶ್ನೆ ಕೂಡ ಉಧ್ಭವವಾಗುತ್ತದೆ. ಗಮನಿಸಿ ಈ ಹಿಂದೆ ಅಂದರೆ 1918 ರಲ್ಲಿ ಸ್ಪ್ಯಾನಿಷ್ ಫ್ಲೂ ಎನ್ನುವ ಹೆಸರಿನ ರೋಗ ಕೋಟ್ಯಂತರ ಜನರ ಸಾವಿಗೆ ಕಾರಣವಾಗಿತ್ತು. ಮನುಕುಲ ಅದನ್ನ ಮರೆತು ಬಹಳ ದೂರ ಬಂದಿದೆ. ಎಲ್ಲಕ್ಕೂ ಮೊದಲಿಗೆ ಈ ಭೂಮಿ ಕೇವಲ ಮನುಷ್ಯ ಒಬ್ಬನ ಸ್ವತ್ತಲ್ಲ. ಇಲ್ಲಿ ನಾವು ಸಾವಿರಾರು ಜೀವ-ಜಂತುಗಳ ಜೊತೆ ಭೂಮಿಯನ್ನ ಹಂಚಿಕೊಂಡಿದ್ದೇವೆ. ಆದರೆ ನಮ್ಮ ಬೆಳವಣಿಗೆಯ ವೇಗ, ಭೂಮಿಯ ಮೇಲಿನ ಎಲ್ಲಾ ಸಂಪತ್ತು ಸೌಲಭ್ಯ ನನ್ನದು ಎನ್ನುವ ಭಾವನೆಯಲ್ಲಿ ಪ್ರಕೃತ್ತಿಯ ಮೇಲೆ ಆತ ಮಾಡಿದ ದಾಳಿಯಿಂದಾದ ಗಾಯ  ಈ ದಿನಗಳಲ್ಲಿ ಸ್ವಲ್ಪ ವಾಸಿಯಾಗುತ್ತಿದೆ.

ಜಗತ್ತಿನಾದ್ಯಂತ ನೆಲ, ಜಲ ಮತ್ತು ವಾಯುವಿನಲ್ಲಿ ಜೀವ ಜಂತುಗಳು ಖುಷಿಯಿಂದ ವಿಹರಿಸುತ್ತಿರುವ ದೃಶ್ಯಗಳನ್ನ ನಾವೆಲ್ಲರೂ ನೋಡಿದ್ದೇವೆ. ಆ ಲೆಕ್ಕದಲ್ಲಿ ಕೊರೋನ ನಮ್ಮ ಅತಿ ವೇಗಕ್ಕೆ ಬಿದ್ದ ಬ್ರೇಕ್ ಅಷ್ಟೇ ಎನ್ನುವ ಮಾತುಗಳು ಆಶಾಭಾವದಿಂದ ಆಡಿದ ಮಾತುಗಳಷ್ಟೇ, ನಿಜಕ್ಕೂ ಇದರ ಹಿಂದಿನ ಹಿಕ್ಮತ್ತು ಏನಿರಬಹುದು?

ಹಿಂದಿನ ದಿನಗಳಲ್ಲಿ ಊಹಿಸಿಕೊಳ್ಳಲು ಆಗದ ತಂತ್ರಜ್ಞಾನ ಇಂದು ನಮ್ಮ ಮುಂದಿದೆ. ಇಷ್ಟೆಲ್ಲಾ ಆದದ್ದು ನಾಳೆ ನಮ್ಮದು ಎನ್ನುವ ಅಶಭಾವದಿಂದ! ಆದರೆ ಅದನ್ನ ಒಳಿತಿಗೆ ಬಳಸದೆ ಹೆಚ್ಚಿನ ನಿಯಂತ್ರಣಕ್ಕೆ ಬಳಸಲು ಶುರು ಮಾಡಿದರೆ?

ಇವತ್ತಿನ ದಿನ ಹೇಗಿದೆಯೆಂದರೆ ಕಾಲು ನೋವು ಎಂದು ಹೋದವರಿಗೆ ಪೇಸ್ಮೇಕರ್ ಅಳವಡಿಸಿ ಕಳಿಸಿ ಬಿಡುತ್ತಾರೆ. ಅಯ್ಯೋ ಸ್ವಾಮಿ ನಮಗೇನೂ ಬೇಡ, ಇದ್ದಷ್ಟು ದಿನ ಇರುತ್ತೇನೆ ಬಿಡಿ ಎಂದವರು ಕಳೆದ 15 ವರ್ಷದಿಂದ ಆರಾಮಾಗಿ ಇರುವುದನ್ನ ಕಂಡಿದ್ದೇನೆ. ಅದು ಒಂದು ಬದಿಗಿರಲಿ.

ಒಬ್ಬ ವ್ಯಕ್ತಿಗೆ ಪೇಸ್ಮೇಕರ್ ಅಳವಡಿಸಿರುತ್ತಾರೆ. ಅವನ ಟೀನೇಜಿನ ಇಬ್ಬರು ಮಕ್ಕಳು ಕೈಯಲ್ಲಿ ರಿಮೋಟ್ ಹಿಡಿದು ದೊಡ್ಡ ಟಿವಿ ಪರದೆಯಲ್ಲಿ ಈವಿಲ್ ಸಂಹಾರದಲ್ಲಿ ತೊಡಗಿರುತ್ತಾರೆ. ಇಬ್ಬರ ಕೆಲಸವೂ ಆ ಈವಿಲ್ ಆಬ್ಜೆಕ್ಟ್ ಮುಗಿಸುವುದೇ ಆಗಿರುತ್ತದೆ. ಸಾಮಾನ್ಯವಾಗಿ ಆಟಗಾರರು ವಿರುದ್ಧ ಹೋರಾಡುವುದು ಸಾಮಾನ್ಯ. ಆದರೆ ಇಲ್ಲಿ ಇಬ್ಬರೂ ಸೇರಿ ಕಾಮನ್ ಶತ್ರು ಸಂಹಾರದಲ್ಲಿ ತೊಡಗಿಕೊಂಡಿದ್ದಾರೆ. ಇಬ್ಬರೂ ಮಕ್ಕಳೂ ಖುಷಿಯಿಂದ ಶತ್ರುವಿನ ಮೇಲೆ ಹೊಡೆತ ಕೊಟ್ಟಂತೆಲ್ಲ ಅವರಿಂದ ಅನತಿ ದೂರದಲ್ಲಿ ಮಕ್ಕಳಾಟವನ್ನ ನೋಡುತ್ತಾ ಕುಳಿತ್ತಿದ್ದ ಅಪ್ಪ ಎಂಬ ಪೇಸ್ಮೇಕರ್ ಅವಳವಡಿಸಲ್ಪಟ್ಟ ವ್ಯಕ್ತಿ ಕುಸಿಯುತ್ತಾ ಹೋಗುತ್ತಾನೆ. ಗೇಮ್ ನಲ್ಲಿ ಶತ್ರುವಿನ ಸಂಹಾರವಾಯ್ತು ಎನ್ನುವಷ್ಟರಲ್ಲಿ ಇಲ್ಲಿ ಈತನ ಕಥೆಗೂ ಇತಿಶ್ರೀ ಬರೆದಾಗಿರುತ್ತದೆ. ಅಂದರೆ ಗಮನಿಸಿ ಮೃತ ವ್ಯಕ್ತಿಯ ಮಕ್ಕಳು ತಮಗೆ ಗೊತ್ತಿಲ್ಲದೇ ತನ್ನ ಅಪ್ಪನನ್ನ ಮುಗಿಸಿ ಬಿಡುತ್ತಾರೆ. ಅವರಾಡಿದ್ದು ವಿಡಿಯೋ ಗೇಮ್ ಅಷ್ಟೇ!!

ಪೇಸ್ಮೇಕರ್ ನೇರವಾಗಿ ಈವಿಲ್ ಆಬ್ಜೆಕ್ಟ್ ಗೆ ಕನೆಕ್ಟ್ ಆಗುವಂತೆ ನೋಡಿಕೊಂಡರೆ ಸಾಕು, ವಿಡಿಯೋ ದಲ್ಲಿ ಬೀಳುವ ಪ್ರತಿ ಹೊಡೆತವೂ ನೇರವಾಗಿ ಹೃದಯಕ್ಕೆ ಬೀಳುತ್ತದೆ. ವ್ಯಕ್ತಿಯ ಕಥೆ ಖತಂ ಆಗಿರುತ್ತೆ. ಹೀಗಾಗಿ ಪುಟಾಣಿ ಮಕ್ಕಳು ಅಪ್ಪನ ಕೊಲ್ಲುತ್ತಾರೆ, ಸತ್ತವನಿಗೆ, ಕೊಂದವರಿಗೆ ಇಬ್ಬರಿಗೂ ಇದರ ಅರಿವಿರುವುದಿಲ್ಲ!!

ಏನಪ್ಪಾ ಸೈನ್ಸ್ ಫಿಕ್ಷನ್ ಕಥೆ ಇದ್ದಹಾಗಿದೆ ಎಂದಿರಾ?? ಹಾಗೇನಿಲ್ಲ, ವೆಲ್ಕಮ್ ಟು ದಿ ನ್ಯೂ ವರ್ಲ್ಡ್ ಆಫ್ ಎಐ. ಇನ್ನೊಂದು ಉದಾಹರಣೆ ನೋಡೋಣ.

ನೀವು ಕೆಲಸ ಮಾಡುವ ಕಛೇರಿಯಲ್ಲಿ ಕಾಫಿ ವೆಂಡಿಂಗ್ ಮಷೀನ್ ಇದೆ ಎಂದುಕೊಳ್ಳಿ, ನಿತ್ಯವೂ ನೀವು ಬೆಳಗಿನ 10 ಗಂಟೆ 12 ನಿಮಿಷಕ್ಕೆ ನೀವು ಕಾಫಿ ಕುಡಿಯುತ್ತಿರಿ ಎಂದುಕೊಳ್ಳಿ, ಅಥವಾ ನಿಮಿಷ ಅತ್ತಿತ್ತ ಆದರೂ ಅಡ್ಡಿಯಿಲ್ಲ, ಕಾಫಿ ತೆಗೆದುಕೊಳ್ಳುತ್ತಿರುವವರು ನೀವೇ ಎನ್ನುವುದನ್ನ ಮಷೀನ್ ನಲ್ಲಿರುವ, ನಿಮ್ಮ ಅರಿವಿಗೆ ಎಂದೂ ಬಾರದ ಪುಟಾಣಿ ಕ್ಯಾಮರಾದ ಮೂಲಕ ನಿಕ್ಕಿ ಮಾಡಿಕೊಳ್ಳಲಾಗುತ್ತದೆ. ನಿಮ್ಮ ಕಾಫಿಯಲ್ಲಿ ನಿಮ್ಮ ದೇಹಕ್ಕೆ ಒಗ್ಗದ, ಅತಿ ವೇಗವಾಗಿ ಅಲರ್ಜಿ ಆಗುವ ಪದಾರ್ಥವನ್ನ ಸೇರಿಸಲಾಗುತ್ತದ. ಮಜಾ ಎಂದರೆ ನಿಮ್ಮ ದೇಹಕ್ಕೆ ಅದು ಒಗ್ಗುವುದಿಲ್ಲ ಎನ್ನುವುದು ಕೆಲವೊಮ್ಮೆ ನಿಮಗೂ ಗೊತ್ತಿರುವುದಿಲ್ಲ! ಹೀಗೆ ಸುಲಭವಾಗಿ ನಿಮ್ಮನ್ನ ಇಲ್ಲವಾಗಿಸಿ ಬಿಡುತ್ತಾರೆ. ಕೇಸು ಇಲ್ಲ, ತಪಾಸಣೆಯೂ ಇಲ್ಲ. ಅದೊಂದು ಸಹಜ ಸಾವು ಎಂದು ದಾಖಲಾಗಿ ಹೋಗುತ್ತದೆ. ನೀವ್ಯಾರಿಗೆ ಅಡ್ಡಿಯಾಗಿದ್ದೀರೋ ಆತ ದೂರದಲ್ಲೆಲ್ಲೂ ಕುಳಿತು ಇನ್ನೊಬ್ಬರ ಸಾವಿಗೆ ಸ್ಕೆಚ್ ಹಾಕುತ್ತಿರುತ್ತಾನೆ/ಳೆ.

ಡಯಾಬಿಟಿಸ್ ಎನ್ನುವುದು ಇವತ್ತು ತೀರಾ ಸಾಮಾನ್ಯ ಖಾಯಿಲೆ. ಅದು ಖಾಯಿಲೆ ಎನ್ನುವುದಕ್ಕಿಂತ ತಪ್ಪು ಜೀವನ ಶೈಲಿಯ ಬಳುವಳಿ ಎನ್ನಬಹುದು. ಭಾರತದಲ್ಲಿ ಈಗ ನಾನು ಹೇಳುವ ಟೆಕ್ನಾಲಜಿ ಬಂದಿದೆಯೋ ಇಲ್ಲವೋ ತಿಳಿಯದು, but, ಯೂರೋಪಿನಲ್ಲಿ ಈಗ ನಾನು ಹೇಳ ಹೊರಟಿರುವುದು ಇದೆ. ಅದೇನೆಂದರೆ ಸಣ್ಣ ಯಂತ್ರವೊಂದು ದಿನದ 24 ತಾಸು ಕೂಡ ರಕ್ತದಲ್ಲಿನ ಸಕ್ಕರೆಯ ಅಂಶವನ್ನ ಗಮನಿಸುತ್ತಿರುತ್ತದೆ. ರಕ್ತದ ಅಂಶ ಹೆಚ್ಚು ಅಥವಾ ಕಡಿಮೆ ಆಗದಂತೆ ಅದು ನಿಯಂತ್ರಣ ಕೂಡ ಮಾಡುತ್ತದೆ. ಜಗತ್ತಿನಲ್ಲಿ ಸಕ್ಕರೆ ಖಾಯಿಲೆಯುಳ್ಳ ಎಲ್ಲಾರೂ ಇದನ್ನ ಉಪಯೋಗಿಸಲು ಶುರು ಮಾಡಿದರೆ ಏನಾಗಬಹುದು? ನಿಮಗೆ ಗೊತ್ತೇ ಈ ಯಂತ್ರವನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಸಕ್ಕರೆ ಅಂಶವನ್ನ ತಪ್ಪು ತೋರಿಸಬಹುದು! ಅದನ್ನ ಸರಿಪಡಿಸಲು ಹೆಚ್ಚು ಇನ್ಸುಲಿನ್ ದೇಹಕ್ಕೆ ಚುಚ್ಚಬಹುದು, ನೂರಾರು, ಸಾವಿರಾರು ಮೈಲಿ ದೂರದಲ್ಲಿ ಕುಳಿತು ನಿಮ್ಮ ಅನುಮತಿ ಇಲ್ಲದೆ, ಸದ್ದಿಲ್ಲದೇ, ಪಕ್ಕದಲ್ಲಿ ಕುಳಿತವರಿಗೆ ಕೂಡ ಗೊತ್ತಾಗದೆ ನಿಮ್ಮನ್ನ ಮಟಾಷ್ ಮಾಡಿ ಬಿಡಬಹುದು! ಇಂದು ಅಂತಹ ತಂತ್ರಜ್ಞಾನ ಸಿದ್ಧವಿದೆ. ಅಂದರೆ ಹೆಚ್ಚಿನ ಗಲಾಟೆ, ಗಲಭೆ ಸೃಷ್ಟಿಸದೆ ತಮಗೆ ಬೇಡವಾದ ವ್ಯಕ್ತಿಯನ್ನ ದಾರಿಯಿಂದ ಹೊರಹಾಕಿ ಬಿಡಬಹುದು. ಹೀಗೆಯೇ ಸಮೂಹ ಗಲಭೆಗಳನ್ನ ಕೂಡ ಅತ್ಯಂತ ಸರಾಗವಾಗಿ ಸೃಷ್ಟಿಸುವುದು ತಂತ್ರಜ್ಞಾನದಿಂದ ಸಾಧ್ಯ.

ಅಂದರೆ ಟಾರ್ಗೆಟ್ ಮಾಡಿದ ವ್ಯಕ್ತಿಯನ್ನ ಮಾತ್ರ ಆತನ ಆರೋಗ್ಯದ (ಡಯಾಬಿಟಿಸ್ ಅಂತಲ್ಲ , ಅದೊಂದು ಉದಾಹರಣೆ ಮಾತ್ರ) ಮೂಲಕ ಸದೆಬಡಿಯಬಹುದು, ಅಂತೆಯೇ ನಿಮ್ಮ ಮಾಹಿತಿಯನ್ನ, ನಿಮ್ಮ ನಿಲುವುಗಳನ್ನ ವಿರುದ್ಧ ನಿಲುವಿನ ವ್ಯಕ್ತಿಗೆ ನೀಡಿ ಕ್ಷಣ ಮಾತ್ರದಲ್ಲಿ ಸಮಾಜದಲ್ಲಿ ಗಲಭೆ ಸೃಷ್ಟಿಸಬಹುದು. ರಕ್ಕಸ ಆರ್ಟಿಫಿಸಿಯಲ್ ಇಂಟೆಲಿಜೆನ್ಸಿ ಕೋಡ್ ಗಳು ಜಗತ್ತನ್ನ ರಣರಂಗವನ್ನಾಗಿ ಮಾಡುತ್ತವೆ ಸಂಶಯ ಬೇಡ.

ಷೇರು ಮಾರುಕಟ್ಟೆಯಲ್ಲಿನ ನಿಮ್ಮ ಹೂಡಿಕೆ ಸದ್ದಿಲ್ಲದೇ ಮಂಗಮಾಯವಾಗಬಹುದು, ಬ್ಯಾಂಕಿನಲ್ಲಿಟ್ಟ ಹಣ ಆವಿಯಾಗಿ ಹೋಗಬಹುದು. ಹೀಗೆಲ್ಲ ಆಗುವುದಕ್ಕೆ ಬಹಳಷ್ಟು ಸಮಯವಿದೆ ಎನ್ನುವ ನಮ್ಮ ಭಾವನೆ ಅವರ ಬಂಡವಾಳ. ಸದ್ದಿಲ್ಲದೇ ನಮ್ಮ ಮೇಲಿನ ಹೆಚ್ಚಿನ ನಿಯಂತ್ರಣ ಲಾಗೂ ಆಗುತ್ತಿದೆ. ಚೀನಾ, ಅಮೇರಿಕಾದಲ್ಲಿ ಫೇಸ್ ರೆಕಗ್ನಿಷನ್ ಎನ್ನುವ ಮಹಾಮಾರಿ ಟೆಕ್ನಾಲಜಿ ಆಗಲೇ ಎಲ್ಲರನ್ನೂ ಹಿಡಿತಕ್ಕೆ ತೆಗೆದುಕೊಂಡಿದೆ. ಚೀನಾ ಅಮೇರಿಕಾ ದೇಶಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ನಿರೀಶ್ವರವಾದವನ್ನ ಯುವಜನತೆಯಲ್ಲಿ ಬಿತ್ತುವಲ್ಲಿ ಯಶಸ್ವಿಯಾಗಿದೆ. ಮಕ್ಕಳ ಕೈಲಿರುವ ಕಲಿಕೆಯ ಟ್ಯಾಬ್ ಮೂಲಕ ಮಕ್ಕಳೇನು ಕಲಿಯಬೇಕು? ಏನು ಕಲಿಯುತ್ತಿದ್ದಾರೆ ಎನ್ನುವುದನ್ನ ನಿಯಂತ್ರಣ ಮಾಡಲಾಗುತ್ತಿದೆ. ಸಮಯ ಬಂದರೆ, ಅವಶ್ಯಕತೆ ಬಿದ್ದರೆ ಅದೇ ಟ್ಯಾಬ್ಗಳ ಮೂಲಕ ಮನೆ ಮನೆಯಲ್ಲಿ ಇರುವ ಸ್ಲೀಪರ್ ಸೆಲ್ ಗಳು ಆಕ್ಟಿವೇಟ್ ಆಗುತ್ತಾರೆ, ಜಗತ್ತನ್ನ ರಣರಂಗವಾಗಿ ಪರಿವರ್ತಿಸಲು ಕ್ಷಣ ಸಾಕು.

ರಸ್ತೆಯಲ್ಲಿ ಆಡ ಬೇಕಿದ್ದ ಮಕ್ಕಳು, ಕೈಯಲ್ಲಿ ಬಂದೂಕು ಹಿಡಿದು ಸಿಕ್ಕಸಿಕ್ಕಂತೆ ಗುಂಡು ಹಾರಿಸುವ, ಶತ್ರುವನ್ನ ನಿರ್ದಾಕ್ಷಿಣ್ಯವಾಗಿ ಕೊಲ್ಲುವ ಆಟಗಳನ್ನ ಆಡುತ್ತಿವೆ. ಪೋಷಕರ ಜಾಣ ಕುರುಡಿಗೆ ಏನು ಹೇಳುವುದು? ನಿರೀಶ್ವರವಾದ, ಯಾವುದರಲ್ಲೂ ನಂಬಿಕೆ ಇಲ್ಲದ, ಅನೈತಿಕತೆ ಹೆಚ್ಚಾದರೆ ಏನಾಗುತ್ತದೆ ಎನ್ನುವುದಕ್ಕೆ ಅಮೇರಿಕಾ ಮತ್ತು ಚೀನಾ ಅತಿ ದೊಡ್ಡ ಉದಾಹರಣೆ.

ಕೊನೆ ಮಾತು: ಇಂದಿನ ಸಮಾಜದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಹೆಚ್ಚಿನ ಮಹತ್ವ ಪಡೆಯಲಿದೆ. ಆಗಲೇ ನಾವು ಆ ದಾರಿಯಲ್ಲಿ ಬಹಳ ಮುಂದೆ ಸಾಗಿದ್ದೇವೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಕೂಡ ಬದಲಾಣೆ ತರುವ ಸಾಧ್ಯತೆಯಿದೆ. ಜಗತ್ತನ್ನ ತಮ್ಮ ಹಿಡಿತದಲ್ಲಿ ಇಟ್ಟು ಕೊಳ್ಳಬೇಕು ಎನ್ನುವ ಮಹತ್ವಾಕಾಂಕ್ಷೆ ಇರುವ ಕೆಲವೇ ಕೆಲವು ಜನ ಇಂತಹ ರಕ್ಕಸ ಎಐ ಕೋಡ್ ಗಳನ್ನ ಬರೆಸಿಕೊಂಡು ಎಲ್ಲವನ್ನೂ ಯಂತ್ರಗಳ ಮೂಲಕ ನಿಯಂತ್ರಣದಲ್ಲಿ ಇಟ್ಟು ಕೊಳ್ಳುವ ಹವಣಿಕೆ ಹೊಂದಿದ್ದಾರೆ. ಇಷ್ಟೆಲ್ಲಾ ಅವರು ಮಾಡುವುದು ಹಣಕ್ಕಾಗಿ, ಸಂಪತ್ತಿಗಾಗಿ ಎಂದು ಕೊಂಡರೆ ಅದು ಮಹಾತಪ್ಪು. ಹಣಕಾಸಿನ ಆಟ ಕಂಪ್ಯೂಟರ್ ಪರದೆಯ ಮೇಲಿನ ಕೇವಲ ಅಂಕಿಯಾಗಿರುವುದರಿಂದ ಅದನ್ನ ತಮಗೆ ಬೇಕಾದ ಹಾಗೆ ತಿರುಚುವುದು ಅವರಿಗೆ ಗೊತ್ತಿದೆ ಸುಲಭದ ಆಟದಲ್ಲಿ ಅವರಿಗೆ ರುಚಿಯಿಲ್ಲ. ಪೂರ್ಣ ನಿಯಂತ್ರಣ ಅವರ ಗುರಿ. ಹೊಸ ಆಟದಲ್ಲಿ ನಾವು ಕೇವಲ ಪುತ್ಥಳಿಗಳು ಎನ್ನುವದಷ್ಟೇ ಸತ್ಯ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
Former Prime Minister Rajiv Gandhi at an election rally in May 1991

ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವ ನಿರ್ಧಾರ ತಪ್ಪು ಎಂದ ಕಾಂಗ್ರೆಸ್ ಪಕ್ಷದ ಹೇಳಿಕೆಯನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp