
ಟಿನ್ನಿಟಸ್ (ಸಾಂಕೇತಿಕ ಚಿತ್ರ)
ಟಿನ್ನಿಟಸ್ ಎಂದರೆ ಆಗಾಗ ಕಿವಿಯಲ್ಲಿ ರಿಂಗಣಿಸಿದಂತೆ, ಸೀಟಿ ಹೊಡೆದಂತೆ ಅಥವಾ ಪಿಸುಗುಟ್ಟಿದಂತೆ ಕೇಳಿಸುತ್ತಿರುವ ಶಬ್ದದ ಅನುಭವ. ಈ ಶಬ್ದ ಯಾವುದೇ ಹೊರಗಿನ ಮೂಲದಿಂದಲ್ಲ, ಕಿವಿಯ ಒಳಗಿನಿಂದಲೇ ಬರುತ್ತದೆ. ಜೀರುಂಡೆಯಂತಹ, ಕೆಲವರಿಗೆ ಹಳೆಯ ಟೀವಿಯಲ್ಲಿ ಸಿಗ್ನಲ್ಲುಗಳು ಇಲ್ಲದಿದ್ದಾಗ ಬರುವ ಬುಸ್ ಎನ್ನುವಜಿ ಧ್ವನಿಯೂ ಕೇಳಬಹುದು. ಈ ಶಬ್ದ ಕೆಲವರಲ್ಲಿ ಅತ್ಯಂತ ಕಡಿಮೆ (ಕ್ಷೀಣ) ಇರುತ್ತದೆ. ಮತ್ತೆ ಕೆಲವರಲ್ಲಿ ಇದು ಜೋರಾಗಿಯೇ ಇರುತ್ತದೆ. ವಿಶ್ವದಲ್ಲಿ ಲಕ್ಷಾಂತರ ಜನರು ಕಿವಿಯಲ್ಲಿ ರಿಂಗಣಿಸುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂದು ಇಯರ್ ಫೋನ್ ಗಳ ಅತಿಯಾದ ಬಳಕೆ, ಕಿವಿಯ ಒಳಗಿನ ಮೇಣದ ರಚನೆ, ಕಿವಿಯ ಸೋಂಕು, ಥೈರಾಯ್ಡ್ ಮತ್ತಿತರ ಕಾಯಿಲೆಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಟಿನ್ನಿಟಸ್ ಸಂಭವಿಸಬಹುದು. ಒಟ್ಟಾರೆ ಜನರಲ್ಲಿ ಶೇಕಡಾ 15 ರಿಂದ 20 ರಷ್ಟು ಜನರನ್ನು ಟಿನ್ನಿಟಸ್ ಬಾಧಿಸಬಹುದು. ಅದರಲ್ಲಿಯೂ ವಯಸ್ಕರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ಕೆಲವರಲ್ಲಿ ಟಿನ್ನಿಟಸ್ ತಾತ್ಕಾಲಿಕವಾಗಿ ಕಾಣಿಸಿಕೊಂಡು ಸರಿಹೋಗುತ್ತದೆ. ಉದಾಹರಣೆಗೆ ಏರುದನಿಯ ಸಂಗೀತ ಕಛೇರಿಯಿಂದ ಅಥವಾ ವಿಮಾನದ ಕರ್ಕಶ ಶಬ್ದವನ್ನು ಸತತವಾಗಿ ಕೇಳುವುದರಿಂದ ಕಿವಿಯೊಳಗೆ ಆ ಧ್ವನಿಯ ಗುಂಗು ಹಾಗೆಯೇ ಸ್ವಲ್ಪ ಹೊತ್ತಿನ ತನಕ ಕೇಳುಸುತ್ತಿರಬಹುದು. ಸ್ವಲ್ಪ ಸಮಯದ ನಂತರ ಅದು ಸರಿಹೋಗುತ್ತದೆ. ಆಗ ಚಿಂತಿಸುವ ಅವಶ್ಯಕತೆ ಇಲ್ಲ. ಆದರೆ ಅದೇ ಸದ್ದು ಇಡೀ ದಿನ ಕಿವಿಯಲ್ಲಿ ರಿಂಗಣಿಸುತ್ತಲೇ ಇದ್ದರೆ ಸ್ವಲ್ಪ ಗಮನಹರಿಸಬೇಕು. ಎರಡು ಮೂರು ದಿನವಾದರೂ ಆ ಸದ್ದು ಹೋಗದೇ ಇದ್ದರೆ ತಕ್ಷಣ ವೈದ್ಯರನ್ನು ಕಂಡು ಕಿವಿಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಸದಾ ಕಾಲ ಕಿವಿಯಲ್ಲಿ ಬುಸ್ಸ್ ಆಥವಾ ಗುಂಯ್ ಎಂದು ಸದ್ದು ಬರುತ್ತಿದ್ದರೆ ಬೇಸರ, ಕಿರಿಕಿರಿ ಮತ್ತು ಖಿನ್ನತೆ ಉಂಟಾಗಿ ಕ್ರಮೇಣ ದಿನನಿತ್ಯದ ಜೀವನಾಸಕ್ತಿ ಕಡಿಮೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಆದಷ್ಟೂ ಬೇಗ ಈ ಸಮಸ್ಯೆಯನ್ನು ಗುರುತಿಸಿ ವೈದ್ಯರನ್ನು ಕಾಣುವುದು ಉತ್ತಮ.
ಅತ್ಯಂತ ಹೆಚ್ಚು ಶಬ್ದ ಇರುವ ಕಡೆ ಕೆಲಸ ಮಾಡಿದಾಗ ಅಥವಾ ಕಿವಿ ಒಳಗೆ ಶ್ರವ್ಯ ನರದಲ್ಲಿ ಅಥವಾ ಮೆದುಳಿನಲ್ಲಿ ಶಬ್ದವನ್ನು ಕೇಳಿಸಿಕೊಳ್ಳುವ ನರಕ್ಕೆ ತೊಂದರೆಯುಂಟಾದಾಗ ಈ ಸಮಸ್ಯೆ ಸಾಮಾನ್ಯವಾಗಿ ಉಂಟಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಶ್ರವ್ಯ ನರಗಳು ಸೂಕ್ಷ್ಮವಾಗಿರುವುದರಿಂದ ಈ ಸಮಸ್ಯೆಯ ಬಗೆಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಸದ್ಯಕ್ಕಂತೂ ದೀರ್ಘಕಾಲದ ಟಿನ್ನಿಟಸ್ಗೆ ಶಿಫಾರಸು ಮಾಡಲಾದ ಚಿಕಿತ್ಸೆ ಅಥವಾ ಔಷಧವಿಲ್ಲ. ಆದರೆ ಹೆಚ್ಚು ಶಬ್ದ ಇರುವ ಕಡೆ ಕಿವಿಯನ್ನು ಮುಚ್ಚುವ ಇಯರ್ ಪ್ಲಗ್ಗನ್ನು ಹಾಕಿಕೊಂಡರೆ ಆಗುವ ಸಮಸ್ಯೆಯ ಗಂಭೀರತೆಯನ್ನು ಕಡಿಮೆ ಮಾಡಬಹುದು. ಶಬ್ದವನ್ನು ರದ್ದುಗೊಳಿಸುವ ಉಪಕರಣಗಳು (Sound cancelling devices), ಹೆಡ್ ಫೋನ್ಗಳು ಅಥವಾ ಇಯರ್ ಪ್ಲಗ್ಗಳು ಕಿವಿಯಲ್ಲಿ ರಿಂಗಣಿಸುವ ಶಬ್ದವನ್ನು ಇಲ್ಲವಾಗಿಸಲು ಒಂದೇ ತರಂಗದ ಸದ್ದು ಅಥವಾ ಪ್ರಕೃತಿಯ ಸದ್ದುಗಳನ್ನು ಬಳಸುತ್ತವೆ. ಈ ಶಬ್ದಗಳನ್ನು ಬೇಕಾದಂತೆ ಸರಿಹೊಂದಿಸಬಹುದು. ಅವು ಟಿನ್ನಿಟಸ್ಸನ್ನು ಸಂಪೂರ್ಣವಾಗಿ ಮರೆಮಾಚಬಹುದು ಅಥವಾ ಕಿವಿಯಲ್ಲಿ ರಿಂಗಣಿಸುವ ಶಬ್ದಕ್ಕಿಂತ ಕೊಂಚವೇ ಹೆಚ್ಚಾಗಿದ್ದು ಈ ಸದ್ದನ್ನು ಅಡಗಿಸಬಹುದು.
ದೀರ್ಘಕಾಲದ ಟಿನ್ನಿಟಸ್ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಆತಂಕಕ್ಕೆ ಕಾರಣವಾಗಬಹುದು ಮತ್ತು ಏಕಾಗ್ರತೆಯ ಮೇಲೂ ಪರಿಣಾಮ ಬೀರಬಹುದು. ಬ್ರಿಟಿಷ್ ಟಿನ್ನಿಟಸ್ ಅಸೋಸಿಯೇಷನ್ ಪ್ರಕಾರ, ಧ್ಯಾನ ಮತ್ತು ಯೋಗವು ಈ ಒತ್ತಡವನ್ನು ಎದುರಿಸಲು ಮತ್ತು ನಿಮ್ಮ ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಂಟೆಯ ಭಂಗಿ (ಉಷ್ಟ್ರಾಸನ), ನಾಗರ ಭಂಗಿ (ಭುಜಂಗಾಸನ) ಮತ್ತು ಸೇತುವೆ ಭಂಗಿ (ಸೇತು ಬಂಧಾಸನ) ದಂತಹ ಆಸನಗಳು ದೈಹಿಕ ಶಕ್ತಿಯನ್ನೂ ಸುಧಾರಿಸುತ್ತದೆ.
ಕಿವಿಯ ಕಾಲುವೆಯೊಳಗೆ ಮೇಣ ಉತ್ಪತ್ತಿಯಾಗುತ್ತಾ ಇರುತ್ತದೆ. ಇದನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಹಾಗಾಗದೇ ಇದ್ದಲ್ಲಿ ಈ ಮೇಣ ಅತಿಯಾಗಿ ಸಂಗ್ರಹಗೊಂಡು ಟಿನ್ನಿಟಸ್ ಎದುರಾಗಬಹುದು. ಆದ್ದರಿಂದ ಕಿವಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಅತ್ಯಂತ ಹೆಚ್ಚು ವಾಲ್ಯೂಮ್ ಇಟ್ಟುಕೊಂಡು ಸಂಗೀತ ಕೇಳಬಾರದು. ಇಯರ್ಫೋನ್, ಹೆಡ್ಫೋನುಗಳನ್ನು ಹೆಚ್ಚಾಗಿ ಬಳಸಬಾರದು. ಆಸ್ಪಿರಿನ್, ಮಲೇರಿಯಾ ನಿರೋಧಕ ಔಷಧಗಳು ಮತ್ತು ಟ್ರೈಸೈಕ್ಲಿಕ್ ಖಿನ್ನತೆ-ಶಮನಕಾರಿಗಳಂತಹ ಕೆಲವು ಔಷಧಿಗಳು ಟಿನ್ನಿಟಸ್ ಅನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಆದ್ದರಿಂದ ಈ ಬಗ್ಗೆ ಹುಷಾರಾಗಿರಬೇಕು.
ಕಾಖ್ಲಿಯರ್ ಇಂಪ್ಲಾಂಟ್ಗಳು ಕಿವಿಯ ಹಾಕಿಕೊಳ್ಳಬಹುದಾದ ಚಿಕ್ಕ ಸಾಧನಗಳು. ತೀವ್ರವಾದ ಶ್ರವಣ ನಷ್ಟಕ್ಕೆ ಸಂಬಂಧಿಸಿದ ಟಿನ್ನಿಟಸ್ಗೆ ಚಿಕಿತ್ಸೆ ನೀಡಲು ಈ ಸಾಧನಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಮೇರಿಕಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಕಾಖ್ಲಿಯರ್ ಇಂಪ್ಲಾಂಟ್ಗಳು ಕಿವಿಯ ಹಾನಿಗೊಳಗಾದ ಭಾಗವನ್ನು ಬೈಪಾಸ್ ಅಥವಾ ಬಳಸಿ ಹೋಗುವಂತೆ ಮಾಡುತ್ತದೆ ಮತ್ತು ಮೆದುಳಿಗೆ ಶ್ರವಣೇಂದ್ರಿಯ ಸಂಕೇತಗಳನ್ನು ಕಳುಹಿಸುತ್ತವೆ, ಇದು ವ್ಯಕ್ತಿಯು ಉತ್ತಮವಾಗಿ ಕೇಳಲು ಸಹಾಯ ಮಾಡುತ್ತದೆ. ಅವು ಹೊರಗಿನ ಶಬ್ದಗಳನ್ನು ಮೆದುಳಿಗೆ ತಲುಪಿಸಲು ನೆರವಾಗುವ ಮೂಲಕ, ಈ ಇಂಪ್ಲಾಂಟ್ಗಳು ಟಿನ್ನಿಟಸ್ ಸದ್ದನ್ನೂ ಅಡಗಿಸುತ್ತವೆ.
ಡಾ. ವಸುಂಧರಾ ಭೂಪತಿ,
ಇ-ಮೇಲ್: bhupathivasundhara@gmail.com
ಫೋನ್: 9986840477