
ಮಲ್ಟಿಪಲ್ ಸ್ಕ್ಲಿರೋಸಿಸ್
ಮಲ್ಟಿಪಲ್ ಸ್ಕ್ಲಿರೋಸಿಸ್ ಮೆದುಳಿಗೆ ಸಂಬಂಧಿಸಿದ ಗಂಭೀರರೂಪದ ಕಾಯಿಲೆ. ಇದು ಇಡೀ ದೇಹವನ್ನು ನಿಯಂತ್ರಿಸುವ ಕೇಂದ್ರ ನರ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತದೆ. ಮೆದುಳುಬಳ್ಳಿ ಮತ್ತು ಮೆದುಳಿನ ನರಗಳನ್ನು ಆವರಿಸಿರುವ ಮೈಯೆಲಿನ್ ಎಂಬ ರಕ್ಷಣಾಪದರವನ್ನು ಹರಿದು ಇವುಗಳ ಮೂಲಕ ಹರಿದು ಬರಬೇಕಾಗಿದ್ದ ಸೂಚನೆಗಳ ಸಂವಹನವನ್ನು ತಡೆಯುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿ ಸಹಜವಾಗಿ ನಡೆಯಬೇಕಾದ ಹಲವಾರು ಕಾರ್ಯಗಳು ನಡೆಯುವುದಿಲ್ಲ. ಮಲ್ಟಿಪಲ್ ಸ್ಕ್ಲಿರೋಸಿಸ್ ಕಾಯಿಲೆ ಬಾಧಿತ ವ್ಯಕ್ತಿಗೆ ನರಗಳ ಜೀವಕೋಶಗಳು ಶಾಶ್ವತವಾಗಿ ನಷ್ಟವಾಗುವ ಸಾಧ್ಯತೆ ಇದೆ.
ಮಲ್ಟಿಪಲ್ ಸ್ಕ್ಲಿರೋಸಿಸ್ ಕಾಯಿಲೆ ಹೇಗೆ ವ್ಯಾಪಿಸುತ್ತದೆ?
ನರ ಜೀವಕೋಶಗಳು ನಮ್ಮ ದೇಹದ ಕೇಂದ್ರ ನರವ್ಯವಸ್ಥೆಯ ಪ್ರಮುಖ ಭಾಗಗಳು. ಇವುಗಳ ಹೊರಪದರದಲ್ಲಿ ಮೈಯೆಲಿನ್ ಎಂಬ ರಕ್ಷಣಾ ಪದರ ಇದೆ. ಮೈಯೆಲಿನ್ ಪದರ ಮೆದುಳಿನ ಸೂಚನೆಗಳನ್ನು ಒಂದು ಜೀವಕೋಶದಿಂದ ಇನ್ನೊಂದು ಜೀವಕೋಶಕ್ಕೆ ಮಿಂಚಿನ ವೇಗದಲ್ಲಿ ತಲುಪಿಸುತ್ತದೆ. ಸತತವಾಗಿ ದೇಹದ ಆರೋಗ್ಯವನ್ನು ಕಾಪಾಡುವ ಜೀವನಿರೋಧಕ ಶಕ್ತಿ ಯಾವುದೋ ಕಾರಣದಿಂದ ದುರ್ಬಲವಾದರೆ ಮೈಯೆಲಿನ್ ಕವಚವನ್ನು ದೇಹಕ್ಕೆ ಹಾನಿ ಮಾಡುವ ಬ್ಯಾಕ್ಟೀರಿಯಾ ಅಥವಾ ವೈರಸ್ ಎಂದೇ ತಿಳಿದು ದಾಳಿ ಮಾಡುತ್ತದೆ. ಆಗ ಮೈಯಲಿನ್ ಕವಚ ತೂತುತೂತಾಗಿ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತದೆ. ಹೀಗೆ ಒಂದೆಡೆ ಅಲ್ಲ ಹಲವು ಕಡೆ ನಡೆಯುತ್ತದೆ. ಮಲ್ಟಿಪಲ್ ಸ್ಕ್ಲಿರೋಸಿಸ್ಸಿನಿಂದಾಗಿ ಶಿಥಿಲಗೊಂಡ ಮೈಯಲಿನ್ ಪದರದ ಮೂಲಕ ಸಾಗಬೇಕಾಗಿದ್ದ ಸೂಚನೆಗಳು ಅಥವಾ ನರಸಂವಹನೆ ತಡೆತಡೆದು ಸಾಗುತ್ತವೆ ಅಥವಾ ಪೂರ್ಣವಾಗಿ ಅಸಾಧ್ಯವಾಗುತ್ತದೆ. ಈ ಮೂಲಕ ಮೆದುಳಿನ ಸಂಕೇತಗಳು ಸಂಬಂಧಿತ ಅಂಗಕ್ಕೆ ತಲುಪಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ ಆ ಅಂಗ ಸಹಜವಾಗಿ ಕಾರ್ಯನಿರ್ವಹಿಸಲು ಆಗುವುದಿಲ್ಲ.
ಈ ರೋಗವು ನೇರವಾಗಿ ಮೆದುಳು ಬಳ್ಳಿ, ಕಣ್ಣುಗಳು (ದೃಷ್ಟಿ ನರ), ಇಂದ್ರಿಯಗಳನ್ನು ಗ್ರಹಿಸುವ ಮೆದುಳಿನ ಭಾಗ (ಸೆರೆಬಲ್ಲಮ್) ಮತ್ತು ಮೆದುಳಿನ ಬುಡದ ಮೇಲೆ ಪರಿಣಾಮ ಬೀರುತ್ತದೆ. ಮಲ್ಟಿಪಲ್ ಸ್ಕ್ಲಿರೋಸಿಸ್ ಹೆಚ್ಚುತ್ತಾ ಹೋದಂತೆ ಹೆಚ್ಚು ಹೆಚ್ಚು ಭಾಗದ ಮೈಯಲಿನ್ ನಷ್ಟವಾಗುತ್ತಾ ಸಾಗುತ್ತದೆ ಹಾಗೂ ಮೆದುಳಿನಲ್ಲಿರುವ ನರಗಳ ನಾರಿನಂಶವೂ ನಷ್ಟವಾಗುತ್ತಾ ಸಾಗುತ್ತದೆ ಹಾಗೂ ಸೂಚನೆಗಳ ಸಂವಹನೆಯೂ ಕಡಿಮೆಯಾಗುತ್ತಾ ಹೋಗುತ್ತದೆ. ಪರಿಣಾಮವಾಗಿ ದೇಹದ ಕೆಲವು ಕಾರ್ಯಗಳು ಅಥವಾ ಅಂಗಗಳು ಸ್ಥಗಿತಗೊಳ್ಳುತ್ತವೆ.
ಮಲ್ಟಿಪಲ್ ಸ್ಕ್ಲಿರೋಸಿಸ್ ಕಾಯಿಲೆಯ ಲಕ್ಷಣಗಳು
ಈ ಕಾಯಿಲೆಯ ಗಂಭೀರತೆಯ ಆಧಾರದ ಮೇಲೆ ಕೆಲವರಿಗೆ ಕೆಲವು ಲಕ್ಷಣಗಳು ಕಾಣಿಸಿಕೊಂಡರೆ ಇನ್ನೂ ಕೆಲವರಿಗೆ ಗಂಭೀರವಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ನರಗಳು ಎಷ್ಟರ ಮಟ್ಟಿಗೆ ಘಾಸಿಗೊಂಡಿವೆ ಹಾಗೂ ಮೆದುಳಿನ ಎಷ್ಟು ಭಾಗ ಮತ್ತು ಯಾವ ಭಾಗದಲ್ಲಿ ನರಗಳು ಘಾಸಿಗೊಂಡಿವೆ ಎಂಬುದರ ಆಧಾರದ ಮೇಲೆ ಆ ಭಾಗವು ನಿಯಂತ್ರಿಸುವ ಅಂಗ ಅಥವಾ ಅಂಗಗಳು ಬಾಧಿತವಾಗುತ್ತವೆ.
ಇದನ್ನೂ ಓದಿ: ವೆರಿಕೋಸ್ ವೇನ್ಸ್ ಅಥವಾ ಉಬ್ಬಿದ ರಕ್ತನಾಳಗಳು (ಕುಶಲವೇ ಕ್ಷೇಮವೇ)
ಮಲ್ಟಿಪಲ್ ಸ್ಕ್ಲಿರೋಸಿಸ್ ಉಂಟಾಗಲು ಹಲವಾರು ಕಾರಣಗಳಿವೆ. ಆದರೆ ಸ್ಪಷ್ಟವಾಗಿ ಇದೇ ಕಾರಣ ಎಂದು ಹೇಳಲು ಇದುವರೆಗೆ ವೈದ್ಯವಿಜ್ಞಾನಕ್ಕೆ ಸಾಧ್ಯವಾಗಿಲ್ಲ. ವಂಶವಾಹಿಗಳು, ಶೀತಲ ವಾತಾವರಣದಲ್ಲಿ ವಾಸ, ಧೂಮಪಾನ, ವಿಟಮಿನ್ನುಗಳ ಕೊರತೆ, ಹಾರ್ಮೋನುಗಳ ಏರುಪೇರು, ವೈರಸ್ಸುಗಳು ಮತ್ತು ಸ್ವಯಂ ರೋಗನಿರೋಧಕ ಶಕ್ತಿ ದೇಹದ ವಿರುದ್ಧವೇ ಕೆಲಸ ಮಾಡುವ ಕಾರಣದಿಂದ ಇದು ಬರಬಹುದು.
ಈ ರೋಗದ ಲಕ್ಷಣಗಳೆಂದರೆ ಮಂದದೃಷ್ಟಿ, ವಸ್ತುಗಳು ಎರಡೆರಡಾಗಿ ಕಾಣುವುದು, ನಿಸ್ತೇಜತೆ, ಖಿನ್ನತೆ, ಜೀರ್ಣಶಕ್ತಿ ನಷ್ಟ, ಸ್ನಾಯುಸೆಳೆತ, ಲೈಂಗಿಕ ತೊಂದರೆಗಳು, ಸದಾ ಸುಸ್ತು, ಏಕಾಗ್ರತೆಯ ಕೊರತೆ, ತಲೆಯಿಂದ ಬೆನ್ನಹುರಿಯ ಕೆಳಗಿನವರೆಗೆ ವಿದ್ಯುತ್ ಸಂಚಾರವಾದ ಅನುಭವ, ಸೂಜಿ ಚುಚ್ಚುವ ಅನುಭವ, ನಡೆಯುವ ಭಂಗಿಗಳಲ್ಲಿ ಬದಲಾವಣೆ, ತಲೆತಿರುಗುವಿಕೆ, ತೊದಲುವಿಕೆ ಮತ್ತು ದೇಹದ ಕೆಲವು ಭಾಗಗಳು ನಡುಗುವುದು ಅಥವಾ ಅದುರುವುದು.
ಮಲ್ಟಿಪಲ್ ಸ್ಕ್ಲಿರೋಸಿಸ್ ಕಾಯಿಲೆಗೆ ಚಿಕಿತ್ಸೆ
ಈ ರೋಗಕ್ಕೆ ಪ್ರಸ್ತುತ ಯಾವ ಚಿಕಿತ್ಸೆಯೂ ಇಲ್ಲ. ಆದರೆ ಕೆಲವು ಔಷಧಿಗಳು, ಮಾತ್ರೆಗಳು ಮತ್ತು ನಿರ್ದಿಷ್ಟ ಚಿಕಿತ್ಸೆಗಳು ರೋಗಲಕ್ಷಣಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತವೆ. ನರರೋಗ ತಜ್ಞರು, ಫಿಸಿಯೋಥೆರಪಿಸ್ಟ್, ಮತ್ತಿತರ ಪರಿಣತ ವೈದ್ಯರು ಈ ಚಿಕಿತ್ಸೆಗಳನ್ನು ಮಾಡುತ್ತಾರೆ. ರೋಗಿಗಳು, ಸುಗಮ (ಆಕ್ಯುಪೇಷನಲ್) ಚಿಕಿತ್ಸೆ, ಫಿಸಿಯೋಥೆರಪಿ, ಯೋಗ, ಧ್ಯಾನ, ವಿಶ್ರಾಂತಿ ಮತ್ತು ವ್ಯಾಯಾಮಗಳಿಂದ ಪ್ರಯೋಜನ ಪಡೆಯಬಹುದು. ಅಧ್ಯಯನಗಳ ಪ್ರಕಾರ ಭಾರತದಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ 5 ರಿಂದ 10 ಜನರಿಗೆ ಈ ರೋಗವಿದೆ. ಅಂದಾಜು ಸುಮಾರು 2.25 ಲಕ್ಷ ಜನ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಲ್ಟಿಪಲ್ ಸ್ಕ್ಲಿರೋಸಿಸ್ ಬರದಂತೆ ತಡೆಯಲು ಧೂಮಪಾನ ತ್ಯಜಿಸಬೇಕು. ಸಾಕಷ್ಟು ಸೂರ್ಯನ ಬೆಳಕಿಗೆ ಮೈಯ್ಯೊಡ್ಡಬೇಕು. ವಿಟಮಿನ್ ಡಿ ಕೊರತೆ ಇದ್ದರೆ ಸಪ್ಲಿಮೆಂಟ್ ತೆಗೆದುಕೊಳ್ಳಬೇಕು. ಕೊಬ್ಬುಯುಕ್ತ ಆಹಾರವನ್ನು ಹೆಚ್ಚು ಸೇವಿಸಬಾರದು. ಹೆಚ್ಚು ಒತ್ತಡ ತೆಗೆದುಕೊಳ್ಳಬಾರದು. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಕಿತ್ತಲೆ, ಪಪಾಯಾ, ಬಾಳೆಹಣ್ಣು ಸೇರಿದಂತೆ ಎಲ್ಲಾ ತಾಜಾ ಹಣ್ಣುಗಳು ಮತ್ತು ಹಸಿರು ಸೊಪ್ಪು, ತರಕಾರಿಗಳು. ಓಟ್ಸ್, ಅಕ್ಕಿ ಮತ್ತು ಸಿರಿಧಾನ್ಯಗಳು. ಮೊಟ್ಟೆ, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಡಿ ಹೇರಳವಾಗಿರುವ ಸಾಲ್ಮನ್ ಮತ್ತು ಮ್ಯಾಕೆರೆಲ್ ಮೀನುಗಳನ್ನು ಸೇವಿಸಬೇಕು. ಋತುಗಳಿಗೆ ಅನುಸಾರವಾಗಿ ಆಯಾ ಕಾಲಕ್ಕೆ ಸಿಗುವ ಹಣ್ಣು ತರಕಾರಿಗಳು ಮತ್ತು ಹಣ್ಣುಗಳನ್ನು ತಪ್ಪದೇ ಸೇವಿಸಬೇಕು. ದೇಹದ ತೂಕವನ್ನು ಸಮರ್ಪಕವಾಗಿ ನಿರ್ವಹಿಸಬೇಕು.
ಡಾ. ವಸುಂಧರಾ ಭೂಪತಿ
ಮೊಬೈಲ್: 9986840477
ಇ-ಮೇಲ್: bhupathivasundhara@gmail.com