ಭಾರತಕ್ಕೆ ಬೇಡವಾದ ಶ್ರೀಲಂಕನ್ ಏರ್ವೇಸ್ ಯಾರ ತೆಕ್ಕೆಗೆ ಬೀಳಲಿದೆ? (ಹಣಕ್ಲಾಸು)

ಹಣಕ್ಲಾಸು-312

-ರಂಗಸ್ವಾಮಿ ಮೂಕನಹಳ್ಳಿ

Published: 09th June 2022 04:17 AM  |   Last Updated: 09th June 2022 01:41 PM   |  A+A-


Sri Lankan Airways

ಶ್ರೀಲಂಕಾ ಏರ್ವೇಸ್

ಶ್ರೀಲಂಕಾದಲ್ಲಿನ ಪರಿಸ್ಥಿತಿ ಮುಕ್ಕಾಲು ಪಾಲು ನಿಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಶ್ರೀಲಂಕಾ ಆರ್ಥಿಕವಾಗಿ ಇಂತಹ ಮಟ್ಟಕ್ಕೆ ಇಳಿಯಲು ಪ್ರಮುಖ ಕಾರಣಗಳಲ್ಲಿ ಮೊದಲನೆಯದು ಅತಿಯಾದ ಸಾಲ ಮಾಡಿದ್ದು, ಎರಡನೆಯದಾಗಿ ಸಾಲ ಕೊಟ್ಟ ಚೀನಿಯರಿಗೆ ದೇಶದ ಅಭಿವೃದ್ಧಿಯ ಕಾಂಟ್ರಾಕ್ಟ್ ಸೈನ್ ಮಾಡಿಕೊಟ್ಟಿದ್ದು, ಮೂರನೆಯದಾಗಿ ಒಂದು ಕುಟುಂಬವನ್ನ ಅಧಿಕಾರಕ್ಕೆ ತಂದದ್ದು, ನಾಲ್ಕನೆಯದಾಗಿ ಕೊರೋನಾಘಾತ. ಮೊದಲ ಮೂರು ಅಲ್ಲಿನ ಸರಕಾರ ಮತ್ತು ಜನರ ತಪ್ಪಾದರೆ ನಾಲ್ಕನೆಯದಕ್ಕೆ ಯಾರನ್ನ ಹೊಣೆ ಮಾಡುವುದು? ಒಟ್ಟಿನಲ್ಲಿ ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ. ದೇಶದ ಆರ್ಥಿಕತೆಯೇ ಹಳ್ಳ ಹಿಡಿದ ಮೇಲೆ ಶ್ರೀಲಂಕನ್ ಏರ್ವೇಸ್ ಕಥೆಯೇನು? ಅದು ಕೂಡ ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿದೆ.

ಆಸ್ಟ್ರೇಲಿಯಾ, ಯೂರೋಪು, ಮಿಡಲ್ ಈಸ್ಟ್, ಸೌತ್ ಈಸ್ಟ್ ಏಷ್ಯಾ ದೇಶಗಳಿಗೆ ಹಾರುವ ಶ್ರೀಲಂಕನ್ ಏರ್ವೇಸ್ ಗೆ ತಮ್ಮ ದೇಶದಲ್ಲಿ ತೈಲ ತುಂಬಿಸಿಕೊಳ್ಳುವ ಭಾಗ್ಯ ಇಲ್ಲವಾಗಿದೆ. ನಮ್ಮ ಚೆನ್ನೈ ನಗರಿಯಲ್ಲಿ ತೈಲವನ್ನ ತುಂಬಿಸಿಕೊಂಡು ಎಲ್ಲೆಡೆ ಹಾರಾಡುತ್ತಿದೆ. ಆದರೆ ದಿನದಿಂದ ದಿನಕ್ಕೆ ಖರ್ಚುಗಳನ್ನ ಸರಿದೂಗಿಸಲು ಸಾಧ್ಯವಿಲ್ಲದೆ ಶ್ರೀಲಂಕಾ ಸರಕಾರ 49 ಪ್ರತಿಶತ ಷೇರನ್ನ ಮಾರಾಟಕ್ಕಿಟ್ಟಿದೆ. ಆದರೆ ಮಾಲೀಕತ್ವವನ್ನ ಮಾರಾಟಕ್ಕಿಟ್ಟಿದೆ. ಭಾರತ ಸರಕಾರ ಪಕ್ಕದ ಪುಟಾಣಿ ಶ್ರೀಲಂಕಾ ದೇಶದಕ್ಕೆ ಬಹಳಷ್ಟು ಆರ್ಥಿಕವಾಗಿ ಸಹಾಯ ಮಾಡಿದೆ. ಈಗ ಶ್ರೀಲಂಕನ್ ಏರ್ವೇಸ್ ಕೊಳ್ಳುವುದು ಭಾರತದ ಮಟ್ಟಿಗೆ ಲಾಭದಾಯಕವಾಗಲಿದೆ. ಬರುವ ದಿನಗಳಲ್ಲಿ ತೈಲಬೆಲೆಯಲ್ಲಿ ಕುಸಿತ ಉಂಟಾದರೆ ಖಂಡಿತ ಈ ಡೀಲ್ ಲಾಭದಾಯಕವಾಗುತ್ತದೆ. ಇಂದಿಗೆ ಭಾರತೀಯ ವಿಮಾನ ಸಂಸ್ಥೆಗಳು ಹಾರಾಡದಿರುವ ಹೊಸ ಜಾಗಗಳಿಗೆ ಈ ಮೂಲಕ ತಲುಪುವ ತನ್ನ ರೆಕ್ಕೆಯನ್ನ ಇನ್ನಷ್ಟು ಹರಡುವ ಕೆಲಸವನ್ನ ಮಾಡುವ ಸದವಕಾಶ ಭಾರತದ ಮುಂದಿದೆ. ಆದರೆ ಏರ್ ಇಂಡಿಯಾವನ್ನ ಖಾಸಗಿಯಾಗಿ ಮಾಡಿ ಕೈ ತೊಳೆದುಕೊಂಡಿರುವ ಭಾರತ ಸರಕಾರ ಇಂತಹ ಸಾಹಸಕ್ಕೆ ಕೈ ಹಾಕುವುದಿಲ್ಲ ಎನ್ನುವುದು ಪರಮಸತ್ಯ. ಗಮನಿಸಿ ನೋಡಿ ಅತ್ಯಂತ ಸಣ್ಣ ದೇಶಗಳಾದ ಫ್ರಾನ್ಸ್, ಜರ್ಮನಿ, ಸಿಂಗಾಪುರ, ಮಲೇಶಿಯಾ, ಥೈಲ್ಯಾಂಡ್, ದುಬೈ, ಕತಾರ್ ಹೀಗೆ ಹಲವು ಹತ್ತು ದೇಶಗಳು ತಮ್ಮ ದೇಶವನ್ನ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ತಮ್ಮದೇ ಆದ ಏರ್ಲೈನ್ ಗಳನ್ನ ಹೊಂದಿವೆ. ಆದರೆ ಭಾರತ? ಆಶ್ಚರ್ಯದ ವಿಷಯವೆಂದರೆ ಮೇಲಿನ ಸಾಲಿನಲ್ಲಿ ಉಲ್ಲೇಖಿಸಿರುವ ದೇಶಗಳ ಜನಸಂಖ್ಯೆಗೂ ಮೀರಿದ ಪ್ರಯಾಣಿಕರ ಸಂಖ್ಯೆ ನಮ್ಮ ದೇಶದಲ್ಲಿದೆ ಆದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ್ದು ಎಂದು ಗುರುತಿಸುವ ಒಂದು ವಿಮಾನಯಾನ ಸಂಸ್ಥೆಯಿಲ್ಲ! ಅಲ್ಲದೆ ವಾರ್ಷಿಕ ವ್ಯಾಪಾರವೃದ್ಧಿಯ ಪ್ರಮಾಣ 20 ಪ್ರತಿಶತ ಮೀರುತ್ತಿದೆ. ವಸ್ತು-ಸ್ಥಿತಿ ಹೀಗಿದ್ದೂ ನಮ್ಮೆಲ್ಲಾ ಏರ್ಲೈನ್ ಗಳು ನಷ್ಟದಲ್ಲಿವೆ.

ಮೋದಿಯವರ ಕೇಂದ್ರ ಸರಕಾರ ಯಾವುದೇ ಕಾರಣಕ್ಕೂ ಹೊಸದಾಗಿ ಸರಕಾರಿ ಬಂಡವಾಳವನ್ನ ಯಾವುದೇ ಉದ್ದಿಮೆಯಲ್ಲಿ ಹೂಡುವುದಿಲ್ಲ. 2024ರಲ್ಲಿ ಚುನಾಯಿತವಾಗಿ ಬಂದದ್ದೇ ಆದರೆ ಸಾಲು ಸಾಲು ಪ್ರೈವೇಟೈಸೇಶನ್ ನೀವು ನೋಡಲು ಸಿಗುತ್ತದೆ.

ಭಾರತ ಬಡಜನರಿಂದ ತುಂಬಿರುವ ಅತ್ಯಂತ ಸಂಪದ್ಭರಿತ ದೇಶ. ಹಾಗೆಯೇ ನಮ್ಮ ದೇಶದ ಇಂಡಸ್ಟ್ರಿಗಳು ಬಹುತೇಕ ಸಿಕ್ (sick), ಆದರೆ ಅದರ ಪ್ರೊಮೋಟರ್ಸ್, ಓನರ್ಸ್ etc ಮಾತ್ರ ಬಹಳ ರಿಚ್! ಬ್ಯಾಡ್ ಲೋನ್ ಅಥವಾ ಅನುತ್ಪಾದಕ ಆಸ್ತಿ 10 ಲಕ್ಷ ಕೋಟಿ ರೂಪಾಯಿ ಮೀರಿದೆ. ಇದೆಷ್ಟು ದೊಡ್ಡ ಹಣ ಅಂದರೆ ಸರಕಾರ ಮಧ್ಯ ಪ್ರವೇಶಿಸದೇ ಹಾಗೆ ಬಿಟ್ಟರೆ ನಮ್ಮ ಎಲ್ಲಾ ಪಬ್ಲಿಕ್ ಸೆಕ್ಟರ್ ಬ್ಯಾಂಕ್ಗಳ ಮುಳುಗಿಸುವಷ್ಟು! ಇದು ಯಾವತ್ತೂ ಸರಕಾರಕ್ಕೆ ತಲೆನೋವು, ಬ್ಯಾಂಕುಗಳನ್ನ ಖಾಸಗೀಕರಣಗೊಳಿಸಿಬಿಟ್ಟರೆ? ಇದನ್ನ ಮುಂದಿನ ಮೂರ್ನಾಲ್ಕು ವರ್ಷದಲ್ಲಿ ನಾವೆಲ್ಲಾ ನೋಡಲಿದ್ದೇವೆ. ಒಂದೆರೆಡು ಸರಕಾರಿ ಬ್ಯಾಂಕುಗಳು ಉಳಿದುಕೊಂಡರೆ ಅದು ದೊಡ್ಡದು ಎನ್ನುವಂತಾಗುತ್ತದೆ.

ಇದನ್ನೂ ಓದಿ: ದಿವಾಳಿ ಅಂಚಿನಲ್ಲಿರುವ ಶ್ರೀಲಂಕಾಕ್ಕೆ ಭಾರತ ನೀಡುತ್ತಿದೆ ಸಹಾಯ ಹಸ್ತ!

ದೇಶ ಯಾವುದೇ ಇರಲಿ ಅಲ್ಲಿನ ಆರ್ಥಿಕ ಸ್ಥಿತಿಯನ್ನ ಕಂಟ್ರೋಲ್ ಮಾಡುವುದು ಈ ಮೂರು ವರ್ಗದ ಜನ ಅಥವಾ ಸಂಸ್ಥೆಗಳು. ನೆನಪಿರಲಿ ಜಗತ್ತಿನ ಅತ್ಯಂತ ದೊಡ್ಡ ಹಣಕಾಸು ಸಂಸ್ಥೆಗಳು ಖಾಸಗಿ ಮಾಲೀಕತ್ವ ಹೊಂದಿವೆ. ಅವುಗಳ ಮೇಲೆ ಸರಕಾರ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ. ಅಮೆರಿಕಾದ ಫೆಡರಲ್ ಬ್ಯಾಂಕ್ ಅಲ್ಲಿನ ಡಾಲರ್ ಮುದ್ರಿಸುವ ಅಧಿಕಾರ ಹೊಂದಿರುವ ಸಂಸ್ಥೆ. ಇದು ಖಾಸಗಿ ಸಂಸ್ಥೆಗಳಿಂದ ಸ್ಥಾಪಿಸಲ್ಪಟ್ಟಿದೆ. ಇದರ ಮೇಲೆ ಅಮೇರಿಕಾ ಸರಕಾರದ ಪೂರ್ಣ ಹಿಡಿತವಿಲ್ಲ. ಅಂದರೆ ಗಮನಿಸಿ ಡಾಲರ್ ಎಷ್ಟು ಮುದ್ರಿಸಬೇಕು, ಅದರ ಬೆಲೆ ಎಷ್ಟಿರಬೇಕು ಎನ್ನುವುದರ ಮೇಲೆ ಅಲ್ಲಿನ ಸರಕಾರದ ಹಿಡಿತವಿಲ್ಲ. ಇದು ಪ್ರೈವೇಟ್ ಈಕ್ವಿಟಿ ಹೋಲ್ಡರ್ಸ್ ಕೈಲಿದೆ!! ಇನ್ನು ಇಂಗ್ಲೆಂಡ್, ಸ್ವಿಸ್ ಕಥೆ ಹೇಳಲು ಅಲ್ಲೇನೂ ಹೊಸತನವಿಲ್ಲ.

ಮೋದಿ ಸರಕಾರ 2.0 ಮೂರು ವರ್ಗದ ಜನರ ಮೇಲೆ ಅಗ್ಗ್ರೆಸಿವ್ ಆಗಿ ದಾಳಿ ಮಾಡುತ್ತಿದೆ. ಗಮನಿಸಿ ನಮ್ಮ ದೇಶಕ್ಕೆ ಸ್ವಂತಂತ್ರ ಬಂದ ನಂತರ ಈ ರೀತಿಯ ರೆಗ್ಯುಲೇಟರಿ ಆಕ್ಷನ್ ತೆಗೆದುಕೊಂಡ ಉದಾಹರಣೆ ಇಲ್ಲ. ಯಾವುದೀ ಮೂರು ವರ್ಗ?

 1. ಆರ್ ಬಿ ಐ.
 2. ರಿಟೇಲ್ ಏಜೆನ್ಸಿಸ್, ಆಡಿಟ್ ಫರ್ಮ್ಸ್ ಮತ್ತು ಕ್ರೆಡಿಟ್ ರೇಟಿಂಗ್ ಕಂಪನೀಸ್
 3. ಬಿಗ್ ಇಂಡಸ್ಟ್ರಿಯಲಿಸ್ಟ್ಸ್ .

ಜಿಎಸ್ಟಿ ಅಥವಾ ಡಿಮೋನಿಟೈಸಷನ್ ಸಮಾಜದ ಅತಿ ಸಾಮಾನ್ಯನಿಗೂ ತಲುಪಿದ ವಿಷಯ ಹೀಗಾಗಿ ಅದರಲ್ಲಿ ಹೆಚ್ಚು ರಾಜಕೀಯ ಮಾಡಲು ಸಾಧ್ಯವಾಗಲಿಲ್ಲ. ಆದರೆ ಮೋದಿ 2.0 ಸರಕಾರ ಮಾಡುತ್ತಿರುವ ಈ ಹೊಸ ದಾಳಿ ಕಾರ್ಪೊರೇಟ್ ವಲಯದಲ್ಲಿ ನಡುಕ ಉಂಟು ಮಾಡಿದೆ. ಇದರಿಂದ ಏನಾಗಿದೆ?

 1. ಇಲ್ಲಿನ ಕೊಳೆತ ರಾಜಕೀಯ ವ್ಯವಸ್ಥೆಯಲ್ಲಿ ಹುಲುಸಾಗಿ ಬೆಳೆ ತೆಗೆಯುತ್ತಿದ್ದ FII ಗಳು ತಮ್ಮ ಹೂಡಿಕೆ ಹಿಂಪಡೆದು ಪಲಾಯನ ಮಾಡುತ್ತಿದ್ದಾರೆ. ಕಾರಣವೇನೇ ಇರಲಿ ಇದರಿಂದ ಕ್ಯಾಪಿಟಲ್ ಮಾರ್ಕೆಟ್ ಬಂಡವಾಳದ ಕೊರತೆಯಿಂದ ನಲುಗಿ ಹೋಗಿದೆ.ಇತ್ತೀಚಿನ ಷೇರು ಮಾರುಕಟ್ಟೆಯ ಕುಸಿತದ ಹಿಂದಿನ ರಹಸ್ಯ ಅರ್ಥವಾಯಿತು ಎಂದುಕೊಳ್ಳುವೆ.
 2. ದೊಡ್ಡ ಉದ್ದಿಮೆದಾರರು ಬ್ಯಾಂಕ್ಗಳ ಸಾಲ ಕೊಡದೆ ಆರಾಮಾಗಿ ಇದ್ದರು. ಇದೀಗ ಅವರ ಸಾಲ ವಸೂಲಿ ಮಾಡಲು ಎಲ್ಲಾ ತರಹದ ದಾರಿಯನ್ನ ಸರಕಾರ ಹುಡುಕುತ್ತಿದೆ ಪರಿಣಾಮ ಇವರಾರಿಗೂ ಈಗ ಹೊಸ ಹೂಡಿಕೆ ಮಾಡುವುದು ಅಥವಾ ಇರುವ ಬಿಸಿನೆಸ್ ನಡೆಸುವುದಕ್ಕೆ ಇಷ್ಟವಿಲ್ಲದ ಹಾಗೆ ಆಗಿದೆ.
 3. ವ್ಯಾಪಾರ ಮತ್ತು ವಹಿವಾಟಿನ ಮೇಲೆ ಹಿಡಿತವಿರುವ ಒಂದಷ್ಟು ಜನ ಇದರಿಂದ ಬೇಸತ್ತು ವಹಿವಾಟು ಕಡಿಮೆ ಮಾಡುವ ಆ ಮೂಲಕ ಕೆಲಸ ಕಡಿತ ಮಾಡಿ ಸಮಾಜದಲ್ಲಿ ಸರಕಾರದ ಬಗ್ಗೆ ನಕಾರಾತ್ಮಕ ಭಾವನೆ ಬರುವಂತೆ ಮಾಡಲು ಯತ್ನಿಸುತ್ತಿದ್ದಾರೆ.

ಏರ್ ಸಿಲೋನ್ ಎನ್ನುವ ಹೆಸರಿನಲ್ಲಿದ್ದ ವಿಮಾನ ಸಂಸ್ಥೆಯನ್ನ 1998ರಲ್ಲಿ ಎಮಿರೇಟ್ಸ್ ಏರ್ ಲಂಕಾ ಎನ್ನುವ ಹೊಸ ನಾಮಕರಣದೊಂದಿಗೆ ಸಹಭಾಗಿತ್ವ ಹೊಂದಿತ್ತು, 2010ರ ವೇಳೆಗೆ ಶ್ರೀಲಂಕಾ ಸರಕಾರಕ್ಕೆ ತನ್ನ ಪಾಲು ಷೇರನ್ನ ಮಾರಿ ಹೊರ ಹೋಗಿತ್ತು. ನಂತರ ಶ್ರೀಲಂಕನ್ ಏರ್ವೇಸ್ ಎನ್ನುವ ಮರುನಾಮಕರಣ ಮಾಡಿಕೊಂಡ ಸಂಸ್ಥೆ ಪರವಾಗಿಲ್ಲ ಎನ್ನುವಂತೆ ಸಾಗುತ್ತ ಬಂದಿತ್ತು. ಕೊರೋನದ ಜೊತೆಗೆ ದೇಶದ ಆರ್ಥಿಕತೆ ಎರಡೂ ಶ್ರೀಲಂಕನ್ ಏರ್ವೇಸ್ನನ್ನ ಮತ್ತೆ ಬೇರೆ ಪಾಲುದಾರರನ್ನ ಹುಡುಕುವಂತೆ ಮಾಡಿವೆ.

ಭಾರತದ ಮಟ್ಟಿಗೆ ಮೇಲಿನ ಕಾರಣಗಳ ಕಾರಣ ಮತ್ತು ಸರಕಾರ ಇರುವುದು ಕೇವಲ ಮೇಲ್ವಿಚಾರಣೆಗೆ ಹೊರತು ವ್ಯಾಪಾರ ಮಾಡುವುದಕ್ಕಲ್ಲ ಎನ್ನುವ ಕೇಂದ್ರ ಸರಕಾರದ ಧೋರಣೆಯಿಂದ ಶ್ರೀಲಂಕನ್ ಏರ್ವೇಸ್ ಕೊಳ್ಳುವ ಅವಕಾಶ ಕೈತಪ್ಪಲಿದೆ.

ಮತ್ತದೇ ಎಮಿರೇಟ್ಸ್, ಕತಾರ್, ಏತಿಹಾದ್ ಬಕ ಪಕ್ಷಿಗಳಂತೆ ಸಿದ್ಧವಾಗಿದೆ, ಈ ಬಾರಿ ಸಿಂಗಪೂರ್ ಏರ್ಲೈನ್ ಮತ್ತು ಏರ್ ಏಷ್ಯಾ ಸಂಸ್ಥೆಗಳು ಕೂಡ ಸ್ವಲ್ಪ ಪ್ರಮಾಣದ ಆಸಕ್ತಿ ತೋರಿಸಿರುವುದು ಆಟದಲ್ಲಿ ಒಂದಷ್ಟು ಬಿಸಿ ಸೃಷ್ಟಿಯಾಗುವಂತೆ ನೋಡಿಕೊಂಡಿವೆ. ಕೊನೆಗೂ ಶ್ರೀಲಂಕನ್ ಏರ್ವೇಸ್ ಯಾರ ತೆಕ್ಕೆಗೆ ಬೀಳಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.

ಕೊನೆ ಮಾತು: ಭಾರತದ ಕೇಂದ್ರ ಸರಕಾರದ ನಿಲುವು ಮೊದಲ ಅವಧಿಗಿಂತ ಎರಡನೇ ಅವಧಿಯಲ್ಲಿ ಹೆಚ್ಚು ನಿಖರವಾಗಿದೆ. ಸರಕಾರವಿರುವುದು ಮೇಲ್ವಿಚಾರಣೆ (ಗೌವರ್ನೆನ್ಸ್) ಮಾಡುವುದಕ್ಕೆ ಹೊರತು ವ್ಯಾಪಾರ (ಬಿಸಿನೆಸ್ ) ಮಾಡುವುದಕ್ಕಲ್ಲ ಎನ್ನುವ ನಿಲುವನ್ನ ಹೊಂದಿದೆ. ನಿಧಾನವಾಗಿ ಸರಕಾರ ಹೂಡಿಕೆ ಮಾಡಿದ್ದ ಎಲ್ಲೆಡೆಯಿಂದ ಹಣವನ್ನ ಹೊರ ತೆಗೆದುಕೊಳ್ಳುವ ಪ್ರಕ್ರಿಯೆಗೆ ಡಿಸ್ಇನ್ವೆಸ್ಟ್ಮೆಂಟ್ ಎನ್ನುತ್ತಾರೆ. ಕೇಂದ್ರ ಸರಕಾರ ಹೀಗೆ ಬಂಡವಾಳ ಹಿಂಪಡಿಕೆಯನ್ನ ಶುರು ಮಾಡುತ್ತದೆ. ಈಗಾಗಲೇ ಎಲೈಸಿ ಯಂತಹ ಅತ್ಯಂತ ಲಾಭಭರಿತ ಸಂಸ್ಥೆಯಲ್ಲಿನ ಹೂಡಿಕೆಯನ್ನ ಹಿಂಪಡೆಯಲು ಹವಣಿಸಿರುವುದು ನಮಗೆಲ್ಲಾ ಗೊತ್ತಿದೆ. 2024 ರಲ್ಲೂ ಇದೆ ಸರಕಾರ ಅಧಿಕಾರಕ್ಕೆ ಬಂದರೆ ಸರಕಾರವೆಂದರೆ ಕೇವಲ ಮೇಲ್ವಿಚಾರಣೆ ಹೊರತು ಬೇರಾವ ಬಾಧ್ಯತೆ ಇಲ್ಲವೆನ್ನುವ ಮಟ್ಟಕೆ ಖಂಡಿತ ಬರುತ್ತದೆ. ಅದು ಸರಿಯೋ ತಪ್ಪೋ ಎನ್ನುವುದನ್ನ ಮುಂದಿನ ಹತ್ತಿಪ್ಪತ್ತು ವರ್ಷದ ನಂತರ ವಿಮರ್ಶಿಸಬೇಕಾಗುತ್ತದೆ. ಎಲ್ಲವನ್ನೂ ಸರಕಾರದ ಅಡಿಯಲ್ಲಿ ಮಾಡುವುದು ಎಷ್ಟು ತಪ್ಪೋ, ಹಾಗೆಯೇ ಎಲ್ಲವನ್ನೂ ಖಾಸಗೀಕರಣಗೊಳಿಸುವುದು ಕೂಡ ಅಪರಾಧ. ಪೂರ್ಣ ಪ್ರಮಾಣದ ಜನಾದೇಶ ಪಡೆದು ಬಂದಿರುವ ಸರಕಾರಕ್ಕೆ ಇದನ್ನ ಹೇಳುವರು ಯಾರು?


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


  Stay up to date on all the latest ಅಂಕಣಗಳು news
  Poll
  Former Prime Minister Rajiv Gandhi at an election rally in May 1991

  ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವ ನಿರ್ಧಾರ ತಪ್ಪು ಎಂದ ಕಾಂಗ್ರೆಸ್ ಪಕ್ಷದ ಹೇಳಿಕೆಯನ್ನು ನೀವು ಒಪ್ಪುತ್ತೀರಾ?


  Result
  ಹೌದು
  ಇಲ್ಲ

  Comments(4)

  Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

  The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • anna

   Analysis
   5 months ago reply
  • Sandesh

   Privatisation agali
   5 months ago reply
  • Vivek

   neevu sree lankada vimanadalli koothu yellelligo harutta iddiri.
   5 months ago reply
   • anna

    Yes true
    5 months ago reply
  flipboard facebook twitter whatsapp