
ವೆರಿಕೋಸ್ ವೇನ್ಸ್
ಉಬ್ಬಿದ ರಕ್ತನಾಳಗಳೆಂದರೆ ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡು ಬರುವ ರಕ್ತ ನಾಳಗಳಿಗೆ ಸಂಬಂಧಿಸಿದ ರೋಗ. ಇದು ದೀರ್ಘಕಾಲಿಕವಾಗಿ ಇರಬಹುದು. ಆದರೆ ಮಾರಣಾಂತಿಕವಲ್ಲ. ಇದನ್ನು ಇಂಗ್ಲೀಷಿನಲ್ಲಿ ‘ವೇರಿಕೋಸ್ ವೇನ್ಸ್’ ಎಂದು ಕರೆಯುತ್ತಾರೆ.
ಉಬ್ಬಿರುವ, ನೀಲಿಗಟ್ಟಿರುವ ಮತ್ತು ತಿರುಚಿದಂತಿರುವ ವೆರಿಕೋಸ್ ರಕ್ತನಾಳಗಳು ಸಾಮಾನ್ಯವಾಗಿ ಕಾಲುಗಳಲ್ಲಿ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತವೆ. ಏಕೆಂದರೆ ನಿಂತಾಗ ಹಾಗೂ ನಡೆಯುವಾಗ ದೇಹದ ಕೆಳಭಾಗದ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚುತ್ತದೆ. ಆಗ ತುಂಬಾ ಎಚ್ಚರಿಕೆಯಿಂದ ಇರಬೇಕು ಇಲ್ಲವಾದಲ್ಲಿ ನೋವು ಹೆಚ್ಚಾಗಬಹುದು. ಇದು ಗರ್ಭಿಣಿಯರಲ್ಲಿ, ಮಧ್ಯವಯಸ್ಸಿನ ನಂತರ ಮತ್ತು ನಿಂತುಕೊಂಡು ಕೆಲಸ ಮಾಡುವ ಗಾರ್ಮೆಂಟ್ ಕೆಲಸಗಾರರಲ್ಲಿ, ಟೈಲರುಗಳಲ್ಲಿ ಮತ್ತು ಶಿಕ್ಷಕರಲ್ಲಿ ಕಾಣಿಸಿಕೊಳ್ಳುತ್ತದೆ.
ವೆರಿಕೋಸ್ ವೇನ್ಸ್ ಲಕ್ಷಣಗಳು
ರಕ್ತನಾಳಗಳು ಹಿಗ್ಗಿದಾಗ ಮತ್ತು ಹೆಚ್ಚು ರಕ್ತದಿಂದ ತುಂಬಿಕೊಂಡಾಗ ವೇರಿಕೋಸ್ ವೇನ್ಸ್ ಕಾಣಿಸಿಕೊಳ್ಳುತ್ತವೆ. ರಕ್ತದ ಹರಿವಿಗೆ ಅಡಚಣೆಯಾದಾಗ ಮತ್ತು ರಕ್ತವು ಸೂಕ್ತ ರೀತಿಯಲ್ಲಿ ಹರಿಯಲು ಸಾಧ್ಯವಾದಾಗ ಹೀಗಾಗುತ್ತದೆ. ಇದರ ಪರಿಣಾಮವಾಗಿ, ರಕ್ತನಾಳಗಳು ತುಂಬಾ ದೊಡ್ಡದಾಗುತ್ತವೆ, ಊದಿಕೊಳ್ಳುತ್ತವೆ ಮತ್ತು ತಿರುಚಿಕೊಳ್ಳುತ್ತವೆ. ಆದರೆ ಸಾಮಾನ್ಯವಾಗಿ ಇವು ಅಪಾಯಕಾರಿ ಅಲ್ಲ ಆದರೂ ಅವುಗಳಿಂದ ನೋವು ಉಂಟಾಗುತ್ತದೆ ಮತ್ತು ಅವು ವಿಕಾರವಾಗಿ ಕಾಣುತ್ತವೆ. ರಕ್ತನಾಳಗಳ ಸುತ್ತಮುತ್ತಲಿನ ಚರ್ಮದ ಬಣ್ಣದಲ್ಲಿ ಬದಲಾವಣೆ ಆಗುವುದು, ತುರಿಕೆ, ದೀರ್ಘಕಾಲ ಕುಳಿತಾಗ ನಿಂತಾಗ ನೋವುಂಟಾಗುವುದು, ಕಾಲುಗಳು ಭಾರವೆನಿಸುವುದು ಮತ್ತು ಕೆಳಕಾಲುಗಳ ಊತ ಇದರ ಲಕ್ಷಣಗಳು. ಯಾವುದೇ ಸೂಕ್ತ ಚಿಕಿತ್ಸೆ ಪಡೆಯದೆ ಇದ್ದಲ್ಲಿ ಕೊನೆಯ ಹಂತದಲ್ಲಿ ಕಾಲುಗಳ ಚರ್ಮದಲ್ಲಿ ಗಾಯ ಆಗಿ ಮಾಯದ ಹುಣ್ಣು ಆಗುವುದು. ವೆರಿಕೋಸ್ ವೇನ್ಸ್ ಗೆ ಪರಿಹಾರ ಕ್ರಮಗಳು
ವೇರಿಕೋಸ್ ವೇನ್ಸ್ ಸಮಸ್ಯೆಗೆ ಹಲವು ಪರಿಹಾರ ಕ್ರಮಗಳಿವೆ. ಮೊದಲಿಗೆ ಉಬ್ಬಿರುವ ರಕ್ತನಾಳಗಳಿಗೆ ಚುಚ್ಚುಮದ್ದು ನೀಡಿ ಅವುಗಳು ಕುಗ್ಗಿ ಹೋಗುವಂತೆ ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ ತುರಿಕೆ ಇದ್ದಾಗ ಔಷಧ ನೀಡಿ ತುರಿಕೆ ನಿಯಂತ್ರಿಸಬಹುದು. ಹುಣ್ಣು ಆಗಿ ಗಾಯ ಉಲ್ಬಣವಾದ ಬಳಿಕ ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗುತ್ತದೆ. ಶಸ್ತ್ರ ಚಿಕಿತ್ಸೆ ಜತೆಗೆ ಜೀವನ ಶೈಲಿ ಬದಲಾವಣೆ, ಆಹಾರ ಪದ್ಧತಿ ಬದಲಾವಣೆ ಮತ್ತು ಬೊಜ್ಜು ಕರಗಿಸುವಿಕೆ ಅತಿ ಅನಿವಾರ್ಯ ಎಂಬುದನ್ನು ರೋಗಿಗಳು ಮೊದಲು ತಿಳಿದುಕೊಂಡಲ್ಲಿ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ.
ಅಬ್ಲೋಷನ್ ಥೆರಫಿ ಎಂಬ ಚಿಕಿತ್ಸಾ ವಿಧಾನದಲ್ಲಿ ಆತ್ಯಾಧುನಿಕ ಮತ್ತು ಸಾಮಾನ್ಯ ಅರಿವಳಿಕೆ ಸಹಾಯದಿಂದ ರೋಗಿ ಮೂರ್ಚೆ ತಪ್ಪಿಸದೆ ಈ ಚಿಕಿತ್ಸೆ ನೀಡಲಾಗುತ್ತದೆ. ನುರಿತ ವೈದ್ಯರು ತೆಳುವಾದ ಕೊಳವೆ (ಕ್ಯಾಥೆಟರ್) ರಕ್ತನಾಳದಲ್ಲಿ ಅಳವಡಿಸಿ ಲೇಸರ್‍ಗಳ ಬೆಳಕಿನ ಕಿರಣಗಳ ಸಹಾಯದಿಂದ ಉಬ್ಬಿಹೋದ ರಕ್ತನಾಳಗಳ ಅಸಮರ್ಥ ಕವಾಟಗಳನ್ನು ಮುಚ್ಚಿ ಬಿಡುತ್ತಾರೆ. ಹೀಗೆ ಮಾಡಿದಾಗ ರಕ್ತನಾಳಗಳಲ್ಲಿ ಹೆಚ್ಚು ರಕ್ತ ಶೇಖರಣೆ ಆಗುವುದು ತಪ್ಪಿ ಹೋಗಿ ಉಬ್ಬಿದ ರಕ್ತನಾಳಗಳು ಕುಗ್ಗುತ್ತವೆ. ರೋಗ ಪೀಡಿತ ರಕ್ತನಾಳಗಳ ಕ್ಷಯಿಸುವಿಕೆಯಿಂದ ಆರೋಗ್ಯ ಪೂರ್ಣ ರಕ್ತನಾಳಗಳ ಮೇಲೆ ತಗಲುವ ಭಾರ ಅಥವಾ ಒತ್ತಡ ಕಡಿಮೆಯಾಗಿ, ಅವುಗಳು ಸರಿಯಾಗಿ ಕೆಲಸ ಮಾಡಲು ಆರಂಭಿಸುತ್ತವೆ. ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಸರಾಗ ನಡೆಯಲು ಅನುಕೂಲವಾಗುವಂತಹ ಕಾಲಿನ ಅಳತೆಗೆ ಸರಿಹೊಂದುವ ಸ್ಟಾಕಿಂಗ್ಸ್ (ಉದ್ದನೆಯ ಸಾಕ್ಸ್) ಇತ್ತೀಚೆಗೆ ಬಂದಿವೆ. ಇವುಗಳನ್ನು ನಿಂತುಕೊಂಢು ಕೆಲಸ ಮಾಡುವಾಗ ಪ್ರತಿದಿನ ಬೆಳಗ್ಗಿನಿಂದ ರಾತ್ರಿಯ ತನಕ ಬಳಸಬೇಕು.
ಸಾಮಾನ್ಯವಾಗಿ ಜನರಿಗೆ ಎರಡು ಕಾರಣಗಳಿಂದ ಈ ಉಬ್ಬು ರಕ್ತನಾಳಗಳಿಗೆ ಚಿಕಿತ್ಸೆ ಅಗತ್ಯವಿದೆ. ಕೆಲವೊಮ್ಮೆ ಸೌಂದರ್ಯದ ಕಾರಣಕ್ಕಾಗಿ ಜನರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಯಾವುದೇ ನೋವು ತುರಿಕೆ ಇಲ್ಲದಿದ್ದರೂ ನೋಡಲು ಅಸಹ್ಯವಾಗಿ ಕಾಣುವ ಕಾರಣದಿಂದ ಚಿಕಿತ್ಸೆ ಮೊರೆ ಹೋಗುತ್ತಾರೆ. ವೆರಿಕೋಸ್ ವೇನ್ಸ್ ಸಮಸ್ಯೆ ಬರದಂತೆ ತಡೆಗಟ್ಟಲು ಮೊದಲು ದೇಹದ ತೂಕದ ನಿಯಂತ್ರಣ ಮಾಡಬೇಕು. ಅತಿಯಾದ ತೂಕವಿದ್ದಲ್ಲಿ ಜೀವನಶೈಲಿ ಮತ್ತು ಆಹಾರ ಪದ್ಧತಿ ಬದಲಿಸಿ ಬೊಜ್ಜು ಕರಗಿಸಬೇಕು, ವ್ಯಾಯಾಮ, ದೈಹಿಕ ಕಸರತ್ತು ಇರುವ ಜೀವನಶೈಲಿಗೆ ಬದಲಾಯಿಸಿಕೊಳ್ಳಬೇಕು, ಕೊಬ್ಬು ಜಾಸ್ತಿ ಇರುವ ಕರಿದ ತಿಂಡಿ, ಬಗೆಬಗೆಯ ಜಂಕ್ ಫುಡ್ಡುಗನ್ನು ಹೆಚ್ಚಾಗಿ ಸೇವಿಸದೇ ಹಸಿರು ತರಕಾರಿಗಳು ಮತ್ತು ಹಣ್ಣುಹಂಪಲುಗಳನ್ನು ಸೇವಿಸಿ ಆರೋಗ್ಯಪೂರ್ಣ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಯಾವಾಗಲೂ ಗಂಟೆಗಟ್ಟಲೇ ಚೇರಿನಲ್ಲಿ ಕುಳಿತು ಕೆಲಸ ಮಾಡಬಾರದು. ಪ್ರತಿ ಅರ್ಧ ಗಂಟೆಗೊಮ್ಮೆಯಾದರೂ ಎದ್ದು ಓಡಾಡಬೇಕು.
ವೆರಿಕೋಸ್ ವೇನ್ಸ್ ಗೆ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ
ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ವೆರಿಕೋಸ್ ವೇನ್ಸ್ ಸಮಸ್ಯೆಗೆ ಹಲವಾರು ಪರಿಹಾರಗಳಿವೆ.
ಹುತ್ತದ ಮಣ್ಣನ್ನು ನೀರಿನೊಂದಿಗೆ ಬೆರೆಸಿ ಕಾಲಿಗೆ ಲೇಪಿಸಿಕೊಂಡು ಅಥವಾ ನೆಲದಿಂದ ಮೂರು ಅಡಿ ಕೆಳಗಿರುವ ಮಣ್ಣನ್ನು ಪುಡಿ ಮಾಡಿ ಚೆನ್ನಾಗಿ ಜರಡಿ ಮಾಡಿದಾಗ ಸಿಗುವ ನುಣುಪಾದ ಮಣ್ಣನ್ನು ನೀರಿನಲ್ಲಿ ಸೇರಿಸಿ ಆ ಲೇಪನವನ್ನು ಕೆಳಗೆ ಕಾಲಿನಿಂದ ಮಂಡಿಯ ತನಕ ಹಚ್ಚಿಕೊಂಡು ಸ್ವಲ್ಪ ಹೊತ್ತು ಹಾಗೆಯೇ ಇದ್ದು ನಂತರ ತೊಳೆದುಕೊಳ್ಳಬೇಕು. ಆಯುರ್ವೇದ ಔಷಧಿ ಅಂಗಡಿಗಳಲ್ಲಿ ದೊರೆಯುವ ಪಿಂಡತೈಲವನ್ನು ಬಾಧಿತ ಭಾಗಕ್ಕೆ ಹಚ್ಚಿ ಮಸಾಜು ಮಾಡಿಕೊಳ್ಳಬೇಕು. ಮಲಗುವ ಮಂಚದ ಎರಡು ಕಾಲುಗಳ ಕೆಳಗೆ ಕಲ್ಲುಗಳನ್ನು ಇಟ್ಟು ಇಳಿಜಾರು ಮಾಡಿಕೊಂಡು ಮಲಗಿದಾಗ ರಕ್ತ ಪರಿಚಲನೆ ಸುಗಮವಾಗಿ ಆಗುತ್ತದೆ. ಐದಾರು ಚಮಚ ಆಲಿವ್ ಅಥವಾ ಕೊಬ್ಬರಿ ಎಣ್ಣೆಯೊಂದಿಗೆ ಬೆಳ್ಳುಳ್ಳಿಯನ್ನು ಜಜ್ಜಿ ಅದನ್ನು ಹಚ್ಚಿಕೊಳ್ಳಬಹುದು.
ಒಂದೆಲಗದ ಸೊಪ್ಪು, ನೀರು, ಜ್ಯೇಷ್ಠ/ಯಷ್ಠಿ ಮಧು ಸೇರಿಸಿ ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾಡಿ ಅದಕ್ಕೆ ಜೇನುತುಪ್ಪ ಹಾಕಿ ಕಷಾಯ ಮಾಡಿ ಕುಡಿಯಬಹುದು. ಹಾಗೆಯೇ ಕ್ಯಾರಟ್, ಶುಂಠಿ, ಬೆಲ್ಲ ಹಾಕಿ ಪಾನೀಯ ಮಾಡಿ ಸೇವಿಸಬಹುದು. ಎಲೆಕೋಸು ಮತ್ತು ಪರಂಗಿ ಹಣ್ಣುಗಳ ಸೇವನೆ ಕೂಡ ಒಳ್ಳೆಯದು. ನೀರನ್ನು ದಿನವಿಡೀ ಸಾಕಷ್ಟು ಕುಡಿಯಬೇಕು. ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟರಾಲ್ ಕರಗುತ್ತದೆ. ಆಗ ರಕ್ತ ಶುದ್ಧಿಯಾಗಿ ಸರಾಗ ಹರಿಯಲು ದಾರಿಯಾಗುತ್ತದೆ.
ಡಾ. ವಸುಂಧರಾ ಭೂಪತಿ
ಮೊಬೈಲ್: 9986840477
ಇ-ಮೇಲ್: bhupathivasundhara@gmail.com