
ಶಿಕ್ಷಣ (ಸಂಗ್ರಹ ಚಿತ್ರ)
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಭಾರತಕ್ಕೆ ನೇರವಾಗಿ ಅಷ್ಟೊಂದು ತಟ್ಟದೇ ಹೋಗಬಹುದು, ಏಕೆಂದರೆ ಭಾರತ ಸರಕಾರ ರಷ್ಯಾದಿಂದ ಕಚ್ಚಾತೈಲವನ್ನ ಸೋಡಿಯಲ್ಲಿ ಕೊಳ್ಳುವ ನಿರ್ಧಾರ ಮಾಡಿದೆ, ಮತ್ತು ಆಗಲೇ ಕೊಳ್ಳಲು ಶುರು ಮಾಡಿದೆ. ಹೀಗೆ ಕೊಂಡ ತೈಲಕ್ಕೆ ಬದಲಾಗಿ ಹಣವನ್ನ ರೂಪಾಯಿಯಲ್ಲಿ ಕೂಡ ನೀಡಬಹುದು ಎನ್ನುವುದು ಭಾರತಕ್ಕೆ ವರದಾನ. ಅಷ್ಟರಮಟ್ಟಿಗೆ ಯುದ್ಧ ನಮಗೆ ಲಾಭದಾಯಕ ಎನ್ನಬಹುದು. ಆದರೆ ಗಮನಿಸಿ ಅಲ್ಲೆಲ್ಲೋ ಆದ ಯುದ್ಧ ನಮ್ಮ ದೇಶದ ಬಹುದೊಡ್ಡ ಕ್ಷೇತ್ರಗಳಲ್ಲಿ ಒಂದಾದ ಶಿಕ್ಷಣ ಕ್ಷೇತ್ರದ ಹುಳುಕನ್ನ ತೆರೆದಿಟ್ಟಿದೆ. ಉಕ್ರೇನ್ ದೇಶದಲ್ಲಿ ಓದಲು ಇಷ್ಟೊಂದು ಭಾರತೀಯ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ ಎನ್ನುವುದು ಕೂಡ ಇದರಿಂದ ಜಗಜ್ಜಾಹೀರಾತಾಯಿತು. ನಮ್ಮ ರಾಜ್ಯದಿಂದ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಅಲ್ಲಿಗೆ ಹೆಚ್ಚಿನ ವಿದ್ಯಾಭ್ಯಾಸ ಅಥವಾ ವೃತ್ತಿಪರ ವಿದ್ಯಾಭ್ಯಾಸಕ್ಕೆ ಹೋಗಿರುವುದು ಲೆಕ್ಕ ಸಿಕ್ಕಿದೆ.
ನಮ್ಮ ಮಕ್ಕಳು ಅಲ್ಲಿಗೆ ಏಕೆ ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ? ಇಲ್ಲಿ ಸೀಟು ಸಿಕ್ಕದಿದ್ದರೆ ಮತ್ತು ಇಲ್ಲಿನ ಶುಲ್ಕ ಭರಿಸುವ ಶಕ್ತಿ ಇಲ್ಲದಿದ್ದರೆ ಹೋಗುತ್ತಾರೆ ಎನ್ನುವ ವಾದದ ಜೊತೆಗೆ ನಮ್ಮಲಿರುವ ರಿಸರ್ವೇಶನ್ ಕೂಡ ಇದಕ್ಕೆ ಕಾರಣ ಎಂದು ಒಂದಷ್ಟು ದಿನ ಚರ್ಚೆಯಾಯಿತು.
ಆ ನಂತರ ಅದರ ಸದ್ದು ಅಡಗಿಹೋಯಿತು. ಇವತ್ತಿನ ಬರಹದಲ್ಲಿ ಇದ್ಯಾವುದನ್ನ ಚರ್ಚಿಸಲು ಅವಕಾಶವಿಲ್ಲ. ಇಲ್ಲೇನಿದ್ದರೂ ಭಾರತದಲ್ಲಿ ಮಕ್ಕಳನ್ನ ಶಾಲೆಗೆ ಸೇರಿಸಿದ ದಿನದಿಂದ ಪದವಿ ಪಡೆಯುವವರೆಗೆ ಅಂದಾಜು ಎಷ್ಟು ಖರ್ಚಾಗಬಹುದು ಎನ್ನುವುದನ್ನ ತಿಳಿಸುವುದು , ನಮ್ಮಲ್ಲಿ ಅದೇಕೆ ಈ ಮಟ್ಟದ ಖರ್ಚು ಹೆಚ್ಚಾಗಿದೆ , ಇದಕ್ಕೆ ಬೇರೆ ರೀತಿಯ ಪರಿಹಾರಗಳೇನಾದರೂ ಉಂಟೆ ಎನ್ನುವುದನ್ನ ತಿಳಿಸುವುದಷ್ಟೇ ಉದ್ದೇಶ .
ನಿಮ್ಮ ಮಗು ಶಾಲೆಗೆ ಸೇರಿದ ದಿನದಿಂದ ಪದವಿ ಪಡೆಯುವವರೆಗೆ ಆಗುವ ಖರ್ಚು ಎಷ್ಟು ಎನ್ನುವ ಅಂದಾಜು ನಿಮಗಿದೆಯೇ ?
ಗಮನಿಸಿ ಈಗ ಹೇಳಲು ಹೋಗುವ ಹಣದ ಮೊತ್ತ ಒಂದೇ ದಿನದಲ್ಲಿ ಆಗುವ ಖರ್ಚಿನ ಲೆಕ್ಕವಲ್ಲ , ಹಂತ ಹಂತವಾಗಿ ಪೋಷಕರ ಜೇಬನ್ನ ಇದು ಕಿರಿದಾಗಿಸುತ್ತಾ ಹೋಗುತ್ತದೆ. ಇದು ದೇಹದಲ್ಲಿ ಹೆಚ್ಚಿರುವ ಸಕ್ಕರೆ ಅಂಶದಂತೆ , ನಿತ್ಯ ಜೀವನದಲ್ಲಿ ಇದರ ಬಗ್ಗೆ ಗೊತ್ತಾಗುವುದೇ ಇಲ್ಲ , ಆದರೆ ಬಹಳಷ್ಟು ವರ್ಷದ ನಂತರ ಒಮ್ಮೆಲೇ ದೇಹದ ಪ್ರಮುಖ ಅಂಗಗಳು ಕೆಲಸ ಮಾಡುವುದನ್ನ ಬಿಟ್ಟು ಬಿಡುತ್ತವೆ. ಈ ಶಿಕ್ಷಣ ಖರ್ಚು ಕೂಡ ಥೇಟ್ ಹಾಗೆ ! ಮಕ್ಕಳು ಪದವಿ ಪಡೆಯುವ ವೇಳೆಗೆ ಪೋಷಕರ ಪಾಡು ವಿವರಿಸುವುದು ಬೇಡ. ಕೇವಲ ಒಂದೆರೆಡು ಪ್ರತಿಶತ ಪೋಷಕರು ಮಾತ್ರ ಶಿಕ್ಷಣ ಖರ್ಚನ್ನ ಭರಿಸುವ ಆರ್ಥಿಕ ಕ್ಷಮತೆಯನ್ನ ಹೊಂದಿದ್ದಾರೆ. ಉಳಿದವರ ಪಾಡೇನು ? ಅವರು ಸಾಲ ಮಾಡದೆ ಬೇರೆ ದಾರಿಯಿಲ್ಲ ಎನ್ನುವಂತಾಗಿದೆ. ಪ್ರಾಥಮಿಕ ಹಂತದಿಂದಲೂ ಖರ್ಚು ಎನ್ನುವುದು ಬೆಂಬಿಡದೆ ಬೆನ್ನು ಹತ್ತುತ್ತದೆ. ಅದರಲ್ಲೂ ಇಂದಿನ ದಿನಗಳಲ್ಲಿ ಮಗುವಿಗೆ 18 ತಿಂಗಳಾದರೆ ಸಾಕು ಪ್ರಿ ಸ್ಕೂಲ್ ಗೆ ಸೇರಿಸಬೇಕು ಎನ್ನುವ ಧಾವಂತಕ್ಕೆ ಸಮಾಜ ಬಿದ್ದಿದೆ. ಹೀಗೆ ಸೇರಿಸದೆ ಹೋದರೆ ನಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದೆ ಬಿದ್ದರೆ ಎನ್ನುವ ಭಯ ಇದಕ್ಕೆ ಕಾರಣ. ಒಟ್ಟಿನಲ್ಲಿ ಒಂದೂವರೆ ವರ್ಷದ ಮಗುವಿನಿಂದ ಪೋಷಕರಿಗೆ ಶಿಕ್ಷಣ ವೆಚ್ಚ ಶುರುವಾಗುತ್ತದೆ.
ಪ್ರಾಥಮಿಕ ಹಂತದ ಖರ್ಚು: ಪ್ರಿ ಸ್ಕೂಲ್ ನಿಂದ ನಾಲ್ಕನೇ ತರಗತಿಯವರೆಗೆ ಪ್ರಾಥಮಿಕ ಹಂತ ಎಂದು ಪರಿಗಣಿಸಬಹುದು , ಪ್ರಿ ಸ್ಕೂಲ್ ಒಂದು ವರ್ಷ , ಎರಡು ವರ್ಷದ ಕೆಜಿ ಕಲಿಕೆ ನಂತರ ಒಂದರಿಂದ ನಾಲ್ಕು ವರ್ಷ ಒಟ್ಟು ಏಳು ವರ್ಷದ ಖರ್ಚು ಈ ಹಂತದಲ್ಲಿ ಭರಿಸಬೇಕಾಗುತ್ತದೆ. ನಾವು ಬಾಲಕರಾಗಿದ್ದ ಕಾಲದಲ್ಲಿ ಇದು ನಾಲ್ಕು ವರ್ಷವಿತ್ತು ಪ್ರಿ ಸ್ಕೂಲ್ ಮತ್ತು ಕೆಜಿಗಳ ಕಾಟವಿರಲಿಲ್ಲ. ಇದೀಗ ಇದು ಏಳು ವರ್ಷವಾಗಿದೆ. ಖರ್ಚು ಹೆಚ್ಚಾಗಿದೆ. ಮಕ್ಕಳ ಕಲಿಕೆಯಲ್ಲಿ ಮಹತ್ತರ ಬದಲಾವಣೆಯಾಗಿದೆಯೇ ಎಂದರೆ ಅದಕ್ಕೆ ಉತ್ತರ ಮಾತ್ರ ಇಲ್ಲ ಎನ್ನುವುದಾಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಇಂದು ವಾರ್ಷಿಕ 60 ಸಾವಿರದಿಂದ 1 ಲಕ್ಷದ ವರೆಗೆ ಈ ಹಂತದಲ್ಲಿ ಖರ್ಚು ಬರುವುದು ಸಾಮಾನ್ಯ ಎನ್ನುವಂತಾಗಿದೆ . ಮಕ್ಕಳ ಇತರೆ ಚಟುವಟಿಕೆಯ ಖರ್ಚು ಬಿಟ್ಟು ಶಿಕ್ಷಣಕ್ಕೆ ಸಂಬಂಧಿಸಿದ ಖರ್ಚಿನ ಬಾಬತ್ತು 7 ಲಕ್ಷವಾಗುತ್ತದೆ ಎನ್ನುವುದು ಸರಳ ಲೆಕ್ಕಾಚಾರ. ಇದರಲ್ಲಿ 20 ರಿಂದ 50 ಪ್ರತಿಶತ ಹೆಚ್ಚು ಖರ್ಚು ಮಾಡುವವರು ಕೂಡ ಇದ್ದಾರೆ , 20 ರಿಂದ 50 ಪ್ರತಿಶತ ಕಡಿಮೆ ಖರ್ಚು ಮಾಡುವವರು ಕೂಡ ಇರುತ್ತಾರೆ. ನಾವು ಇವರೆಡರ ಮಧ್ಯದ ಲೆಕ್ಕಾಚಾರ ತೆಗೆದುಕೊಂಡರೂ ಕೂಡ ಈ ಹಂತದ ಖರ್ಚನ್ನ 7 ಲಕ್ಷ ಎನ್ನಲು ಅಡ್ಡಿಯಿಲ್ಲ.
ಮಾಧ್ಯಮಿಕ ಹಂತದ ಖರ್ಚು : ಐದನೇ ತಗಗತಿಯಿಂದ 10 ತರಗತಿ ವರೆಗಿನ ಖರ್ಚನ್ನ ಮಾಧ್ಯಮಿಕ ಹಂತದ ಶಿಕ್ಷಣ ಖರ್ಚು ಎನ್ನಬಹುದು. ಐದರಿಂದ ಹತ್ತನೇ ತರಗತಿವರೆಗೆ ಅಂದರೆ ಆರು ವರ್ಷದ ಖರ್ಚನ್ನ ವಾರ್ಷಿಕ ಒಂದೂವರೆ ಲಕ್ಷ , ಕೆಲವೊಮ್ಮೆ ಇನ್ನು ಹೆಚ್ಚು ಎಂದು ಅಂದಾಜಿಸಬಹುದು. ಕೆಲವೊಂದು ಶಾಲೆಗಳಲ್ಲಿ 8 ನೇ ತರಗತಿಯಿಂದ ವೃತ್ತಿಪರ ಶಿಕ್ಷಣಕ್ಕೆ ಹೋಗಲು ಬೇಕಾದ ತರಬೇತಿಯನ್ನ ಇಂಟಿಗ್ರಟೆಡ್ ಶಿಕ್ಷಣ ಎನ್ನುವ ಹೆಸರಿನಲ್ಲಿ ನೀಡಲಾಗುತ್ತದೆ. ನಗರ ಪ್ರದೇಶದಲ್ಲಿ ವಾರ್ಷಿಕ ಒಂದೂವರೆ ಲಕ್ಷ ಖರ್ಚು ಅತಿ ಸಾಮಾನ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಹಂತದಲ್ಲಿ 7 ರಿಂದ 9 ಲಕ್ಷ ರೂಪಾಯಿ ಖರ್ಚು ಭರಿಸಬೇಕಾಗುತ್ತದೆ.
ಪದವಿಪೂರ್ವ ಹಂತದ ಖರ್ಚು: ಇದನ್ನ ನಾವು ಮೊದಲನೇ ಪಿಯುಸಿ ಮತ್ತು ಎರಡನೇ ಪಿಯುಸಿ ಶಿಕ್ಷಣ ಎನ್ನುತ್ತೇವೆ. ಪದವಿ ಶಿಕ್ಷಣಕ್ಕೆ ಪೂರ್ವಭಾವಿ ಸಿದ್ಧತೆ ಖರ್ಚು ಕೂಡ ಈ ವರ್ಷಗಳಲ್ಲಿ ಪೋಷಕರು ಹೊರಬೇಕಾಗುತ್ತದೆ. ವರ್ಷಕ್ಕೆ ಎರಡು ಲಕ್ಷವೆಂದರೂ ಕೂಡ ಎರಡು ವರ್ಷದಿಂದ ಕನಿಷ್ಠ ೪ ಲಕ್ಷ ಖರ್ಚಾಗುತ್ತದೆ. ಇಲ್ಲಿ ಇನ್ನೊಂದು ಅಂಶವನ್ನ ಕೂಡ ಗಮನಿಸಬೇಕು , ಮಕ್ಕಳು ಯಾವ ವೃತ್ತಿಪರ ಸಂಸ್ಥೆಯಲ್ಲಿ ಟ್ಯೂಷನ್ ಗೆ ಹೋಗುತ್ತಾರೆ ಎನ್ನುವುದರ ಮೇಲೆ ಇದರ ಋಣಭಾರ ಇನ್ನಷ್ಟು ಹೆಚ್ಚಾಗುತ್ತದೆ. ಕೆಲವೊಮ್ಮೆ ಕಾಲೇಜಿನ ಶುಲ್ಕದ ಎರಡು ಮೂರು ಪಟ್ಟು ಟ್ಯೂಷನ್ ಮಾಡುವ ಸಂಸ್ಥೆಗಳು ವಸೂಲಿ ಮಾಡುತ್ತವೆ.
ಪದವಿ ಪಡೆಯಲು ಬೆಟ್ಟದಷ್ಟು ಖರ್ಚು : ಬಿ ಎ , ಬಿಕಾಂ , ಬಿಎಸ್ಸಿ ಪದವಿ ಪಡೆಯಲು ಬಹಳಷ್ಟು ಹಣದ ಅವಶ್ಯಕತೆ ಇಲ್ಲ. ಮೂರು ವರ್ಷದ ಅಥವಾ ನಾಲ್ಕು ವರ್ಷದ ಈ ಪದವಿಗಳು ಕೂಡ ವಾರ್ಷಿಕ ಲಕ್ಷದ ಲೆಕ್ಕಾಚಾರದಲ್ಲಿ ಸಿಗುತ್ತವೆ. ಉಳಿದಂತೆ ತಂತ್ರಜ್ಞಾನ ಮತ್ತು ವೈದ್ಯಕೀಯ ಪದವಿ ಪಡೆಯಲು ಬಹಳಷ್ಟು ಹಣದ ಅವಶ್ಯಕತೆಯಿದೆ. ಇಂಜಿನಿಯರಿಂಗ್ ಪದವಿ 20 ಲಕ್ಷದ ವರೆಗೆ ಖರ್ಚನ್ನ ತರುತ್ತದೆ. ಎಂಬಿಎ ೨೫ ಲಕ್ಷ ,ಇನ್ನು ವೈದ್ಯಕೀಯ ಶಿಕ್ಷಣ 50 ರಿಂದ 60 ಲಕ್ಷ ರೂಪಾಯಿ ಬೇಡುತ್ತದೆ. ಈ ಖರ್ಚುಗಳು , ಫೀಸ್ಗಳು ನಿಮ್ಮ ಮಗ ಅಥವಾ ಮಗಳಿಗೆ ಸರಕಾರಿ ಸೀಟು ಸಿಕ್ಕಿದ್ದರೆ ಮಾತ್ರ ಎನ್ನುವುದನ್ನ ಮರೆಯಬೇಡಿ. ಖಾಸಗಿ ಕಾಲೇಜಿನಲ್ಲಿ ಕಾಡಿಬೇಡಿ ಪಡೆದ ಸೀಟಿನ ಖರ್ಚು ಲಕ್ಷಗಳನ್ನ ಮೀರಿ ಕೋಟಿಗೆ ಮುಟ್ಟುತ್ತದೆ. ಸಾಮಾನ್ಯ ಪದವಿ ಎನ್ನುವುದು ಇಂದಿಗೆ ಹತ್ತನೇ ತರಗತಿಗೆ ಸಮ ಎನ್ನುವಂತಾಗಿದೆ. ಹೀಗಾಗಿ ಇಂದು ಎಲ್ಲರೂ ಎಂಬಿಎ ಮಾಡುವ ದರ್ದಿಗೆ ಬಿದಿದ್ದಾರೆ. ಪದವಿ ನಂತರ ಮಾಸ್ಟರ್ಸ್ ಪಡೆಯಲು ಕೂಡ ಇನ್ನೊಂದು ಕೋಟಿ ಕೈ ಬಿಡುತ್ತದೆ.
ಹೀಗಾಗಿ ಪ್ರಿ ಸ್ಕೂಲ್ ನಿಂದ ಪದವಿವರೆಗಿನ ಒಟ್ಟು ಖರ್ಚು ಹೀಗಿದೆ :
ಪ್ರಾಥಮಿಕ ಹಂತದಲ್ಲಿನ ಖರ್ಚು : 7 ಲಕ್ಷ ರೂಪಾಯಿ
ಮಾಧ್ಯಮಿಕ ಹಂತದ ಖರ್ಚು : 9 ಲಕ್ಷ ರೂಪಾಯಿ
ಪದವಿಪೂರ್ವ ಹಂತದ ಖರ್ಚು : 4 ಲಕ್ಷ ರೂಪಾಯಿ
ಪದವಿ ಪಡೆಯಲು ಬೆಟ್ಟದಷ್ಟು ಖರ್ಚು : 40 ಲಕ್ಷ .
ಒಟ್ಟು: 60 ಲಕ್ಷ ರೂಪಾಯಿಗಳು. ನೆನಪಿರಲಿ ಖಾಸಗಿ ಕಾಲೇಜಿನಲ್ಲಿ ಪದವಿ ಮತ್ತು ಮಾಸ್ಟರ್ಸ್ ಪಡೆಯಲು ಈ ಹಣ ಏನೇನೂ ಸಾಲದು. ಹೀಗಾಗಿ ಪದವಿ ಪಡೆಯುವವರೆಗೆ ಆರಾಮಾಗಿ ಒಂದು ಕೋಟಿ ರೂಪಾಯಿ ಕೈ ಬಿಡುತ್ತದೆ. ಗಮನಿಸಿ ಇದು ವೃತ್ತಿಪರ ಪದವಿಯ ಬಗ್ಗೆ ಹೇಳುತ್ತಿರುವ ಖರ್ಚಿನ ಲೆಕ್ಕ. ಮಾಸ್ಟರ್ಸ್ ಎಂದರೆ ಇನ್ನೊಂದು ಕೋಟಿ. ಹೀಗಾಗಿ ಒಬ್ಬ ಉತ್ತಮ ವೈದ್ಯ ಸಂಪಾದನೆ ಮಾಡುವ ಮುನ್ನಾ ಕನಿಷ್ಠ ಎರಡು ಕೋಟಿ ರೂಪಾಯಿ ಹೂಡಿಕೆ ಮಾಡುವ ತಾಕತ್ತು ಹೊಂದಿರಬೇಕು , ಜೋತೆಗೆ ಪದವಿ ನಂತರ ಎರಡು ಮೂರು ವರ್ಷ ಸಮಯವನ್ನ ಕೂಡ ಹೂಡಿಕೆ ಮಾಡಬೇಕಾಗುತ್ತದೆ.
ಹೀಗಾಗಿ ಇಂದು ಅತ್ಯಂತ ಸಾಮಾನ್ಯ ಪದವಿಯನ್ನ ಪಡೆಯಲು ಕೂಡ 20/25 ಲಕ್ಷ ರೂಪಾಯಿ ಒಟ್ಟು ಖರ್ಚು ಬರುತ್ತದೆ. ಇದಿಷ್ಟು ಖರ್ಚಿನ ಲೆಕ್ಕವಾಯ್ತು. ಉಳಿದದ್ದು ನಿಜವಾದ ಸಮಸ್ಯೆಯ ಲೆಕ್ಕಾಚಾರ. ಗಮನಿಸಿ ಒಬ್ಬ ಸಾಮಾನ್ಯ ಮನುಷ್ಯನ ಮಾಸಿಕ ವೇತನ 30 ಸಾವಿರ ರೂಪಾಯಿ ಎಂದು ಕೊಂಡರೆ ವಾರ್ಷಿಕ 3 ಲಕ್ಷ 60 ಸಾವಿರ ರೂಪಾಯಿ ಆಯ್ತು , ಅದರಲ್ಲಿ ಮೂರನೇ ಒಂದು ಭಾಗ ಅಂದರೆ 1 ಲಕ್ಷ 20 ಸಾವಿರ ರೂಪಾಯಿ ಪ್ರಾಥಮಿಕ , ಮಾಧ್ಯಮಿಕ ಹಂತದಲ್ಲೆ ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ಖರ್ಚು ಮಾಡಿದರೆ , ಪದವಿ ವೇಳೆಯ ಖರ್ಚನ್ನ ಹೇಗೆ ತಾನೇ ನಿಭಾಯಿಸಲು ಸಾಧ್ಯ ? ಹೀಗಾಗಿ ಮೆಜಾರಿಟಿ ಪೋಷಕರು ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಇಂದು ಸಾಲ ಮಾಡುತ್ತಿದ್ದಾರೆ. ಇದಕ್ಕಿಂತ ಭೀಕರ ಸಮಸ್ಯೆಯಿದೆ ಆದರೆ ಅದನ್ನ ಯಾರೂ ಚರ್ಚಿಸಲು ಇಷ್ಟ ಪಡುವುದಿಲ್ಲ , ಅದೇನೆಂದರೆ ಇಂದಿನ ಮಾಧ್ಯಮಿಕ ಹಂತದ ಪಠ್ಯವೇನಿದೆ ಅದನ್ನ ಪದವಿ ಪಡೆದಿರುವ ಪೋಷಕರೇ ತಮ್ಮ ಮಕ್ಕಳಿಗೆ ಹೇಳಿಕೊಡುವ ಕ್ಷಮತೆಯನ್ನ ಹೊಂದಿಲ್ಲ ! ಇನ್ನು ನಮ್ಮಂತೆ ನಮ್ಮ ಮಕ್ಕಳು ಆಗುವುದು ಬೇಡ ಎನ್ನುವ ಭಾವನೆಯಿಂದ ಮಕ್ಕಳನ್ನ ಉತ್ತಮ ಶಾಲೆ ಅಥವಾ ಕಾಲೇಜಿಗೆ ಸೇರಿಸುವ ಹೆಚ್ಚು ವಿದ್ಯಾಭ್ಯಾಸವಿಲ್ಲದ ಪೋಷಕರ ಗತಿಯೇನು ? ಬೇಸರ ಎನ್ನಿಸಬಹುದು ಆದರೆ ಈಗ ಬರೆಯಲು ಹೊರಟ ಸಾಲುಗಳು ಸತ್ಯ. ಮುಕ್ಕಾಲು ಪಾಲು ಮಕ್ಕಳು ಪದವಿ ಬರುವವರೆಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿಯನ್ನೇ ಕಳೆದುಕೊಂಡು ಬಿಡುತ್ತಾರೆ. ಅಪ್ಪ -ಅಮ್ಮನ ಹಣ ಮಾತ್ರ ಖರ್ಚಾಯ್ತು . ಫಲಿತಾಂಶ ಶೂನ್ಯವಾಯ್ತು.
ಈ ಸಮಸ್ಯೆಗೆ ಪರಿಹಾರವೇನು?
ಎಲ್ಲಕ್ಕೂ ಮೊದಲಿಗೆ ಸರಕಾರಿ ಶಾಲೆ ಮತ್ತು ಸರಕಾರಿ ಕಾಲೇಜುಗಳನ್ನ ಬಳಸುವುದು ಪ್ರಾರಂಭಿಸಬೇಕು. ಖಾಸಗಿ ಶಾಲೆ , ಕಾಲೇಜಿಗೆ ಅಷ್ಟೊಂದು ದುಡ್ಡು ಕೊಡಲು ಸಿದ್ಧವಿರುತ್ತೀರಿ ಅಲ್ಲವೇ , ಅದರ ಕೇವಲ 25 ಪ್ರತಿಶತ ಹಣವನ್ನ ವ್ಯಯ ಮಾಡಿ ಹತ್ತಾರು ಪೋಷಕರು ಒಂದು ಸಣ್ಣ ಸಂಘ ಕಟ್ಟಿಕೊಳ್ಳಬೇಕು, ಶಾಲೆಯ ಶಿಕ್ಷಕ/ಶಿಕ್ಷಕಿಯರನ್ನ ಕೂಡ ವಿಶ್ವಾಸಕ್ಕೆ ತೆಗೆದುಕೊಂಡು , ಮಕ್ಕಳ ಕಲಿಕೆಗೆ ಬೇಕಾಗುವ ಸಾಧನಗಳ ಖರೀದಿ ಮಾಡಬಹುದು. ಶಿಕ್ಷಕರ ಹೊರತು ಪಡಿಸಿ ಆಯಾ ಕ್ಷೇತ್ರದ ಗಣ್ಯರ ಕರೆಯಿಸಿ ಅವರಿಂದ ಉಪನ್ಯಾಸ ಏರ್ಪಡಿಸಬಹುದು. ಮಾಡಬೇಕು ಎಂದು ಮನಸ್ಸು ಮಾಡಿದರೆ ಖರ್ಚಿನ ನಾಲ್ಕನೇ ಒಂದು ಭಾಗದಲ್ಲಿ ನಾವು ಅದ್ಬುತ ಸೃಷ್ಟಿಸಬಹುದು.
ಎರಡನೆಯಾದಾಗಿ ಮಕ್ಕಳಿಗೆ ಓದುವುದರಲ್ಲಿ ಆಸಕ್ತಿಯಿದೆಯೇ , ಇದ್ದರೆ ಯಾವ ಕ್ಷೇತ್ರ ಎನ್ನುವುದನ್ನ ಕೂಡ ತಿಳಿದುಕೊಳ್ಳಬೇಕು. ಭಾರತದಲ್ಲಿ ಮುಕ್ಕಾಲು ಪಾಲು ಮಕ್ಕಳ ಆಸಕ್ತಿಯನ್ನ ಕೇಳುವ ಸಂಪ್ರದಾಯವಿಲ್ಲ. ಮಕ್ಕಳೇನು ಓದಬೇಕು ಎನ್ನುವುದನ್ನ ಪೋಷಕರು ನಿರ್ಧರಿಸುತ್ತಾರೆ. ಆಸಕ್ತಿ ಕ್ಷೇತ್ರದಲ್ಲಿ ಮಕ್ಕಳ ವಿದ್ಯಾಭ್ಯಾಸ ಮಾಡಿಸಿದರೆ ಫಲಿತಾಂಶ ಧನ್ಯಾತ್ಮಕವಾಗಿರುತ್ತದೆ . ಖರ್ಚು ಮಾಡಿದಕ್ಕೂ ಅರ್ಥವಿರುತ್ತದೆ.
ಮೂರನೆಯದಾಗಿ ಹೆಚ್ಚು ಓದುವ ಇಚ್ಛೆ ಇಲ್ಲದ ಮಕ್ಕಳ ಮೇಲೆ ವೃಥಾ ಖರ್ಚು ಮಾಡುವುದು ಬಿಟ್ಟು ಅವರನ್ನ ಜಾಬ್ ಓರಿಯೆಂಟೆಡ್ ಅಂದರೆ ಎಲೆಕ್ಟ್ರಿಷಿಯನ್ , ಪ್ಲ೦ಬರ್ , ಬಡಗಿ ಹೀಗೆ ಯಾವುದಾದರೂ ವೃತ್ತಿ ಸಂಬಂಧಿತ ತರಬೇತಿ ಕೊಡಿಸಬೇಕು. ನಿಮಗೆ ಗೊತ್ತಿರಲಿ ಇಂದು ಕೈ ಕೆಲಸ ಕಲಿತವರು ಸ್ವಯಂ ಉದ್ಯೋಗಿಗಳಾಗಿದ್ದಾರೆ , ಅವರಿಗೆ ಕೈ ತುಂಬಾ ಕೆಲಸವೂ ಇದೆ. ನಾಲ್ಕನೆಯದಾಗಿ ಸರಕಾರ ನಿಜವಾಗಿ ಓದುವ ಆಸಕ್ತಿ ಇದ್ದವರಿಗೆ ಸಹಾಯ ಮಾಡುವ ಪಾರದರ್ಶಕ ಯೋಜನೆಯನ್ನ ತರಬೇಕು.
ಕೊನೆಮಾತು: ನೀವು ಮಾರ್ವಾಡಿ ಮನೆಯವರನ್ನ ನೋಡಿ , ಅವರು ಕೂಡಲು ಕಳೆಯಲು ಬಂದರೆ ಸಾಕು ಎನ್ನುತ್ತಾರೆ. ಮಕ್ಕಳಿಗೆ ಸಾಮಾನ್ಯಜ್ಞಾನ ಕಲಿಸುತ್ತಾರೆ. ಇದರರ್ಥ ನಿಮ್ಮ ಮಕ್ಕಳನ್ನ ಶಾಲೆಗೆ ಕಳಿಸಬೇಡಿ ಎಂದಲ್ಲ , ಅವರ ಇಷ್ಟ ಅನಿಷ್ಟಗಳನ್ನೂ ಅರಿಯಬೇಕು. ಬಲವಂತದ ಮಾಘಸ್ನಾನ ಆಗಬಾರದು. ಮೊದಲ ದಿನದಿಂದ ಅವರ ಶಿಕ್ಷಣ ಮೇಲಿನ ಖರ್ಚನ್ನ ಸರಿಯಾಗಿ ಹೂಡಿಕೆ ಮಾಡುತ್ತಾ ಬಂದರೆ ನಿಮ್ಮ ಮಗ ಅಥವಾ ಮಗಳು 24 ರ ಹರಯಕ್ಕೆ ಬಂದಾಗ ಕನಿಷ್ಠ ಕೋಟಿ ರೂಪಾಯಿ ಒಡೆಯರನ್ನಾಗಿ ನೀವು ಮಾಡಬಹುದು , ಇದರರ್ಥ ನಿಮ್ಮ ಮಕ್ಕಳಿಗೆ ಉಳಿಸಿ ಹಣ ನೀಡಿ ಎನ್ನುವುದಲ್ಲ , ವೃಥಾ ಖರ್ಚು ಬೇಡ ಎನ್ನುವುದಾಗಿದೆ. ವಿದ್ಯೆ ಬೇಕು ಖರ್ಚು ಬೇಡ. ಯಾವುದೂ ನಮ್ಮನ್ನ ನಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡುತ್ತದೆ ಅದೇ ಶಿಕ್ಷಣ ಎನ್ನುವ ವಿವೇಕವಾಣಿ ಸದಾ ನೆನಪಿನಲ್ಲಿರಲಿ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com