
ಮೈಗ್ರೇನ್ (ಸಾಂಕೇತಿಕ ಚಿತ್ರ)
ಒಂದು ದಿನ ಸಂಜೆ ಮಹಿಳೆಯೊಬ್ಬರು ನನ್ನ ಕ್ಲಿನಿಕ್ಕಿಗೆ ಬಂದು “ಡಾಕ್ಟರ್ ಕಳೆದೆರಡು ದಿನಗಳಿಂದ ತುಂಬಾ ತಲೆನೋವು. ಯಾವ ಕೆಲಸವನ್ನೂ ಮಾಡಲು ಆಗುತ್ತಿಲ್ಲ. ಬೆಳಗ್ಗೆ ಎದ್ದ ತಕ್ಷಣ ನೋವು ಶುರುವಾದರೆ ಮಧ್ಯಾಹ್ನ ಮತ್ತು ಸಂಜೆ ಹೆಚ್ಚಾಗುತ್ತದೆ. ಈಗ ವಾಂತಿ ಕೂಡ ಆಯಿತು. ಆದ್ದರಿಂದ ಒಮ್ಮೆ ಪರೀಕ್ಷೆ ಮಾಡಿಸಿಕೊಂಡು ಹೋಗೋಣ ಎಂದು ಬಂದೆ” ಎಂದು ಹೇಳಿದರು. ಅವರನ್ನು ಪರೀಕ್ಷೆ ಮಾಡಿದಾಗ ಅವರಿಗೆ ಮೈಗ್ರೇನ್ ಸಮಸ್ಯೆ ಇರುವುದು ಕಂಡುಬಂತು.
ಮೈಗ್ರೇನ್ ಹೆಸರು ಕೇಳಿದರೆ ಯಾವುದೋ ಔಷಧಿಯ ಹೆಸರಂತೆ ತೋರುತ್ತದೆ. ಆದರೆ ನಿಜವಾಗಿ ಮೈಗ್ರೇನ್ ಗಂಭೀರ ತಲೆನೋವು. ತಲೆನೋವುಗಳಲ್ಲಿ ಹಲವು ವಿಧಗಳಿವೆ. ಕೆಲವು ಬಾರಿ ತಲೆನೋವು ಒಂದು ಬದಿ, ನಟ್ಟ ನಡುವೆ, ಕೆಲವು ಮತ್ತು ತಲೆಯ ಹಿಂಭಾಗವನ್ನೆಲ್ಲಾ ಆವರಿಸುತ್ತದೆ. ಅಪರೂಪಕ್ಕೆ ತಲೆಯ ಎರಡೂ ಬದಿಗಳನ್ನು ಸಹ ತಲೆನೋವು ಆವರಿಸುತ್ತದೆ. ಸಾಮಾನ್ಯ ತಲೆನೋವು ನೋವು ನಿವಾರಕ ಮಾತ್ರೆಗಳು ಅಥವಾ ನೋವು ಕಡಿಮೆ ಮಾಡುವಂತಹ ಸರಳ ಬಾಮುಗಳನ್ನು ಹಚ್ಚಿಕೊಳ್ಳುವ ಮೂಲಕ ಸ್ವಲ್ಪ ಹೊತ್ತಿನ ಬಳಿಕ ಕಡಿಮೆಯಾಗುತ್ತದೆ.
ಮೈಗ್ರೇನ್ ಒಂದು ನರವೈಜ್ಞಾನಿಕ ರೋಗಲಕ್ಷಣ. ದೈಹಿಕ ಗ್ರಹಿಕೆಯಲ್ಲಿ ವ್ಯತ್ಯಾಸ, ವಿಪರೀತ ತಲೆ ನೋವು, ವಾಕರಿಕೆ ಮತ್ತು ವಾಂತಿ ಇವು ಇದರ ಪ್ರಮುಖ ಲಕ್ಷಣಗಳಾಗಿವೆ.
ಸಾಮಾನ್ಯ ತಲೆನೋವಿನಂತೆಯೇ ಪ್ರಾರಂಭವಾಗುವ ಮೈಗ್ರೇನ್ ನಿಧಾನವಾಗಿ ಹೆಚ್ಚಾಗುತ್ತಾ ತಲೆಯ ನಡುವಿನಿಂದ ಕೊಂಚ ಎಡಭಾಗದಲ್ಲಿ ಅಥವಾ ಕೊಂಚ ಬಲಭಾಗದಲ್ಲಿ ಕೇಂದ್ರೀಕರಿಸಿದಂತೆ ನೋವು ಪ್ರಾರಂಭವಾಗುತ್ತದೆ. ಕೊಂಚ ಹೊತ್ತಿಗೇ ಈ ನೋವು ಎಷ್ಟು ಪ್ರಬಲವಾಗುತ್ತದೆ ಎಂದರೆ ಮೆದುಳು ಗ್ರಹಿಸುವ ದೃಷ್ಟಿ, ಶ್ರವಣ, ಯೋಚನಾಶಕ್ತಿ ಮೊದಲಾದ ಎಲ್ಲಾ ಶಕ್ತಿಗಳನ್ನು ಈ ನೋವು ಆವರಿಸಿಬಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಹಲವರಿಗೆ ಸಾಮಾನ್ಯವಾಗಿಬಿಟ್ಟಿರುವುದನ್ನು ನಾವು ಗಮನಿಸುತ್ತಿದ್ದೇವೆ. ಮೈಗ್ರೇನ್ ತಲೆನೋವು ಏಕಪಾಶ್ರ್ವೀಯವಾಗಿ ಮಿಡಿಯುತ್ತದೆ ಹಾಗೂ ಇದು 4ರಿಂದ 72 ಗಂಟೆಗಳವರೆಗೆ ಇರುತ್ತದೆ. ಈ ತಲೆನೋವಿಗೆ ಕಾರಣ ಸರಿಯಾಗಿ ಇನ್ನೂ ತಿಳಿದಿಲ್ಲ.
ಮೈಗ್ರೇನ್ ಯಾವ ಸಂದರ್ಭಗಳಲ್ಲಿ ಬರಬಹುದು:
ಸಾಮಾನ್ಯವಾಗಿ ಮಹಿಳೆಯರಲ್ಲಿ ಮೈಗ್ರೇನ್ ಹೆಚ್ಚಾಗಿ ಕಂಡುಬರುತ್ತದೆ. ಕೆಲವರಿಗೆ ಮುಟ್ಟಿಗೆ ಮುಂಚೆ ಕಾಣಿಸಿಕೊಂಡು ಸಾಕಷ್ಟು ತೊಂದರೆ ಕೊಡುತ್ತದೆ. ಕೆಲವರಿಗೆ ಬೆಳಗ್ಗೆಯಿಂದ ಆರಂಭವಾದ ನೋವು ಮಧ್ಯಾಹ್ನ ಮತ್ತು ಸಂಜೆಗೆ ಉಲ್ಬಣಿಸುತ್ತದೆ. ಬಿಸಿಲಿಗೆ ಹೋದರೆ, ಸರಿಯಾದ ಸಮಯಕ್ಕೆ ಆಹಾರ ಸೇವಿಸದೇ ಇದ್ದರೆ, ಸರಿಯಾಗಿ ನಿದ್ರೆ ಮಾಡದಿದ್ದರೆ ಮತ್ತು ಮಾನಸಿಕ ಒತ್ತಡ/ಕಾಯಿಲೆಗಳು ಇದ್ದರೆ ಮೈಗ್ರೇನ್ ಬರುವ ಸಂಭವವಿದೆ. ಕೆಲವರಿಗೆ ಬಹಳ ಹೊತ್ತು ಟಿವಿ ನೋಡಿದಾಗ ಮತ್ತು ಫ್ಯಾನ್ ಗಾಳಿಯ ಕೆಳಗೆ ಸುಮಾರು ಹೊತ್ತು ಇದ್ದರೆ ಈ ತಲೆನೋವು ಬರಬಹುದು. ಹೀಗಾಗಿ ಮೈಗ್ರೇನ್ ಯಾವ ಕಾರಣದಿಂದ ಬಂದಿದೆ ಎಂದು ಅರಿತುಕೊಂಡು ಚಿಕಿತ್ಸೆ ಮಾಡುವುದು ಒಳ್ಳೆಯದು.
ಮೈಗ್ರೇನ್ ತಲೆನೋವು ಬಂದಾಕ್ಷಣ ಏನು ಮಾಡಬೇಕು?
ತಲೆನೋವು ಬಂದ ತಕ್ಷಣವೇ ಕುತ್ತಿಗೆ ಮತ್ತು ಭುಜಗಳ ಭಾಗಕ್ಕೆ ಕೊಂಚ ಮಸಾಜ್ ಮಾಡಿಸಿ ಕೊಳ್ಳುವುದರಿಂದಲೂ ಈ ನೋವು ಉಲ್ಬಣಗೊಳ್ಳದಂತೆ ತಡೆಯಬಹುದು. ಮಸಾಜಿಗಾಗಿ ಪುದಿನಾ ತೈಲ ಅಥವಾ ರೋಸ್ಮರಿ ತೈಲವನ್ನು ಬಳಸಬಹುದು. ಪರಿಣಿತರಿಂದ ತಲೆಯ ಮಸಾಜ್ ಮಾಡಿಸಿಕೊಳ್ಳುವ ಮೂಲಕವೂ ಈ ನೋವಿನಿಂದ ಕೊಂಚ ಶಮನ ಪಡೆಯಬಹುದು. ಶ್ರೀಗಂಧವನ್ನು ತೇದು ತಲೆಗೆ ಪಟ್ಟಿ ಮಾಡಿ ಹಚ್ಚಿಕೊಂಡರೆ ನೋವು ಉಪಶಮನವಾಗುತ್ತದೆ.
ಮೈಗ್ರೇನ್ ತಲೆನೋವಿಗೆ ಆಯುರ್ವೇದ ಚಿಕಿತ್ಸೆ:
ಮೈಗ್ರೇನ್ ತಲೆನೋವನ್ನು ದೂರವಾಗಿಸಲು ಒಂದು ಚಿಟಿಕೆ ಲವಂಗದ ಪುಡಿ ಹಾಗೂ ಒಂದು ಚಿಟಿಕೆ ಉಪ್ಪನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಪ್ರತಿನಿತ್ಯ ಸೇವಿಸಬೇಕು. ಜೊತೆಗೆ ಇದಕ್ಕೆ ಶುಂಠಿ ಕಾಫಿ ಅತ್ಯಂತ ಪ್ರಭಾವಶಾಲಿ ಮನೆ ಮದ್ದು. ಇದಕ್ಕೆ ಒಣ ಮತ್ತು ಹಸಿ ಶುಂಠಿ ಎರಡನ್ನೂ ಬಳಸಬಹುದು. ಅದನ್ನು ನೀರಿನಲ್ಲಿ ಚೆನ್ನಾಗಿ ಬೆರೆಸಿ ಹಣೆಗೆ ಆ ನೀರನ್ನು ಹಚ್ಚಿಕೊಳ್ಳುವುದರಿಂದ ತಲೆನೋವು ದೂರವಾಗಿಬಿಡುತ್ತದೆ. ನಿಂಬೆಹಣ್ಣನ್ನು ಕಾಯಿಸಿದ ನೀರಿಗೆ ಮಿಶ್ರಣ ಮಾಡಿ ಬಿಸಿ ಮಿಶ್ರಣವನ್ನು ಕುಡಿಯುವುದರಿಂದ ತಲೆನೋವು ಮಾಯವಾಗಿಬಿಡುತ್ತದೆ. ನೀವು ಬ್ಲಾಕ್ ಟೀಯನ್ನು ಕುಡಿಯುತ್ತಿದ್ದರೆ ಅದರ ಜೊತೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಸೇವಿಸಿದರೆ ಮೈಗ್ರೇನ್ ಕಮ್ಮಿಯಾಗುತ್ತದೆ. ತುಳಸಿ ಹಾಗೂ ಶುಂಠಿಯನ್ನು ಚೆನ್ನಾಗಿ ಕುಟ್ಟಿ ಮಿಶ್ರಣ ಮಾಡಿ ತಲೆಗೆ ಹಚ್ಚುವುದರಿಂದ ಹಾಗೂ ಇದರ ರಸವನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿಯುವುದರಿಂದ ನೋವು ಕಡಿಮೆಯಾಗುತ್ತದೆ. ಲವಂಗದ ಎಣ್ಣೆಯನ್ನು ಚೆನ್ನಾಗಿ ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದಲೂ ಈ ತಲೆನೋವು ನಿವಾರಣೆಯಾಗುತ್ತದೆ.
ಆಯುರ್ವೇದದಲ್ಲಿ ಮೈಗ್ರೇನಿಗೆ ಉತ್ತಮ ಚಿಕಿತ್ಸೆ ಲಭ್ಯವಿದೆ. ನಸ್ಯ ಕರ್ಮದಲ್ಲಿ ತಲೆ ಮತ್ತು ಹಣೆಯ ಭಾಗಕ್ಕೆ ಚೆನ್ನಾಗಿ ಮಸಾಜು ಮಾಡಿ ನೋವನ್ನು ಹೋಗಲಾಡಿಸಲಾಗುತ್ತದೆ. ಮುಖಕ್ಕೆ ಹಬೆಯನ್ನು ಕೊಟ್ಟು ಮೂಗಿಗೆ ಕೆಲವು ಔಷಧೀಯ ತೈಲಗಳನ್ನು ಹಾಕುತ್ತಾರೆ. ಈ ಚಿಕಿತ್ಸೆಯನ್ನು ಏಳು ಅಥವಾ ಹದಿನಾಲ್ಕು ದಿನಗಳ ಕಾಲ ಮಾಡುತ್ತಾರೆ. ಜೊತೆಗೆ ತಲೆಗೆ ಹಚ್ಚಿಕೊಳ್ಳುವ ಎಣ್ಣೆಯೂ ಮುಖ್ಯವಾಗುತ್ತದೆ. ಬ್ರಾಹ್ಮೀ ಮತ್ತು ಜ್ಯೋತಿಷ್ಮತಿ ತೈಲಗಳನ್ನು ರಾತ್ತಿಯಲ್ಲಿ ಅಥವಾ ನೋವು ಬಂದಾಗ ನೆತ್ತಿಗೆ ಹಚ್ಚಿಕೊಳ್ಳಬೇಕು. ನೋವು ಹೆಚ್ಚಾಗಿದ್ದರೆ ವೈದ್ಯರನ್ನು ಆದಷ್ಟು ಬೇಗ ಕಂಡು ಚಿಕಿತ್ಸೆ ಪಡೆಯಬೇಕು.
ಡಾ. ವಸುಂಧರಾ ಭೂಪತಿ
ಮೊಬೈಲ್: 9986840477
ಇ-ಮೇಲ್: bhupathivasundhara@gmail.com