ಪಾಂಡೆಮಿಕ್ ನಂತರ ಹಣಕಾಸು ನಿರ್ವಹಣೆಯಲ್ಲಿ ಮಹಿಳೆ (ಹಣಕ್ಲಾಸು)

ಹಣಕ್ಲಾಸು-299

-ರಂಗಸ್ವಾಮಿ ಮೂಕನಹಳ್ಳಿ

Published: 10th March 2022 02:58 AM  |   Last Updated: 11th March 2022 05:03 PM   |  A+A-


Women (File pic)

ಮಹಿಳೆ ಮತ್ತು ಆರ್ಥಿಕತೆ (ಸಾಂಕೇತಿಕ ಚಿತ್ರ)

ಜಗತ್ತಿನಾದ್ಯಂತ ಹೆಣ್ಣು ಮತ್ತು ಗಂಡಿನ ನಡುವಿನ ಅಂತರ, ತಾರತಮ್ಯ ಬಹಳವಿದೆ. ಹೀಗೆ ಹೆಣ್ಣು ಮತ್ತು ಗಂಡಿನ ನಡುವಿನ ವರ್ಗಿಕರಣ ಕೇವಲ ಭಾರತದಲ್ಲಿ ಅಥವಾ ಮುಂದುವರೆಯುತ್ತಿರುವ ಅಥವಾ ಹಿಂದುಳಿದ ದೇಶಗಳಲ್ಲಿ ಮಾತ್ರ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಗ್ರಹಿಕೆ. ಅಮೇರಿಕಾ, ಯೂರೋಪು, ಜಪಾನ್ , ಸ್ವಿಸ್ ಹೀಗೆ ಎಲ್ಲಾ ದೇಶಗಳಲ್ಲಿ ಇಂದಿಗೂ ಅಸಮಾನತೆ ಇದೆ. ಕೆಲವೊಂದು ಹುದ್ದೆಗೆ ಕೇವಲ ಗಂಡಸರೇ ನೇಮಕವಾಗುತ್ತಾರೆ, ಆ ಕೆಲಸವನ್ನ ಹೆಣ್ಣು ಕೂಡ ಅಷ್ಟೇ ದಕ್ಷತೆಯಿಂದ ನಿರ್ವಹಿಸುವ ಕ್ಷಮತೆ ಹೊಂದಿದ್ದರೂ ಕೂಡ ಅಲ್ಲಿಗೆ ಆಕೆ ನೇಮಕವಾಗುತ್ತಿಲ್ಲ. ಇದರ ಜೊತೆಗೆ ವೇತನ ತಾರತಮ್ಯ ಕೂಡ ಜಾಗತಿಕ. ಇವತ್ತಿನ ಬರಹದಲ್ಲಿ ಹೂಡಿಕೆಯ ಜಗತ್ತಿನಲ್ಲಿ ಮಹಿಳೆ ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದರ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ.

ಮೊದಲಿನ ಸಾಲುಗಳಲ್ಲಿ ಹೇಳಿದಂತೆ ಇಂದು ಮಹಿಳೆ ಎಲ್ಲಾ ಕಾರ್ಯಕ್ಷೇತ್ರದಲ್ಲೂ ಪುರುಷನಿಗೆ ಸಮವಾಗಿ ಭುಜಕ್ಕೆ ಭುಜ ಕೊಟ್ಟು ದುಡಿಯಲು ಶುರು ಮಾಡಿದ್ದಾಳೆ. ಶತಮಾನಗಳಿಂದ ತನ್ನ ಹಿಡಿತದಲ್ಲಿರುವ ಹಣಕಾಸು ಪ್ರಪಂಚಕ್ಕೂ ಮಹಿಳೆ ಕಾಲಿಟ್ಟಿರುವುದು ಸುಲಭವಾಗಿ ಪುರುಷ ಸಮಾಜ ಅರಗಿಸಿಕೊಳ್ಳುವುದಿಲ್ಲ. ಆದರೆ ನಿಮಗೊಂದು ರಹಸ್ಯವನ್ನ ಹೇಳಬೇಕಿದೆ, ಮಹಿಳೆ ಪುರುಷರಿಗಿಂತ ಉತ್ತಮ ಹೂಡಿಕೆದಾರಳು ಎನ್ನುವುದು ಆ ರಹಸ್ಯ. ಅದೇಕೆ ಮಹಿಳೆ ಪುರುಷನಿಗಿಂತ ಹೂಡಿಕೆಯಲ್ಲಿ ಉತ್ತಮ ಎನ್ನುವುದಕ್ಕೆ ಒಂದಷ್ಟು ಕಾರಣಗಳಿವೆ ಅವುಗಳನ್ನ ತಿಳಿದುಕೊಳ್ಳೋಣ, ಅವನ್ನ ಪುರುಷರು ಅವಳವಡಿಸಿಕೊಂಡು ತಮ್ಮ ತಪ್ಪನ್ನ ತಿದ್ದಿಕೊಂಡು ಉತ್ತಮ ಹೂಡಿಕೆದಾರಗುವ ಅವಕಾಶವಿದೆ. ಹೆಣ್ಣು ಮತ್ತು ಗಂಡು ಇಬ್ಬರೂ ಕುಟುಂಬ ವ್ಯವಸ್ಥೆಯ ಎರಡು ಚಕ್ರಗಳು. ಇಲ್ಲಿ ನಾನು -ನೀನು ಎನ್ನುವುದಕ್ಕಿಂತ ಯಾರು ಯಾವುದರಲ್ಲಿ ಉತ್ತಮ ಅದರ ನಾಯಕತ್ವ ಅವರಿಗೆ ನೀಡುವುದು ಜಾಣತನ. ಇರಲಿ

1. ಅಪಾಯದ ವಾಸನೆ ಹೆಂಗಸರಿಗೆ ಬೇಗ ತಿಳಿಯುತ್ತದೆ: ನೀವು ಇದನ್ನ ಪ್ರಕೃತ್ತಿ ಎನ್ನಿ ಅಥವಾ ಅವರ ಹುಟ್ಟುಗುಣ ಎನ್ನಿ, ಮಹಿಳೆಯರಿಗೆ ಅಪಾಯದ ವಾಸನೆ ಬೇಗ ತಿಳಿಯುತ್ತದೆ. ಮನೆಯ ಹಣಕಾಸು ನಿರ್ವಹಣೆ ಇರಬಹುದು ಅಥವಾ ಹೊರಗಿನ ಪ್ರಪಂಚದಲ್ಲಿ ಮಾಡಬೇಕಾದ ಹೂಡಿಕೆ, ಮಹಿಳೆಗೆ ಯಾವುದು ಹೆಚ್ಚು ಅಪಾಯಕಾರಿ ಅಥವಾ ಅಲ್ಲ ಎನ್ನುವುದು ಸಹಜವಾಗೇ, ಹೆಚ್ಚಿನ ಶ್ರಮವಿಲ್ಲದೆ ಗೊತ್ತಾಗುತ್ತದೆ. ಈ ಮಾತುಗಳನ್ನ ಸುಮ್ಮನೆ ಹೇಳುತ್ತಿಲ್ಲ ಇದಕ್ಕೆ ಸಾಕಷ್ಟು ಪುರಾವೆಗಳಿವೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಹೆಣ್ಣು ಮತ್ತು ಗಂಡು ಹೂಡಿಕೆದಾರರ ಪೋರ್ಟ್ಫೋಲಿಯೋ ಗಳನ್ನ ಅಧ್ಯಯನ ಮಾಡಿ ಈ ಒಂದು ಮಾತನ್ನ ಹೇಳಲಾಗಿದೆ. ಇಂದು ಭಾರತದಲ್ಲಿ 100 ಜನ ಕ್ರಿಪ್ಟೋ ಹೂಡಿಕೆದಾರರಿದ್ದಾರೆ ಅದರಲ್ಲಿ 85 ಜನ ಗಂಡಸರು, ಉಳಿದ 15 ಜನ ಮಹಿಳೆಯರು! ಹೆಚ್ಚು ಅಪಾಯ ಎನ್ನಿಸಿದ ಯಾವುದೇ ಕ್ಷೇತ್ರದಲ್ಲೂ ಮಹಿಳೆ ಹೂಡಿಕೆ ಮಾಡುವುದಿಲ್ಲ .

2. ಸುರಕ್ಷತೆಗೆ ಹೆಚ್ಚಿನ ಆದ್ಯತೆ: ಕೇವಲ ಕ್ರಿಪ್ಟೋ ಮಾತ್ರವಲ್ಲ, ಈಕ್ವಿಟಿ ಮಾರುಕಟ್ಟೆಯಲ್ಲಿ ಕೂಡ ಇಂಟ್ರಾ ಡೇ ಟ್ರೇಡಿಂಗ್ ನಂತಹ ಕ್ಷೇತ್ರದಲ್ಲಿ ಬೆರಳೆಣಿಕೆಯ ಮಹಿಳೆಯರು ಸಿಕ್ಕಬಹುದು, ದಿನ ನಿತ್ಯ ಅಥವಾ ಪುರುಷರು ಕೊಂಡು ಮಾರುವಷ್ಟು ವೇಗವಾಗಿ ಮಹಿಳೆ ಕೊಳ್ಳುವುದು ಮತ್ತು ಮಾರುವುದು ಮಾಡುವುದಿಲ್ಲ. ಅಂದರೆ ಆಕೆ ನಿಜವಾದ ಹೂಡಿಕೆದಾರಳು . ಪುರುಷರಲ್ಲಿ ಬಹಳಷ್ಟು ಜನ ಟ್ರೇಡರ್ಸ್ ಸಿಗುತ್ತಾರೆ. ಮಹಿಳೆಯರಲ್ಲಿ ಟ್ರೇಡರ್ಸ್ ಕಡಿಮೆ. ಕುಟುಂಬದ ರಕ್ಷಣೆ ಮತ್ತು ಕುಟುಂಬದ ಸುರಕ್ಷತೆ ಬಗ್ಗೆ ಸಹಜವಾಗಿ ಇರುವ ಪ್ರೊಟೆಕ್ಟಿವ್ ಭಾವನೆ ಇಲ್ಲಿಯೂ ಕೆಲಸ ಮಾಡುತ್ತದೆ. ಹೀಗಾಗಿ ಮಹಿಳೆಯರು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಕೂಡ ಕಡಿಮೆ.

3. ನಿರ್ಧಾರಗಳನ್ನ ತೆಗೆದುಕೊಳ್ಳುವುದರಲ್ಲಿ ನಿಧಾನ ಮಾಡುತ್ತಾರೆ: ಮಹಿಳೆಯರು ಹೂಡಿಕೆಯ ನಿರ್ಧಾರದಲ್ಲಿ ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಒಂದೇ ವಿಷಯವನ್ನ ಹತ್ತಾರು ರೀತಿಯಲ್ಲಿ ಗುಣಿಸಿ ಭಾಗಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಿರ್ಧಾರ ತೆಗೆದುಕೊಳ್ಳುವುದು ನಿಧಾನವಾದರೂ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ಇದಕ್ಕೂ ಕೂಡ ಪುರಾವೆಗಳಿವೆ. ಸಿಪ್ ಅಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ನಲ್ಲಿ ಹೂಡಿಕೆ ಮಾಡುವ ಹೆಣ್ಣು ಗಂಡುಗಳಲ್ಲಿ ಒಂದಷ್ಟು ತಿಂಗಳು ಕಟ್ಟಿ ನಂತರ ಬಿಟ್ಟು ಬಿಡುವ ಹೆಂಗಸರಿಗಿಂತ ಗಂಡಸರ ಸಂಖ್ಯೆ ಹೆಚ್ಚು. ಒಟ್ಟಾರೆ ಈಕ್ವಿಟಿ ಮಾರುಕಟ್ಟೆಯಲ್ಲಿ ಇದ್ದ ಮಹಿಳೆಯರ ಸಂಖ್ಯೆ 16 ಇದದ್ದು ಕಳೆದೆರೆಡು ವರ್ಷದಲ್ಲಿ 25 ಪ್ರತಿಶತಕ್ಕೆ ಏರಿಕೆ ಕಂಡಿದೆ. ಪುರುಷರ ಸಂಖ್ಯೆಗಿಂತ ಇದು ಬಹಳ ಕಡಿಮೆ. ಮಹಿಳೆಯರು ಹೂಡಿಕೆಯಲ್ಲಿ ಸಂಖ್ಯೆಯ ದೃಷ್ಟಿಯಲ್ಲಿ ಕಡಿಮೆಯಿದ್ದಾರೆ ಎನ್ನುವುದು ವೇದ್ಯ. ಆದರೆ ಇದ್ದವರಲ್ಲಿ , ಹೋಲಿಕೆಯಲ್ಲಿ ಅವರು ಉತ್ತಮ ಹೂಡಿಕೆದಾರರು ಎನ್ನುವುದು ಕೂಡ ಅಷ್ಟೇ ಸತ್ಯ.

4. ಸಾಲ ಕೊಳ್ಳುವುದರಲ್ಲಿ ಅದರ ಮರುಪಾವತಿಯಲ್ಲಿ ಕೂಡ ಮಹಿಳೆಯರೇ ಮುಂದು: ಸಿಬಿಲ್ ರೇಟಿಂಗ್ ಎನ್ನುವುದು ನಿಮ್ಮ ಕ್ರೆಡಿಟ್ ವರ್ತಿನೇಸ್ ಏನು ಎನ್ನುವುದನ್ನ ಹೇಳುವ ಪಾಯಿಂಟ್ ಬೇಸ್ಡ್ ಸಿಸ್ಟಮ್. ಈ ರೇಟಿಂಗ್ 720 ಅಥವಾ 750ಕ್ಕೂ ಮೇಲಿದ್ದರೆ ಸಾಲವನ್ನ ಯಾರೂ ಕೊಡುವುದಿಲ್ಲ ಎಂದು ಹೇಳಲು ಬರುವುದಿಲ್ಲ. ಹೀಗಾಗಿ 720 ಅಥವಾ ಅದಕ್ಕೂ ಹೆಚ್ಚಿನ ಪಾಯಿಂಟ್ ಹೊಂದಿದ್ದರೆ ಅದು ಉತ್ತಮ ರೇಟಿಂಗ್ ಎನ್ನಲು ಅಡ್ಡಿಯಿಲ್ಲ. ನೂರು ಜನ ಮಹಿಳೆಯರಲ್ಲಿ 61 ಜನ ಮಹಿಳೆಯರು 720 ಕ್ಕೂ ಹೆಚ್ಚಿನ ರೇಟಿಂಗ್ ಹೊಂದಿದ್ದಾರೆ ಎನ್ನುತ್ತದೆ ಅಂಕಿಅಂಶ. ಪುರುಷರಲ್ಲಿ ಇದು 56 ಪ್ರತಿಶತ. ಹೀಗಾಗಿ ಸಾಲ ಮಾಡುವುದರಲ್ಲಿ ಮತ್ತು ಅದನ್ನ ಮರುಪಾವತಿ ಮಾಡುವುದರಲ್ಲೂ ಮಹಿಳೆಯರೇ ಬೆಸ್ಟ್ ಎನ್ನುತ್ತದೆ ಅಂಕಿಅಂಶ.

5. ಕಾನೂನು ನಿಯಮಾವಳಿಗಳ ಪಾಲನೆಯಲ್ಲೂ ಮಹಿಳೆಯೇ ಉತ್ತಮ: ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಇರಬಹುದು ಅಥವಾ ಇನ್ನ್ಯಾವುದೇ ರೀತಿಯ ಕಂಪ್ಲೇಯನ್ಸ್ ಅದನ್ನ ಮಹಿಳೆ ಕೊನೆಯ ದಿನದ ವರೆಗೆ ಉಳಿಸಿಕೊಳ್ಳುವುದಿಲ್ಲ. ಹೀಗೆ ಕಾನೂನು ನಿಯಮಾವಳಿಗಳನ್ನ ಕೊನೆಯ ದಿನದ ವರೆಗೆ ಎಳೆದುಕೊಂಡು ಹೋಗುವ ಅಥವಾ ವಾಯಿದೆ ಮೀರಿದ ನಂತರ ಅದನ್ನ ಪಾಲಿಸಲು ದಂಡವನ್ನ ಕಟ್ಟುವ ಪುರುಷರ ಸಂಖ್ಯೆ 68 ಪ್ರತಿಶತ ಎನ್ನುತ್ತದೆ ಲೆಕ್ಕಾಚಾರ, ಹೀಗೆ ವಾಯಿದೆ ಮೀರುವ ಮಹಿಳೆಯರ ಸಂಖ್ಯೆ ಕೇವಲ 32 ಪ್ರತಿಶತ. ಅಂದರೆ ಎಷ್ಟು ಪ್ರತಿಶತ ಪುರುಷರು ಇದನ್ನ ಪಾಲಿಸುವುದಿಲ್ಲ ಅಷ್ಟೇ ಪ್ರತಿಶತ ಮಹಿಳೆಯರು ಇದನ್ನ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಹೀಗಾಗಿ ಇವರು ಪುರುಷರಿಗಿಂತ ಉತ್ತಮ ಹೂಡಿಕೆದಾರರು ಎನ್ನಲು ಅಡ್ಡಿಯಿಲ್ಲ.

6. ಪಾಂಡೆಮಿಕ್ ಕಲಿಸಿದ ಪಾಠವನ್ನ ಮಹಿಳೆಯರು ಚನ್ನಾಗಿ ಕಲಿತ್ತಿದ್ದಾರೆ: ಪಾಂಡೆಮಿಕ್ ಜಗತ್ತಿನಾದ್ಯಂತ ಜನರಿಗೆ ಖರ್ಚು ವೆಚ್ಚದ, ಉಳಿಕೆಯ , ಹೂಡಿಕೆಯ ಮಹತ್ವವನ್ನ ತಿಳಿಸಿಕೊಟ್ಟಿದೆ. ಆದರೆ ಅದರಿಂದ ನಿಜವಾಗಿ ಕಲಿತವರೆಷ್ಟು ಎನ್ನುವುದು ಪ್ರಶ್ನೆ. ಐದು ಜನ ಮಹಿಳೆಯರಲ್ಲಿ ಒಬ್ಬರು ಹೂಡಿಕೆ ಮಾಡಲು ಶುರು ಮಾಡಿದ್ದಾರೆ. 45 ಪ್ರತಿಶತ ಮಹಿಳೆಯರು ಖರ್ಚನ್ನ ಕಡಿಮೆ ಮಾಡಿದ್ದಾರೆ. 30 ಕ್ಕೂ ಹೆಚ್ಚು ಪ್ರತಿಶತ ಮಹಿಳೆಯರು ವೈಯಕ್ತಿಕ ಹಣಕಾಸು ನಿರ್ವಹಣೆಯ ಬಗ್ಗೆ ಹೆಚ್ಚಿನ ಜ್ಞಾನವನ್ನ ಈ ಎರಡು ವರ್ಷದಲ್ಲಿ ಪಡೆದುಕೊಂಡಿದ್ದಾರೆ ಎನ್ನುತ್ತದೆ ಅಂಕಿಅಂಶ. ಒಟ್ಟಾರೆ 70 ಪ್ರತಿಶತ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಹಣಕಾಸು ವ್ಯವಹಾರದ ನಿರ್ಧಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದು ತಿಳಿದು ಬಂದಿದೆ. ಹತ್ತಿರತ್ತಿರ 20ಪ್ರತಿಶತ ಮಹಿಳೆಯರು ಅಪ್ಪ ಅಥವಾ ಗಂಡನ ಮೇಲೆ ಅವಲಂಬಿಯಾಗಿದ್ದರೆ, 31 ಪ್ರತಿಶತ ಮಹಿಳೆಯರು ಸ್ವತಃ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾರೆ, 38 ಪ್ರತಿಶತ ಜೊತೆಯಾಗಿ ನಿರ್ಧಾರಗಳನ್ನ ತೆಗೆದುಕೊಳುತ್ತಾರೆ, ಉಳಿದವರು ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ಇದ್ದಾರೆ. ಒಟ್ಟಿನಲ್ಲಿ ಪಾಂಡೆಮಿಕ್ ನಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಲಿತ್ತಿದ್ದಾರೆ. ಹೆಚ್ಚು ಜಾಗ್ರತರಾಗಿದ್ದಾರೆ.

7. ನಿವೃತ್ತಿ, ಮಕ್ಕಳ ವಿದ್ಯಾಭ್ಯಾಸ ಮಹಿಳೆಯರ ಹೂಡಿಕೆಯ ಪ್ರಮುಖ ಅಂಶಗಳು: ಪುರುಷ ಮಾರುಕಟ್ಟೆಯಲ್ಲಿ ಕೆಲವೊಮ್ಮೆ ಚಾನ್ಸ್ ತೆಗೆದುಕೊಳ್ಳುವುದು ಮಾಡುತ್ತಾನೆ. ಆದರೆ ಮಹಿಳೆಗೆ ತನಗೇನು ಬೇಕು ಎನ್ನುವುದು ಗೊತ್ತಿದೆ. ಆಕೆಯ ಹೂಡಿಕೆಯ ಲಿಸ್ಟ್ ನಲ್ಲಿ ಪ್ರಮುಖವಾಗಿ ಅಲಂಕರಿಸುವ ಎರಡು ವಿಷಯಗಳು ಒಂದು ನಿವೃತ್ತಿ ಎರಡು ಮಕ್ಕಳ ವಿದ್ಯಾಭ್ಯಾಸ ಅಥವಾ ಮದುವೆ. ನೂರರಲ್ಲಿ ೪೦ ಕ್ಕೂ ಹೆಚ್ಚು ಮಹಿಳೆಯರ ಗುರಿ ಇದೆ ಆಗಿರುತ್ತದೆ. ಕೇವಲ  14 ಪ್ರತಿಶತ ಹೆಂಗಸರು ಮಾತ್ರ ಹೆಚ್ಚಿನ ಹಣ ಮಾಡುವ ಉದ್ದೇಶದಿಂದ ಹೂಡಿಕೆ ಮಾಡುತ್ತಾರೆ.

ಇಂದಿಗೆ ಭಾರತದಲ್ಲಿ ಮಹಿಳೆಯರ ಪಾಲುದಾರಿಕೆ ಹೂಡಿಕೆ ಕ್ಷೇತ್ರದಲ್ಲಿ ಕೂಡ ಹೆಚ್ಚಾಗಿದೆ ಎನ್ನುವುದು ಅಂಕಿಅಂಶದಿಂದ ತಿಳಿದು ಬರುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೊಂದು ಇದೆ. ಹೀಗೆ ಫೈನಾನ್ಸಿಯಲ್ ಜ್ಞಾನವನ್ನ ಪಡೆಯಲು ಪ್ರಮುಖ ಸೋರ್ಸ್ ಇಂಟರ್ನೆಟ್ ಎನ್ನುವುದು ಅದಾಗಿದೆ. ಹತ್ತಿರತ್ತಿರ 30 ಪ್ರತಿಶತ ಜನ ಇನ್ವೆಸ್ಟ್ಮೆಂಟ್ ಪೋರ್ಟಲ್ ಗಳು ಹೇಳುವುದನ್ನ ನಂಬುತ್ತಾರೆ. 20 ಪ್ರತಿಶತ ಜನ ಸ್ನೇಹಿತರು ಮತ್ತು ಬಂಧುಗಳು ಹೇಳಿದ್ದನ್ನ ನಿಜವೆಂದು ನಂಬುತ್ತಾರೆ. ಹೀಗೆ ಹಲವಾರು ಇನ್ನಿತರ ಮಾರ್ಗಗಳ ಮೂಲಕ ಹೂಡಿಕೆಯ ಬಗ್ಗೆ ಜ್ಞಾನವನ್ನ ಪಡೆದುಕೊಳ್ಳುತ್ತಾರೆ. ಕೇವಲ 13 ಪ್ರತಿಶತ ಜನ ಮಾತ್ರ ಕಲಿತ ಹಣಕಾಸು ಸಲಹೆಗಾರರ ಮಾರ್ಗದರ್ಶವನ್ನ ಪಡೆಯುತ್ತಾರೆ ಎನ್ನುತ್ತದೆ ಅಂಕಿಅಂಶ. ಸ್ವಂತ ಕಲಿಕೆ ಎಂದಿಗೂ ಒಳ್ಳೆಯದು ಆದರೆ ಮಾರುಕಟ್ಟೆ ಜ್ಞಾನವಿರುವ ಪರಿಣಿತರ ಸಲಹೆ ಕೂಡ ಅತ್ಯಂತ ಮುಖ್ಯವಾಗುತ್ತದೆ. ಅದರಲ್ಲೂ ಹೂಡಿಕೆಯ ಹಣದ ಮೊತ್ತ ಹೆಚ್ಚಾಗಿದ್ದರೆ ಸಲಹೆ ಪಡೆಯುವುದು ಅತ್ಯಗತ್ಯ. ಉದಾಹರಣೆಗೆ ತಲೆನೋವು , ನೆಗಡಿಗೆ ವೈದ್ಯರ ಬಳಿ ಹೋಗದೆ ಮಾತ್ರೆ ತೆಗೆದುಕೊಳ್ಳುವುದು ಅಷ್ಟೇನೂ ದೊಡ್ಡ ಅಪರಾಧ ಎನ್ನಿಸುವುದಿಲ್ಲ , ಆದರೆ ತಿಳಿಯದ ಕಾಯಿಲೆಗೆ ಕೂಡ ಸ್ವಯಂ ವೈದ್ಯ ಮಾಡಿಕೊಳ್ಳುವುದು ತಪ್ಪು. ಇದು ಅಷ್ಟೇ ಅಪಾಯಕಾರಿ.ಒಂದರಲ್ಲಿ ಜೀವ ಹೋಗುತ್ತದೆ, ಇನ್ನೊಂದರಲ್ಲಿ ಹಣ.

ಇಂದಿಗೂ 30ಕ್ಕೂ ಹೆಚ್ಚು ಪ್ರತಿಶತ ಮಹಿಳೆಯರಿಗೆ ಫೈನಾನ್ಸಿಯಲ್ ವಿಷಯಗಳ ಬಗ್ಗೆ ಯಾವುದೇ ರೀತಿಯ ಜ್ಞಾನವಿಲ್ಲ ಎನ್ನುವುದು ಕೂಡ ಚಿಂತಿಸಬೇಕಾದ ಅಂಶ. 12 ಪ್ರತಿಶತ ಮಹಿಳೆಯರಿಗೆ ಪುರುಷ ಪ್ರಧಾನ ಸಮಾಜದಲ್ಲಿನ ರೀತಿನೀತಿಗಳನ್ನ ಮೀರಲು ಸಾಧ್ಯವಾಗುತ್ತಿಲ್ಲ , ಅವರಲ್ಲಿ ಅವರ ಬಗ್ಗೆ ನಂಬಿಕೆಯ ಕೊರತೆ ಕಾಣುತ್ತಿದೆ. 70 ಪ್ರತಿಶತ ಮಹಿಳೆಯರಿಗೆ ಎಲ್ಲಾ ಗೊತ್ತು ಎನ್ನುವಂತಿಲ್ಲ, ಆದರೆ ಒಮ್ಮೆ ಕಲಿತ ನಂತರ ಹೂಡಿಕೆಯಿರಲಿ ಅಥವಾ ಉಳಿಕೆ, ಮಹಿಳೆ ಪುರುಷನಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾಳೆ ಎನ್ನುವುದನ್ನ ಆಕೆ ಮಾಡಿ ತೋರಿಸಿದ್ದಾಳೆ.

ಕೊನೆಮಾತು: ಈ ಬರಹದ ಉದ್ದಕ್ಕೂ ಮಹಿಳೆ ಮಾರುಕಟ್ಟೆಯಲ್ಲಿ ಹೇಗೆ ಪಾತ್ರವಹಿಸುತ್ತಾಳೆ ಎನ್ನುವುದರ ಬಗ್ಗೆ ಹೇಳಲಾಗಿದೆ. ಮಹಿಳೆಯರಲ್ಲಿ ಹೂಡಿಕೆದಾರಳಾಗಿ ಇರುವ ಕೊರತೆಗಳನ್ನ ಕೂಡ ಒಂದಷ್ಟು ಪಟ್ಟಿ ಮಾಡಲಾಗಿದೆ. ಅಂದ ಮಾತ್ರಕ್ಕೆ ಪುರುಷನಿಗೆ ಎಲ್ಲವೂ ಗೊತ್ತು ಎನ್ನುವಂತಿಲ್ಲ. ಅಲ್ಲದೆ ಕಲಿತ ಮಹಿಳೆ ಕಲಿತ ಪುರುಷನಿಗಿಂತ ಉತ್ತಮವಾಗಿ ಹೂಡಿಕೆ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸಬಲ್ಲಳು ಎನ್ನುವುದು ಸಾಬೀತಾಗಿದೆ. ಶತಮಾನಗಳಿಂದ ಬಂದ ಸ್ಟಿರಿಯೊ ಟೈಪ್ ಹೆಣ್ಣು ಅಡುಗೆ ಮನೆಗೆ ಸೀಮಿತ ಎನ್ನುವ ಮನಸ್ಥಿತಿಯಿಂದ ಹೊರಬರಬೇಕಾಗಿದೆ. ಹೆಣ್ಣು ಗಂಡು ಇಬ್ಬರೂ ಇಂದಿನ ದಿನದಲ್ಲಿ ಒಟ್ಟಾಗಿ ದುಡಿದರೆ ಮಾತ್ರ ಬಾಳ ನೌಕೆ ಸಲೀಸಾಗಿ ಸಾಗುತ್ತದೆ. ಹೀಗಾಗಿ ಯಾರು ಯಾವುದರಲ್ಲಿ ಉತ್ತಮರೊ ಅವರಿಗೆ ಆ ಕ್ಷೇತ್ರದ ನಾಯಕತ್ವ , ಹೊಣೆಗಾರಿಕೆ ನೀಡುವುದು ಎಲ್ಲಾ ರೀತಿಯಿಂದ ಒಳ್ಳೆಯದು. ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತ ಬಂದರೆ ಅದು ದೇಶದ ಪ್ರಬಲ ಆರ್ಥಿಕತೆಗೂ ನಾಂದಿಯಾಗುತ್ತದೆ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp