ಸೌಂದರ್ಯ ಶಸ್ತ್ರಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ: ಎಷ್ಟು ಸಹಕಾರಿ ಅಥವಾ ಎಷ್ಟು ಅಪಾಯಕಾರಿ? (ಕುಶಲವೇ ಕ್ಷೇಮವೇ)

ಕಿರುತೆರೆ ನಟಿ ಚೇತನಾ ರಾಜ್ (21) ಸೌಂದರ್ಯ ಶಸ್ತ್ರಚಿಕಿತ್ಸೆ (ಕಾಸ್ಮೆಟಿಕ್ ಸರ್ಜರಿ) ಮಾಡಿಸಿಕೊಳ್ಳುವ ವೇಳೆ ಸಾವನ್ನಪ್ಪಿದ್ದು ಸಾಕಷ್ಟು ಸುದ್ದಿಯಾಗಿದೆ.

Published: 21st May 2022 11:07 AM  |   Last Updated: 21st May 2022 07:06 PM   |  A+A-


Cosmetic surgery

ಸೌಂದರ್ಯ ಶಸ್ತ್ರಚಿಕಿತ್ಸೆ (ಸಾಂಕೇತಿಕ ಚಿತ್ರ)

ಕಿರುತೆರೆ ನಟಿ ಚೇತನಾ ರಾಜ್ (21) ಸೌಂದರ್ಯ ಶಸ್ತ್ರಚಿಕಿತ್ಸೆ (ಕಾಸ್ಮೆಟಿಕ್ ಸರ್ಜರಿ) ಮಾಡಿಸಿಕೊಳ್ಳುವ ವೇಳೆ ಸಾವನ್ನಪ್ಪಿದ್ದು ಸಾಕಷ್ಟು ಸುದ್ದಿಯಾಗಿದೆ. ಸೊಂಟ ದಪ್ಪಗಿದೆ ಅದಕ್ಕಾಗಿ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡು ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಮತ್ತು ಸಾಕಷ್ಟು ನಟನೆಯಲ್ಲಿ ಯಶಸ್ಸು ಕಾಣಬೇಕು ಎಂದು ಕನಸು ಕಾಣುತ್ತಿದ್ದ ಚೇತನಾ ಜೀವ ಕಳೆದುಕೊಂಡದ್ದು ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ಕಾಸ್ಮೆಟಿಕ್ ಸರ್ಜರಿ ವಿಷಯ ಮತ್ತೆ ಚರ್ಚೆಗೆ ಬಂದಿದೆ.
ಕಾಸ್ಮೆಟಿಕ್ ಸರ್ಜರಿ ಎಂದರೇನು?

ಇಂದು ಬದಲಾಗುತ್ತಿರುವ ಜೀವನಶೈಲಿ, ವ್ಯಾಯಾಮ ಮಾಡಿ ಸದೃಢರಾಗಿರಲು (ಹಿಟ್‍ ಅಂಡ್ ಫಿಟ್) ಸಮಯದ ಕೊರತೆ, ವಿಧವಿಧ ತಿನಿಸುಗಳು, ಜಂಕ್ ಫುಡ್ ಸೇವನೆ, ಥೈರಾಯಿಡ್ ಸಮಸ್ಯೆ ಮತ್ತು ಹಾರ್ಮೋನುಗಳ ಅಸಮತೋಲನಗಳಿಂದ ಸಾಮಾನ್ಯವಾಗಿ ದೇಹದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗುತ್ತಿದೆ. ಇದರ ಪರಿಣಾಮ ಬೊಜ್ಜು. ಆಗ ದೇಹದಿಂದ ಕೊಬ್ಬನ್ನು ಹೇಗೆ ಹೋಗಲಾಡಿಸುವುದು ಎಂಬುದು ಮುಖ್ಯವಾಗುತ್ತದೆ. ಜೊತೆಗೆ ಹೆಚ್ಚುತ್ತಿರುವ ಸೌಂದರ್ಯಪ್ರಜ್ಞೆ, ಸಾಮಾಜಿಕ ಮಾಧ್ಯಮಗಳಲ್ಲಿ ಅತಿಯಾಗಿ ತೊಡಗಿಸುಕೊಳ್ಳುವಿಕೆ, ಟಿವಿ-ಸಿನಿಮಾದಂತಹ ದೃಶ್ಯ ಮಾಧ್ಯಮಗಳ ವೀಕ್ಷಣೆ ಮತ್ತು ಬೇರೆಯವರ ಅನುಕರಣೆಯಿಂದಾಗಿ ಸೌಂದರ್ಯ ಚಿಕಿತ್ಸೆಗಳು ಟ್ರೆಂಡ್ ಆಗಿ ಬೆಳೆಯುತ್ತಿವೆ. ಲೇಸರ್‍ ಚಿಕಿತ್ಸೆ, ಲಿಪೊಸಕ್ಷನ್, ಕಾಸ್ಮೆಟಿಕ್ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ ಇತ್ಯಾದಿ ಶಸ್ತ್ರಚಿಕಿತ್ಸೆಗಳು ಈಗಾಗಲೇ ಹೆಸರು ಮಾಡಿವೆ. ಬೆಂಗಳೂರು ಮತ್ತಿತರ ನಗರಗಳಲ್ಲಿ ಇಂತಹ ಶಸ್ತ್ರಚಿಕಿತ್ಸೆ ನಡೆಸುವ ಆಸ್ಪತ್ರೆಗಳು ಮತ್ತು ಕ್ಲಿನಿಕ್ಕುಗಳು ಸಾಕಷ್ಟು ತಲೆಎತ್ತಿವೆ. ಇಂತಹ ಆಸ್ಪತ್ರೆಗಳು ಸೂಕ್ತ ಲೈಸೆನ್ಸ್ ಹೊಂದಿರಬೇಕು.

ದೇಹದ ಯಾವ ಭಾಗಗಳಿಗೆ ಸೌಂದರ್ಯ ಚಿಕಿತ್ಸೆ ಮಾಡಬಹುದು?
ಹೊಟ್ಟೆ, ಪೃಷ್ಠದ ಭಾಗ, ಎದೆ, ಒಳ ಮೊಣಕಾಲುಗಳು, ಸೊಂಟ, ಪಾಶ್ರ್ವಗಳು, ಕಂಠರೇಖೆ ಮತ್ತು ಗಲ್ಲದ ಅಡಿಯಲ್ಲಿ ಪ್ರದೇಶ, ತೊಡೆಗಳು, ಹೊರ ಮತ್ತು ಒಳ ತೊಡೆಗಳು, ಮೇಲಿನ ತೋಳುಗಳಲ್ಲಿ ಇರುವ ಹೆಚ್ಚಿನ ಕೊಬ್ಬನ್ನು ತೆಗೆಯಲು ಸೌಂದರ್ಯ ಚಿಕಿತ್ಸೆ ಮಾಡಲಾಗುತ್ತದೆ. 

ಕೊಬ್ಬು ತೆಗೆಯುವ ಶಸ್ತ್ರಚಿಕಿತ್ಸೆ (Fat-loss Surgery)
ಕೊಬ್ಬು ತೆಗೆಯುವ ಶಸ್ತ್ರಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಎರಡು ವಿಧಗಳಿವೆ --- ಬೇರಿಯಾಟ್ರಿಕ್ ಮತ್ತು ಕಾಸ್ಮೆಟಿಕ್ ಲಿಪೊಸಕ್ಷನ್ ಸರ್ಜರಿಗಳು. 

ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ (Bariatric Surgery)
ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಉದ್ದೇಶವು ತೂಕವನ್ನು ಕಡಿಮೆ ಮಾಡುವುದು ಮತ್ತು ತೂಕ-ಸಂಬಂಧಿತ ಅಸ್ವಸ್ಥತೆಗಳು ಅಥವಾ ಸಹ-ಅಸ್ವಸ್ಥತೆಗಳನ್ನು ನಿವಾರಿಸುವುದು. ಆಹಾರ ಪಥ್ಯ (ಡಯೆಟ್) ಮತ್ತು ವ್ಯಾಯಾಮವು ವ್ಯಕ್ತಿಯ ದೇಹದ ತೂಕವನ್ನು ನಿಯಂತ್ರಿಸುವಲ್ಲಿ ವಿಫಲವಾದಾಗ ಅಥವಾ ಅಧಿಕ ದೇಹದ ತೂಕದಿಂದಾಗಿ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಇರುವಾಗ ಇದನ್ನು ಶಿಫಾರಸು ಮಾಡಲಾಗುತ್ತದೆ.


ಲಿಪೊಸಕ್ಷನ್‍ ಶಸ್ತ್ರಚಿಕಿತ್ಸೆ (Liposuction Surgery)

ಲಿಪೊಸಕ್ಷನ್‍ ಎಂಬುದು ಅನಗತ್ಯ ಕೊಬ್ಬನ್ನು ಕರಗಿಸುವ ಸರಳವಾದ ಲೇಸರ್‍ ಚಿಕಿತ್ಸೆ. ವಿಶೇಷವಾಗಿ ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾಗಿ ವಾಹನದ ಚಕ್ರದಂತೆ ಕಾಣುವ ಬೊಜ್ಜನ್ನು ಕರಗಿಸಲು ಲಿಪೊಸಕ್ಷನ್ ಹೆಚ್ಚು ಬಳಕೆಯಲ್ಲಿದೆ. ಸಣ್ಣ ರಂಧ್ರ ಕೊರೆದು ಶಕ್ತಿಶಾಲಿ ವಿದ್ಯುತ್ ಪ್ರವಹಿಸುತ್ತಾ ಕೊಬ್ಬನ್ನು ಕರಗಿಸು ಚಿಕಿತ್ಸೆ ಇದು. ಅನುಭವಿ ವೈದ್ಯರು ಈ ಶಸ್ತ್ರಚಿಕಿತ್ಸೆ ನಡೆಸುತ್ತಾರೆ. ಹೀಗೆ ಕರಗಿದ ಕೊಬ್ಬು ರಕ್ತದೊಡನೆ ಸೇರುತ್ತದೆ. ಆಗ ಕೆಲವೊಮ್ಮೆ ಅದರ ಸಣ್ಣ ಸಣ್ಣ ಕಣಗಳು ರಕ್ತದಲ್ಲಿ ಬೆರೆತು ಶ್ವಾಸಕೋಶ ಅಥವಾ ಹೃದಯದಲ್ಲಿ ಸೇರಿ ಅಲ್ಲಿ ರಕ್ತ ಹೆಪ್ಪುಗಟ್ಟಿ (ಎಂಬಾಲಿಸಮ್) ಉಂಟಾಗುವ ಭೀಕರ ಪರಿಣಾಮದಿಂದ (ಪಲ್ಮನರಿ ಎಂಬಾಲಿಸಂ ಮತ್ತು ಹೃದಯಾಘಾತ) ಸಾವೂ ಸಂಭವಿಸಬಹುದು. ಆದ್ದರಿಂದ ಇಂತಹ ಸಂದರ್ಭದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಜೊತೆಗೆ ಲಿಪೊಸಕ್ಷನ್ ಮಾಡಲು ಸ್ಥಳೀಯ ಅರಿವಳಿಕೆ ಕೊಟ್ಟು, ಶಸ್ತ್ರಚಿಕಿತ್ಸೆಗೆ ಬೇಕಾಗುವ ಸಲಕರಣೆ ಮತ್ತು ಸೌಕರ್ಯಗಳನ್ನು ಆಸ್ಪತ್ರೆ/ ಕ್ಲಿನಿಕ್‍ನಲ್ಲಿ ಹೊಂದಿರಬೇಕಾಗುತ್ತದೆ. ಆದರೆ ಕಾಸ್ಮೆಟಿಕ್ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ ಕೇಂದ್ರಗಳಲ್ಲಿ ಅಂತಹ ಸೌಕರ್ಯಗಳಿವೆಯೇ ಎಂಬುದು ಜನರಿಗೆ ಗೊತ್ತಾಗುವುದಿಲ್ಲ. ಸರಿಯಾದ ಸಾಧನಸಲಕರಣೆಗಳು ಮತ್ತು ಅನುಭವಿ ವೈದ್ಯರು ಇಲ್ಲದಿದ್ದರೆ ಇಂತಹ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವವರು ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಯಲ್ಲಿ ಕೊಬ್ಬಿನ ಕೋಶಗಳನ್ನು ಶಾಶ್ವತವಾಗಿ ತೆಗೆದುಹಾಕಲಾಗುತ್ತದೆ. ಇದು ದೇಹದ ಆಕಾರವನ್ನು ಬದಲಾಯಿಸುತ್ತದೆ. ನಂತರ ರೋಗಿಯು ಆರೋಗ್ಯಕರ ಜೀವನಶೈಲಿಯನ್ನು ನಡೆಸದಿದ್ದರೆ, ಉಳಿದ ಕೊಬ್ಬಿನ ಕೋಶಗಳು ದೊಡ್ಡದಾಗಿ ಬೆಳೆಯುವ ಅಪಾಯವಿದೆ. ಜೊತೆಗೆ ಸೋಂಕು, ಮರಗಟ್ಟುವಿಕೆ ಮತ್ತು ಗುರುತು ಉಳಿದುಕೊಳ್ಳುವುದು ಸೇರಿದಂತೆ ಕೆಲವು ಅಪಾಯಗಳಿವೆ. 

ಸೌಂದರ್ಯ ಶಸ್ತ್ರಚಿಕಿತ್ಸೆಯ ಪ್ರಯೋಜನ ಮತ್ತು ಅಪಾಯಗಳು

ಇಂತಹ ಶಸ್ತ್ರಚಿಕಿತ್ಸೆಗಳಿಂದ ಅನೇಕ ಪ್ರಯೋಜನಗಳಿದ್ದರೂ ಇವು ಗಂಭೀರ ಅಪಾಯಗಳು ಮತ್ತು ಅಡ್ಡ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಗಳಿವೆ. ಅಲ್ಲದೆ ಈ ಶಸ್ತ್ರಚಿಕಿತ್ಸೆಗಳ ನಂತರ ಆಹಾರಕ್ರಮದಲ್ಲಿ ಶಾಶ್ವತ ಆರೋಗ್ಯಕರ ಬದಲಾವಣೆಗಳನ್ನು ಮಾಡಬೇಕು ಮತ್ತು ದೀರ್ಘಾವಧಿಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ನಿಯಮಿತ ವ್ಯಾಯಾಮವನ್ನು ಮಾಡಬೇಕು. ಅಪಾಯಕಾರಿಯಾಗಿ ಅಧಿಕ ತೂಕ ಹೊಂದಿದ್ದರೂ ಸಹ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಕೆಲವು ವೈದ್ಯಕೀಯ ಮಾರ್ಗಸೂಚಿಗಳನ್ನು ಪಾಲಿಸಬೇಕು.

ಉತ್ತಮ ಆರೋಗ್ಯಕ್ಕೆ ಉತ್ಮ ಜೀವನಶೈಲಿ ಅತ್ಯಗತ್ಯ
ನಾವು ಆರೋಗ್ಯವಂತರಾಗಿರಲು ಉತ್ತಮ ಜೀವನಶೈಲಿ, ಸರಿಯಾದ ಆಹಾರವಿಹಾರ ಮತ್ತು ವ್ಯಾಯಾಮಗಳು ಅತ್ಯಗತ್ಯ. ಕೊಬ್ಬು ನಿಯಂತ್ರಣದಲ್ಲಿರುವುದು ಬಹಳ ಮುಖ್ಯ. ಇಲ್ಲದಿದ್ದರೆ ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ. ಆಯುರ್ವೇದದಲ್ಲಿ ಆರೋಗ್ಯವಂತರಾಗಿರಲು ನಿಯಮಿತ ದಿನಚರ್ಯೆ ಮತ್ತು ಋತುಚರ್ಯೆಗಳನ್ನು ಹೇಳಲಾಗಿದೆ. ದೇಹದತೂಕ/ ಕೊಬ್ಬನ್ನು ಇಳಿಸಿಕೊಳ್ಳಲು ಪಂಚಕರ್ಮ ಮತ್ತು ಉದ್ವರ್ತನಾ ಚಿಕಿತ್ಸೆಗಳು ಲಭ್ಯವಿವೆ. ಋತುಗಳಿಗೆ ತಕ್ಕಂತೆ ಆಹಾರವಿಹಾರ ಮತ್ತು ವ್ಯಾಯಾಮಗಳನ್ನು ತಿಳಿಸಲಾಗಿದೆ. ಚೆನ್ನಾಗಿ ಇರಲು ದಿನವೂ ಚೆನ್ನಾಗಿ ಕನಿಷ್ಠ ಎಂಟು ಗಂಟೆಗಳ ಕಾಲ ನಿದ್ದೆ ಮಾಡುವುದು ಅವಶ್ಯಕ. ಹೀಗೆ ಆಯುರ್ವೇದದಲ್ಲಿ ಹೇಳಲಾದ ಜೀವನಶೈಲಿ ಅನುಸರಿಸಿದರೆ ಆರೋಗ್ಯ ಮತ್ತು ಸೌಂದರ್ಯವಂತರಾಗಿ ಇರಬಹುದು. ಆದರೆ ತಕ್ಷಣದಲ್ಲಿ ಇದೆಲ್ಲಾ ಆಗಲು ಸಾಧ್ಯವಿಲ್ಲ. ಇದನ್ನೆಲ್ಲಾ ದೀರ್ಘಾವಧಿತನಕ ಪಾಲಿಸಬೇಕು. ಒಂದು ವಾರದಲ್ಲಿ ಒಂದು ತಿಂಗಳಿನಲ್ಲಿ ನಾವು ತೆಳ್ಳಗೆ ಸುಂದರಾಂಗರಾಗಬೇಕೆಂದರೆ ಆಗುವುದಿಲ್ಲ. ಯಾವುದೇ ಸರ್ಜರಿ, ಚಿಕಿತ್ಸೆಗಳಿಂದ ನಾವು ತಕ್ಷಣ ಸುಂದರಾಂಗರಾಗಲು ಸಾಧ್ಯವಿಲ್ಲ. ಇದಕ್ಕೆಲ್ಲಾ ಆಹಾರವಿಹಾರಗಳಲ್ಲಿ ಶಿಸ್ತು, ಸಂಯಮ ನಿಯಮಪಾಲನೆ ಮತ್ತು ಸಮಯ ಹಿಡಿಯುತ್ತದೆ. ಆಯುರ್ವೇದದ ಸರಿಯಾದ ವಿಧಾನಗಳನ್ನು ಅನುಸರಿಸಿ ತಿಂಗಳಿಗೆ ಎರಡು ಕೆಜಿ ತೂಕ ಇಳಿಸಿಕೊಂಡರೂ ಸರಿಯೇ. ಹೀಗೆ ನಿಯಮಿತ ವಿಧಾನಗಳಿಂದ ಇಳಿದ ತೂಕ ನಮ್ಮಲ್ಲೇ ಉಳಿಯುತ್ತದೆ.

ನಮ್ಮಲ್ಲಿ ಸೌಂದರ್ಯ ಪ್ರಜ್ಞೆ ಇರಬೇಕು. ನಾವು ಸುಂದರವಾಗಿ ಕಾಣಬೇಕು ಮತ್ತು ಆರೋಗ್ಯಕರವಾಗಿಯೂ ಇರಬೇಕು. ಆದರೆ ಈ ಬಗ್ಗೆ ಅತಿಯಾದ ಗೀಳು ಇರಬಾರದು. ಟಿವಿ-ಸಿನಿಮಾ ಮತ್ತು ಜಾಹೀರಾತುಗಳಲ್ಲಿ ತೋರಿಸುವ ಝೀರೋ ಸೈಜ್ ಸೌಂದರ್ಯ ಇತ್ಯಾದಿ ಗಿಮಿಕ್ಕುಗಳಿಗೆ ಮಾರುಹೋಗಬಾರದು. ಸೌಂದರ್ಯ ಹೆಚ್ಚಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹೋಗಿ ಜೀವ ಹೋಗುವ ಸ್ಥಿತಿಯನ್ನು ಯಾರೂ ತಂದುಕೊಳ್ಳಬಾರದು.


ಡಾ. ವಸುಂಧರಾ ಭೂಪತಿ
ಮೊಬೈಲ್: 9986840477
ಇ-ಮೇಲ್: bhupathivasundhara@gmail.com


Stay up to date on all the latest ಅಂಕಣಗಳು news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp