ಲಿವರ್ ಸಿರೋಸಿಸ್ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು... (ಕುಶಲವೇ ಕ್ಷೇಮವೇ)
ಯಕೃತ್ (ಲಿವರ್) ನಮ್ಮ ದೇಹದ ಅತಿ ಮುಖ್ಯವಾದ ಅಂಗ. ಜೀರ್ಣ ಕ್ರಿಯೆ, ರಕ್ಷಣಾ ಕಾರ್ಯ ತ್ಯಾಜ್ಯ ವಿಸರ್ಜನೆ, ಆಹಾರ ವಸ್ತುಗಳ ವಿಂಗಡಣೆ ಮತ್ತು ಶೇಖರಣೆ ಹೀಗೆ ಹತ್ತು ಹಲವು ಕಾರ್ಯಗಳನ್ನು ಯಕೃತ್ ನಿರ್ವಹಿಸುತ್ತದೆ.
Published: 14th May 2022 04:44 PM | Last Updated: 14th May 2022 04:44 PM | A+A A-

ಲಿವರ್ ಸಿರೋಸಿಸ್
ಯಕೃತ್ (ಲಿವರ್) ನಮ್ಮ ದೇಹದ ಅತಿ ಮುಖ್ಯವಾದ ಅಂಗ. ಜೀರ್ಣ ಕ್ರಿಯೆ, ರಕ್ಷಣಾ ಕಾರ್ಯ ತ್ಯಾಜ್ಯ ವಿಸರ್ಜನೆ, ಆಹಾರ ವಸ್ತುಗಳ ವಿಂಗಡಣೆ ಮತ್ತು ಶೇಖರಣೆ ಹೀಗೆ ಹತ್ತು ಹಲವು ಕಾರ್ಯಗಳನ್ನು ಯಕೃತ್ ನಿರ್ವಹಿಸುತ್ತದೆ. ಕಾರಣಾಂತರಗಳಿಂದ ಯಕೃತ್ತಿಗೆ ಹಾನಿಯಾಗಿ ಲಿವರ್ ತನ್ನ ಕೆಲಸ ಕಾರ್ಯವನ್ನು ಮಾಡಲು ಸಾಧ್ಯವಾಗದೆ ಹೋದಲ್ಲಿ ಆ ಪರಿಸ್ಥಿತಿಯನ್ನು ಲಿವರ್ ಸಿರೋಸಿಸ್ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ ಯಕೃತ್ತಿನಲ್ಲಿ ಹೆಪಾಟೋಸೈಟ್ ಎಂಬ ಜೀವಕೋಶಗಳು ತುಂಬಿರುತ್ತದೆ. ದಿನ ಬೆಳಗಾಗುವುದರಲ್ಲಿ ಈ ಯಕೃತ್ತಿಗೆ ಹಾನಿಯಾಗುವುದಿಲ್ಲ. ಸಾಮಾನ್ಯವಾಗಿ ಅತಿಯಾದ ಮಧ್ಯಪಾನ ಸೇವನೆ, ಹೆಪಟೈಟಿಸ್ ಸಿ ಮತ್ತು ಬಿ ಎಂಬ ಸೋಂಕು ಮತ್ತು ಅತಿಯಾದ ಔಷಧಿಗಳ ಸೇವನೆ ಮುಂತಾದ ಕಾರಣಗಳಿಂದ ಯಕೃತ್ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳಬಹುದು. ಈ ಹಂತದಲ್ಲಿ ಯಕೃತ್ತಿನ ತುಂಬ ಹೆಪಾಟೋಸೈಟ್ ಜೀವಕೋಶಗಳ ಬದಲಾಗಿ ಫೈಬ್ರಸ್ ಅಂಶಗಳು ತುಂಬಿಕೊAಡು, ಯಕೃತ್ತಿನ ಕಾರ್ಯಕ್ಷಮತೆಯನ್ನು ಕ್ಷೀಣಿಸುತ್ತದೆ. ಅತಿಯಾದ ದೇಹದ ತೂಕ, ಸ್ಥೂಲಕಾಯ, ಮಧುಮೇಹ, ಅತಿಯಾದ ರಕ್ತದೊತ್ತಡ, ಅತಿಯಾದ ಕೊಬ್ಬಿನ ಶೇಖರಣೆ, ಅತಿಯಾದ ಅನಗತ್ಯ ಔಷಧಿ ಸೇವನೆ, ದೇಹದ ರಕ್ಷಣಾ ವ್ಯವಸ್ಥೆಯ ಕುಸಿತ ಮುಂತಾದ ಕಾರಣಗಳಿಂದಲೂ ಲಿವರ್ ಸಿರೋಸಿಸ್ ಕಾಯಿಲೆ ಬರುವ ಸಾಧ್ಯತೆ ಇದೆ. ಕೆಲವೊಮ್ಮೆ ಯಾವುದೇ ನಿಖರ ಕಾರಣವಿಲ್ಲದೆಯೂ ಯಕೃತ್ ಲಿವರ್ ಸಿರೋಸಿಸ್ ಖಾಯಿಲೆಗೆ ಕೆಲವೊಮ್ಮೆ ತುತ್ತಾಗುತ್ತದೆ.
ಲಿವರ್ ಸಿರೋಸಿಸ್ ಕಾಯಿಲೆಯ ಲಕ್ಷಣಗಳು
ಈ ಕಾಯಿಲೆ ಬಂದಾಗ ವಿಪರೀತ ಬಳಲಿಕೆ, ಸುಸ್ತು, ಹಸಿವಿಲ್ಲದಿರುವುದು, ತುರಿಕೆ, ಕಾಲುಗಳು ಊದಿಕೊಳ್ಳುವುದು, ಹಳದಿ ಚರ್ಮ, ಹೊಟ್ಟೆಯ ಸುತ್ತ ನೀರು ತುಂಬಿಕೊಳ್ಳುವುದು, ಬೇಗನೆ ಗಾಯವಾಗುವುದು, ರಕ್ತ ಹೆಪ್ಪುಗಟ್ಟದಿರುವುದು, ಜೇಡರ ಬಲೆಯ ರೂಪದ ರಕ್ತನಾಳಗಳು ಹೊಟ್ಟೆಯ ಸುತ್ತು ಕಾಣಿಸಿಕೊಳ್ಳುವುದು, ಯಕೃತ್ ಊದಿಕೊಳ್ಳುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆಗ ತಕ್ಷಣವೇ ವೈದ್ಯರ ಸಲಹೆ ಅವಶ್ಯಕ. ಮದ್ಯಪಾನ ಮಾಡುತ್ತಿದ್ದಲ್ಲಿ ಅದನ್ನು ನಿಲ್ಲಿಸದೆ ಹೋದಲ್ಲಿ ಪ್ರಾಣಕ್ಕೆ ಎರವಾಗಬಹುದು.
ಹೊಟ್ಟೆಯ ಸ್ಕ್ಯಾನ್ ಮತ್ತು ಕೂಲಂಕುಷವಾದ ದೇಹದ ಪರೀಕ್ಷೆ, ರಕ್ತ ಪರೀಕ್ಷೆ, ಲಿವರ್ ಕಾರ್ಯಕ್ಷಮತೆಯ ಪರೀಕ್ಷೆ, ಮತ್ತು ಯಕೃತ್ತಿನ ಬಯಾಪ್ಸಿ ಅಥವಾ ಸಣ್ಣ ತುಂಡನ್ನು ಕತ್ತರಿಸಿ ತೆಗೆದು ಸೂಕ್ತ ದರ್ಶಕ ಅಡಿಯಲ್ಲಿ ಅಧ್ಯಯನ ಮಾಡಿ ‘ಸಿರೋಸಿಸ್’ ರೋಗವನ್ನು ಪತ್ತೆ ಹಚ್ಚಲಾಗುತ್ತದೆ. ಅದೇ ರೀತಿ ಅತಿಯಾದ ಔಷಧಿ ಸೇವನೆ, ಅನಗತ್ಯವಾಗಿ ನೋವು ನಿವಾರಕಗಳ ಸೇವನೆಯಿಂದಲೂ ಯಕೃತ್ತಿಗೆ ಹಾನಿಯಾಗಿ, ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡು, ವ್ಯಕ್ತಿಯ ಜೀರ್ಣ ಕ್ರಿಯೆ, ರಕ್ಷಣಾ ಕ್ರಿಯೆ ಮತ್ತು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಹೊಡೆತ ಬಿದ್ದು, ಮಾರಣಾಂತಿಕ ರೋಗವಾಗಿ ಪರಿಣಮಿಸುವ ಸಾಧ್ಯತೆಗಳೂ ಇದೆ.
ಲಿವರ್ ಸಿರೋಸಿಸ್ ರೋಗ ಬರದಂತೆ ತಡೆಯುವುದು ಹೇಗೆ?
ಲಿವರ್ ಸಿರೋಸಿಸ್ ಬರದಂತೆ ಇರಲು ಅಗತ್ಯವಾಗಿ ಮದ್ಯಪಾನ ಮತ್ತು ಧೂಮಪಾನ ವರ್ಜಿಸಲೇಬೇಕು. ಅನಗತ್ಯವಾಗಿ ಔಷಧಿ ಸೇವಿಸಬಾರದು. ಜೀವನಶೈಲಿ ಮಾರ್ಪಾಡು, ಆಹಾರ ಪದ್ಧತಿಯಲ್ಲಿನ ಸೂಕ್ತ ಮಾರ್ಪಾಡು ಮಾಡಿ, ಔಷಧಿಯ ನೆರವಿಲ್ಲದೆ ರೋಗ ನಿಯಂತ್ರಣದಲ್ಲಿಡಬೇಕು. ದೇಹದಲ್ಲಿ ಅತೀ ಕೊಬ್ಬು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ದೇಹದ ತೂಕದ ಮೇಲೆ ಸೂಕ್ತ ನಿಗಾ ಇಡಬೇಕು. ನಿಯಮಿತವಾದ ದೈಹಿಕ ವ್ಯಾಯಾಮ, ಬಿರುಸು ನಡಿಗೆ, ಈಜುವುದು ಮುಂತಾದ ಹವ್ಯಾಸಗಳು ದೇಹದ ತೂಕವನ್ನು ಹತೋಟಿಯಲ್ಲಿಡುತ್ತದೆ. ಜಂಕ್ ಪುಡ್, ಅತಿಯಾದ ಕೆಫೇನ್‍ಯುಕ್ತ ಪಾನೀಯ ಮತ್ತು ರಾಸಾಯನಿಕಯುಕ್ತ ಪೇಯಗಳನ್ನು ವರ್ಜಿಸಬೇಕು. ಸಿದ್ಧ ಆಹಾರ ವರ್ಜಿಸಿ, ನೈಸರ್ಗಿಕ ಆಹಾರ ಸೇವಿಸತಕ್ಕದ್ದು. ಇಂಗಾಲಯುಕ್ತ ಪೇಯಗಳನ್ನು ವಿಸರ್ಜಿಸಿ, ಸ್ವಾಭಾವಿಕವಾದ ರಾಸಾಯನಿಕರಹಿತ ನೈಸರ್ಗಿಕ ಪೇಯವನ್ನು ಸೇವಿಸುವುದು ಉತ್ತಮ.
ನೋವು ನಿವಾರಕ ಔಷಧಿಯನ್ನು ಚಾಕಲೇಟ್ ರೀತಿಯಲ್ಲಿ ತಿನ್ನುವ ಖಯಾಲಿಗೆ ತಿಲಾಂಜಲಿ ಇಡಬೇಕು. ಅತೀ ಅಗತ್ಯವಿದ್ದಲ್ಲಿ ಮಾತ್ರ ಔಷಧಿಯನ್ನು ಸೇವಿಸತಕ್ಕದ್ದು. ಹೆಪಟೈಟಿಸ್ ರೋಗವನ್ನು ಲಸಿಕೆಯಿಂದ ತಡೆಗಟ್ಟಬಹುದಾಗಿದೆ. ಸಕಾಲದಲ್ಲಿ ಲಸಿಕೆ ಹಾಕಿಸಿ ರೋಗವನ್ನು ತಡೆಗಟ್ಟತಕ್ಕದ್ದು. ಹೆಪಟೈಟಿಸ್ ವೈರಾಣು ಸೋಂಕು ಸಿರೋಸಿಸ್‍ಗೆ ಕಾರಣವಾಗುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗವನ್ನು ಯಾವತ್ತೂ ಹತೋಟಿಯಲ್ಲಿಡಬೇಕು. ಯಕೃತ್ತು ಚರ್ಮದ ನಂತರ ನಮ್ಮ ದೇಹದ ಅತಿ ದೊಡ್ಡ ಅಂಗವಾಗಿದ್ದು ದೇಹದ ರಕ್ಷಣೆಯ ಪ್ರಥಮ ಅಂಗವಾಗಿರುತ್ತದೆ.ಯಕೃತ್ತು ದೇಹದ ಎಲ್ಲಾ ಕಾರ್ಯ ಚಟುವಟಿಕೆಗಳ ಕೇಂದ್ರಸ್ಥಾನ. ದೇಹದ ರಕ್ಷಣೆ, ಜೀರ್ಣ ಪ್ರಕ್ರಿಯೆ, ದಾಸ್ತಾನು ಕೇಂದ್ರ ಅಥವಾ ತುರ್ತು ಶೇಖರಣಾ ಉಗ್ರಾಣ ಮುಂತಾದ ಕೆಲಸಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡುವ ಏಕೈಕ ಅಂಗ. ಯಕೃತ್ತನ್ನು ನಾವು ನಿರ್ಲಕ್ಷ ಮಾಡಿದಲ್ಲಿ ಮುಂದೆ ಒಂದಲ್ಲಾ ಒಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ. ಪ್ರಕೃತಿಗೆ ವಿರುದ್ಧವಾಗಿ ಆಹಾರ ಸೇವನೆ ಮತ್ತು ಜೀವನಶೈಲಿ ಅಳವಡಿಸಿಕೊಂಡಲ್ಲಿ ಯಕೃತ್ತಿಗೆ ಹಾನಿಯಾಗುವ ಸಾಧ್ಯತೆಯೂ ಇದೆ. ಯಾವುದೇ ಕಾರಣಕ್ಕೂ ನಾವು ಯಕೃತ್ತು ತನ್ನ ಕಾರ್ಯ ದಕ್ಷತೆಯನ್ನು ಕಳೆದುಕೊಳ್ಳಲು ಬಿಡಬಾರದು. ಈ ನಿಟ್ಟಿನಲ್ಲಿ ನಾವೆಲ್ಲಾ ಏಚ್ಚೆತ್ತು ‘ನಮಗಿರುವುದೊಂದೇ ಯಕೃತ್ತು’ ಎಂಬ ಸತ್ಯದ ಅರಿವಿನಿಂದ ಮತ್ತು ಸರಿಯಾದ ಜೀವನಶೈಲಿಯನ್ನು ಅಳವಡಿಸಿಕೊಂಡು ಆರೋಗ್ಯವಂತರಾಗಿ ಬದುಕಬೇಕು.
ಡಾ. ವಸುಂಧರಾ ಭೂಪತಿ
ಮೊಬೈಲ್: 9986840477
ಇ-ಮೇಲ್: bhupathivasundhara@gmail.com