
(ಸಂಗ್ರಹ ಚಿತ್ರ)
ಜಾಗತಿಕ ಮಟ್ಟದಲ್ಲಿ ಡಾಲರ್ ಎದುರು ಭಾರತದ ರೂಪಾಯಿ ಭಾರಿ ಪ್ರಮಾಣದ ಕುಸಿತ ಕಂಡು ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ನಿನ್ನೆ ತನಕ ಒಂದು ಡಾಲರ್ ಕೊಳ್ಳಲು ನಾವು 73 ರೂಪಾಯಿ ಕೊಟ್ಟರೆ ಸಾಕಾಗುತ್ತಿತ್ತು. ಇವತ್ತು ಅದೇ ಡಾಲರಿಗೆ ನಾವು ಬರೋಬ್ಬರಿ 77 ರೂಪಾಯಿ ತೆರಬೇಕು.
ಗಮನಿಸಿ ನೋಡಿ ಸೇವೆ ಅಥವಾ ಸರುಕಿನಲ್ಲಿ ಯಾವುದೇ ವ್ಯತ್ಯಾಸವಾಗದೆ ಇದ್ದರೂ ಸಹ ಒಂದು ಡಾಲರಿಗೆ ನಾಲ್ಕು ರೂಪಾಯಿ ಹೆಚ್ಚಳ ಖಂಡಿತ ದೊಡ್ಡ ಮೊತ್ತ. ಇಲ್ಲಿ ಇನ್ನೊಂದು ಅಂಶವನ್ನ ಗಮನಿಸಿ ಇದರಲ್ಲಿ ಕೇಂದ್ರ ಸರಕಾರ ಅಥವಾ ಯಾವುದೇ ರಾಜ್ಯ ಸರಕಾರಗಳ ತಪ್ಪಿಲ್ಲ. ಇಲ್ಲಿನ ಪ್ರಜೆಗಳ ತಪ್ಪು ಕೂಡ ಇಲ್ಲ. ಹಾಗಾದರೆ ಏನೂ ವ್ಯತ್ಯಾಸವಾಗದೆ ನಾವೇಕೆ ಹೆಚ್ಚಿನ ಮೊತ್ತ ತೆರಬೇಕು? ಎನ್ನುವ ಪ್ರಶ್ನೆ ಸಹಜವಾಗೇ ಉತ್ಪನ್ನವಾಗಿತ್ತದೆ ಅಲ್ಲವೇ?. ಈ ರೀತಿ ರೂಪಾಯಿ ಅಪಮೌಲ್ಯಕ್ಕೆ ಕಾರಣವೇನು? ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ. ನಂತರ ಹೀಗೆ ರೂಪಾಯಿ ಅಪಮೌಲ್ಯವಾದರೆ ಆಗುವ ಪರಿಣಾಮಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ. ಈ ರೀತಿಯ ಕುಸಿತ ಕೇವಲ ಭಾರತೀಯ ರುಪಾಯಿಗೆ ಮಾತ್ರ ಸೀಮಿತವೇ ಅಥವಾ ಬೇರೆ ದೇಶಗಳ ಹಣ ಕೂಡ ಅಪಮೌಲ್ಯ ಕಂಡಿವೆಯೇ? ಕಂಡಿದ್ದರೆ ಭಾರತವೆಲ್ಲಿ ನಿಂತಿದೆ ಎನ್ನುವುದರ ಬಗ್ಗೆ ಸ್ವಲ್ಪ ಅರಿತುಕೊಳ್ಳುವ ಪ್ರಯತ್ನವನ್ನ ಮಾಡೋಣ.
ರೂಪಾಯಿ ಅಪಮೌಲ್ಯಕ್ಕೆ ಕಾರಣಗಳೇನು?
ಎಲ್ಲಕ್ಕೂ ಮೊದಲನೆಯದಾಗಿ ಡಾಲರ್ನನ್ನ ಜಾಗತಿಕ ಹಣ ಎಂದು ಒಪ್ಪಿಕೊಂಡಿರುವುದು ಕಾರಣ. ಅಂದರೆ ಗಮನಿಸಿ ನಾವು ಕೊಳ್ಳುವ ತೈಲೋತ್ಪನ್ನಗಳು ಮತ್ತಿತರೇ ಆಮದು ಎಲ್ಲವನ್ನೂ ನಾವು ಭಾರತೀಯ ರೂಪಾಯಿ ಕೊಟ್ಟು ಕೊಳ್ಳುವುದು ಸಾಧ್ಯವಿಲ್ಲ. ಜಗತ್ತಿನ ಬಹುತೇಕೆ ದೇಶಗಳು ಡಾಲರ್ನನ್ನ ವಿನಿಮಯ ಹಣವನ್ನಾಗಿ ಬಳಸುತ್ತವೆ. ಹೀಗಾಗಿ ನಾವು ನೀಡುವ ಹಣ ಡಾಲರ್. ಒಂದು ಡಾಲರ್ ಹಣ ಇಷ್ಟು ರುಪಾಯಿಗೆ ಸಮ ಎಂದು ಒಂದು ನಿಗದಿತ ಮೊತ್ತವಿಲ್ಲ. ಇವುಗಳ ನಡುವಿನ ಮೌಲ್ಯ ಗಳಿಗೆ ಗಳಿಗೆಗೂ ಬದಲಾಗುತ್ತ ಇರುತ್ತದೆ. ಡಾಲರ್ ನಲ್ಲಿ ನಾವು ವಹಿವಾಟು ಮಾಡುವುದಿಲ್ಲ ಎಂದು ಎರಡನೇ ಮಹಾಯುದ್ಧದ ನಂತರ ಸ್ಪಷ್ಟವಾಗಿ ಧ್ವನಿಯೆತ್ತಿದ್ದರೆ ಇಂದು ಈ ದಿನವನ್ನ ನಾವು ನೋಡುವ ಪ್ರಮೇಯ ಬರುತ್ತಿರಲಿಲ್ಲ. ಎರಡನೇ ಮಹಾಯುದ್ಧದ ನಂತರ ಜಾಗತಿಕ ಮಟ್ಟದಲ್ಲಿ ನಡೆದ ಸಭೆಯಲ್ಲಿ ಯಾರ ಬಳಿ ಹೆಚ್ಚು ಚಿನ್ನವಿರುತ್ತದೆ ಅವರ ಹಣವನ್ನ ಜಾಗತಿಕ ಹಣ ಎಂದು ಘೋಷಿಸುವುದಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ . ಹೀಗಾಗಿ ಅಂದಿಗೆ ಹೆಚ್ಚಿನ ಗೋಲ್ಡ್ ರಿಸರ್ವ್ ಹೊಂದಿದ್ದ ಅಮೇರಿಕಾ ಸುಲಭವಾಗಿ ದೊಡ್ಡಣ್ಣನ ಪಟ್ಟವನ್ನ ಪಡೆದುಕೊಂಡು ಬಿಡುತ್ತದೆ. ಆ ನಂತರದ್ದು ದಿನ ನಿತ್ಯದ ಡಬಲ್ ಸ್ಟ್ಯಾಂಡರ್ಡ್ ಕಥೆಗಳು. ಎಲ್ಲಾ ಸನ್ನಿವೇಶಗಳನ್ನ ತನ್ನ ಒಳಿತಿಗೆ ಬಳಸಿಕೊಂಡ ಅಮೇರಿಕಾ ಬೆಳೆದು ನಿಂತದ್ದು ಇಂದಿಗೆ ಇತಿಹಾಸ.
ಎರಡನೆಯದಾಗಿ ಭಾರತದಲ್ಲಿ ಹೂಡಿಕೆ ಮಾಡಿರುವ ವಿದೇಶಿಯರು, ಸಂಸ್ಥೆಗಳು ಇಂದಿಗೆ ಮತ್ತೆ ಮರಳಿ ಅಮೇರಿಕಾ ಕಡೆಗೆ ಮುಖ ಮಾಡಿದ್ದಾರೆ. ಈ ಹೂಡಿಕೆದಾರರು ಪಾರಿವಾಳಗಳು ಇದ್ದಹಾಗೆ ಎಲ್ಲಿ ಹೆಚ್ಚಿನ ಕಾಳಿನ ವಾಸನೆ ಬರುತ್ತದೆ ಅಲ್ಲಿಗೆ ಹಾರಿ ಬಿಡುತ್ತಾರೆ. ಈಗ ಆಗಿರುವುದು ಕೂಡ ಅದೇ, ಭಾರತದಲ್ಲಿ ಸಿಗುತ್ತಿರುವ ಬಡ್ಡಿ ಅಥವಾ ಡಿವಿಡೆಂಡ್ ಡಾಲರ್ಗೆ ಪರಿವರ್ತಿಸಿ, ಇಲ್ಲಿನ ತೆರಿಗೆಯನ್ನ ಕಟ್ಟಿ ಉಳಿದದ್ದು ನೋಡಿದರೆ ಅವರಿಗೆ ಸಿಗುತ್ತಿರುವ ಲಾಭಂಶ ಬಹಳ ಕಡಿಮೆ. ಇದೀಗ ಅಮೇರಿಕಾದಲ್ಲಿ ಫೆಡರಲ್ ಬಡ್ಡಿ ದರವನ್ನ ಹೆಚ್ಚಿಸಲಾಗಿದೆ. ಹೀಗಾಗಿ ಹೂಡಿಕೆದಾರರು ಮರಳಿ ಅಮೆರಿಕಾದ ಡೆಟ್ ಬಾಂಡ್ ಕಡೆಗೆ ಮುಖ ಮಾಡಿದ್ದಾರೆ. ಭಾರತದ ಷೇರು ಮಾರುಕಟ್ಟೆಯಿಂದ ಅತಿದೊಡ್ಡ ಪ್ರಮಾಣದಲ್ಲಿ ಹಣವನ್ನ ಹೊರತೆಗೆದು ಅದನ್ನ ಭಾರತದಿಂದ ಹೊರಕ್ಕೆ ಕಳಿಸಲಾಗುತ್ತಿದೆ. ಅಂದರೆ ಗಮನಿಸಿ ಕಳೆದ ಮೂರ್ನಾಲ್ಕು ತಿಂಗಳಿಂದ ವಿದೇಶಿ ಬಂಡವಾಳವನ್ನ ಹೊರತೆಗೆದು ಅದನ್ನ ಭಾರತದಿಂದ ಹೊರಕ್ಕೆ ಕಳಿಸುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಹೀಗೆ ಹಣದ ಹರಿವು ಹೊರಮುಖವಾಗಿರುವ ಕಾರಣ ಭಾರತದ ರೂಪಾಯಿ ಡಾಲರ್ ಎಂದು ಕುಸಿತ ಕಂಡಿದೆ.
ಮೂರನೆಯದಾಗಿ ಭಾರತದಲ್ಲಿ ಹೆಚ್ಚಾಗಿರುವ ಹಣದುಬ್ಬರವನ್ನ ಗಮನಿಸಿಯೂ ಆರ್ಬಿಐ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ರೆಪೋ ರೇಟ್ ಬಹಳ ಸಮಯದ ವರೆಗೆ ಯಥಾಸ್ಥಿತಿ ಕಾದುಕೊಂಡು ಬಂದಿತು. ಆರು ತಿಂಗಳು ಅಥವಾ ವರ್ಷಕ್ಕೆ ಮುನ್ನ ರೆಪೋ ರೇಟ್ ಏರಿಸದ ಕಾರಣ ಮತ್ತು ಒಂದೇ ಸಮನೆ ಏರುತ್ತಿರುವ ಹಣದುಬ್ಬರದ ಕಾರಣ ಹೂಡಿಕೆದಾರರ ಲಾಭಂಶದಲ್ಲಿ ಬಹಳ ಕುಸಿತವಾಯ್ತು. ಭಾರತದಂತಹ ಎಮರ್ಜಿಂಗ್ ಮಾರುಕಟ್ಟೆಯಲ್ಲಿ ಹಣ ಹೂಡುವುದು ಅಮೆರಿಕಾದಂತಹ ದೇಶದಲ್ಲಿ ಹೂಡಿಕೆ ಮಾಡುವುದಕ್ಕಿಂತ ಹೆಚ್ಚು ಅಪಾಯಕಾರಿ. ಹೆಚ್ಚಿನ ಅಪಾಯ ತೆಗೆದುಕೊಂಡು ಕೂಡ ನಿರೀಕ್ಷಿತ ಲಾಭ ಸಿಗದ ಕಾರಣ ಫಾರಿನ್ ಇನ್ಸಿಟ್ಯೂಷನಲ್ ಇನ್ವೆಸ್ಟರ್ಸ್ ಹಣವನ್ನ ಹೊರತೆಗೆಯುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ರೂಪಾಯಿ ಡಾಲರ್ ಎದುರು ಕುಸಿತ ಕಂಡಿದೆ.
ನಾಲ್ಕನೆಯದಾಗಿ ಅಮೇರಿಕಾ ಎಕಾನಮಿ ಕೂಡ ಸಂಕಷ್ಟದ ಬಾಗಿಲಿನಲ್ಲಿ ಸಾಗುತ್ತಿದ್ದೆ. ಹೀಗಾಗಿ ಅಲ್ಲಿನ ಸರಕಾರ, ಫೆಡರಲ್ ಬ್ಯಾಂಕು ಡಾಲರ್ ಮೌಲ್ಯವನ್ನ ಪುನಶ್ಚೇತನಗೊಳಿಸುವ ಕಾರ್ಯದಲ್ಲಿ ತೊಡಗಿತ್ತು. ಅದೀಗ ಫಲವನ್ನ ಕೊಡಲು ಶುರು ಮಾಡಿದೆ. ಅಂದರೆ ಭಾರತೀಯ ರೂಪಾಯಿ ಎಂದಿನ ಮೌಲ್ಯ ಕಾಯ್ದುಕೊಳ್ಳುವ ಕ್ಷಮತೆ ಹೊಂದಿದ್ದರೂ ಡಾಲರ್ ಬಲಿಷ್ಠವಾದ ಕಾರಣ ದಿಂದ ಕೂಡ ಅಪಮೌಲ್ಯ ಹೊಂದಿದೆ.
ರೂಪಾಯಿ ಅಪಮೌಲ್ಯವಾದರೆ ಆಗುವ ಪರಿಣಾಮಗಳೇನು?
1.ಕಚ್ಚಾ ತೈಲದ ಬೆಲೆ ಇನ್ನಷ್ಟು ಏರಿಕೆಯಾಗುತ್ತದೆ: ಗಮನಿಸಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಾಗದೇ ಹೋದರೂ ಕೂಡ ಭಾರತದಲ್ಲಿ ತೈಲ ಬೆಲೆ ಹೆಚ್ಚಾಗುತ್ತದೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ 3/4 ಪ್ರತಿಶತ ಕುಸಿತ ಕಂಡರೂ ಕೂಡ ನಮಗೆ ಬೆಲೆ ಇಳಿಕೆಯಾಗುವುದಿಲ್ಲ. ಏಕೆಂದರೆ ನಾವು ತೈಲೋತ್ಪನ್ನ ಕೊಳ್ಳಲು ನೀಡುವುದು ಡಾಲರ್. ಉದಾಹರಣೆ ನೋಡೋಣ. ನಾವು 1,000 ಡಾಲರ್ ತೈಲ ಕೊಂಡರೆ 73 ಸಾವಿರ ರೂಪಾಯಿ ಕೊಡಬೇಕಾಗಿತ್ತು. ಈಗ 77 ಸಾವಿರ. ಹೀಗಾಗಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಾಗದಿದ್ದರೂ ಕೂಡ ನಾವು ತೈಲಕ್ಕೆ ಹೆಚ್ಚಿನ ಬೆಲೆಯನ್ನ ತೆರಬೇಕಾಗುತ್ತದೆ.
2. ಆಮದು ಬೆಲೆಯಲ್ಲಿ ಹೆಚ್ಚಳ: ತೈಲದ ಮೇಲಿನ ಉದಾಹರಣೆಯನ್ನ ನೀವು ಎಲ್ಲಾ ಆಮದಿಗೂ ಅನ್ವಯಿಸಬಹುದು. ಎಲೆಕ್ಟ್ರಾನಿಕ್ ಉಪಕರಣಗಳು, ಆಟೋಮೊಬೈಲ್ ಹೀಗೆ ನಾವು ಹೊರ ದೇಶಗಳಿಂದ ಏನೆಲ್ಲಾ ಪದಾರ್ಥಗಳನ್ನ ತರಿಸಿಳ್ಳುತ್ತೇವೆ ಅವುಗಳ ಬೆಲೆಯಲ್ಲಿ ಹೆಚ್ಚಳವಾಗುತ್ತದೆ.
3. ವಿದೇಶಿ ಸಾಲಗಳ ಮರುಪಾವತಿ, ಮತ್ತು ಭಾರತೀಯ ಸಬ್ಸಿಡರಿ ಸಂಸ್ಥೆಗಳ ಮೇಲೆ ಹೆಚ್ಚಿನ ಹೊಡೆತ ಬೀಳುತ್ತದೆ.
4. ಮೇಲಿನ ಮೂರು ಕಾರಣಗಳು ಭಾರತದಲ್ಲಿ ಇನ್ನಷ್ಟು ಬೆಲೆಯೇರಿಕೆಗೆ ಕೂಡ ಕಾರಣವಾಗುತ್ತದೆ. ಸದ್ಯದ ಮಟ್ಟಿಗೆ ಕಾರ್ಪೊರೇಟ್ ಹೌಸ್ಗಳಿಗೆ ಹೆಚ್ಚು ಪೆಟ್ಟು ಎನ್ನುವಂತೆ ಕಂಡರೂ ಅವುಗಳು ತಮ್ಮ ಮೇಲೆ ಬಿದ್ದ ಹೆಚ್ಚಿನ ಹೊರೆಯನ್ನ ಗ್ರಾಹಕನಿಗೆ ವರ್ಗಾಯಿಸುತ್ತವೆ. ಹೀಗಾಗಿ ಮುಂದಿನ ಹದಿನೈದು ದಿನದಲ್ಲಿ ಬೆಲೆಯೇರಿಕೆಯ ಹೊಡೆತ ಜನ ಸಾಮಾನ್ಯ ಕೂಡ ಅನುಭವಿಸಲಿದ್ದಾನೆ.
5. ಹೆಚ್ಚಿದ ಹಣದುಬ್ಬರ ಬಡ್ಡಿ ದರಗಳ ಏರಿಕೆಗೆ ಕಾರಣವಾಗುತ್ತದೆ. ಹೀಗೆ ಬಡ್ಡಿದರ ಏರಿಕೆಯಾದರೆ ಡೆಟ್ ಮಾರುಕಟ್ಟೆಯಲ್ಲಿ ದುಬಾರಿಯಾಗಲಿದೆ. ಇದು ಕೈಗಾರಿಕಾ ಅಭಿವೃದ್ಧಿಗೆ ಒಳ್ಳೆಯ ಸುದ್ದಿಯಲ್ಲ.
ಗಮನಿಸಿ ನೋಡಿ ಇವೆಲ್ಲವೂ ಚೈನ್ ಲಿಂಕ್ ಹೊಂದಿವೆ. ಇವುಗಳು ಎರಡು ಅಲುಗಿನ ಖತ್ತಿ ಇದ್ದಹಾಗೆ. ಸಮ ಬದ್ಧತೆ , ಲಯ ಕಾಪಾಡಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ .
ಈ ರೀತಿಯ ಕುಸಿತ ಕೇವಲ ಭಾರತೀಯ ರುಪಾಯಿಗೆ ಮಾತ್ರ ಸೀಮಿತವೇ ಅಥವಾ ಬೇರೆ ದೇಶಗಳ ಹಣ ಕೂಡ ಅಪಮೌಲ್ಯ ಕಂಡಿವೆಯೇ?
ಭಾರತ ಮಾತ್ರವಲ್ಲ ಕೊರಿಯಾ, ಯೂರೋಪಿಯನ್ ಯೂನಿಯನ್, ರಷ್ಯಾ ಹೀಗೆ ಬಹಳಷ್ಟು ದೇಶಗಳ ಹಣ ಡಾಲರ್ ಎದುರು ಕುಸಿತವನ್ನ ಕಂಡಿದೆ. ರಷ್ಯಾ ದೇಶದ ರೂಬೆಲ್ ಹತ್ತಿರತ್ತಿರ 45 ಪ್ರತಿಶತ ಕುಸಿತ ಕಂಡಿದೆ. ಬಹುತೇಕ ದೇಶದ ಹಣಗಳು 10/15 ಪ್ರತಿಶತ ಕುಸಿತ ಕಂಡಿದೆ. ಹೀಗೆ ಬೇರೆ ದೇಶಗಳ ಕುಸಿತವನ್ನ ಭಾರತ ದೇಶದ ಕುಸಿತ ಕಂಡು ನಾವೆಷ್ಟೋ ವಾಸಿ ಎಂದು ಸಮಾಧಾನ ಪಟ್ಟುಕೊಳ್ಳುವುದು ತರವಲ್ಲ. ಆದರೂ ಭಾರತ ಇದ್ದುದರಲ್ಲೇ ಪರವಾಗಿಲ್ಲ ಎಂದು ನಿಟ್ಟಿಸಿರು ಬಿಡಬಹುದು.
ಕೊನೆಮಾತು: ಹೀಗೆ ರೂಪಾಯಿ ಕುಸಿತವಾದಾಗ , ಹಣದುಬ್ಬರ ಹೆಚ್ಚಾದಾಗ ಭಾರತೀಯ ಸೆಂಟ್ರಲ್ ಬ್ಯಾಂಕ್ ಮಧ್ಯ ಪ್ರವೇಶ ಮಾಡುತ್ತದೆ, ಇನ್ನಷ್ಟು ಹೆಚ್ಚಿನ ಕುಸಿತವಾಗದಂತೆ ಅದು ನಿರ್ಧಾರಗಳನ್ನ ತೆಗೆದುಕೊಳ್ಳುತ್ತದೆ. ಇಲ್ಲಿಯವರೆಗೆ ಹೀಗೆ ಆಗುತ್ತಾ ಬಂದಿರುವುದು. ಹೀಗಾಗಿ ಸದ್ಯದ ಮಟ್ಟಿಗೆ ಪ್ಯಾನಿಕ್ ಬಟನ್ ಒತ್ತುವ ಅವಶ್ಯಕತೆಯಿಲ್ಲ. ಭಾರತ ಸರಕಾರ ಮತ್ತು ಸೆಂಟ್ರಲ್ ಬ್ಯಾಂಕ್ ಇದನ್ನ ಮರಳಿ ಟ್ರಾಕ್ ಗೆ ತರುತ್ತವೆ. ಆದರೂ ಭಾರತದಲ್ಲಿ ಇನ್ನಷ್ಟು ತಿಂಗಳುಗಳ ಕಾಲ ಹಣದುಬ್ಬರದ ಹೊಡೆತ ಮಾತ್ರ ತಪ್ಪುವುದಿಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com