
ಐಪಿಒ
ಲಿಸ್ಟಿಂಗ್ ಡೇ ಕುಸಿತವೆಂದ ಮಾತ್ರಕ್ಕೆ ನನ್ನ ಹೂಡಿಕೆ ತಪ್ಪಾಗಿದೆ, ನಷ್ಟವಾಯ್ತು ಎಂದು ನೊಂದುಕೊಳ್ಳುವ ಅವಶ್ಯಕತೆ ಖಂಡಿತ ಇಲ್ಲ. ಉಜ್ಜೀವನ್ ಸ್ಮಾಲ್ ತನ್ನ ಲಿಸ್ಟಿಂಗ್ ಡೇ ಯಲ್ಲಿ 51ಪ್ರತಿಶತ ಏರಿಕೆ ಕಂಡಿತ್ತು. ಇದು ಬಂಪರ್ ಎನ್ನಬಹುದು. 37 ರೂಪಾಯಿಯ ಷೇರು 56 ರುಪಾಯಿಗೆ ಏರಿಕೆ ಕಂಡಿತ್ತು. ಇವತ್ತು ಇದರ ಬೆಲೆ ಕೇವಲ 15. ಹಾಗೆಯೇ ಐಐಸಿಐ ಸೆಕ್ಯುರಿಟೀಸ್ ಲಿಸ್ಟಿಂಗ್ ದಿನದಲ್ಲಿ 14 ಪ್ರತಿಶತ ಕುಸಿತ ಕಂಡಿತ್ತು. 520ರ ಮುಖ ಬೆಲೆಯ ಷೇರು 445ಕ್ಕೆ ಇಳಿತ ಕಂಡು ದಾಖಲೆ ಬರೆದಿತ್ತು. ಇಂದಿಗೆ ಇದರ ಬೆಲೆ 626. ಅಂದರೆ ಅಂದಿನ ದಿನ ಕುಸಿತ ಕಂಡಿತು ಎಂದು ಭಯಪಟ್ಟು ಮಾತುಬಿಟ್ಟಿದ್ದರೆ 14 ಪ್ರತಿಶತ ನಷ್ಟ ಅನುಭವಿಸುತ್ತಿದ್ದೆವು. ಇಂದಿಗೆ ಇದು 20 ಪ್ರತಿಶತ ಲಾಭಂಶವನ್ನ ನೀಡುತ್ತಿದೆ. ಈ ಉದಾಹರಣೆಯನ್ನ ನೀಡುವ ಅರ್ಥ ಇಂದಿಗೆ ಎಲೈಸಿಯಲ್ಲಿ ಹೂಡಿಕೆ ಮಾಡಿದವರ ಮನದಲ್ಲಿ ಆಶಾಭಾವ ಬಿತ್ತುವ ಒಂದೇ ಉದ್ದೇಶವಲ್ಲ. ಅದಕ್ಕೂ ಮಿಗಿಲಾಗಿ ಇಂತಹ ತಾತ್ಕಾಲಿಕ ಕುಸಿತಗಳು ಷೇರು ಮಾರುಕಟ್ಟೆಯಲ್ಲಿ ಬಹಳ ಸಾಮಾನ್ಯ. ಸಂಸ್ಥೆಯ ಮೂಲಭೂತ ಅಂಕಿಸಂಖ್ಯೆಗಳು ಗಟ್ಟಿಯಾಗಿದ್ದರೆ ಇದಕ್ಕೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಲ್ಲ ಎನ್ನುವುದನ್ನ ಹೇಳುವುದು. ಹೀಗಾಗಿ ಅಯ್ಯೋ ಎಲೈಸ್ಸಿ ಮೇಲೆ ಹೂಡಿಕೆ ಮಾಡಿ ತಪ್ಪು ಮಾಡಿಬಿಟ್ಟೆ ಎನ್ನುವ ಅಪರಾಧಿ ಭಾವವಿದ್ದರೆ ದಯವಿಟ್ಟು ಅದರಿಂದ ಹೊರಬನ್ನಿ. ಎಲೈಸಿ ಸಂಸ್ಥೆಯ ಮೂಲಭೂತ ಅಂಕೆಸಂಖ್ಯೆಗಳು ಪೂರಕೆವಾಗಿದೆ. ಅಲ್ಲದೆ ಭಾರತದಲ್ಲಿ ಈ ವಲಯದಲ್ಲಿನ ವ್ಯಾಪಾರ ಇನ್ನೂ ತಾರಕಕ್ಕೆ ಏರಿಲ್ಲ. ಇದರರ್ಥ ಭವಿಷ್ಯದಲ್ಲಿ ಈ ವಲಯದಲ್ಲಿ ಇನ್ನೂ ಹೆಚ್ಚು ವ್ಯಾಪಾರ ಮಾಡುವ ವಿಪುಲ ಅವಕಾಶವಿದೆ.
ಇದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಇಂತಹ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎನ್ನುವುದರ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ.
1. ಹೂಡಿಕೆ ಯಾವಾಗ ಮಾಡಬೇಕು? ಮಾರುಕಟ್ಟೆ ಮೇಲಿದ್ದಾಗ? ಕುಸಿದಾಗ? ಜನರಲ್ ಮೂಡ್ ಸರಿಯಾಗಿದ್ದಾಗ? ಸಮಾಜದಲ್ಲಿ ಆರ್ಥಿಕತೆ ಪ್ರಬಲವಾಗಿದ್ದಾಗ? ಕುಸಿದಿದ್ದಾಗ? ಹೀಗೆ ಹಲವಾರು ಪ್ರಶ್ನೆಗಳು. ಗಮನಿಸಿ ಇವೆಲ್ಲವೂ ಇಲ್ಲಿ ಮುಖ್ಯವಲ್ಲ. ಸಮಾಜ, ಮಾರುಕಟ್ಟೆ ಕುಸಿದ ಸಮಯದಲ್ಲಿ ಕೂಡ ನಿಮ್ಮ ಆರ್ಥಿಕತೆ ಭದ್ರವಾಗಿದ್ದರೆ ಮತ್ತು ಉತ್ತಮ ಹೂಡಿಕೆಯ ಅವಕಾಶ ಕಂಡರೆ ತಕ್ಷಣ ಹೂಡಿಕೆ ಮಾಡಬೇಕು. ಸಾಮಾನ್ಯವಾಗಿ ಜನರಲ್ಲಿ ಅದರಲ್ಲೂ ಪ್ರಾರಂಭಿಕ ಹಂತದ ಹೂಡಿಕೆದಾರರಲ್ಲಿ ಹೀಗೆ ಇಲ್ಲ ಸಲ್ಲದ ಮಾತುಗಳನ್ನ ಮನಸ್ಸಿನಲ್ಲಿ ಬಿತ್ತಲಾಗುತ್ತದೆ. ನೆನಪಿರಲಿ ಸಮಯ ಹೇಗೆ ಇರಲಿ ಹೂಡಿಕೆ ಮಾಡುವ ಮುನ್ನ ವಹಿಸುವ ಒಂದಷ್ಟು ಜಾಗ್ರತೆ ಹೂಡಿಕೆಯ ರಕ್ಷಣೆ ಮಾಡುತ್ತದೆ. ಮಿಕ್ಕ ಬಾಹ್ಯ ಕಾರಣಗಳು ನೆಪಗಳು ಮಾತ್ರ.ಹೀಗಾಗಿ ನಿಮ್ಮ ಬಳಿ ಹಣವಿದ್ದರೆ ಸೆಕೆಂಡರಿ ಮಾರುಕಟ್ಟೆಯಲ್ಲಿ ಇನ್ನಷ್ಟು ಎಲೈಸಿ ಷೇರು ಕೊಳ್ಳುವುದು ಉತ್ತಮ .
2. ಗಮನಿಸಿ ನೋಡಿ, ಎಲೈಸಿ ಐಪಿಒ ಬಂದ ಸಮಯ ಮತ್ತು ಅದು ಲಿಸ್ಟಿಂಗ್ ಆಗುತ್ತಿರುವ ಸಮಯ ನಿಜಕ್ಕೂ ಈ ಎಲ್ಲಾ ಕ್ರಿಯೆಗಳಿಗೆ ಪೂರಕವಾಗಿಲ್ಲ . ಎಲ್ಲಕ್ಕೂ ಮೊದಲಿಗೆ ಜಾಗತಿಕ ಮಟ್ಟದ ರಾಜಕೀಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಯುದ್ಧ ನಡೆಯುತ್ತಿದೆ, ಇನ್ನಷ್ಟು ಯುದ್ಧದ ಕರಿಮೋಡ ಕವಿದಿದೆ. ಜಗತ್ತಿನಾದ್ಯಂತ ಬೆಲೆ ಏರಿಕೆ ಎನ್ನುವ ಪೆಡಂಭೂತದ ಕಾಟ ಬಹಳಷ್ಟಿದೆ. ಜನರ ಮತ್ತು ಸಮಾಜದಲ್ಲಿನ ಆಶಾಭಾವ ಬಹಳ ಕೆಳ ಹಂತದಲ್ಲಿದೆ. ಈ ಎಲ್ಲಾ ಕಾರಣಗಳ ನಡುವೆ ಇದು ಕುಸಿತ ಕಂಡಿದೆ. ಆದರೆ ದೀರ್ಘಾವಧಿಯಲ್ಲಿ ಇದು ಉತ್ತಮ ಲಾಭಂಶವನ್ನ ತಂದು ಕೊಡುತ್ತದೆ. ಆತುರದಿಂದ ಮಾರಿದರೆ ಅದು ಮಾತ್ರ ನಷ್ಟ ಇಲ್ಲದಿದ್ದರೆ ಅದು ನೋಷನಲ್ ಲಾಸ್ ಎಂದು ಕೂಡ ಹೇಳಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಸಾಮಾನ್ಯ ಜ್ಞಾನ ಇರಬೇಕು ಮತ್ತು ಅದೇ ಅತಿ ಮುಖ್ಯ ಸೂತ್ರ ಎನ್ನವುದು ಇದೆ ಕಾರಣಕ್ಕೆ, ಸನ್ನಿವೇಶ ಮತ್ತು ಪರಿಸ್ಥಿತಿಗೆ ಅನುಗುಣವಾಗೇ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೆಯೇ ಮೇಲೇರಿದ್ದು ಕೆಳಗೆ ಇಳಿಯಬಾರದು ಎಂದೇನೂ ಇಲ್ಲ. ಇದು ಅತ್ಯಂತ ಡೈನಾಮಿಕ್, ಸದಾ ಬದಲಾವಣೆ ಆಗುತ್ತಿರುತ್ತದೆ. ಹೀಗಾಗಿ ಒಂದು ಸೂತ್ರಕ್ಕೆ ಆಂಟಿ ಕೂರುವುದು ಕೂಡ ತರವಲ್ಲ.
3. ಮಾರುಕಟ್ಟೆಯಲ್ಲಿನ ಏರಿಳಿತ, ಅನಿಶ್ಚಿತತೆ ಹೆಚ್ಚಾಗಿ ಕಾಡುವುದು ಇಂಟ್ರಾ ಡೇ ಟ್ರೇಡಿಂಗ್ ನಲ್ಲಿ ಇರುವ ಮಂದಿಗೆ, ಅಲ್ಪಾವಧಿಗೆ ಹೂಡಿಕೆ ಮಾಡುವವರಿಗೆ, ಮಾರುಕಟ್ಟೆಯ ಯಾವುದೋ ಸುದ್ದಿಯನ್ನ ಹಿಡಿದು ಕೊಂಡು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಬಂದವರಿಗೆ ಮಾತ್ರ. ಉಳಿದಂತೆ ದೀರ್ಘಾವಧಿಗೆ ಹೂಡಿಕೆ ಮಾಡಿದವರಿಗೆ ದಿನ ನಿತ್ಯದ ಮಾರುಕಟ್ಟೆ ಏರಿಳಿತಗಳು ಒಂದು ರೀತಿಯಲ್ಲಿ ಸ್ನೇಹಿತ , ಸಹಕಾರಿ. ಏಕೆಂದರೆ ದೀರ್ಘಾವಧಿಯಲ್ಲಿ ಟೊಳ್ಳುಗಳು ಗಾಳಿಗೆ ಹಾರಿ ಹೋಗಿರುತ್ತವೆ. ಗಟ್ಟಿ ಉಳಿದುಕೊಳ್ಳುತ್ತದೆ. ಹೀಗೆ ಕುಸಿತದ ಸಮಯದಲ್ಲಿ ಮಾರಲು ಸಿದ್ದರಾದ ಜನರಿಂದ ಉತ್ತಮ ಬೆಲೆಗೆ ಖರೀದಿ ಮಾಡುವ ಅವಕಾಶ ನೀಡುತ್ತದೆ. ಹೀಗಾಗಿ ಲಾಂಗ್ ಟರ್ಮ್ ಪ್ಲಾನ್ ಮಾಡುವವರಿಗೆ ಒಂದಷ್ಟು ಹೆಚ್ಚಿನ ಅಡ್ವಾಂಟೇಜ್ ಇದ್ದೆ ಇರುತ್ತದೆ. ಹೀಗಾಗಿ ನಿಮ್ಮ ಎಲೈಸಿ ಹೂಡಿಕೆ ಬಗ್ಗೆ ಹೆಚ್ಚಿನ ಚಿಂತೆ ಬೇಡ.
4. ಕೆಲವೊಂದು ಹೂಡಿಕೆಗಳು ಅಲ್ಪ ಸಮಯಕ್ಕೆ, ಒಂದಷ್ಟು ಏರಿಕೆ ಕಂಡಾಗ ಮಾರುವ ಉದ್ದೇಶದಿಂದ ಕೊಳ್ಳಲಾಗುತ್ತದೆ. ಕೆಲವೊಂದು ಹೂಡಿಕೆಗಳು ದೀರ್ಘಾವಧಿಗೆ ಎಂದು ಮಾಡಲಾಗುತ್ತದೆ. ಇಂದು ನೀವು ಅನುಭವಿಸುತ್ತಿರುವ ಎಲ್ಲಾ ಹಣಕಾಸು ಸೌಲಭ್ಯ ನೀವೇ ಗಳಿಸಿದ್ದೆ ? ಬಹುಪಾಲು ಜನರಿಗೆ ಅಲ್ಪಸ್ವಲ್ಪವಾದರೂ ಸರಿಯೇ ಪೂರ್ವಿಕರಿಂದ ಬಂದೆ ಇರುತ್ತದೆ. ಹೀಗೆ ಅವರು ಮಾಡದೆ ಇದ್ದಿದ್ದರೆ? ಅವರು ಮರವನ್ನ ನೆಡದೆ ಇದ್ದಿದ್ದರೆ ಇಂದು ನಮಗೆ ಎಲ್ಲಿಯ ನೆರಳು ಅಲ್ಲವೇ? ಹಾಗೆ ಒಂದಷ್ಟು ಹೂಡಿಕೆಗಳನ್ನ ಹೆಚ್ಚಿನ ಸಮಯಕ್ಕೆ ಎಂದು ಬಿಡುವುದು ಒಳಿತು. ಬದಲಾದ ಇಂದಿನ ಸನ್ನಿವೇಶದಲ್ಲಿ ಐದು ವರ್ಷ ದೀರ್ಘಾವಧಿ ಎನ್ನಿಸಿಕೊಳ್ಳುತ್ತಿದೆ. ಮಾರುಕಟ್ಟೆಯ ವಿಶ್ಲೇಷಣೆಗಳು ಹೇಗೆ ಇರಲಿ ಬೇಸಿಕ್ಸ್ ಸರಿಯಾಗಿದ್ದರೆ, ತಕ್ಷಣ ಹಣದ ಅವಶ್ಯಕೆತೆ ಇಲ್ಲದಿದ್ದರೆ ಮಾರದೆ ಇರುವುದು ಒಳ್ಳೆಯದು. ಒಂದು ಉತ್ತಮ ಹೂಡಿಕೆ ಮಾಡುವುದು ಬಹಳ ಕಷ್ಟದ ಕೆಲಸ. ಸಂಶಯ ಬೇಡ ಎಲೈಸಿ ಮೇಲಿನ ಹೂಡಿಕೆ ಸರಿಯಾಗಿದೆ.
5. ಮಾರುಕಟ್ಟೆಯಲ್ಲಿ ಕೆಲವೊಂದು ಷೇರುಗಳನ್ನ ಖರೀದಿಸಬೇಕು ಮತ್ತು ಅವುಗಳನ್ನ ಮಾರಲು ಹೋಗಲೇಬಾರದು. ಏಕೆಂದರೆ ಹೀಗೆ ಜೀವಿತಾವಧಿಗೆ ಇಟ್ಟು ಕೊಳ್ಳಲು ಲಾಯಕ್ಕಾಗಿರುವ ಷೇರುಗಳು ಮೂಲಧನದಲ್ಲಿ ವೃದ್ಧಿ ಹೊಂದುತ್ತವೆ , ಜೊತೆಗೆ ಉತ್ತಮ ಡಿವಿಡೆಂಡ್ ಕೂಡ ನೀಡುತ್ತವೆ. ಇಂತಹ ಷೇರು ಯಾರಿಗೆ ಬೇಡ ಹೇಳಿ ? ಇಂತಹ ಷೇರನ್ನ ಗುರುತಿಸುವುದು ಹೇಗೆ? ಇದು ಅಷ್ಟೇನೂ ಕಠಿಣವಲ್ಲ. ಯಾವ ಸಂಸ್ಥೆಯು ಹೆಚ್ಚು ಬಂಡವಾಳ ಆಧಾರಿತವಾಗಿರುತ್ತದೆ ಅದರ ಷೇರನ್ನ ಬಯ್ ಎಂಡ್ ಹೋಲ್ಡ್ ಫಾರ್ ಎವರ್ ಎಂದು ಹೇಳಲು ಬಾರದು. ಯಾವ ಸಂಸ್ಥೆ ಅತಿ ಕಡಿಮೆ ಬಂಡವಾಳ ಬಯಸುತ್ತದೆ ಅಂತಹ ಸಂಸ್ಥೆಯ ಷೇರುಗಳು ಬೇಗ ಅಭಿವೃದ್ದಿಯನ್ನ ಹೊಂದುತ್ತವೆ, ಹಾಗೂ ನಿರಂತರ ಡಿವಿಡೆಂಡ್ ಕೂಡ ನೀಡುತ್ತವೆ. ಹೀಗಾಗಿ ಯಾವ ಸಂಸ್ಥೆ ಕಡಿಮೆ ಬಂಡವಾಳ ಬೇಡುತ್ತದೆ ಅಲ್ಲಿ ನಾವು ಹೆಚ್ಚು ಬಂಡವಾಳ (ಇನ್ವೆಸ್ಟ್) ಹಾಕಬಹುದು. ಯಾವ ಸಂಸ್ಥೆ ಹೆಚ್ಚು ಬಂಡವಾಳ ಬೇಡುತ್ತದೆ ಅಲ್ಲಿ ನಾವು ಕಡಿಮೆ ಹೂಡಿಕೆ ಮಾಡಬೇಕು. ಇವತ್ತು ನೀವು ಗಮನಿಸಿ ನೋಡಿ ಈ ಮಾತಿನಲ್ಲಿರುವ ಸತ್ಯ ನಿಮಗೆ ಅರಿವಾಗುತ್ತದೆ.ಎಲೈಸಿ ಸೇವೆ ನೀಡುವ ಸಂಸ್ಥೆ ಇದಕ್ಕೆ ಹೆಚ್ಚಿನ ಬಂಡವಾಳದ ಅವಶ್ಯಕತೆಯಿಲ್ಲ. ಹೀಗಾಗಿ ನಿಶ್ಚಿಂತರಾಗಿರಿ.
ಇದನ್ನೂ ಓದಿ: ಎಲ್ ಐಸಿ ಐಪಿಓ ಜೊತೆಗೆ ಇವುಗಳ ಮೇಲೂ ಇರಲಿ ಒಂದು ಕಣ್ಣು! (ಹಣಕ್ಲಾಸು)
ಕೊನೆಮಾತು: ಸೆಕೆಂಡರಿ ಮಾರುಕಟ್ಟೆಯಲ್ಲಿ ಎಲೈಸಿ ಲಿಸ್ಟಿಂಗ್ ಗೆ ಹೇಳಿಕೊಳ್ಳುವ ಡಿಮ್ಯಾಂಡ್ ಇಲ್ಲವಾಗಿದೆ . ಮಾರುಕಟ್ಟೆಯಿಂದ ಹೊರ ಹೋಗಿರುವ ಮತ್ತು ಹೋಗುತ್ತಿರುವ ಹಣದ ಲೆಕ್ಕಾಚಾರದ ಮುಂದೆ 8 ಪ್ರತಿಶತ ಕುಸಿತ ದೊಡ್ಡದಲ್ಲ. ಹಣವಿದ್ದವರು ಇನ್ನಷ್ಟು ಖರೀದಿಸಿ ಅಲ್ಪಕಾಲೀನ ದೀರ್ಘಕಾಲದಲ್ಲಿ ಖಂಡಿತ ಲಾಭ ನೀಡುತ್ತದೆ. ನೆನಪಿರಲಿ ನೀವು ಈಗ ಮಾರಿದರಷ್ಟೇ ಅದು ನಷ್ಟ , ಇಲ್ಲದಿದ್ದರೆ ಅದು ಕೇವಲ ಪರದೆಯ ಮೇಲಿನ ನಷ್ಟ. ನಿಜವಾದ ಹೂಡಿಕೆದಾರ ಇಂತಹ ಸಣ್ಣ ವಿಷಯಕ್ಕೆ ಎಂದಿಗೂ ತಲೆಕೆಡಿಸಿಕೊಳ್ಳಲಾರ. ಹೊಸ ಹೂಡಿಕೆದಾರರು ಹೆಚ್ಚಿನ ಮನೋಕ್ಷೋಭೆಗೆ ಸಿಲುಕುವ ಅವಶ್ಯಕತೆಯಿಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com