ಕ್ಯಾನ್ಸರ್ ಹೆಚ್ಚಳ: ಅಸ್ವಾಭಾವಿಕ ಜೀವನಶೈಲಿ ಕಾರಣವೇ? (ಕುಶಲವೇ ಕ್ಷೇಮವೇ)
ಕ್ಯಾನ್ಸರ್- ಕೇಳಿದಾಕ್ಷಣ ನಾವು ಬೆಚ್ಚಿ ಬೀಳುತ್ತೇವೆ. ಈ ರೋಗ ಮಾರಕವೆಂದು ನಾವೆಲ್ಲ ಭಾವಿಸತ್ತೇವೆ. ಕ್ಯಾನ್ಸರ್ ನಿಂದ ಬಳಲುವ ಪ್ರತಿರೋಗಿಯ ಪ್ರಶ್ನೆ-ಈ ರೋಗ ನನಗೇಕೆ ಬಂತು? ಕ್ಯಾನ್ಸರ್ಗೆ ಕಾರಣವೇನು? ಕ್ಯಾನ್ಸರ್ ರೋಗಿಗಳು ಬದುಕಲು ಸಾಧ್ಯವಿಲ್ಲವೇ? ನಮ್ಮಲ್ಲಿ ಕೆಲ ರೋಗಿಗಳಿಗೆ ತಮಗೆ ಕ್ಯಾನ್ಸರ್ ಇದೆ ಎನ್ನುವುದೇ ತಿಳಿದಿರುವುದಿಲ್ಲ.
Published: 19th March 2022 08:13 AM | Last Updated: 19th March 2022 01:19 PM | A+A A-

ಸಂಗ್ರಹ ಚಿತ್ರ
ಕ್ಯಾನ್ಸರ್- ಕೇಳಿದಾಕ್ಷಣ ನಾವು ಬೆಚ್ಚಿ ಬೀಳುತ್ತೇವೆ. ಈ ರೋಗ ಮಾರಕವೆಂದು ನಾವೆಲ್ಲ ಭಾವಿಸತ್ತೇವೆ. ಕ್ಯಾನ್ಸರ್ ನಿಂದ ಬಳಲುವ ಪ್ರತಿರೋಗಿಯ ಪ್ರಶ್ನೆ-ಈ ರೋಗ ನನಗೇಕೆ ಬಂತು? ಕ್ಯಾನ್ಸರ್ಗೆ ಕಾರಣವೇನು? ಕ್ಯಾನ್ಸರ್ ರೋಗಿಗಳು ಬದುಕಲು ಸಾಧ್ಯವಿಲ್ಲವೇ? ನಮ್ಮಲ್ಲಿ ಕೆಲ ರೋಗಿಗಳಿಗೆ ತಮಗೆ ಕ್ಯಾನ್ಸರ್ ಇದೆ ಎನ್ನುವುದೇ ತಿಳಿದಿರುವುದಿಲ್ಲ.
ಏಕೆಂದರೆ ರೋಗಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆಂದು ತಿಳಿಸಲು ಅನೇಕ ವೈದ್ಯರು, ರೋಗಿಯ ಸಂಬಂಧಿಗಳು ಮುಂದಾಗುವುದಿಲ್ಲ. ಇದು ರೋಗಿಗಳಲ್ಲಿ ಒಂದು ಬಗೆಯ ಜಿಗುಪ್ಪೆ ಉಂಟು ಮಾಡುತ್ತಿದೆ. ತಾವು ಯಾವ ರೋಗಕ್ಕೆ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆಂಬ ಅರಿವಿಲ್ಲದಿದ್ದಾಗ ರೋಗಿ ಹತಾಶನಾಗುವುದು ಸಹಜ, ಹಾಗಾಗಿ ರೋಗದೊಡನೆ, ಲಭ್ಯವಿರುವ ಮತ್ತು ಮಾರ್ಗಗಳನ್ನು ಸೂಕ್ತ ರೀತಿಯಲ್ಲಿ ರೋಗಿಗೆ ತಿಳಿಸುವುದು ಅನಿವಾರ್ಯ ಕ್ಯಾನ್ಸರ್ ಇಂದಿನ ಸಂದರ್ಭದಲ್ಲಿ ಯಾರನ್ನಾದರೂ ಬಾಧಿಸಬಹುದು.
ಇದರ ನಿಯಂತ್ರಣ ಹಾಗೂ ಚಿಕಿತ್ಸೆಯಲ್ಲಿ ನಾವು ದಿನೇ ದಿನೇ ಪ್ರಗತಿ ಸಾಧಿಸುತ್ತಿದ್ದೇವೆ. ಆದರೆ, ಕ್ಯಾನ್ಸರ್ಗೆ ತುತ್ತಾಗುವ ಅಪಾಯವೂ ದಿನೇ ದಿನೇ ಹೆಚ್ಚುತ್ತಿರುವುದು ಮಾತ್ರ ವಿಪರ್ಯಾಸ, ಕ್ಯಾನ್ಸರ್' ಪದ ವಿಸ್ತಾರವಾದದ್ದು. ಎಲ್ಲ ಕ್ಯಾನ್ಸರ್ಗಳು 'ಅಂತ್ಯ'ವೆಂದು ನಾವು ಭಾವಿಸಬೇಕಿಲ್ಲ.
ಕ್ಯಾನ್ಸರ್ ಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ?
ಭ್ರಷ್ಟಾಚಾರವನ್ನು ಸಮಾಜಕ್ಕೆ ತಗುಲಿದ ಕ್ಯಾನ್ಸರ್ ಎಂದು ಬಣ್ಣಿಸುತ್ತೇವೆ. ಭ್ರಷ್ಟಾಚಾರವೆಂದರೇನು? ನೈಸರ್ಗಿಕವಾದ ಮಾರ್ಗಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದೇ ಭ್ರಷ್ಟ+ಆಚಾರ= ಭ್ರಷ್ಟಾಚಾರ, ನಮ್ಮ ಜೀವಕೋಶಗಳು ಕೂಡ ಭ್ರಷ್ಟರಂತೆ ನಡೆದುಕೊಳ್ಳುವುದನ್ನೇ ನಾವು ವೈದ್ಯಕೀಯ ವಾಗಿ ಕ್ಯಾನ್ಸರ್ ಎನ್ನುತ್ತೇವೆ. ಭ್ರಷ್ಟಾಚಾರ ಪ್ರಾಮಾಣಿಕ ಕೌಟುಂಬಿಕ ಹಿನ್ನೆಲೆಯುಳ್ಳವರಲ್ಲೂ ವ್ಯಾಪಿಸುತ್ತಿರುವಂತೆ, ಕ್ಯಾನ್ಸರ್ ಆರೋಗ್ಯವಂತರ ಮಕ್ಕಳನ್ನು ಬಾಧಿಸುವ ಸಂದರ್ಭ ತಳ್ಳಿಹಾಕಲಾಗದು. ಕ್ಯಾನ್ಸರ್ ಮಕ್ಕಳು-ವಯಸ್ಕರು, ಗಂಡು-ಹೆಣ್ಣು ಯಾರನ್ನಾದರೂ ಬಾಧಿಸಬಹುದು.
ಕ್ಯಾನ್ಸರ್ ವಿಧಗಳು
ಕ್ಯಾನ್ಸರ್ಗಳಲ್ಲಿ ನಾನಾ ವಿಧಗಳಿವೆ. ಕ್ಯಾನ್ಸರ್ಗೆ ತುತ್ತಾಗದ ಅಂಗಾಂಗವಿಲ್ಲ ಎಂದರೆ ತಪ್ಪಾಗಲಾರದು. ಮಚ್ಚೆ-ಸಣ್ಣಪುಟ್ಟ ಗಡ್ಡೆ ಎಂದು ನಾವು ಕಡೆಗಣಿಸುವ ಗುಣಲಕ್ಷಣಗಳು ಕ್ಯಾನ್ಸರ್ನ ಸೂಚಕಗಳಾಗಿರಬಹುದು, ಕ್ಯಾನ್ಸರ್ಗಳನ್ನು Tumor (ಟ್ಯೂಮರ್), Carcinoma (ಕಾರ್ಸಿನೋಮಾ), Sarcoma (ಸಾರ್ಕೋಮಾ), Lymphoma (ಲಿಂಫೋಮಾ) ಹೀಗೆ ನಾನಾ ಹೆಸರುಗಳಿಂದ ಕರೆಯುತ್ತೇವೆ. ಕೆಲ ಕ್ಯಾನ್ಸರ್ಗಳು ಮಾರಕವೆನ್ನುವುದು ಸತ್ಯ. ಕ್ಯಾನ್ಸರ್ ಮಾರಕವೆನಿಸಲು ಅನೇಕ ಬಾರಿ ಅದರ ಶೋಧನೆ ಹಾಗೂ ಅದನ್ನು ಖಚಿತಪಡಿಸಿಕೊಳ್ಳುವಲ್ಲಿ ಉಂಟಾಗುವ ವಿಳಂಬವೇ ಪ್ರಮುಖ ಕಾರಣವೆನ್ನಬಹುದು.
ಭಾರತದಲ್ಲಿಂದು ಸುಮಾರು 15 ಲಕ್ಷ ಮಂದಿ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ. ಮಹಿಳೆಯರಲ್ಲಿ ಸ್ತನ, ಸರ್ವೈಕಲ್, ಅಂಡಾಶಯ, ಅನ್ನನಾಳ, ನಾಯಿ, ಗರ್ಭಕೋಶ, ಜಠರ ಹಾಗೂ ಶ್ವಾಸಕೋಶದ ಕ್ಯಾನ್ಸರ್ಗಳು ಕ್ರಮವಾಗಿ ಸಾಮಾನ್ಯವಾಗಿವೆ. ಮರುಷರಲ್ಲಿ ಶ್ವಾಸಕೋಶ, ಚರ್ಮ, ಮೂತ್ರಕೋಶ, ಮೇದೋಜೀರಕ, ಕರುಳು ಸಂಬಂಧಿ ಕ್ಯಾನ್ಸರ್ಗಳು ಹೆಚ್ಚುತ್ತಿವೆ. ಮಕ್ಕಳಲ್ಲಿ ಲ್ಯುಕೇಮಿಯಾ, ಮೂಳೆ ಕ್ಯಾನ್ಸರ್, ನರ ವ್ಯವಸ್ಥೆಯ ಗಡ್ಡೆಗಳಾದ ನ್ಯೂರಾಬ್ಲಾಮಾ, ಕಿಡ್ನಿ, ಸಂಬಂಧಿ ವಿಲ್ಸ್ ಟ್ಯೂಮರ್ ಇತ್ಯಾದಿಗಳು ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್ಗಳಾಗಿವೆ.
ಕ್ಯಾನ್ಸರ್ ನಾನಾ ಬಗೆ, ನಾನಾ ಕಾರಣ, ನಾನಾ ಗುಣಲಕ್ಷಣಗಳುಳ್ಳ ವಿಚಿತ್ರ ರೋಗವಾಗಿದೆ. 'ಕ್ಯಾನ್ಸರ್' ಎನ್ನುವ ಪದವನ್ನು ನಾವು ನಮ್ಮ ದೇಹದ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆ ಸೂಚಿಸಲು ಬಳಸುವ ಪದ. ಜೀವಕೋಶಗಳ ನೈಸರ್ಗಿಕವಾಗಿರದ ವೈದ್ಯಕೀಯ, ಆತಂಕಕಾರಿ, ಆಕ್ರಮಣಕಾರಿ, ಹಾನಿಕರ ತ್ವರಿತಗತಿಯ ಅಭಿವೃದ್ಧಿಯೇ ಕ್ಯಾನ್ಸರ್.
ಕ್ಯಾನ್ಸರ್ ಬರುವುದು ಹೇಗೆ?
ಕ್ಯಾನ್ಸರ್ಗೆ ಕಾರಣವಾಗುವ ಜೀವಕೋಶಗಳು ಸಹಜವಾದವೇ ಆಗಿದ್ದು ಅಸಾಧಾರಣ ಕಾರ್ಯಚಟುವಟಿಕೆ ಹಾಗೂ ವಿಭಜನಾ ಶಕ್ತಿಯನ್ನು ಪ್ರಕಟಿಸುತ್ತವೆ. ನೈಸರ್ಗಿಕವಾದ ದೇಹದ ರಾಸಾಯನಿಕ ರಸದೂತ ಗಳ ಪ್ರಭಾವವನ್ನು ಕ್ಷೀಣಗೊಳ್ಳುವಂತೆ ಮಾಡಿ, ತಮ್ಮ ವಿಕಾಸ ಕುಂಠಿತಗೊಳ್ಳದಂತೆ ಕಾಯ್ದುಕೊಳ್ಳುವ ಶಕ್ತಿಯನ್ನು ಕ್ಯಾನ್ಸರ್ ಕೋಶಗಳು ಹೊಂದಿರುತ್ತವೆ. ಹೀಗೆ ಅನಿಯಂತ್ರಿತ ರೀತಿಯಲ್ಲಿ ವಿಕಾಸಗೊಂಡ ಕೋಶಗಳು ತಮ್ಮ ಸುತ್ತಮುತ್ತಲಿನ ಕೋಶಗಳಿಂದ ಆಮ್ಲಜನಕ, ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲಾರಂಭಿಸುತ್ತದೆ.
ಪರ್ಯಾಯ ರಕ್ತಸಂಚಲನಾ ನಾಳಗಳ ಅಭಿವೃದ್ಧಿಗೂ ಇವು ಕಾರಣವಾಗಬಲ್ಲವು. ಇತರ ಕೋಶಗಳಿಂದ ಹೆಚ್ಚು ಹಾಗೂ ತ್ವರಿತಗತಿಯಲ್ಲಿ ಕ್ಯಾನ್ಸರ್ ಕೋಶಗಳು ವಿಭಜನೆಗೊಳ್ಳುತ್ತವೆ. ಕ್ಯಾನ್ಸರ್ ಕೋಶಗಳ ಸಂಖ್ಯೆಯ ಹೆಚ್ಚಳದಿಂದಾಗಿ ಇತರೆ ದೈಹಿಕ ಕೋಶಗಳಲ್ಲಿ ಆಮ್ಲಜನಕ, ಪೌಷ್ಟಿಕಾಂಶದ ಕೊರತೆಯುಂಟಾಗುತ್ತದೆ.
ಕ್ಯಾನ್ಸರ್ ಕಾಣುವುದು ಹೇಗೆ?
ದೇಹದ ತೂಕದ ಇಳಿತ, ದೇಹದ ಯಾವುದೇ ಭಾಗದಲ್ಲಿ ಕಂಡುಬರಬಹುದಾದ ಬಾವು, ಬಿಟ್ಟು ಬಿಟ್ಟು ಬರುವ ಜ್ವರ, ಸುಸ್ತು, ನಿತ್ರಾಣ ಕೂಡ ಕ್ಯಾನ್ಸರ್ನ ಲಕ್ಷಣಗಳಾಗಿವೆ. ಅಜೀರ್ಣ, ನುಂಗಲು ಕಷ್ಟವಾಗುವುದು, ಮಲ ಮೂತ್ರ ವಿಸರ್ಜನೆಯಲ್ಲಿ ಕಂಡುಬರುವ ವ್ಯತ್ಯಾಸ ನಿರಂತರವಾಗಿದ್ದರೆ ಕ್ಯಾನ್ಸರ್ನ ಸುಳಿವು ಆಗಿರುವ ಸಾಧ್ಯತೆಯಿದೆ. ಕಫ ಮಲ-ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳಬಹುದು. ದೇಹದಲ್ಲಿ ಕಂಡುಬರುವ ಮಚ್ಚೆ ಅದರ ಗಾತ್ರ-ಆಕಾರ-ಬಣ್ಣಗಳ ಕ್ಯಾನ್ಸರ್ನ ಸೂಚನೆ ನೀಡಬಲ್ಲವು.
ಮಾಯದ ಗಾಯ, ನಾಲಿಗೆಯಲ್ಲಿ ಕಾಣಿಸಿಕೊಳ್ಳುವ ಮಚ್ಚೆಗಳು ಕೂಡ ಕ್ಯಾನ್ಸರ್ಗೆ ದಾರಿ ಮಾಡಿಕೊಡಬಲ್ಲವು. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿದ್ದು, ಅದರಲ್ಲಿ ಕಾಣಿಸಿಕೊಳ್ಳುವ ಗಡ್ಡೆ ಅಥವಾ ಗಾತ್ರ-ಆಕಾರ ವ್ಯತ್ಯಾಸವನ್ನು ವೈದ್ಯರ ಗಮನಕ್ಕೆ ಆದಷ್ಟು ಬೇಗನೇ ತರುವುದು ಉತ್ತಮ. ಗರ್ಭಕೋಶ ಹಾಗೂ ಸಂಭೋಗದ ನಂತರ ಪದೇ-ಪದೇ ರಕ್ತಸ್ರಾವವಾಗುತ್ತಿದ್ದರೆ ಮಹಿಳೆಯರು ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಒಳಿತು. ಕ್ಯಾನ್ಸರ್ನ ಗುಣಲಕ್ಷಣಗಳು ಸಾಮಾನ್ಯ ಆರೋಗ್ಯ ಸಮಸ್ಯೆಗಳಂತೆ ಇರುವುದರಿಂದ ನಾವು ಅವನ್ನು ನಿರ್ಲಕ್ಷಿಸುತ್ತೇವೆ. ನಮ್ಮ ಈ ನಿರ್ಲಕ್ಷ್ಯವೇ ಕ್ಯಾನ್ಸರ್ ಒಂದು ಪೈಶಾಚಿಕ ಪೆಡಂಭೂತವಾಗಿ ಕಾಡಲು ಹಾಗೂ ಮಾರಣಾಂತಿಕವೆನಿಸಲು ಅವಕಾಶ ನೀಡುತ್ತದೆ.
ಕ್ಯಾನ್ಸರ್ ಪತ್ತೆ ಮಾಡುವುದು ಹೇಗೆ?
ಕ್ಯಾನ್ಸರ್ ಶೋಧನೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಸಾಕಷ್ಟು ಪ್ರಗತಿಯಾಗಿದೆ. ಈ ಸಾಧನೆ ಹಲವು ಜೀವಗಳನ್ನು ಉಳಿಸಿದೆ. ಕ್ಯಾನ್ಸರ್ ಚಿಕಿತ್ಸೆಗೆ ಶಸ್ತ್ರಕ್ರಿಯೆ, ವಿಕಿರಣ, ಹಾರ್ಮೋನು, ಔಷಧೀಯ ವಿಧಾನಗಳು ಲಭ್ಯವಿವೆ. ಯಾವುದು ಸೂಕ್ತವೆನ್ನುವುದನ್ನು ವೈದ್ಯರು ಕ್ಯಾನ್ಸರ್ಗೊಳಗಾದ ಭಾಗ ಹಾಗೂ ಹಂತದ ಆಧಾರದಲ್ಲಿ ನಿರ್ಧರಿಸುತ್ತಾರೆ. ಕೆಲ ಕ್ಯಾನ್ಸರ್ಗಳಲ್ಲಿ ಮೇಲೆ ಹೆಸರಿಸಿದ ನಾನಾ ಚಿಕಿತ್ಸಾ ವಿಧಾನಗಳನ್ನು ಒಟ್ಟಾಗಿ ಅಥವಾ ಒಂದೊಂದಾಗಿ ಸಂದರ್ಭಕ್ಕನುಗುಣವಾಗಿಯೂ ನೀಡಲಾಗುತ್ತದೆ.
ಈ ವಿಧಾನಗಳು ಕ್ಯಾನ್ಸರ್ ಕೋಶಗಳ ಪೈಶಾಚಿಕ ವರ್ತನೆಯನ್ನು ನಿಯಂತ್ರಿಸುವಲ್ಲಿ ಹಾಗೂ ನಿಷ್ಕ್ರಿಯಗೊಳಿಸುವುದರಲ್ಲಿ ಸಫಲತೆಯನ್ನು ಕಂಡಿವೆ. ಆದರೆ ಈ ಕ್ರಮಗಳಿಂದ ರೋಗಿ ನಾನಾ ಅಡ್ಡ ಪರಿಣಾಮಗಳನ್ನು ಅನುಭವಿಸುವಂತಾಗುತ್ತದೆ. ಕೂದಲು ಉದುರುವುದು, ವಾಂತಿ, ಬಾಯಿ ರುಚಿ ಕೆಡುವುದು, ಗುಳ್ಳೆ, ರಕ್ತಕಣಗಳ ಏರಿಳಿತ, ಭೇದಿ, ಬಾಯಿ ಹುಣ್ಣು- ಇತ್ಯಾದಿ.
ಕ್ಯಾನ್ಸರ್ ತಡೆಗೆ ಜೀವನಶೈಲಿ ಬದಲಾವಣೆಗಳು ಮುಖ್ಯ
ಕ್ಯಾನ್ಸರ್ ತಡೆಯಲು ಅರಿಶಿಣ, ಬೆಳ್ಳುಳ್ಳಿ ಉತ್ತಮ. ಕ್ಯಾನ್ಸರ್ ತಡೆಯಲು ಅರಿಶಿಣ, ಬೆಳ್ಳುಳ್ಳಿ ಉತ್ತಮ. ಇವುಗಳನ್ನು ಬಳಸಿ ತಯಾರಿಸಿದ ಅನೇಕ ಉತ್ಪನ್ನಗಳು ಈಗಾಗಲೇ ಮಾರ್ಕೆಟ್ಟಿಗೆ ಕ್ಯಾನ್ಸರ್ ನಿಯಂತ್ರಣ ಔಷಧಿಗಳಾಗಿ ಲಗ್ಗೆಯಿಟ್ಟಿವೆ. ಕ್ಯಾನ್ಸರ್ ತಡೆಯಲು ಉತ್ತಮ ಮಾರ್ಗವೆಂದರೆ ನೈಸರ್ಗಿಕವಾದ ರೀತಿಯಲ್ಲಿ ಬದುಕುವುದು-ಸ್ವಚ್ಛ ಗಾಳಿ, ನೀರು, ಸಾವಯವ ಆಹಾರ ರಾಸಾಯನಿಕ-ಕೃತಕ ಪದಾರ್ಥ ಬಳಕೆ ರಹಿತ ಜೀವನಶೈಲಿ ಸಮಾಜವನ್ನು ಅನೇಕ ಕ್ಯಾನ್ಸರ್ಗಳಿಂದ ಮುಕ್ತಿ ನೀಡಬಲ್ಲದು.
ಶುಚಿತ್ವ ಹಾಗೂ ಸೋಂಕು ನಿಯಂತ್ರಣ ಕೂಡ ಕ್ಯಾನ್ಸರ್ ತಡೆಗಟ್ಟಲು ಅನಿವಾರ್ಯ. ದುಶ್ಚಟಗಳು ಕ್ಯಾನ್ಸರ್ಗೆ ಪ್ರಮುಖ ಕಾರಣಗಳಲ್ಲೊಂದಾಗಿದ್ದು ಅವುಗಳಿಂದ ದೂರವಿರುವುದು ಅಗತ್ಯ.
ಕ್ಯಾನ್ಸರ್ ರೋಗಿ ಕೂಡ ಇತರರಂತೆ ಬದುಕಬಲ್ಲ ಎಂಬುದನ್ನು ನಾವು ಅರಿಯಬೇಕು. ಕ್ಯಾನ್ಸರ್ ರೋಗಿಗಳು ಹತಾಶರಾಗದಂತೆ ಅವರನ್ನು ನಿರಂತರವಾಗಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ, ಕ್ಯಾನ್ಸರ್ ಎನ್ನುವುದು ಸಾಮಾನ್ಯ ಜೀವಕೋಶಗಳ ಅಸಾಮಾನ್ಯ ವರ್ತನೆ. ಇದನ್ನು ಬೇಗನೇ ಗುರುತಿಸಿ ಉಲ್ಬಣಗೊಳ್ಳದಂತೆ, ವ್ಯಾಪಿಸದಂತೆ ಕಾಯ್ದುಕೊಳ್ಳುವುದು ಅಗತ್ಯ.
ನಮ್ಮ ಜೀವನಶೈಲಿಯ ಪುಟ್ಟ ಪುಟ್ಟ ಕೃತಕ ನಡೆಗಳು ಸಹ ಕ್ಯಾನ್ಸರ್ಕಾರಕಗಳೇ ಆಗಿವೆ. ಹಾಗಾಗಿ ಈಗಲಾದರೂ ಪ್ರಕೃತಿಗೆ ಶರಣಾಗೋಣ. ನೈಸರ್ಗಿಕ ನಿಯಮಕ್ಕನುಗುಣವಾಗಿ ಬದುಕೋಣ. ಪರಿಸರ ಕೌಟುಂಬಿಕ ರಾಜಕೀಯ ಮಾಲಿನ್ಯಗಳಿಂದ ದೂರವಿರಲು ಪ್ರಯತ್ನಿಸೋಣ.
ಡಾ. ವಸುಂಧರಾ ಭೂಪತಿ
ಮೊಬೈಲ್: 9986840477
ಇ-ಮೇಲ್: bhupathivasundhara@gmail.com