
ಆರ್ಥಿಕ ಕುಸಿತ (ಸಾಂಕೇತಿಕ ಚಿತ್ರ)
ಪ್ರತಿ ದಿನ ತೈಲ ಬೆಲೆ ಏರುತ್ತಲೇ ಇದೆ . ಇದಕ್ಕೆ ಕಾರಣವೇನಿರಬಹುದು ?? ಯುದ್ಧ ಎನ್ನುವುದು ಸಿದ್ದ ಉತ್ತರ. ಯುದ್ಧವೊಂದೇ ಕಾರಣವಲ್ಲ. ಯುದ್ಧವಿಲ್ಲದ ಸಮಯದಲ್ಲಿ ಕೂಡ ತೈಲ ಬೆಲೆ ಹೆಚ್ಚಾಗಿತ್ತು ಎನ್ನುವುದನ್ನ ಮರೆಯಬಾರದು.
ಭಾರತ ರಷ್ಯಾ ಜೊತೆಗಿಂತ ಅಮೇರಿಕಾ ಜೊತೆ ಹೆಜ್ಜೆ ಹಾಕಬೇಕು ಅಂತ ಅಮೇರಿಕಾ ಫರ್ಮಾನು ಹೊರಡಿಸುತ್ತೆ. ಅಮೇರಿಕಾ ಹಾಕಿದ ತಾಳಕ್ಕೆ ಕುಣಿಯುವ ಸರಕಾರ ಈಗ ಭಾರತದಲ್ಲಿಲ್ಲ! ಅಮೇರಿಕಾ ಜೊತೆಗೆ ವ್ಯಾಪಾರ ಇರಬಹುದು, ಬೇರೆ ರೀತಿಯ ಸಂಬಂಧ ಇರಬಹುದು ಮೋದಿ ಸುಲಭವಾಗಿ ನಮ್ಮ ತಾಳಕ್ಕೆ ಕುಣಿಯುವ ವ್ಯಕ್ತಿಯಲ್ಲ ಎನ್ನುವುದು ಅವರಿಗೆ ತಿಳಿದಿದೆ. ಅವರ ದೇಶ ಆರ್ಥಿಕವಾಗಿ ಕಂಗೆಟ್ಟಿದೆ ಅದನ್ನ ಉದ್ಧರಿಸಲು ಭಾರತ ಸೇರಿ ಅನೇಕ ದೇಶಗಳ ರೊಟ್ಟಿಯ ತುಂಡು ಕಸಿಯಬೇಕಿದೆ. ಮೊದಲಾಗಿದ್ದರೆ ನಿಂಗೊಂದು ತುಂಡು ನೀಡುತ್ತೇವೆ ಎಂದಿದ್ದರೆ ತಲೆದೂಗುವ ಪ್ರೈಮ್ ಮಿನಿಸ್ಟರ್ ಗಳಿದ್ದರು, ಆದರೀಗ?? ಬದಲಾದ ಭಾರತ ಮತ್ತು ಅದರ ವಿದೇಶಾಂಗ ನೀತಿ ಅಮೆರಿಕಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನೀವು ಉಕ್ರೈನ್ ಪ್ರೆಸಿಡೆಂಟ್ ಅವರ ಇತ್ತೀಚಿನ ವಿಡಿಯೋಗಳನ್ನ ನೋಡಿ, ತನ್ನ ದೇಶದ ಜನರು ಗುಳೆ ಹೋಗಿರುವುದು, ಸಾಯುತ್ತಿರುವುದು, ನಗರಕ್ಕೆ ನಗರವೇ ಮಸಣವಾಗಿ ಪರಿವರ್ತನೆಗೊಳ್ಳುತ್ತಿದ್ದರೂ ಆತನ ಮುಖದ ಮೇಲಿನ ನಗು ಮಾಸಿಲ್ಲ. ಪುಟಿನ್ ಖಾಸಗಿ ಆಸ್ತಿ ಕರಗುವುದಿಲ್ಲ ಇದು ಇಂದಿನ ವಿಶ್ವವ್ಯವಸ್ಥೆ.
ರೋತ್ಸ್ ಚೈಲ್ಡ್. ಬ್ರೂಸ್, ಕ್ಯಾವೆಂಡಿಷ್, ಹ್ಯಾನೋವರ್, ಕ್ರುಪ್, ರೋಕೆ ಫಿಲ್ಲರ್, ವಾರ್ಬುರ್ಗ್, ಡೇ ಮೆಡಿಸಿ ಇನ್ನೊಂದು ನಾಲ್ಕು ಮನೆತನೆಗಳು ಜಗತ್ತನ್ನ ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟಿವೆ. ಇವತ್ತು ತಂತ್ರಜ್ಞಾನ ಎಷ್ಟರಮಟ್ಟಿಗೆ ಮುಂದುವರಿದಿದೆ ಎಂದರೆ ಜಗತ್ತಿನ ಯಾವ ವ್ಯಕ್ತಿಯೂ ಆಹಾರ ಮತ್ತು ಬಟ್ಟೆಗಾಗಿ ಅಂದರೆ ಮೂಲಭೂತ ವಿಷಯಕ್ಕೆ ದುಡಿಯುವುದು ಬೇಕಿಲ್ಲ ಎನ್ನುವ ಮಟ್ಟಿಗೆ. ಆದರೇನು ಜನರನ್ನ ತಂತ್ರಜ್ಞಾದ ಪೂರ್ಣ ಪ್ರಯೋಜನ ಪಡೆಯಲು ಬಿಟ್ಟರೆ ಅವರ ನಿಯಂತ್ರಣ ತಪ್ಪುವುದಿಲ್ಲವೇ? ಇಷ್ಟೆಲ್ಲಾ ಹೊಡೆದಾಟ ಜಗತ್ತಿನ ಮೇಲಿರುವ ತಮ್ಮ ನಿಯಂತ್ರವನ್ನ ಕಾಯ್ದುಕೊಳ್ಳುವುದು ಮತ್ತು ಇನ್ನಷ್ಟು ನಿಯಂತ್ರಣ ಸಾಧಿಸುವುದಕ್ಕೆ ಮಾತ್ರ!. ಇಂತಹ ಶಕ್ತಿಗಳ ಹಿಡಿತಕ್ಕೆ ಸಿಲುಕದೆ ಭಾರತ ಪ್ರಥಮ ಬಾರಿಗೆ ತನ್ನ ವಿದೇಶಾಂಗ ನೀತಿಯಲ್ಲಿ ಥೇಟ್ ಅಮೇರಿಕಾ ದೇಶದಂತೆ ಡಬಲ್ ಸ್ಟ್ಯಾಂಡರ್ಡ್ ಅನುಸರಿಸುವುದು ಸದ್ಯದ ಮಟ್ಟದಲ್ಲಿ ಭಾರತ ಅದೆಷ್ಟು ಬಲಶಾಲಿಯಾಗಿದೆ ಎನ್ನುವುದನ್ನ ಸಾರಿ ಹೇಳುತ್ತದೆ. ನಿಮಗೆಲ್ಲಾ ನೆನಪಿರಲಿ ಆರ್ಥಿಕವಾಗಿ ಸದೃಢವಾಗಿರದ ಹೊರತು ಈ ರೀತಿಯ ನಿರ್ಧಾರವನ್ನ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಹಿಂದೆ ಯುದ್ದ ಅಂದರೆ ಮದ್ದು ಗುಂಡು ಹಾರಿಸಿ ಮಾಡುವ ಯುದ್ದವಾಗಿತ್ತು ಇಂದು ಯುದ್ದ ಅಂದರೆ ಅದಕ್ಕೆ ಹಲವು ವ್ಯಾಖ್ಯಾನ ನೀಡಬಹುದು ಅದರಲ್ಲಿ ಒಂದು "ಕರೆನ್ಸಿ ವಾರ್" ಚೀನಾ ದೇಶ ದಶಕಗಳ ನಂತರ ತನ್ನ ಹಣವನ್ನು ಡಾಲರ್ ಎದುರು ಅಪಮೌಲ್ಯಗೊಳಿಸಿ ಕರೆನ್ಸಿ ವಾರ್ ಶುರು ಮಾಡಿ ಇಂದಿಗೆ ವರ್ಷಗಳು ಕಳೆದಿವೆ. ಇವತ್ತಿಗೆ ಇದು ಹಳೆಯ ವಿಷಯ, ಗಮನಿಸಿ ಒಂದು ಡಾಲರ್ ಗೆ ಹಿಂದೆಂದಿಗಿಂತ ಹೆಚ್ಚು ಚೀನಿ ಹಣ ವಿನಿಮಯದಲ್ಲಿ ಸಿಗುವ ಹಾಗೆ ಆಯಿತು ಹೂಡಿಕೆದಾರನಿಗೆ ಲಾಭ ಬೇಕು ಅಷ್ಟೇ, ಅದು ಚೀನಾ, ಇಂಡಿಯಾ, ಬ್ರೆಜಿಲ್ ಯಾವುದಾದರು ಸರಿ. ಹೀಗೆ ಹಾರಿ ಹೋದ ಹೂಡಿಕೆದಾರರ ಮತ್ತೆ ತನ್ನತ್ತ ಸೆಳೆಯಲು ಅಮೇರಿಕಾಗೆ ತನ್ನ ಫೆಡರಲ್ ಇಂಟರೆಸ್ಟ್ ರೇಟ್ ಹೆಚ್ಚಿಸದೇ ಬೇರೆ ದಾರಿ ಇರಲಿಲ್ಲ . ಚೀನಾದ ನೆಡೆಯನ್ನ ಗಮನಿಸುತ್ತಲೇ ಇರಬೇಕು., ಚೂರು ಹೆಚ್ಚು ಕಮ್ಮಿ ಆದರೂ ಅಮೇರಿಕಾ ತಲೆ ಮೇಲೆ ಕೈ ಹೊತ್ತು ಕೋರುವುದರಲ್ಲಿ ಸಂಶಯವಿಲ್ಲ .
ಅಮೇರಿಕಾದಲ್ಲಿ ಹೆಚ್ಚಾದ ಬಡ್ಡಿ ದರ, ಭಾರತದಲ್ಲಿ ಕಡಿಮೆಯಾದ ಬಡ್ಡಿ ದರ ಹಾಗು ಡಾಲರ್ ಎದುರು ಕುಸಿಯುತ್ತಿರುವ ರುಪಾಯಿ, ಹೂಡಿಕೆಗೆ ಎಮರ್ಜಿಂಗ್ ದೇಶಗಳ ನೆಚ್ಚಿಕೊಂಡಿದ್ದ ಜಾಗತಿಕ ಹೊಡಿಕೆದಾರರಿಗೆ ಎಮರ್ಜಿಂಗ್ ದೇಶ ಹಾಗೂ ಕಚ್ಚಾ ತೈಲದ ಮೇಲಿನ ಹೂಡಿಕೆ ಹೊರತಾಗಿ ಹೂಡಿಕೆಗೆ ಹೆಚ್ಚು ವಿಶ್ವಾಸ ಆರ್ಹ ದಾರಿ ತೆರೆದು ಕೊಟ್ಟಿದೆ, ಹಾಗಾಗಿ ಮುಂಬರುವ ದಿನಗಳಲ್ಲಿ ಹೆಚ್ಚು ಹೂಡಿಕೆದಾರರು ಅಮೇರಿಕಾದ ಡೆಟ್ ಬಾಂಡ್ ಗಳಲ್ಲಿ ಹಣ ತೊಡಗಿಸುತ್ತಾರೆ. ಗಮನಿಸಿ ನೋಡಿ ತೈಲ ಬೆಲೆ ಕುಸಿದರೂ ಅಥವಾ ಹೆಚ್ಚಿದರೂ ಅಮೇರಿಕಾ ಮಾತ್ರ ಲಾಭಗಳಿಸುತ್ತಲೇ ಇರಬೇಕು ಹಾಗೆ ವ್ಯವಸ್ಥೆಯನ್ನ ಕಟ್ಟಲಾಗಿದೆ.
ಕೆಳೆದ ನಾಲ್ಕಾರು ತಿಂಗಳಿಂದ ಭಾರತದ ಷೇರು ಮಾರುಕಟ್ಟೆಯಿಂದ ಭಾರಿ ಪ್ರಮಾಣದ ಹಣವನ್ನ ವಿದೇಶಿ ಹೂಡಿಕೆದಾರರು ತೆಗೆದುಕೊಂಡು ತಮ್ಮ ಮೂಲ ದೇಶಗಳಿಗೆ ಕಳುಹಿಸಲು ಪ್ರಾರಂಭಿಸಿದ್ದಾರೆ. ಗಮನಿಸಿ ಅವರು ಬಂಪರ್ ಬೆಳೆಯನ್ನ ತೆಗೆದಿದ್ದಾರೆ. ಹೂಡಿಕೆ ಡಬಲ್ ಆಗಿದೆ, ಕೆಲವು ಕಡೆ ಅದು ಮೂರ್ಪಟ್ಟು ಕೂಡ ಆಗಿದೆ. ಅವರಿಗೇನು ಬೇಕು ಅದು ಸಿಕ್ಕಿದೆ ಹೀಗಾಗಿ ಅವರು ಹೆಚ್ಚಿನ ಲಾಭಕ್ಕೆ ಮಾರಿ ತಮ್ಮ ಹಣವನ್ನ ಭದ್ರ ಮಾಡಿಕೊಳ್ಳುವ ಕೆಲಸಕ್ಕೆ ಇಳಿದಿದ್ದಾರೆ. ಹೀಗೆ ಆಗುವ ಮಾರಾಟವನ್ನ ಕೊಳ್ಳುವವರು ಕೂಡ ಬೇಕಲ್ಲವೇ? ಹೀಗೆ ಇವರು ಲಾಭಕ್ಕೆ ಮಾರಿದ ಷೇರುಗಳನ್ನ ಕೊಳ್ಳುತ್ತಿರುವವರು ಯಾರು ಗೊತ್ತೇ? ನಾವು ಭಾರತೀಯರು, ಡೊಮೆಸ್ಟಿಕ್ ಹೂಡಿಕೆದಾರರು. ಬಾಹ್ಯದಿಂದ ಭಾರತದ ಮಾರುಕಟ್ಟೆಯನ್ನ ಬುಡಮೇಲು ಮಾಡುವ ಕಾರ್ಯಕ್ಕೆ ಜಯ ಸಿಕ್ಕಿಲ್ಲ. ಹಾಗೆಂದು ನಾವು ಹೆಚ್ಚು ಬೀಗುವಂತೆಯೂ ಇಲ್ಲ, ಏಕೆಂದರೆ ಮಾರುಕಟ್ಟೆ ಸ್ವಲ್ಪ ಏರುಪೇರಾದರೂ ನಮ್ಮ ಡೊಮೆಸ್ಟಿಕ್ ಹೂಡಿಕೆದಾರರಿಗೆ ತಡೆದುಕೊಳ್ಳುವ ಶಕ್ತಿಯಿಲ್ಲ. ಹಾಗೊಮ್ಮೆ ಷೇರು ಮಾರುಕಟ್ಟೆ ಕುಸಿದರೆ ಭಾರತದಲ್ಲಿ ಭಾರಿ ಪ್ರಮಾಣದ ಆರ್ಥಿಕ ಬಿಕ್ಕಟ್ಟು ಎದುರಾಗುತ್ತದೆ.
ಮುಂದಿನ ದಿನಗಳಲ್ಲಿ ಭೂಗೋಳಿಕ ರಾಜಕೀಯ ಘರ್ಷಣೆಗಳು (geopolitical conflicts ) ಹೆಚ್ಚಾಗಲಿವೆ. ಪೂರ್ವ ಏಷ್ಯಾದಲ್ಲಿ ಚೀನಾ , ಸೌತ್ ಕೊರಿಯಾ ಮತ್ತು ಜಪಾನ್ ನಡುವಿನ ತಿಕ್ಕಾಟ ಹೆಚ್ಚಾಗತ್ತದೆ. ಇರಾನ್ ಪಶ್ಚಿಮ ದೇಶಗಳ ಬಗ್ಗೆ ಮುಖ್ಯವಾಗಿ ಅಮೇರಿಕಾ ಬಗ್ಗೆ ಇರುವ ತನ್ನ ಕಠಿಣ ಧೋರಣೆಯನ್ನ ಇನ್ನಷ್ಟು ಬಿಗಿಗೊಳಿಸಲಿದೆ. ರಷ್ಯಾ ನ್ಯಾಟೋವನ್ನು ಉಲ್ಲಂಘಿಸಿ ಉಕ್ರೈನ್ ಮೇಲಿನ ತನ್ನ ಹಿಡಿತವನ್ನ ಮತ್ತಷ್ಟು ಬಲಪಡಿಸಿಕೊಳ್ಳಲಿದೆ. ಕೊನೆಯದಾಗಿ ಜಗತ್ತಿನ ಹತ್ತು ದೊಡ್ಡ ಪೆಟ್ರೋಲಿಯಂ ಉತ್ಪಾದಕ ಎಂದು ದಶಕಗಳ ಕಾಲ ಬೀಗಿದ್ದ ಈಗಾಗಲೇ ದಯನೀಯ ಸ್ಥಿತಿಯಲ್ಲಿರುವ ವೆನಿಜುಲಾ ಪೂರ್ಣ ಅವನತಿಯತ್ತ ನೆಡೆದಿದೆ. ಇಂದು ವೆನಿಜುಲಾದಲ್ಲಿ ಆಗುತ್ತಿರುವ ಆಂತರಿಕ ತಳಮಳಗಳ ತಿಳಿಸಿ ಹೇಳಲು ಇನ್ನೊಂದು ಪ್ರತ್ಯೇಕ ಲೇಖನ ಬರೆಯಬೇಕಾದೀತು. ಇನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತ ದೇಶಗಳನ್ನ ಚೀನಾ, ಅಮೇರಿಕಾ ರಷ್ಯಾ ದೇಶಗಳು ತಮ್ಮ ಸಾಲದ ಸುಳಿಯಲ್ಲಿ ಬಂಧಿಸಿ ತಮ್ಮ ಅಧೀನದಲ್ಲಿ ಇಟ್ಟುಕೊಳ್ಳಲಿವೆ. ಮುಂಬರುವ ದಿನಗಳಲ್ಲಿ ಹೆಚ್ಚೆಚ್ಚು ಧ್ರುವೀಕರಣವಾಗಿ ಪ್ರಪಂಚವನ್ನ ಚೀನಾ ಅಮೇರಿಕಾ ಜೊತೆಗೆ ರಷ್ಯಾ ಆಳಲಿದೆ. ಇವರುಗಳ ನಡುವಿನ ಮೇಲಾಟದ ಕಚ್ಚಾಟಕ್ಕೆ ಹಲವು ದೇಶಗಳು ನಲುಗಲಿವೆ.
ಜಗತ್ತಿನ ಬಹುತೇಕ ದೇಶಗಳು ಸಾಲದಲ್ಲಿ ಮುಳುಗಿವೆ. ಜಗತ್ತನ್ನ ಪೂರ್ತಿ ಒಂದು ಮನೆಯನ್ನಾಗಿ ನೋಡಿದರೆ ಒಂದು ರೂಪಾಯಿ ಆಸ್ತಿಯ ಮುಂದೆ ಎರಡೂವರೆ ರೂಪಾಯಿ ಸಾಲವಿದೆ. ದೇಶಗಳನ್ನ ಒಂದು ಮನೆಯಂತೆ ನೋಡಲು ಪ್ರಾರಂಭಿಸಿದರೆ ಅಮೆರಿಕಾ ಎಕಾನಮಿ ನಿಂತಿರುವುದೇ ಸಾಲದ ಮೇಲೆ. ಅಲ್ಲಿ ಎಲ್ಲದಕ್ಕೂ ಕ್ರೆಡಿಟ್ ಹಿಸ್ಟ್ರಿ ಬೇಕೇ ಬೇಕು. ಹೀಗೆ ಅಮೆರಿಕಾ ಯೂರೋಪಿನಿಂದ ಜಗತ್ತಿನ ಬಹಳಷ್ಟು ದೇಶಗಳಲ್ಲಿ ಲೋನ್ ಡಿಫಾಲ್ಟರ್ಸ್ ಸಂಖ್ಯೆ ಹೆಚ್ಚುತ್ತದೆ. ಇದು ಸಣ್ಣ ಐಸ್ ಬಾಲ್ ರೂಪದಲ್ಲಿ ಶುರುವಾಗಿ ಅದ್ಯಾವ ಗಾತ್ರವನ್ನ ಪಡೆಯುತ್ತದೋ ದೇವರೇ ಬಲ್ಲ. ಭಾರತದಲ್ಲಿ ಕೂಡ ಇದು ಆಗಲಿದೆ. ಆದರೆ ಇಲ್ಲಿ ಸಣ್ಣದೊಂದು ಆಶಾಭಾವ ನಮ್ಮ ಪಾಲಿಗಿದೆ. ಅಮೆರಿಕಾ, ಯೂರೋಪುಗಳಲ್ಲಿ ಬಡ್ಡಿಯ ದರ ಸೊನ್ನೆ ಅಥವಾ ನೆಗಟಿವ್, ಜಪಾನ್ ಕಥೆ ಕೂಡ ಸೇಮ್. ಇತರ ಎಮರ್ಜಿಂಗ್ ಮಾರುಕಟ್ಟೆಗಳಲ್ಲಿ ಕೂಡ ಹೂಡಿಕೆಯ ಮೇಲಿನ ಲಾಭಂಶ ಅಷ್ಟಕಷ್ಟೇ! ಭಾರತದಲ್ಲಿ ಕೂಡ ಇದು ಕುಸಿದಿದೆ. ಆದರೆ ಬೇರೆಲ್ಲಾ ದೇಶಗಳಿಗೆ ಹೋಲಿಕೆ ಮಾಡಿ ನೋಡಿದರೆ ಭಾರತದಲ್ಲಿ ಹೂಡಿಕೆ ಲಾಭದಾಯಕ.
ಕೊನೆ ಮಾತು: ಹೀಗೆ ಇರುವ ಆಶಾದಾಯಕ ಮನಸ್ಥಿತಿ ಭಾರತಕ್ಕೆ ವರವಾಗಿದೆ, ಬಹಳಷ್ಟು ವಿದೇಶಿ ಹೂಡಿಕೆ ಹಣ ಹರಿದು ಹೋಗುತ್ತಿದ್ದರೂ ಭಾರತೀಯ ಮಾರುಕಟ್ಟೆ ಕುಗ್ಗದಿರಲಿ ಇದೊಂದು ಕಾರಣ ಎನ್ನಬಹುದು. ಜಾಗತಿಕ ಮಟ್ಟದಲ್ಲಿ ಇಂದು ಎಲ್ಲೆಡೆ ತಲ್ಲಣ ಮನೆ ಮಾಡಿದೆ. ಪುಟಿನ್ ಉಕ್ರೈನ್ ವಿರುದ್ಧ ಕೆಮಿಕಲ್ ಅಥವಾ ಬಯೋ ವಾರ್ ನಡೆಸಬಹುದು ಎನ್ನುವ ಗುಮಾನಿ ಕೂಡ ಕೇಳಿ ಬರುತ್ತಿದೆ. ಇವೆಲ್ಲವುಗಳ ನಡುವೆ ಭಾರತದ ಆಂತರಿಕ ಶಾಂತಿ ಕದಡದ ಹಾಗೆ ಕಾಪಿಡುವುದು ಸದ್ಯದ ಮಟ್ಟಿನ ಸವಾಲು. ಕೇಂದ್ರ ಸರಕಾರ ಬಾಹ್ಯ ಮತ್ತು ಆಂತರಿಕ ಸಮಸ್ಯೆಗಳಿಗೆ ಗಟ್ಟಿಯಾಗಿ ನಿಲ್ಲಬೇಕಿದೆ. ಆರ್ಥಿಕತೆ ಭಾರತದಂತಹ ದೊಡ್ಡ ಮತ್ತು ಯುವ ದೇಶದಲ್ಲಿ ಬಹುಬೇಗ ಹಳಿಗೆ ಬರುತ್ತದೆ ಎನ್ನುವುದನ್ನ ನಾವು ಕರೋನೋತ್ತರ ನೋಡಿದ್ದೇವೆ. ಹೀಗಾಗಿ ಬೆಲೆಯೇರಿಕೆ ಮತ್ತು ಅಂತರಿಕ ಶಾಂತಿ ಇಂದಿನ ದಿನದ ಬಹುಮುಖ್ಯ ಅಂಶಗಳು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com