
ಎಲ್ಐಸಿ ಐಪಿಓ (ಸಾಂದರ್ಭಿಕ ಚಿತ್ರ)
ಇವತ್ತಿನ ದಿನದಲ್ಲಿ ಬಹಳಷ್ಟು ಜನರಲ್ಲಿ ಪ್ರೈಮರಿ ಮಾರ್ಕೆಟ್ನಲ್ಲಿ ಕಡಿಮೆ ಅಪಾಯ ಎನ್ನುವ ಭಾವನೆಯಿದೆ ಅದು ತಪ್ಪು. ಸೆಕೆಂಡರಿ ಮಾರ್ಕೆಟ್ನಲ್ಲಿ ಇರುವಷ್ಟೇ ಅಥವಾ ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಅಪಾಯ ಪ್ರೈಮರಿ ಮಾರುಕಟ್ಟೆಯಲ್ಲಿದೆ. ಏಕೆಂದರೆ ಪ್ರಾಥಮಿಕ ಮಾರುಕಟ್ಟೆ ಅಥವಾ ಪ್ರೈಮರಿ ಮಾರ್ಕೆಟ್ ನಲ್ಲಿ ಸಂಸ್ಥೆಯ ಬಗ್ಗೆ ನಮಗೆ ಬೇಕಾದ ಎಲ್ಲಾ ಮಾಹಿತಿಗಳೂ ಸಿಕ್ಕುವುದಿಲ್ಲ. ಹೀಗಾಗಿ ಇಲ್ಲಿ ಷೇರು ಕೊಳ್ಳುವ ಮುನ್ನ ಬಹಳ ಎಚ್ಚರಿಕೆಯನ್ನ ವಹಿಸಬೇಕಾಗುತ್ತದೆ. ಇಂದಿನಿಂದ ಅಂದರೆ 04-೦5-2022 ರಿಂದ ಎಲ್ ಐಸಿ ಐಪಿಒ ಶುರುವಾಗಿದೆ. ಎಲ್ ಐಸಿ ಬಗ್ಗೆ ಬೇಕಾದ ಎಲ್ಲಾ ಮಾಹಿತಿ ಹೇರಳವಾಗಿ ಲಭ್ಯವಿದೆ, ಹೀಗಾಗಿ ಇಲ್ಲಿ ಹೂಡಿಕೆಯನ್ನ ಮಾಡಲು ಅಡ್ಡಿಯಿಲ್ಲ. ಹಾಗೆಯೇ ಕೆಳಗೆ ನಮೂದಿಸಿರುವ ಕೆಲವು ವಿಧದ ಷೇರುಗಳಲ್ಲಿ ಕೂಡ ಹೂಡಿಕೆ ಮಾಡಬಹುದು.
ಬ್ಲೂ ಚಿಪ್ ಸ್ಟಾಕ್/ಷೇರುಗಳು:
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರಿಗೆ ಈ ಪದ ಹೊಸದೇನಲ್ಲ. ಸಾಮಾನ್ಯವಾಗಿ ಎಲ್ಲರೂ ಒಂದಲ್ಲ ಒಂದು ಬಾರಿ ಬ್ಲೂ ಚಿಪ್, ಬ್ಲೂ ಚಿಪ್ ಸ್ಟಾಕ್ಸ್ ಎಂದು ಹೇಳುವುದನ್ನ ಕೇಳಿರುತ್ತೀರಿ. ಸಾಮಾನ್ಯವಾಗಿ ಇದೊಂದು ಒಳ್ಳೆಯ ಷೇರು ಕೊಂಡುಕೊಳ್ಳಲು ಲಾಯಕ್ಕು ಎನ್ನುವುದು ಬಿಟ್ಟರೆ ಹೆಚ್ಚಿನ ವಿಷಯ ಕೂಡ ತಿಳಿದಿರುವುದಿಲ್ಲ. ಬಾಯಿಂದ ಬಾಯಿಗೆ ಅದು ಬ್ಲೂ ಚಿಪ್ ಎಂದು ಹೇಳುವುದು ಕೂಡ ಸಾಮಾನ್ಯ. ಏನಿದು ಬ್ಲೂ ಚಿಪ್ ಷೇರು? ಗಮನಿಸಿ ಯಾವುದೇ ಒಂದು ಸಂಸ್ಥೆ ಬಹಳ ಸಮಯದ ವರೆಗೆ ಅಂದರೆ ಕನಿಷ್ಠ ಹತ್ತು ವರ್ಷಗಳ ಕಾಲ ಹೂಡಿಕೆಯ ಮೇಲೆ ಉತ್ತಮ ಲಾಭವನ್ನ ತಂದು ಕೊಟ್ಟಿರಬೇಕು, ವರ್ಷದಿಂದ ವರ್ಷಕ್ಕೆ ಡಿವಿಡೆಂಡ್ ಹೆಚ್ಚುತ್ತಾ ಹೋಗುತ್ತಿರಬೇಕು.
ಅದು ಸಮಾಜದಲ್ಲಿ ಪ್ರಸುತವಾಗಿರಬೇಕು, ಕೆಲವೊಮ್ಮೆ ಬಹಳ ಪ್ರಸ್ತುತವಲ್ಲದಿದ್ದರೂ ಅದರ ಬ್ಯಾಲೆನ್ಸ್ ಶೀಟ್ ಬಹಳ ಚೆನ್ನಾಗಿದ್ದು ಹೂಡಿಕೆಯ ಮೇಲಿನ ಲಾಭ ಹೆಚ್ಚಾಗಿದ್ದರೆ, ಅಂತಹ ಸಂಸ್ಥೆಯ ಷೇರುಗಳನ್ನ ಬ್ಲೂ ಚಿಪ್ ಷೇರು ಎನ್ನುತ್ತಾರೆ. ಒಟ್ಟಿನಲ್ಲಿ ಹೆಚ್ಚು ಲಾಭ ಮತ್ತು ಕಡಿಮೆ ರಿಸ್ಕ್ ಇರುವ ಹೂಡಿಕೆಯನ್ನ ಈ ಸಾಲಿಗೆ ಸೇರಿಸಬಹುದು. ಹೀಗೆ ಇಂತಹ ಹತ್ತಾರು ಸಂಸ್ಥೆಗಳ ಷೇರನ್ನ ಕುರಿತು ಹೇಳುವಾಗ ಬ್ಲೂ ಚಿಪ್ ಸ್ಟಾಕ್ಸ್ ಎಂದು ಹೇಳುತ್ತಾರೆ. ಒಂದು ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಪಡೆದ ಸರ್ಟಿಫಿಕೇಟ್ ಅನ್ನು ಷೇರು ಎನ್ನುತ್ತಾರೆ. ಹಲವಾರು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಪಡೆದ ಷೇರುಗಳನ್ನ ಒಟ್ಟಾಗಿ ಸ್ಟಾಕ್ ಎಂದು ಕರೆಯುತ್ತಾರೆ. ಅಂದರೆ ಸ್ಟಾಕ್ ಅನ್ನುವುದು ತುಂಬಾ ಸಾಮಾನ್ಯ ಪದ. ಷೇರು ಎನ್ನುವುದು ನಿಖರವಾದ ಸಂಸ್ಥೆಗೆ ಸೇರಿದ್ದು. ಬ್ಲೂ ಚಿಪ್ ಗಳ ಮೇಲಿನ ಹೂಡಿಕೆ ಎಲ್ಲಾ ತರಹದಲ್ಲೂ ಉತ್ತಮ. ಆದರೆ ಇದಾಗಲೇ ಮಾರುಕಟ್ಟೆಯಲ್ಲಿ ಗೆದ್ದ ಸಂಸ್ಥೆಯಾಗಿರುವುದರಿಂದ ಇದರ ಷೇರುಗಳ ಬೆಲೆ ಹೆಚ್ಚಾಗಿರುತ್ತದೆ. ಹೀಗಾಗಿ ಇವುಗಳನ್ನ ಕೊಳ್ಳಲು ಹೆಚ್ಚಿನ ಹಣವನ್ನ ವ್ಯಯಿಸಬೇಕಾಗುತ್ತದೆ.
ವ್ಯಾಲ್ಯೂ ಷೇರುಗಳು/ಸ್ಟಾಕ್ಸ್:
ಯಾವ ಸಂಸ್ಥೆಯ ಷೇರಿನ ಬುಕ್ ವ್ಯಾಲ್ಯೂ, ಮಾರ್ಕೆಟ್ ವ್ಯಾಲ್ಯೂ ಗಿಂತ ಹೆಚ್ಚಾಗಿರುತ್ತದೆ ಅಂತಹ ಷೇರುಗಳನ್ನ ವ್ಯಾಲ್ಯೂ ಸ್ಟಾಕ್ಸ್ ಎನ್ನಬಹುದು. ಒಂದು ಸಣ್ಣ ಉದಾಹರಣೆ ಇದನ್ನ ಅರಿತುಕೊಳ್ಳಲು ಸಹಾಯ ಮಾಡುತ್ತದೆ. ರಾಮ ಎನ್ನುವ ಸಂಸ್ಥೆಯ ಷೇರಿನ ಮಾರುಕಟ್ಟೆ ಮೌಲ್ಯ ನೂರು ರೂಪಾಯಿ ಎಂದುಕೊಳ್ಳಿ. ಅಂದರೆ ನೀವು ರಾಮ ಮಾರುಕಟ್ಟೆಯ ಷೇರನ್ನ ಖರೀದಿಸಲು ಮಾರುಕಟ್ಟೆಗೆ ಹೋದರೆ ಅಲ್ಲಿ ನೂರು ರುಪಾಯಿಗೆ ಒಂದು ಷೇರು ಲಭ್ಯವಿರುತ್ತದೆ. ಆದರೆ ಅದೇ ಷೇರಿನ ಮೌಲ್ಯ ಸಂಸ್ಥೆಯ ಪುಸ್ತಕದಲ್ಲಿ ನೂರಿಪ್ಪತೈದು ಅಥವಾ ನೂರೈವತ್ತು ಇದ್ದರೆ ಅಂತಹ ಷೇರನ್ನ ವ್ಯಾಲ್ಯೂ ಷೇರು ಎನ್ನಾಲಾಗುತ್ತದೆ. ಸರಳವಾಗಿ ಹೇಳಬೇಕಂದರೆ ನಾವು ಕೊಟ್ಟ ಹಣಕ್ಕಿಂತ ಹೆಚ್ಚಿನ ಮೌಲ್ಯದ ಷೇರು ಅದಾಗಿದ್ದರೆ ಅಂತಹ ಷೇರುಗಳನ್ನ ವ್ಯಾಲ್ಯೂ ಸ್ಟಾಕ್ಸ್ ಅಥವಾ ಮೌಲ್ಯಯುತ ಷೇರುಗಳು ಎನ್ನುತ್ತಾರೆ.
ಗಮನಿಸಿ ನೋಡಿ ಯಾವಾಗಲೂ ಯಾವುದೇ ಸಂಸ್ಥೆಯ ಷೇರಿನ ಮಾರುಕಟ್ಟೆ ಮೌಲ್ಯ ಹೆಚ್ಚಾಗಿರುತ್ತದೆ ಮತ್ತು ಬುಕ್ ವ್ಯಾಲ್ಯೂ ಕಡಿಮೆಯಿರುತ್ತದೆ. ಇದಕ್ಕೆ ವಿರುದ್ಧವಾಗಿ ಇರುವ ಷೇರುಗಳನ್ನ ಹುಡುಕುವುದು ಮರಳುಗಾಡಿನಲ್ಲಿ ಸೂಜಿ ಹುಡುಕಿದಂತೆ. ಇಂತಹ ಷೇರುಗಳು ಸಿಕ್ಕರೆ ಅವನ್ನ ತಕ್ಷಣ ಕೊಳ್ಳುವುದು ಉತ್ತಮ.
ಗ್ರೋಥ್ ಷೇರುಗಳು, ಅಥವಾ ಗ್ರೋಥ್ ಸ್ಟಾಕ್ಸ್:
ನಿರ್ದಿಷ್ಟ ವಲಯದಲ್ಲಿ ಒಂದಲ್ಲ ಹತ್ತಾರು ಸಂಸ್ಥೆಗಳು ಕಾರ್ಯ ನಿರ್ವಹಿಸಿರುತ್ತವೆ. ಹೀಗಾಗಿ ಆ ವಲಯದಲ್ಲಿ ಇಂಡಸ್ಟ್ರಿ ಅವೆರಜ್ ಎನ್ನುವ ಬೆಳವಣಿಗೆಯನ್ನ ನಮೂದಿಸಿಯಲಾಗುತ್ತದೆ. ಅಂದ ಮಾತ್ರಕ್ಕೆ ಎಲ್ಲವೂ ಆ ನಿಗದಿತ ಬೆಳವಣಿಗೆ ಪ್ರತಿಶತದಲ್ಲೇ ಕಾರ್ಯ ನಿರ್ವಹಿಸುತ್ತವೆ ಅಥವಾ ನಿರ್ವಹಿಸಬೇಕು ಎನ್ನುವ ಕಡ್ಡಾಯವೇನೂ ಇಲ್ಲ. ಕೆಲವೊಂದು ಸಂಸ್ಥೆಗಳು ಇಂಡಸ್ಟ್ರಿ ಸ್ಟ್ಯಾಂಡರ್ಡ್ ಮೀರಿ ಬೆಳವಣಿಗೆಯನ್ನ ದಾಖಲಿಸುತ್ತವೆ. ಅಂತಹ ಸಂಸ್ಥೆಗಳ ಷೇರುಗಳನ್ನ ಗ್ರೋಥ್ ಷೇರುಗಳು ಎಂದು ಕರೆಯಲಾಗುತ್ತದೆ.
ಉದಾಹರಣೆ ನೋಡೋಣ. ಆಟೋಮೊಬೈಲ್ ವಲಯದಲ್ಲಿ ಸಾಧಾರಣವಾಗಿ ಈ ವರ್ಷ 5 ಪ್ರತಿಶತ ಬೆಳವಣಿಗೆ ಆಗಲಿದೆ ಎಂದು ತಜ್ಞರು ಹೇಳಿದ್ದರೆ, ಆಟೋಮೊಬೈಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನೇಕ ಸಂಸ್ಥೆಗಳಲ್ಲಿ ಕೆಲವು ನಾಲ್ಕು ಪ್ರತಿಶತ , ಕೆಲವು ಐದು ಕೆಲವು ಮೂರು ಪ್ರತಿಶತ ಬೆಳವಣಿಗೆ ಕಾಣಬಹುದು , ಹಾಗೆಯೇ ಕೆಲವೊಂದು ಸಂಸ್ಥೆಗಳು ಎಂಟು, ಹತ್ತು, ಹನ್ನೆರಡು ಪ್ರತಿಶತ ಬೆಳವಣಿಗೆಯನ್ನ ಕೂಡ ಕಾಣಬಹುದು, ಹೀಗೆ ಹೆಚ್ಚು ಬೆಳವಣಿಗೆ ಕಾಣುವ ಷೇರು ಗಳನ್ನ ಗ್ರೋಥ್ ಷೇರುಗಳು ಎನ್ನುತ್ತಾರೆ. ಇದರ ಜೊತೆಗೆ ಇನ್ನೊಂದು ಅಂಶವನ್ನ ಸಹ ನಾವು ಗಮನಿಸಬೇಕು. ಕೆಲವೊಂದು ನವೋದ್ದಿಮೆಗಳು ಅತ್ಯಂತ ವೇಗವಾಗಿ ಮೌಲ್ಯವನ್ನ ವೃದ್ಧಿಸಿಕೊಂಡು ಹೋಗುತ್ತವೆ. ತನ್ನ ವಲಯದ ಸಮಕಾಲೀನ ನವೋದ್ದಿಮೆಗಳಿಗಿಂತ ಹೀಗೆ ವೇಗವಾಗಿ ಬೆಳವಣಿಗೆಯನ್ನ ಕಾಣುವ ಸಂಸ್ಥೆಯ ಷೇರುಗಳನ್ನ ಕೂಡ ಗ್ರೋಥ್ ಷೇರುಗಳು ಎನ್ನಬಹುದು.
ಮಾರುಕಟ್ಟೆಯಲ್ಲಿ ಅದಾಗಲೇ ಸ್ಥಿರವಾಗಿ ನೆಲೆಯೂರಿರುವ ಸಂಸ್ಥೆಗಳ ಬೆಳವಣಿಗೆಯ ಪ್ರತಿಶತವನ್ನ ಗುರುತಿಸುವುದು ಅಷ್ಟೊಂದು ಕಷ್ಟದ ಕೆಲಸವಲ್ಲ, ಹೀಗಾಗಿ ಇಂತಹ ಷೇರುಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಜೊತೆಗೆ ಅವುಗಳ ಖರೀದಿ ಬೆಲೆ ಕೂಡ ಉತ್ತರಾಭಿಮುಖವಾಗಿರುತ್ತದೆ. ಆದರೆ ಒಂದು ನವೋದ್ಧಿಮೆ ಹೇಗೆ ಬೆಳವಣಿಗೆ ಕಾಣುತ್ತದೆ ಎಂದು ಹೊಸತರಲ್ಲಿ ಅಥವಾ ಪ್ರಾರಂಭದ ಹಂತದಲ್ಲಿ ಗುರುತಿಸಿವುದು ಕಷ್ಟದ ಕೆಲಸ. ಆದರೆ ಹೀಗೆ ಗುರುತಿಸಿ ಅಲ್ಲಿ ಹೂಡಿಕೆ ಮಾಡಬೇಕು, ಏಕೆಂದರೆ ಖರೀದಿ ಬೆಲೆ ಬಹಳ ಕಡಿಮೆಯಿರುತ್ತದೆ. ಮತ್ತು ಬೆಳವಣಿಗೆ ಶೀಘ್ರವಾಗಿ ಆಗುವುದರಿಂದ ಹೆಚ್ಚು ಹಣವನ್ನ ಮಾರುಕಟ್ಟೆಯಲ್ಲಿ ಗಳಿಸಬಹುದು.
ಆದಾಯ ನೀಡುವ ಷೇರುಗಳು:
ಕೆಲವೊಂದು ಸಂಸ್ಥೆಯ ಷೇರುಗಳು ಬ್ಯಾಂಕಿನಲ್ಲಿ ಹಣ ಇಟ್ಟಾಗ ಸಿಗುವ ಬಡ್ಡಿಯಂತೆ, ಕಾಲಕಾಲಕ್ಕೆ ಡಿವಿಡೆಂಡ್ ರೂಪದಲ್ಲಿ ತಮ್ಮ ಲಾಭಂಶವನ್ನ ಷೇರುದಾರರಿಗೆ ಹಂಚಿ ಬಿಡುತ್ತದೆ. ಹೀಗೆ ಆದಾಯದ ಮೇಲೆ ಆಸೆ ಉಳ್ಳವರು ಇಂತಹ ಸಂಸ್ಥೆಗಳನ್ನ ಹುಡುಕಿ ಹೂಡಿಕೆ ಮಾಡುವುದು ಉತ್ತಮ. ಆದಾಯವನ್ನ ನಿಯಮಿತ ಕಾಲಾವಧಿಯಲ್ಲಿ ಹಂಚುವ ಕಾರಣ ಬಹುತೇಕ ವೇಳೆ ಇಂತಹ ಷೇರುಗಳು ಅಭಿವೃದ್ದಿಯನ್ನ ಹೊಂದುವುದಿಲ್ಲ, ಅಂದರೆ ಅವುಗಳ ಮೌಲ್ಯ ವೃದ್ಧಿಯಾಗುವುದಿಲ್ಲ. ಬ್ಯಾಂಕಿನಲ್ಲಿ ಇಟ್ಟ ಠೇವಣಿ ಹೇಗೆ ಹೆಚ್ಚಾಗುವುದಿಲ್ಲ ಥೇಟ್ ಹಾಗೆಯೇ ಇಲ್ಲೂ ಇರುತ್ತದೆ. ಹೀಗಾಗಿ ಮೂಲ ಬಂಡವಾಳದಲ್ಲಿ ಕೂಡ ಬೆಳವಣಿಗೆ ಬಯಸುವ ಜನರು ಇಲ್ಲಿ ಹೂಡಿಕೆ ಮಾಡುವುದಿಲ್ಲ.
ಗಮನಿಸಿ ಬಹಳಷ್ಟು ಸಂಸ್ಥೆಗಳು ನಿಯಮಿತವಾಗಿ ಲಾಭವನ್ನ ಡಿವಿಡೆಂಡ್ ರೂಪದಲ್ಲಿ ಕೂಡ ನೀಡುತ್ತವೆ, ಜೊತೆಗೆ ಅವುಗಳ ಷೇರಿನ ಮೌಲ್ಯ ಕೂಡ ಹೆಚ್ಚಾಗುತ್ತದೆ. ಹೀಗೆ ಎರಡೂ ಕಡೆಯಲ್ಲೂ ಲಾಭ ತಂದು ಕೊಡುವ ಷೇರುಗಳನ್ನ ಬ್ಲೂ ಚಿಪ್ ಎನ್ನುತ್ತಾರೆ. ನಮ್ಮ ಟಿ ಸಿ ಎಸ್, ವಿ ಆರ್ ಎಲ್ ಲಾಜಿಸ್ಟಿಕ್ಸ್, ಟೆಕ್ ಮಹಿಂದ್ರಾ, ಮೈಂಡ್ ಟ್ರೀ .., ಹೀಗೆ ಇನ್ನು ಹಲವಾರು ಸಂಸ್ಥೆಗಳ ಷೇರುಗಳನ್ನ ಬ್ಲೂ ಚೀಪ್ ಅಡಿಯಲ್ಲಿ ನೀವು ಕಾಣಬಹುದು.
ಮಿಡ್ ಕ್ಯಾಪ್ ಸ್ಟಾಕ್ಸ್:
ಯಾವ ಸಂಸ್ಥೆಯ ಷೇರುಗಳು ಲಾರ್ಜ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ನಡುವಿನಲ್ಲಿ ಬರುತ್ತವೆ ಅವುಗಳನ್ನ ಮಿಡ್ ಕ್ಯಾಪ್ ಷೇರುಗಳು ಎನ್ನುತ್ತಾರೆ. ಅಂದರೆ ಯಾವ ಸಂಸ್ಥೆಯ ಮಾರ್ಕೆಟ್ ಕ್ಯಾಪಿಟಲೈಸಷನ್ ಐದು ಸಾವಿರ ಕೋಟಿಯಿಂದ ಇಪ್ಪತ್ತು ಸಾವಿರ ಕೋಟಿಯ ಪರಿಧಿಯಲ್ಲಿ ಇರುತ್ತದೆ, ಅಂತಹ ಸಂಸ್ಥೆಯ ಷೇರುಗಳನ್ನ ಮಿಡ್ ಕ್ಯಾಪ್ ಷೇರುಗಳು ಎಂದು ವರ್ಗಿಕರಿಸಲಾಗುತ್ತದೆ. 2022ರಲ್ಲಿ ಮಿಡ್ ಕ್ಯಾಪ್ ಮೇಲಿನ ಹೂಡಿಕೆ ಒಳ್ಳೆಯ ಲಾಭಂಶವನ್ನ ಖಂಡಿತ ನೀಡುತ್ತದೆ.
ಐದು ಸಾವಿರ ಕೋಟಿಗಿಂತ ಕಡಿಮೆ ಇರುವ ಸಂಸ್ಥೆಯ ಷೇರುಗಳನ್ನ ಸ್ಮಾಲ್ ಕ್ಯಾಪ್ ಎಂದೂ 20 ಸಾವಿರ ಕೋಟಿಗಿಂತ ಹೆಚ್ಚಿನ ಮಾರ್ಕೆಟ್ ಕ್ಯಾಪಿಟಲೈಸಷನ್ ಹೊಂದಿರುವ ಸಂಸ್ಥೆಯನ್ನ ಲಾರ್ಜ್ ಕ್ಯಾಪ್ ಎಂದೂ ಹೇಳಬಹುದು.
ಸಂಸ್ಥೆಯ ಒಟ್ಟು ಷೇರಿನ ಮೌಲ್ಯ ಮತ್ತು ಸಂಸ್ಥೆಯ ಭವಿಷ್ಯದ ನಿರೀಕ್ಷೆಗಳು , ಪ್ರಸ್ತುತತೆ ಇವುಗಳ ಒಟ್ಟು ಮೌಲ್ಯವನ್ನ ಮಾರ್ಕೆಟ್ ಕ್ಯಾಪಿಟಲೈಸಷನ್ ಎನ್ನುತ್ತಾರೆ. ಸಂಸ್ಥೆಯ ಇಂದಿನ ಒಟ್ಟು ಷೇರಿನ ಮೌಲ್ಯವನ್ನ ಅಳೆಯುವುದು ಸುಲಭ, ಏಕೆಂದರೆ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಯಾವ ಬೆಲೆಯನ್ನ ಕೊಟ್ಟು ಖರೀದಿಸಲು ತಯಾರಿದ್ದಾರೆ ಅದರ ಆಧಾರದ ಮೇಲೆ ಇದನ್ನ ಹೇಳಬಹುದು. ಭವಿಷ್ಯದಲ್ಲಿ ಹೂಡಿಕೆದಾರರು ಇದೆ ಷೇರಿಗೆ ಯಾವ ಬೆಲೆಯನ್ನ ಕೊಡಬಹುದು ಎನ್ನುವುದನ್ನ ನಿಖರವಾಗಿ ಹೇಳಲು ಬಾರದು, ಹೀಗಾಗಿ ಸಂಸ್ಥೆಯ ಇಂದಿನ ಮೌಲ್ಯವನ್ನ ಮುಂಬರುವ ದಿನಗಳ ಚಿಂತನೆ, ನಿರೀಕ್ಷೆ , ಪ್ರಸ್ತುತತೆ, ಕ್ಯಾಶ್ ಫ್ಲೋ ಇನ್ನಿತರ ಹಲವಾರು ವಿಷಯಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಹೀಗಾಗಿ ಮಾರ್ಕೆಟ್ ಕ್ಯಾಪಿಟಲೈಸಷನ್ ಸಂಖ್ಯೆಯನ್ನ ಪಡೆಯುವುದು ಬಹಳ ಸುಲಭವಲ್ಲ, ಮತ್ತು ಅದು ಅತ್ಯಂತ ನಿಖರ ಎನ್ನುವಂತೆಯೂ ಇಲ್ಲ. ಮಾರುಕಟ್ಟೆಯಲ್ಲಿ ಜನರ ಸೆಂಟಿಮೆಂಟ್ ಕೂಡ ಮುಖ್ಯವಾಗುತ್ತದೆ. ಹೀಗಾಗಿ ಅಳೆದು ತೂಗಿ ಹೂಡಿಕೆ ಮಾಡುವುದು ಉತ್ತಮ. ಹೀಗಿದ್ದೂ ಉತ್ತಮ ಮಿಡ್ ಕ್ಯಾಪ್ ಮೇಲಿನ ಹೂಡಿಕೆ ಎಂದಿಗೂ ಕೈ ಕೊಡುವುದಿಲ್ಲ .
ಕೊನೆ ಮಾತು: ಕಳೆದ ನಾಲ್ಕು ತಿಂಗಳಿಂದ ಎಲೈಸಿ ಐಪಿಒ ಸದ್ದು ಬಹಳ ಜೋರಾಗೆ ಕೇಳಿಸುತ್ತಿತ್ತು. ಇಂದಿಗೆ ಅದು ಕಾರ್ಯರೂಪಕ್ಕೆ ಬಂದಿದೆ. ಮೊದಲೇ ಹೇಳಿದಂತೆ ಉತ್ತಮ ಐಪಿಒ ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಅದರ ಜೊತೆಗೆ ಮೇಲೆ ಹೇಳಿದ ಗುಣಲಕ್ಷಣಗಳ ಷೇರುಗಳಲ್ಲಿ ಕೂಡ ಹೂಡಿಕೆ ಮಾಡುವುದರಿಂದ ಆದಾಯವೂ ಹೆಚ್ಚುತ್ತದೆ, ಜೊತೆಗೆ ಮೂಲ ಬಂಡವಾಳವೂ ಸುರಕ್ಷಿತವಾಗಿರುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com