
ಪೆನ್ನಿ ಸ್ಟಾಕ್
ಯಾವುದೇ ಸಂಸ್ಥೆಯ ಷೇರು ಕೊಳ್ಳುವ ಮುನ್ನ, ಆ ಸಂಸ್ಥೆ ಎಷ್ಟು ಸುರಕ್ಷಿತ? ಎಷ್ಟು ಲಾಭ ನೀಡುತ್ತಿದೆ? ಮುಂಬರುವ ದಿನಗಳಲ್ಲಿ ಅದರ ಮೌಲ್ಯ ವೃದ್ಧಿಯಾದೀತೇ? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವವಾಗುತ್ತದೆ. ಇವುಗಳನ್ನ ತಿಳಿದುಕೊಳ್ಳಲು ಇರುವ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳೋಣ .
ಎಲ್ಲಕ್ಕೂ ಮೊದಲಿಗೆ ನಾವು ಯಾವ ಸಂಸ್ಥೆಯ ಷೇರು ಖರೀದಿ ಮಾಡಲು ಇಚ್ಛಿಸಿದ್ದೇವೆ ಆ ಸಂಸ್ಥೆಯ ವಾರ್ಷಿಕ ವರದಿಯನ್ನ ಪೂರ್ಣವಾಗಿ ಅಧ್ಯಯನ ಮಾಡಬೇಕು. ಸಮಾನ್ಯವಾಗಿ ದೊಡ್ಡ ಸಂಸ್ಥೆಗಳ ವಾರ್ಷಿಕ ವರದಿಯನ್ನ ಸಣ್ಣ ಪುಸ್ತಕದ ರೀತಿಯಲ್ಲಿ ಮುದ್ರಿಸಿ ಇಟ್ಟಿರುತ್ತಾರೆ. ಇವುಗಳನ್ನ ಪಡೆದುಕೊಳ್ಳುವುದು ಬಹಳ ಸಲಭ. ವಾರ್ಷಿಕ ವರದಿಯಲ್ಲಿ ಮಂಡಳಿಯ ಸದಸ್ಯರ ಅಂದರೆ ನಿರ್ದೇಶಕರ ವರದಿ ಇರುತ್ತದೆ. ಸಂಸ್ಥೆಯ ಆಡಿಟರ್ ವರದಿ ಇರುತ್ತದೆ. ಆಡಿಟರ್ ತಮ್ಮ ಗಮನಕ್ಕೆ ಬಂದ ಅತಿ ಸಣ್ಣ ಡೀವಿಯೇಷನ್ ಕೂಡ ಉಲ್ಲೇಖ ಮಾಡಿರುತ್ತಾರೆ. ಆಡಿಟ್ ನೋಟ್ ಜೊತೆಗೆ ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಕೂಡ ಇರುತ್ತದೆ. ಇವುಗಳ ಅಧ್ಯಯನ ಮಾಡಲು ಹೆಚ್ಚಿನ ಬುದ್ಧಿವಂತಿಕೆಯ ಅವಶ್ಯಕತೆಯಿಲ್ಲ. ನಮ್ಮ ಮನೆಯ ಲೆಕ್ಕಾಚಾರದಂತೆಯೇ ಇದು ಸರಳ. ಸ್ವಲ್ಪ ತಾಳ್ಮೆ ವಹಿಸಿ ಸಂಖ್ಯೆಗಳೊಂದಿಗೆ ಸಂವಹನ ನಡೆಸಬೇಕು ಅಷ್ಟೇ. ಇಲ್ಲಿನ ವರದಿ ಮನಸ್ಸಿಗೆ ಸಮಾಧಾನಕರ ಎನ್ನಿಸಿದರೆ ಷೇರನ್ನ ಕೊಳ್ಳುವ ನಿರ್ಧಾರವನ್ನ ಮುಂದುವರಿಸಬಹುದು.
ಎರಡನೆಯದಾಗಿ ಮೂಲಭೂತ ಅಂಶಗಳ ವಿಶ್ಲೇಷಣೆ ಮಾಡಬೇಕು . ಅಂದರೆ ಸಂಸ್ಥೆಯ ಪುಸ್ತಕದ ಮೌಲ್ಯ ಎಷ್ಟಾದರೂ ಇರಲಿ , ಅದರ ಮಾರುಕಟ್ಟೆ ಮೌಲ್ಯ ಎಷ್ಟು? ಈ ವರ್ಷ ಮಾತ್ರ ಲಾಭ ಗಳಿಸಿದೆಯೇ? ಅಥವಾ ಕಳೆದ ನಾಲ್ಕಾರು ವರ್ಷದಿಂದ ಲಾಭ ಬರುತ್ತಿದೆಯೇ? ಸಂಸ್ಥೆ ನಡೆಸುತ್ತಿರುವ ನಿರ್ವಹಣಾ ತಂಡದ ಸಾಮರ್ಥ್ಯವೆಷ್ಟು? ಹೀಗೆ ಹತ್ತಾರು ವಿಷಯಗಳಿಗೆ ಉತ್ತರವನ್ನ ಪಡೆದುಕೊಳ್ಳಬೇಕಾಗುತ್ತದೆ.
ಮೂರನೆಯದಾಗಿ, ತಾಂತ್ರಿಕ ವಿಶ್ಲೇಷಣೆ ಕೂಡ ಮಾಡಬೇಕಾಗುತ್ತದೆ. ಇದು ಸಾಮಾನ್ಯ ಹೂಡಿಕೆದಾರನಿಗೆ ಸ್ವಲ್ಪ ಕಷ್ಟ ಎನ್ನಿಸಬಹುದು. ಆದರೆ ಸರಿಯಾದ ಮಾರ್ಗದರ್ಶನ ಮತ್ತು ಒಂದಷ್ಟು ಕಲಿಕೆಯಿಂದ ಇದನ್ನ ಕೂಡ ಮಾಡಬಹುದು. ಸಂಸ್ಥೆಯ ಸಾಲ, ಸಂಸ್ಥೆಯ ಆಸ್ತಿಯ ಎಷ್ಟು ಪಟ್ಟಿದೆ? ಮೂಲ ಹೂಡಿಕೆಯ ಮೇಲೆ ಎಷ್ಟು ಪ್ರತಿಶತ ಲಾಭಂಶ ಬಂದಿದೆ. ಸಂಸ್ಥೆ ಷೇರು ವಿಭಜನೆ ಮಾಡಿದೆಯೇ? ರೈಟ್ ಇಶ್ಯೂ ನೀಡಿದೆಯೇ? ಸಂಸ್ಥೆ ತನ್ನ ಷೇರನ್ನ ಮಾರುಕಟ್ಟೆಯಿಂದ ಮರು ಖರೀದಿ ಮಾಡುತ್ತಿದೆಯೇ? ಇಂತಹ ಹಲವು ಹತ್ತು ವಿಷಯಗಳನ್ನ ನಾಲ್ಕಾರು ವರ್ಷದ ಡೇಟಾ ದೊಂದಿಗೆ ತುಲನೆ ಮಾಡುವುದು, ಇದೆ ವ್ಯಾಪಾರದಲ್ಲಿರುವ ಇತರೆ ಸಂಸ್ಥೆಗಳ ಇದೆ ವಿಷಯಗಳು ಯಾವ ಮಟ್ಟದಲ್ಲಿವೆ. ಇಂಡಸ್ಟ್ರಿ ಅವರೇಜ್ ಏನು? ನಾವು ಕೊಳ್ಳಲು ಬಯಸಿರುವ ಸಂಸ್ಥೆ ಯಾವ ಮಟ್ಟದಲ್ಲಿದೆ ? ಹೀಗೆ ಅನೇಕ ಅಂಶಗಳನ್ನ ಇಲ್ಲಿ ಗಮನಿಸಲಾಗುತ್ತದೆ.
ಹೀಗೆ ನೀವು ಹತ್ತಾರು ಅಡೆತಡೆಗಳನ್ನ ದಾಟಿ ನಿರ್ದಿಷ್ಟ ಸಂಸ್ಥೆಯ ಷೇರು ಕೊಳ್ಳುವುದು ಎಂದು ನಿರ್ಧರಿಸುತ್ತೀರಿ , ಷೇರುಗಳಲ್ಲಿ ಹಲವಾರು ವಿಧವಿದೆ , ಇಂದು ಪೆನ್ನಿ ಸ್ಟಾಕ್ ಬಗ್ಗೆ ತಿಳಿದುಕೊಳ್ಳೋಣ .
ಪೆನ್ನಿ ಸ್ಟಾಕ್: ಸಾಮನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ಈ ರೀತಿಯ ಪೆನ್ನಿ ಸ್ಟಾಕ್ ಗಳನ್ನ ಕಾಣಬಹುದು. ಯಾವ ಷೇರಿನ ಬೆಲೆ ಒಂದು ಡಾಲರ್ ಅಥವಾ ಅದಕ್ಕಿಂತ ಕಡಿಮೆ ಹಣದಲ್ಲಿ ಟ್ರೇಡ್ ಆಗುತ್ತಿರುತ್ತದೆ ಅಂತಹ ಷೇರುಗಳನ್ನ ಪೆನ್ನಿ ಸ್ಟಾಕ್ ಎಂದು ಕರೆಯುವುದು ವಾಡಿಕೆ. ಹೆಸರಿಗೆ ಒಂದು ಡಾಲರ್ ಆದರೂ ಐದು ಡಾಲರ್ ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ ಷೇರುಗಳನ್ನ ಕೂಡ ಇದೆ ವರ್ಗಿಕರ್ಣದಲ್ಲಿ ಪರಿಗಣಿಸಲಾಗುತ್ತದೆ.
ಪೆನ್ನಿ ಸ್ಟಾಕ್ ಎಂದರೇನು?
ಮೇಲೆ ಹೇಳಿದಂತೆ ಒಂದು ಷೇರಿನ ಬೆಲೆ ಅತ್ಯಂತ ಕಡಿಮೆ ಇದ್ದರೆ ಅದನ್ನ ಪೆನ್ನಿ ಸ್ಟಾಕ್ ಎನ್ನುತ್ತಾರೆ , ಆದರೆ ಇದಿಷ್ಟೇ ಅಲ್ಲದೆ ಅತ್ಯಂತ ಕಡಿಮೆ ಮಾರ್ಕೆಟ್ ಕ್ಯಾಪಿಟಲಿಸಷನ್ ಹೊಂದಿದ್ದು ಅತ್ಯಂತ ಕಡಿಮೆ ಲಿಕ್ವಿಡಿಟಿ ಕೂಡ ಹೊಂದಿರುತ್ತದೆ. ಭಾರತೀಯ ಸನ್ನಿವೇಶದಲ್ಲಿ ಹತ್ತು ರೂಪಾಯಿ ಅಥವಾ ಅದ್ದಕಿಂತ ಕಡಿಮೆಬೆಲೆಯಲ್ಲಿ ಟ್ರೇಡ್ ಆಗುತ್ತಿರುವ ಎಲ್ಲಾ ಷೇರುಗಳನ್ನ ಪೆನ್ನಿ ಸ್ಟಾಕ್ಸ್ ಎಂದು ಕರೆಯಬಹುದು. ಇಲ್ಲಿ ಗಮನಿಸಿ ಬೇಕಾದ ಅಂಶವೆಂದರೆ ಇದನ್ನ ಒಮ್ಮೆ ಕೊಂಡರೆ ಮತ್ತೆ ಮಾರಾಟ ಮಾಡುವುದು ಸ್ವಲ್ಪ ಕಷ್ಟ. ಮತ್ತೆ ಯಾರಾದರೂ ಪೆನ್ನಿ ಸ್ಟಾಕ್ ನಲ್ಲಿ ಹೂಡಿಕೆ ಮಾಡುವ ಮನಸ್ಥಿತಿ ಉಳ್ಳವರು ಬರುವ ತನಕ ಇದನ್ನ ಇಟ್ಟು ಕೊಳ್ಳಬೇಕಾಗುತ್ತದೆ.
ಪೆನ್ನಿ ಸ್ಟಾಕ್ ಹೂಡಿಕೆಯಲ್ಲಿ ಲಾಭ ಗಳಿಸಬಹುದೇ?
ಈ ಪ್ರಶ್ನೆಗೆ ಉತ್ತರ ಸರಳವಾಗಿ ಹೇಳಬೇಕೆಂದರೆ ಹೌದು ! ಇದಕ್ಕೆ ಕಾರಣ ಇದರ ಮೌಲ್ಯ ಅತ್ಯಂತ ಕಡಿಮೆ ಇರುವುದರಿಂದ ದೊಡ್ಡ ಶಾರ್ಕ್ ಹೂಡಿಕೆದಾರರು ಇಲ್ಲಿ ಬರುವುದಿಲ್ಲ. ಯಾವಾಗ ದೊಡ್ಡ ಹೂಡಿಕೆದಾರರು ಇರುವುದಿಲ್ಲ ಆಗ ಮೌಲ್ಯದ ಏರಿಳಿತಗಳ ಆಟ ಅಂದರೆ ಮ್ಯಾನಿಪುಲೇಷನ್ ಕಡಿಮೆ ಇರುತ್ತದೆ. ಮಾರುಕಟ್ಟೆಯ ಸಹಜ ಓಟಕ್ಕೆ ಸರಿಯಾಗಿ ಬೆಲೆಯಲ್ಲಿ ಅಥವಾ ಮೌಲ್ಯದಲ್ಲಿ ಹೆಚ್ಚು ಅಥವಾ ಕಡಿಮೆಯಾಗುತ್ತದೆ. ಆತಂರಿಕವಾಗಿ ಅಥವಾ ಬೇರೆ ಹೊರಗಿನ ಶಕ್ತಿಯ ಪ್ರೇರಣೆಯಿಂದ ಬೆಲೆಯಲ್ಲಿ ಏರಿಳಿತ ಉಂಟಾಗುವುದು ಕಡಿಮೆ. ಈ ಕಾರಣದಿಂದ ಹಲವು ಹೂಡಿಕೆದಾರರು ಇದರಲ್ಲಿ ಆಸಕ್ತಿ ವಹಿಸುತ್ತಾರೆ. ಅಲ್ಲದೆ ಇದು ಕೆಲವೊಮ್ಮೆ ಬೇಡಿಕೆಯನ್ನ ಪಡೆದುಕೊಳ್ಳುತ್ತವೆ. ಹೀಗಾಗಿ ಹೆಚ್ಚು ಏರಿಳಿತ ಬಯಸದವರು ಮತ್ತು ಹೆಚ್ಚು ಅಪಾಯವನ್ನ ಬಯಸವರು ಕೂಡ , ಅಳೆದು ತೂಗಿ ಇಲ್ಲಿ ಹೂಡಿಕೆ ಮಾಡಿ ಹಣವನ್ನ ಗಳಿಸಬಹುದು. ಆದರೂ ಕೆಲವೊಮ್ಮೆ ಸಾಮಾನ್ಯ ಷೇರುಗಳಿಗಿಂತ ಹೆಚ್ಚು ಏರಿಳಿತಗಳನ್ನ ಕೂಡ ಕಾಣುತ್ತದೆ. ಹಣವನ್ನ ಕಳೆದುಕೊಳ್ಳುವ ಸಂಭವ ಕೂಡ ಇರುತ್ತದೆ. ಇಂತಹ ಷೇರುಗಳನ್ನ ಗುರುತಿಸುವುದು ಮತ್ತು ಅದರಲ್ಲಿ ಹೂಡಿಕೆಮಾಡುವುದು ಕೂಡ ಟೆಕ್ನಿಕಲ್ ಸ್ಕಿಲ್ ಬಯಸುತ್ತದೆ. ಹೀಗಾಗಿ ಇಲ್ಲಿ ಹೂಡಿಕೆ ಮಾಡುವ ಮುನ್ನಾ ಕೂಡ ಒಂದಷ್ಟು ಕಲಿಕೆ ಮುಖ್ಯವಾಗುತ್ತದೆ.
ಟೆಕ್ನಿಕಲಿ ಷೇರು ಮಾರುಕಟ್ಟೆಯಲ್ಲಿ ನೊಂದಾಯಿತವಾಗಿರುವ ಯಾವುದೇ ಕಂಪನಿಯ ಷೇರನ್ನ ಪೆನ್ನಿ ಸ್ಟಾಕ್ ಎಂದು ಕರೆಯಲು ಸಾಧ್ಯವಿಲ್ಲ. ಉದಾಹರಣೆಗೆ ಒಂದು ದೊಡ್ಡ ಮತ್ತು ಹೆಸರುಳ್ಳ ಸಂಸ್ಥೆ ಯಾವುದಾರೊಂದು ಕಾರಣಕ್ಕೆ ಕುಸಿತಕ್ಕೆ ಒಳಗಾಗಿ ಅದರ ಷೇರಿನ ಮೌಲ್ಯ ಹತ್ತು ರೂಪಾಯಿಗಿಂತ ಕಡಿಮೆಯಾದರೆ ಅದನ್ನ ಪೆನ್ನಿ ಸ್ಟಾಕ್ ಎನ್ನಲು ಬರುವುದಿಲ್ಲ.
ಪೆನ್ನಿ ಸ್ಟಾಕುಗಳಲ್ಲಿ ಕೂಡ ಹಲವಾರು ವಿಧಗಳಿವೆ. ಪೆನ್ನಿ ಸ್ಟಾಕ್ ಎಂದ ತಕ್ಷಣ ಇದು ತಕ್ಷಣ ಪ್ರಯೋನಜಕ್ಕೆ ಬಾರದ ಸ್ಟಾಕ್ ಎನ್ನುವುದು ಸತ್ಯ. ಅದರಲ್ಲೂ ವೇಗವಾಗಿ ಬಿಕರಿಯಾಗಬಲ್ಲ ಸ್ಟಾಕ್ಗಳು ಇರುತ್ತವೆ. ಕೆಲವೊಂದು ಬಹಳ ಸಮಯ ಬೇಡುತ್ತವೆ. ಹೀಗಾಗಿ ಇವುಗಳ ಬಗ್ಗೆ ತಿಳುವಳಿಕೆ ಇಲ್ಲದೆ ಒಮ್ಮೆಲೇ ಈ ಸ್ಟಾಕುಗಳ ಖರೀದಿಗೆ ಧುಮುಕುವುದು ಕೂಡ ಸರಿಯಲ್ಲ.
ಕೊನೆಮಾತು: ಷೇರು ಮಾರುಕಟ್ಟೆ ಎನ್ನುವುದು ಮುಖ್ಯವಾಗಿ ನಿಂತಿರುವುದು ಲಾಭ ಮತ್ತು ಹೂಡಿಕೆದಾರರ ಸೆಂಟಿಮೆಂಟಿನ ಮೇಲೆ. ಅಲ್ಲದೆ ಷೇರು ಮಾರುಕಟ್ಟೆಯನ್ನ 90 ಪ್ರತಿಶತ ಆವರಿಸಿಕೊಂಡಿರುವ ಸಂಸ್ಥೆಗಳು ದೇಶದ 90 ಪ್ರತಿಶತ ಪ್ರತಿನಿಧಿತ್ವವನ್ನ ಹೊಂದಿರುವುದಿಲ್ಲ. ಹೀಗಾಗಿ ಭಾರತ ಎಂದಲ್ಲ ದೇಶ ಯಾವುದೇ ಇರಲಿ, ಆ ದೇಶದ ಅಭಿವೃದ್ದಿಯನ್ನ ಅಥವಾ ಆರ್ಥಿಕ ಭದ್ರತೆ ಅಥವಾ ಏರುಗತಿಯನ್ನ ಷೇರುಮಾರುಕಟ್ಟೆಯೊಂದಿಗೆ ತಳಕು ಹಾಕಿ ಹೊಗಳುವಂತಿಲ್ಲ ಅಥವಾ ತೆಗಳುವಂತಿಲ್ಲ. ದೇಶದಲ್ಲಿ ಕಾಣುವ ಹಲವಾರು ಅಭಿವೃದ್ಧಿ ಮಾನದಂಡಗಳಲ್ಲಿ ಷೇರು ಮಾರುಕಟ್ಟೆಯೂ ಒಂದೇ ಹೊರತು ಅದೇ ಎಲ್ಲವೂ ಅಲ್ಲ.
ಹೀಗಾಗಿ ಹೆಚ್ಚು ಜಾಗ್ರತೆ , ಒಂದಷ್ಟು ಅಧ್ಯಯನ , ಸಾಮಾನ್ಯಜ್ಞಾನ ಜೊತೆಗಿಟ್ಟು ಕೊಂಡು ನಡೆದರೆ ಓಟ ಯಾವುದಾದರೂ ಇರಲಿ ಗೆಲುವು ನಮ್ಮದಾಗಿರುತ್ತದೆ. ಇಲ್ಲವೇ ಹಣಬರಹವನ್ನ, ವಿಧಿಯನ್ನ, ಅದೃಷ್ಟವನ್ನ ಹಳಿಯುತ್ತಾ ಕೋರಬೇಕಾಗುತ್ತದೆ. ಹೀಗಾಗಿ ಸದಾ ಎಚ್ಚರವಾಗಿರುವುದು ಎಲ್ಲಾ ತರಹದಲ್ಲೂ ಒಳ್ಳೆಯದು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com