ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಗೆದ್ದದ್ದು/ಗೆಲ್ಲುವುದು ಅಮೆರಿಕಾ!

ಹಣಕ್ಲಾಸು-298

-ರಂಗಸ್ವಾಮಿ ಮೂಕನಹಳ್ಳಿ

Published: 03rd March 2022 12:05 AM  |   Last Updated: 03rd March 2022 03:01 PM   |  A+A-


Russia and Ukraine war

ಸಂಗ್ರಹ ಚಿತ್ರ

ರಷ್ಯಾ ದೇಶ ಉಕ್ರೈನ್ ದೇಶದ ಮೇಲೆ ಯುದ್ಧ ಸಾರಿ ಇಂದಿಗೆ ಆರನೇ ದಿನ. ದಿನದಿಂದ ದಿನಕ್ಕೆ ಯುದ್ಧ ತೀವ್ರತೆಯನ್ನ ಪಡೆದುಕೊಳ್ಳುತ್ತಿದೆ. ಮೊದಲ ದಿನಗಳಲ್ಲಿ ಉಕ್ರೈನ್ ಗೆ ಬೆಂಬಲವೇ ಇರಲಿಲ್ಲ, ಇದೀಗ ನಿಧಾನವಾಗಿ ಉಕ್ರೈನ್ ಬೆಂಬಲಕ್ಕೆ ಅಮೇರಿಕಾ, ಇಂಗ್ಲೆಂಡ್, ಜರ್ಮನಿ ಮತ್ತು ಫ್ರಾನ್ಸ್ ದೇಶಗಳು ಧಾವಿಸುತ್ತಿವೆ. ಸಹಾಯ ಬಹಳ ತಡವಾಯಿತು. ಏಕೆಂದರೆ ಈ ಅಂತರದಲ್ಲಿ ಉಕ್ರೈನ್ ನೆಲದಲ್ಲಿ ಸಾಕಷ್ಟು ರಕ್ತ ಹರಿದಿದೆ. ಕನ್ನಡಿಗನೊಬ್ಬನ ಬಲಿಯನ್ನ ಕೂಡ ಪಡೆದಿದೆ. ಯುದ್ಧ ಎನ್ನುವುದು ಬಹಳಷ್ಟು ಜನರಿಗೆ ಬೇಡದ ವಿಷಯ ಆದರೆ ಕೇವಲ ಬೆರಳೆಣಿಕೆಯಷ್ಟು ಜನಕ್ಕೆ ಯುದ್ಧ ಬೇಕು. ಅದು ಅವರ ಬಳಿ ಇರುವ ಹಣ , ಅಧಿಕಾರ ಮತ್ತು ಬಲಿಷ್ಠ ಭಾವವನ್ನ ರಕ್ಷಿಸಲು ಸಹಾಯ ಮಾಡುತ್ತದೆ. ಶೀತಲ ಸಮರವಿರಲಿ , ಬಯೋ ವಾರ್ ಇರಲಿ ಅಥವಾ ಇದೀಗ ನಡೆಯುತ್ತಿರುವ ನೇರ ಯುದ್ಧ , ಯಾವುದೇ ತೆರನಾದ ಯುದ್ಧವಾದರೂ ಅಲ್ಲೆಲ್ಲಾ ಪ್ರಮುಖವಾಗಿ ಲೆಕ್ಕಕ್ಕೆ ಬರುವುದು ಖರ್ಚಿನ , ಹಣಕಾಸಿನ ಲೆಕ್ಕಾಚಾರ. ಉಕ್ರೈನ್ ಹೆಚ್ಚು ಪ್ರತಿರೋಧ ಒಡ್ಡಿದಷ್ಟೂ ರಷ್ಯಾ ದೇಶಕ್ಕೆ ಹೆಚ್ಚಿನ ಖರ್ಚು. ಯುದ್ದವೇನೋ ಎರಡು ದೇಶಗಳ ನಡುವೆ ನಡೆಯುತ್ತಿದೆಯಾದರೂ ಇದರ ಆರ್ಥಿಕ ಪರಿಣಾಮ ಜಗತ್ತಿನ ಎಲ್ಲಾ ದೇಶಗಳ ಮೇಲೂ ಆಗಲಿದೆ. ಹೀಗಾಗಿ ಅಲ್ಲೆಲ್ಲೂ ಯಾವುದೊ ಎರಡು ದೇಶ ಕಿತ್ತಾಡಿಕೊಂಡರೆ ನಮಗೇನು ಎನ್ನುವ ಸ್ಥಿತಿಯಲ್ಲಿ ನಾವಿಲ್ಲ. ಭಾರತ ಇಂದು ಜಾಗತಿಕ ಮಟ್ಟದಲ್ಲಿ ನಿರ್ಧಾರಗಳನ್ನ ಪ್ರಶ್ನಿಸುವ , ಬದಲಿಸುವ ತಾಕತ್ತು ಹೊಂದಿರುವ ಕೆಲವು ದೇಶಗಳ ಪಟ್ಟಿಯಲ್ಲಿದೆ. ಶಾಂತಿ , ಮಾತುಕತೆಯ ಮೂಲಕ ಇದನ್ನ ಬಗೆಹರಿಸಿಕೊಳ್ಳವುದರಲ್ಲಿ ಭಾರತ ಮುಖ್ಯ ಪಾತ್ರ ವಹಿಸಬಹುದು. ಇರಲಿ

ಇದನ್ನೂ ಓದಿ: ದಿವಾಳಿ ಅಂಚಿನಲ್ಲಿರುವ ಶ್ರೀಲಂಕಾಕ್ಕೆ ಭಾರತ ನೀಡುತ್ತಿದೆ ಸಹಾಯ ಹಸ್ತ!

ರಷ್ಯವೇಕೆ ಉಕ್ರೈನ್ ಮೇಲೆ ದಾಳಿ ಮಾಡಿತು ?
ರಷ್ಯಾ ದೇಶ ೨೦೧೪ ರಲ್ಲೇ ಉಕ್ರೈನ್ ದೇಶಕ್ಕೆ ಸೇರಿದ ಭೂಭಾಗ ಕ್ರಿಮಿಯ ಎನ್ನುವ ಜಾಗದ ಮೇಲೆ ಆಕ್ರಮಣ ಮಾಡಿ ಅದನ್ನ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಪೂರ್ಣ ಪ್ರಮಾಣದ ಉಕ್ರೈನ್ ಮೇಲಿನ ದಾಳಿ ಅಂದಿನಿಂದ ಆಗಬೇಕಾಗಿದದ್ದು ತಡವಾಗಿ ಈಗ ಆಗಿದೆ ಎನ್ನುವುದು ಜಾಗತಿಕ ವಿದ್ಯಮಾನವನ್ನ ಗಮನಿಸಿ ನೋಡುವ ಎಲ್ಲರಿಗೂ ತಿಳಿದ ವಿಷಯವಾಗಿದೆ. ಹೀಗೆ ದಾಳಿಗೆ ಪ್ರಮುಖ ಕಾರಣ , ಬ್ರೇಕ್ ಅವೇ ರಷ್ಯಾದ ಹಲವಾರು ದೇಶಗಳು ಹೆಸರಿಗೆ ಮಾತ್ರ ಸ್ವಂತಂತ್ರ ರಾಷ್ಟ್ರಗಳು ಆದರೆ ಅವುಗಳಲನ್ನ ರಷ್ಯಾದ ಅಧ್ಯಕ್ಷ ಪುಟಿನ್ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಹೀಗಾಗಿ ಅವುಗಳು ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವಂತಿವೆ. ಗಮನಿಸಿ ರಷ್ಯಾ ಒಕ್ಕೊಟ ಛಿದ್ರವಾದಾಗ ಅದು ೧೫ ದೇಶಗಳಾಗಿ ಮಾರ್ಪಾಡಾಯಿತು. ಅದರಲ್ಲಿ ರಷ್ಯಾ ನಂತರ ಅತಿ ದೊಡ್ಡ ದೇಶವೆಂದರೆ ಅದು ಉಕ್ರೈನ್. ಬೇರೆ ದೇಶಗಳನ್ನ ಸುಲಭವಾಗಿ ತೆಕ್ಕೆಗೆ ತೆಗೆದುಕೊಂಡ ರಷ್ಯಾಗೆ ಅಂದಿನಿಂದ ಉಕ್ರೈನ್ ಮೇಲೆ ಹಿಡಿತ ಸಾಧಿಸುವುದು ಮುಖ್ಯವಾಗಿತ್ತು. ಆ ನಿಟ್ಟಿನಲ್ಲಿ ೨೦೧೪ ರದು ಪ್ರಥಮ ಹೆಜ್ಜೆ ಎನ್ನಲು ಅಡ್ಡಿಯಿಲ್ಲ.

ಕೇವಲ ಹಿಡಿತದಲ್ಲಿಟ್ಟು ಕೊಳ್ಳಬೇಕು ಎನ್ನುವುದಷ್ಟೆ ಉದ್ದೇಶವಲ್ಲ , ಅದರ ಜೋತೆಗೆ,
1) ಉಕ್ರೈನ್ ದೇಶವೂ ಅನೇಕ ಯೂರೋಪಿಗೆ ಸೇರಿದ ದೇಶಗಳ ಜೊತೆಗೆ ಸರಹದ್ದು ಹಂಚಿಕೊಂಡಿದೆ. ಹೀಗಾಗಿ ಉತ್ತಮ ಕಾರ್ಯತಂತ್ರ ನಿರ್ವಹಣೆಗೆ ಉಕ್ರೈನ್ ಮೇಲೆ ಹಿಡಿತ ಹೊಂದುವುದು ಅವಶ್ಯಕವಾಗಿದೆ. ಉಕ್ರೈನ್ ದೇಶ ರಷ್ಯಾ ಮತ್ತು ಯೂರೋಪಿಗೆ ರಹದಾರಿಯಂತೆ ಕೆಲಸ ಮಾಡುತ್ತದೆ.

2) ಅಮೇರಿಕಾ ಕೂಡ ಕಾರ್ಯತಂತ್ರದ ಭಾಗವಾಗಿ ಉಕ್ರೈನ್ ದೇಶವನ್ನ ಬಳಸಿಕೊಳ್ಳಲು ಹವಣಿಸಿತು. ನಿಮಗೆಲ್ಲಾ ಗೊತ್ತಿರಲಿ ಅಮೇರಿಕಾ ಜಗತ್ತಿನ ಹಲವು ಕಡೆ ಒಂದಲ್ಲ ಒಂದು ಕಾರಣ ಹೇಳಿ ತನ್ನ ಸೇನಾ ನೆಲಗಳಲನ್ನ ಹೊಂದಿದೆ. ರಷ್ಯಾ ದೇಶದ ಮೇಲೆ ಒಂದು ರೀತಿಯ ನಿಯಂತ್ರಣ ಹೊಂದಲು ಅಮೇರಿಕಾ ಉಕ್ರೈನ್ ದೇಶವನ್ನ ತಂಗುದಾಣವಾಗಿ ಬಳಸಿಕೊಳ್ಳಲು ಬಯಸಿತ್ತು. ನ್ಯಾಟೋ ಮೂಲಕ ಅದು ಉಕ್ರೈನ್ ನಲ್ಲಿ ಸೇನಾ ನೆಲೆಯನ್ನ ತೆರೆದು ತನ್ನ ಮೇಲೆ ಕಣ್ಣಿಡುವುದನ್ನ ರಷ್ಯಾ ಎಂದಿಗೂ ಒಪ್ಪುವುದಕ್ಕೆ ಸಿದ್ಧವಿರಲಿಲ್ಲ. ಆದರೆ ಉಕ್ರೈನ್ ಎರಡು ತಪ್ಪುಗಳನ್ನ ಮಾಡಿತು , ಮೊದಲಿಗೆ ನ್ಯಾಟೋ ಗೆ ಸೇರಿಕೊಂಡದ್ದು , ಎರಡು ಯೂರೋಪಿಯನ್ ಯೂನಿಯನ್ ನಲ್ಲಿ ಗುರುತಿಸಿಕೊಳ್ಳಲು ಪ್ರಯತ್ನ ಮಾಡಿದ್ದು. ಈ ಕಾರಣದಿಂದ ರಷ್ಯಾ ಉಕ್ರೈನ್ ಮೇಲೆ ದಾಳಿ ಮಾಡಿದೆ.

3) ಕರೋನ ನಂತರ ಚೀನಾ ಬಸವಳಿದಿದೆ, ಅಮೇರಿಕಾ ಆರ್ಥಿಕತೆ ಕೂಡ ನೆಲ ಕಚ್ಚಿದೆ. ಯಾವಾಗ ಅಮೇರಿಕಾ ಆರ್ಥಿಕತೆ ನೆಲ ಕಚ್ಚುತ್ತದೆ ಆಗೆಲ್ಲಾ ಸಮಾಜದ್ಲಲಿ ಯುದ್ಧಗಳಾಗುತ್ತವೆ. ತಮ್ಮದಲ್ಲದ ತಪ್ಪಿಗೆ ಚಿಕ್ಕ ಪುಟ್ಟ ರಾಷ್ಟ್ರಗಳು ಬಲಿಯಾಗುತ್ತವೆ. ಹೀಗೆ ಆರ್ಥಿಕವಾಗಿ ಪ್ರಬಲವಾಗಿಲ್ಲದ ಎರಡು ಶಕ್ತಿಶಾಲಿ ದೇಶಗಳನ್ನ ಮೀರಿಸಿ ಬೆಳೆಯಲು ರಷ್ಯಾಕ್ಕೆ ಇದೊಂದು ಸದಾವಕಾಶ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ರಷ್ಯಾ ಸಮಯದ ಲಾಭವನ್ನ ಪಡೆಯಲು ಕೂಡ ಹವಣಿಸುತ್ತಿದೆ.

ಯುದ್ಧ ಅಂದರೆ ಮೊದಲೇ ಹೇಳಿದಂತೆ ಖರ್ಚು, ಅದು ರಷ್ಯಾ ದೇಶಕ್ಕೆ ಮಾತ್ರವಲ್ಲ, ಉಕ್ರೈನ್ ಗೆ ಕೂಡ ಆರ್ಥಿಕವಾಗಿ ಬಹಳ ಪೆಟ್ಟು ಬೀಳಲಿದೆ. ಜಾಗತಿಕ ಮಟ್ಟದಲ್ಲಿ ಯುದ್ಧದ ಕಾರಣ ಆಗಬಹುದಾದ ಸಂಭಾವ್ಯ ಬದಲಾವಣೆಗಳನ್ನ ನಾವು ತಿಳಿದು ಕೊಳ್ಳುವ ಪ್ರಯತ್ನ ಮಾಡೋಣ .

ಎಲ್ಲಕ್ಕಿಂತ ಮೊದಲಿಗೆ ರಷ್ಯಾ ದೇಶದ ಕರೆನ್ಸಿ ರೊಬೆಲ್ ಅಮೆರಿಕಾದ ಡಾಲರ್ ಎದುರು ಕುಸಿತ ಕಂಡಿತು. ಮೊದಲೆರೆಡು ದಿನಗಳಲ್ಲಿ ಭಾರಿ ಕುಸಿತ ಕಂಡ ಮೌಲ್ಯ ರಷ್ಯಾ ದೇಶದ ಸೆಂಟ್ರಲ್ ಬ್ಯಾಂಕ್ ಮಧ್ಯ ಪ್ರವೇಶದಿಂದ ಕುಸಿತಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಅಮೇರಿಕಾ ದೇಶವೂ ರಷ್ಯಾದ ಮೇಲೆ ಅನೇಕ ಆರ್ಥಿಕ ದಿಗ್ಬಂಧನವನ್ನ ಹಾಕಿದೆ. ಅವೆಲ್ಲವನ್ನ ರಷ್ಯಾ ಹೇಗೋ ಅರಗಿಸಿಕೊಳ್ಳುತ್ತದೆ. ಆದರೆ ರಷ್ಯಾ ದೇಶದ ಬಳಿ ಡಾಲರ್ ನಲ್ಲಿರುವ  ಫಾರಿನ್ ರಿಸರ್ವ್ ಹಣವನ್ನ ಬದಲಾಯಿಸಲು ಅಮೇರಿಕಾ ತಡೆ ಒಡ್ಡುತ್ತಿದೆ. ಇದು ನಿಜಕ್ಕೂ ರಷ್ಯಾದ ಆರ್ಥಿಕತೆಗೆ ಪೆಟ್ಟು ನೀಡುವ ಅಂಶವಾಗಿದೆ.

ಎರಡನೆಯದಾಗಿ ಅಮೇರಿಕಾ ದೇಶದ ಜಿ ಪೇ , ಆಪಲ್ ಪೇ ಇತ್ಯಾದಿಗಳು ರಷ್ಯಾದಲ್ಲಿ ತಮ್ಮ ಸೇವೆಯನ್ನ ತಾತ್ಕಾಲಿಕವಾಗಿ ರದ್ದು ಮಾಡಿವೆ. ಹೀಗಾಗಿ ಜನರ ಬಳಿ ವಾಲೆಟ್ ನಲ್ಲಿ ಹಣವಿದ್ದೂ ಅದನ್ನ ಖರ್ಚು ಮಾಡಲಾಗದೆ ಪರದಾಡುವ ಸ್ಥಿತಿ ಬಂದಿದೆ. ಯಾವುದೇ ದೇಶ ತನ್ನದೇ ಆದ ಪೇಮೆಂಟ್ ಸಿಸ್ಟಮ್ ಹೊಂದಿರುವುದು ಕಡ್ಡಾಯ ಎನ್ನುವುದನ್ನ ಇದು ಮನದಟ್ಟು ಮಾಡಿಕೊಟ್ಟಿದೆ.

ಮೂರನೆಯದಾಗಿ ರಷ್ಯಾ ದೇಶಕ್ಕೆ ಪ್ರತಿ ದಿನ ಐದು ಬಿಲಿಯನ್ ಡಾಲರ್ ಯುದ್ಧಕ್ಕೆ ಖರ್ಚಾಗುತ್ತಿದೆ ಎನ್ನುವ ಒಂದು ಸುದ್ದಿ ಓಡಾಡುತ್ತಿದೆ. ಪುಟಿನ್ ಲೆಕ್ಕಾಚಾರದಲ್ಲಿ ಎಡವಿ ಬಿಟ್ಟರು , ಅವರ ಪ್ರಕಾರ ಎರಡು ಅಥವಾ ಮೂರು ದಿನದಲ್ಲಿ ಉಕ್ರೈನ್ ಪೂರ್ಣ ವಶಪಡಿಸಕೊಳ್ಳಬಹುದು ಎಂದು ಕೊಂಡಿದ್ದರು , ಆದರೆ ಈಗ ಯುದ್ಧ ಆರನೇ ದಿನಕ್ಕೆ ಕಾಲಿಟ್ಟಿದೆ ಹೀಗಾಗಿ ದಿನಕ್ಕೆ ಐದು ಬಿಲಿಯನ್ ಡಾಲರ್ ವ್ಯಯವಾಗುತ್ತಿದೆ ಎನ್ನುವ ಮಾತನ್ನ ಪೂರ್ಣ ಗಣಣಗೆ ತೆಗೆದುಕೊಳ್ಳದಿದ್ದರೂ , ಇಷ್ಟು ದೊಡ್ಡ ಪ್ರಮಾಣದ ಯುದ್ಧ ಸಿದ್ಧತೆ ಕ್ರಮಕ್ಕೆ ದಿನಕ್ಕೆ ಒಂದೂವರೆ ಬಿಲಿಯನ್ ಡಾಲರ್ ಬೇಕೇ ಬೇಕು ಎನ್ನುವುದು ಯುದ್ಧ ತಜ್ಞರ ಮಾತು. ಹೇಗೆ ಲೆಕ್ಕಾಚಾರ ಮಾಡಿದರೂ ರಷ್ಯಾ ಇನ್ನೊಂದೆರೆಡು ವರ್ಷ ಆರ್ಥಿಕ ಕುಸಿತದಿಂದ ಮೇಲೇರುವ ಸಾಧ್ಯತೆ ಕಡಿಮೆ. ಜೊತೆಗೆ ಜಾಗತಿಕ ಮಟ್ಟದ ಬಹಿಷ್ಕಾರ , ರಷ್ಯಾದ ಆರ್ಥಿಕತೆಗೆ ಬಲವಾದ ಪೆಟ್ಟು ನೀಡಲಿವೆ .

ನಾಲ್ಕನೆಯದಾಗಿ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಸಾಮಾಜಿಕ ಬಹಿಷ್ಕಾರಕ್ಕೆ ಯಾವ ಬೆಲೆಯನ್ನ ಕಟ್ಟುವುದು ? ಜಾಗತಿಕ ಮಟ್ಟದಲ್ಲಿ ಕ್ರೀಡೆ , ಕಲೆ ಇತ್ಯಾದಿ ವಲಯದಲ್ಲಿ ರಷ್ಯಾ ದೇಶಕ್ಕೆ ಭಾರಿ ಪ್ರಮಾಣದ ಹಿನ್ನಡೆ ಉಂಟಾಗಿದೆ .

ಐದನೆಯದಾಗಿ ಹ್ಯೂಮನ್ ಕಾಸ್ಟ್ ಅಂದರೆ ಯುದ್ಧದ ಕಾರಣ ಆಗುವ ವ್ಯಾಪಾರ ನಷ್ಟ , ಜೀವನ ನಷ್ಟವನ್ನ ಹ್ಯೂಮನ್ ಕಾಸ್ಟ್ ಎನ್ನಬಹುದು. ಇದನ್ನ ಕೂಡ ನಿಖರವಾಗಿ ಲೆಕ್ಕಹಾಕಲು ಸಾಧ್ಯವಿಲ್ಲ. ರಷ್ಯಾದ ದೊಡ್ಡ ಮಾಲ್ ಗಳಲ್ಲಿ ಈಗಾಗಲೇ ವ್ಯಾಪಾರ ಭಾರಿ ಕುಸಿತವನ್ನ ಕಂಡಿದೆ. ಜನ ಕೂಡ ಯುದ್ಧದ ಭೀತಿಯಿಂದ ಅವಶ್ಯಕ ಖರ್ಚು ಬಿಟ್ಟು ಬೇರೆ ಖರ್ಚಿನ ಕಡೆಗೆ ಗಮನವನ್ನ ನೀಡುತ್ತಿಲ್ಲ

ಹೀಗೆ ಯಾವುದೇ ರೀತಿಯ ಲೆಕ್ಕಾಚಾರದಿಂದ ನೋಡಿದರೂ ರಷ್ಯಾ ದೇಶಕ್ಕೆ ಯುದ್ದದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು.

ಇನ್ನು ಉಕ್ರೇನ್ ದೇಶದ ಕಥೆ ಇನ್ನಷ್ಟು ಘೋರ!
ಹೌದು ಉಕ್ರೈನ್ ದೇಶದ ಪ್ರಜೆಗಳ ಜೀವನ ಬಹಳ ಅತಂತ್ರವಾಗಿದೆ. ಕಳೆದ ಆರು ದಿನಗಳಲ್ಲಿ ಸರಿಸುಮಾರು ಆರೂವರೆ ಲಕ್ಷ ಜನ ಪಕ್ಕದ ಪೋಲೆಂಡ್ , ಹಂಗರಿ , ರುಮೇನಿಯ ದೇಶಗಳಿಗೆ ವಲಸೆ ಹೋಗಿದ್ದಾರೆ. ನಾಳೆಗೆ ನಾಳೆಯೇ ಯುದ್ಧ ಮುಗಿದರೂ ಇವರು ಮರಳಿ ಬರಲು ಸಾಕಷ್ಟು ಸಮಯವಂತೂ ತಗಲುತ್ತದೆ. ದಾಳಿಯಿಂದ ಬಹಳಷ್ಟು ಆಸ್ತಿಪಾಸ್ತಿ ನಷ್ಟವೂ ಆಗಿದೆ , ಆಹಾರ ಮತ್ತು ಮೂಲಭೂತ ಸೌಲಭ್ಯಗಳಲ್ಲಿ ಭಾರಿ ವ್ಯತ್ಯಯವಾಗಿದೆ. ಹೀಗಾಗಿ ಸಾಮಾನ್ಯ ಜನರ ಬದುಕು ಬಹಳ ದುರ್ಬರವಾಗಿದೆ. ರಷ್ಯಾ ಯುದ್ಧದಲ್ಲಿ ಗೆದ್ದರೂ ಸೋತಂತೆ ಎಂದರೆ ಉಕ್ರೈನ್ ಗತಿಯೇನಾಗಬಹುದು ಎನ್ನುವುದನ್ನ ಊಹಿಸಿಕೊಳ್ಳುವುದು ಕಷ್ಟವೇನಲ್ಲ. ಉಕ್ರೈನ್ ಸಾಮಾನ್ಯ ಸ್ಥಿತಿಯಲ್ಲೇ ತನ್ನ ದೇಶದ ಹೆಣ್ಣುಮಕ್ಕಳ ಮಾನವನ್ನ ಹರಾಜಿಗಿಟ್ಟು ಸೆಕ್ಸ್ ಟೂರಿಸಂ ಗೆ ಇಳಿದಿತ್ತು. ಯುದ್ದಾನಂತರ ಆ ದೇಶದಲ್ಲಿ ಆಗಬಹುದಾದ ಆರ್ಥಿಕ ತಲ್ಲಣ , ಸಾಮಾಜಿಕ ತಲ್ಲಣ ಬೇಗ ತಮಣೆಗೆ ಬರುವ ಸಾಧ್ಯತೆಗೆಳು ಕಡಿಮೆ .

ಭಾರತದ  ಮೇಲೆ ಯುದ್ಧದ ಪರಿಣಾಮವೇನು?
ಭಾರತ ರಷ್ಯಾ ದೇಶದಿಂದ ನೇರವಾಗಿ ಕಚ್ಚಾ ತೈಲವನ್ನ ಆಮದು ಮಾಡಿಕೊಳ್ಳುವುದಿಲ್ಲ , ಹೀಗಾಗಿ ರಷ್ಯಾದ ಯುದ್ಧ ತೈಲದ ಪೂರೈಕೆಯಲ್ಲಿ ವ್ಯತ್ಯಾಸ ಮಾಡಲಾರದು. ಆದರೆ ತೈಲ ಉತ್ಪಾದನೆಯಲ್ಲಿ ಕುಸಿತ ಕಾಣುವ ಕಾರಣ ಕಚ್ಚಾ ತೈಲದ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ರಷ್ಯಾ ದೇಶವು ಜಗತ್ತಿನ ಅತಿ ಹೆಚ್ಚು ಕಚ್ಚಾ ತೈಲ ಉತ್ಪಾದನೆಯಲ್ಲಿ ತೊಡಗಿರುವ ದೇಶ , ಹೀಗಿದ್ದೂ ನಾವು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿಲ್ಲ. ಭಾರತದ ಬೇಡಿಕೆಯ ೮೦ ಪ್ರತಿಶತ ತೈಲವನ್ನ ನಾವು ಸೌದಿ , ಯುಎಇ ಇತ್ಯಾದಿ ದೇಶಗಳ ಮೂಲಕ ತರಿಸಿಕೊಳ್ಳುತ್ತಿದ್ದೇವೆ. ರಷ್ಯಾ ಉತ್ಪಾದನೆಯಲ್ಲಿ ಕಡಿಮೆ ಮಾಡಿದರೆ ಅದು ಬೇಡಿಕೆ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ. ಈಗಾಗಲೇ ಹಣದುಬ್ಬರದಿಂದ ಭಾರತದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಭಾವನೆಯಿದೆ. ಹೆಚ್ಚಾಗುವ ಹಣದುಬ್ಬರ ಇನ್ನಷ್ಟು ಆಕ್ರೋಶಕ್ಕೆ ದಾರಿ ಮಾಡಿಕೊಡುತ್ತದೆ. ಇದೆ ಸಮಯದಲ್ಲಿ ಇಂದಿಗೆ ಈ ದೇಶಗಳ ಮಧ್ಯೆ ಸಂಧಾನ ಮಾಡುವ ಶಕ್ತಿ ಇರುವುದು ಕೂಡ ಭಾರತಕ್ಕೆ ಮಾತ್ರ ಎಂದು ನಿಸ್ಸಂದೇಹವಾಗಿ ಹೇಳಬಹುದು.

ಕೊನೆಮಾತು: ಯುದ್ದದಿಂದ ರಷ್ಯಾಗೆ ಲಾಭವಿಲ್ಲ , ಉಕ್ರೈನ್ ಗೆ ಲಾಭ ಹಾಗಿರಲಿ ನಷ್ಟದಿಂದ ಹೊರಬರಲು ನಾಲ್ಕಾರು ವರ್ಷಗಳು ಬೇಕು. ಭಾರತಕ್ಕೂ ಲಾಭವಿಲ್ಲ , ಯೂರೋಪಿಯನ್ ಒಕ್ಕೊಟ ಕೂಡ ಇದರಿಂದ ತೊಂದರೆಗೆ ಒಳಗಾಗುತ್ತದೆ. ಹಾಗಾದರೆ ಯುದ್ದದಿಂದ ಯಾರಿಗೆ ಲಾಭ ? ಗಮನಿಸಿ ನೋಡಿ ಯುದ್ದದಿಂದ ಅತಿ ಹೆಚ್ಚು ಲಾಭವಾಗುವುದು ಅಮೇರಿಕಾ ದೇಶಕ್ಕೆ , ಯಾವುದೇ ದೇಶದ ಕರೆನ್ಸಿ ಕುಸಿತ ಕಂಡರೆ ಅದು ಅಮೆರಿಕಕ್ಕೆ ಲಾಭ , ಕಚ್ಚಾ ತೈಲದ ಬೆಲೆ ಏರಿಕೆಯಾದರೆ ಅದರಿಂದಲೂ ಅಮೆರಿಕಕ್ಕೆ ಲಾಭ , ಎಲ್ಲವೂ ಡಾಲರ್ ನಲ್ಲಿ ಲೆಕ್ಕ ಹಾಕುವುದರಿಂದ ಅಮೆರಿಕಕ್ಕೆ ಯಾರಿಗೆ ನಷ್ಟವಾದರೂ ಲಾಭವೇ ! ಇದರ ಜೊತೆಗೆ ಯುದ್ಧದ ಭಯ ಶಸ್ತ್ರಾಸ್ತ ಖರೀದಿಗೆ ಪ್ರೋತ್ಸಾಹ ನೀಡುತ್ತದೆ . ನಿನ್ನೆಯಷ್ಟೇ ಜರ್ಮನಿ ದೇಶವು ೨೦೨೨ ರಲ್ಲಿ ೧೦೦ ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ತನ್ನ ಭದ್ರತೆಗೆ ಬಳಸುವುದಾಗಿ ಹೇಳಿಕೆ ಕೊಟ್ಟಿದೆ. ಈ ಮಧ್ಯೆ ಶಸ್ತ್ರಾಸ್ತ್ರ ತಯಾರಿಸುವ ಮಾರುವ ಅಮೆರಿಕನ್ ಸಂಸ್ಥೆಗಳ ಷೇರುಗಳ ಬೆಲೆ ಗಗನ ಮುಟ್ಟುತ್ತಿವೆ. ಕೈಲಾಗದ ಮುದಿ ಸಿಂಹ ಎಂದು ಜಗತ್ತು ಅಳಿಸಿ ಹಾಕಿದ್ದ ಅಮೇರಿಕಾ ಸದ್ಯದ ಮಟ್ಟಿಗೆ ವಿಜಯದ ನಗೆ ಬೀರುತ್ತಿದೆ. 


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Gordost

    1005 correct analysis.
    9 months ago reply
flipboard facebook twitter whatsapp