
ಸಾಂಕೇತಿಕ ಚಿತ್ರ
ಭಾರತ ಬಹುದೊಡ್ಡ ದೇಶ ಇಲ್ಲಿ ನಿತ್ಯವೂ ಒಂದಲ್ಲ ಒಂದು ವಿಷಯಕ್ಕೆ ಪರ-ವಿರೋಧದ ಜಟಾಪಟಿ ಇದ್ದೆ ಇರುತ್ತದೆ. ಕೇಂದ್ರ ಸರಕಾರ ಕೃಷಿ ರಂಗದಲ್ಲಿ ಇದ್ದ ಹಳೆಯ ನಿಯಮಗಳನ್ನ ಬದಲಾವಣೆಗೆ ತರಲು ಒಂದು ಕರಡು ತಯಾರಿಸಿತ್ತು. ಅದರ ವಿಚಾರ ಸಾಕಷ್ಟು ಚರ್ಚೆಗಳಾದವು. ಕೊನೆಗೆ ಈ ವಿಧೇಯಕವನ್ನ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕೇಂದ್ರ ಸರಕಾರ ಜಾರಿಗೆ ತಂದಿತ್ತು. ಇದನ್ನ ದಿ ಫಾರ್ಮರ್ಸ್ ಪ್ರೊಡ್ಯೂಸ್ ಟ್ರೇಡ್ ಅಂಡ್ ಕಾಮರ್ಸ್ ಬಿಲ್ 2020 ಎನ್ನಲಾಗಿತ್ತು . ಸರಕಾರ ಈ ಆಜ್ಞೆಯನ್ನ ಹಿಂಪಡೆದದ್ದು ಇಂದಿಗೆ ಎಲ್ಲರಿಗೂ ಗೊತ್ತಿರುವ ಸತ್ಯ. ಇಂತಹ ಸಂದರ್ಭದಲ್ಲಿ ಅಮೆರಿಕಾ, ಯೂರೋಪಿಯನ್ ಒಕ್ಕೂಟ, ಜಪಾನ್ ಮತ್ತು ಇಸ್ರೇಲ್ ದೇಶಗಳಲ್ಲಿ ಕೃಷಿ ಬಗ್ಗೆ ಸರಕಾರದ ನೀತಿಯೇನು ಎನ್ನುವುದನ್ನ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಇದರಿಂದ ನಮ್ಮ ದೇಶದ ಕೃಷಿ ನೀತಿಯ ಬಗ್ಗೆಯೂ ನಮಗೆ ಹೆಚ್ಚಿನ ತುಲನೆಗೆ ಅವಕಾಶವಾಗುತ್ತದೆ.
ಅಮೆರಿಕಾದದಲ್ಲಿ ಕೃಷಿ ನೀತಿ-ಇದೆ ಈ ರೀತಿ.
ಅಮೆರಿಕಾ ದೇಶದಲ್ಲಿ ವ್ಯವಸ್ಥೆಯನ್ನ ಬಹಳ ಜತನದಿಂದ ಕಟ್ಟಲಾಗುತ್ತದೆ. ಹೀಗೆ ಮಾಡಿದ ನಿಯಮಗಳ ಉಲ್ಲಂಘನೆಯಾಗದಂತೆ ನಿಗಾ ವಹಿಸುವುದರಿಂದ ಹೀಗೆ ತಂದ ಕಾನೂನು ಅಥವಾ ನಿಯಮಗಳು ಸರಿಯಾಗಿ ಜಾರಿಗೆ ಬರುತ್ತದೆ. ಇಲ್ಲಿನ ಕೃಷಿ ನೀತಿಯನ್ನ ಬಹಳಷ್ಟು ವಲಯಗಳಲ್ಲಿ ವಿಂಗಡಣೆ ಮಾಡಲಾಗಿದೆ. ಕೃಷಿಯಲ್ಲಿನ ಪ್ರತಿ ವಲಯದಲ್ಲೂ ಅದಕ್ಕೆ ತಕ್ಕಂತಹ ನಿಯಮಗಳನ್ನ ಅಳವಡಿಸಲಾಗಿದೆ. ಅಮೆರಿಕಾದಲ್ಲಿ ಎಲ್ಲವೂ ಒಮ್ಮೆಲೇ ಸರಿಯಾಗಿತ್ತು ಎನ್ನುವಂತಿಲ್ಲ. ಏಕೆಂದರೆ ಇಲ್ಲಿ ಕೂಡ ಕೃಷಿ ನೀತಿಯನ್ನ ಕಾಲದಿಂದ ಕಾಲಕ್ಕೆ ಬದಲಾವಣೆ ಮಾಡಿಕೊಂಡು ಬಂದಿದ್ದಾರೆ. ತೀರಾ ಇತ್ತೀಚಿಗೆ ಅಂದರೆ 2018ರಲ್ಲಿ ಕೂಡ ಕೃಷಿ ನೀತಿಯನ್ನ ತಿದ್ದುಪಡಿ ಅಥವಾ ಬದಲಾವಣೆ ಮಂಡಿಸಿ ವಿಧೇಯಕವನ್ನ ಒಪ್ಪಿಕೊಳ್ಳಲಾಗಿದೆ. ಹೀಗೆ ಆದ ತಿದ್ದುಪಡಿಯನ್ನ 2019 ರಲ್ಲಿ ಮತ್ತು 2020ರಲ್ಲಿ ಪ್ರಾಕ್ಟಿಕಲ್ ಆಗಿ ಅಳವಡಿಸಿಕೊಳ್ಳುವ ಪ್ರಯತ್ನಗಳು ನೆಡೆದಿದೆ ಮತ್ತು ನಡೆಯುತ್ತಿದೆ.
ಇವುಗಳಲ್ಲಿ ಪ್ರಮುಖವಾಗಿ:
- ಮಾರ್ಜಿನ್ ಪ್ರೊಟೆಕ್ಷನ್ ಪ್ರೋಗ್ರಾಮ್ (ಎಂಪಿಪಿ ): ಡೈರಿ ಉತ್ಪನ್ನಗಳಿಗೆ ಜೀವಾವಧಿ ಕಡಿಮೆ. ಹೀಗಾಗಿ ಇವುಗಳ ಮೇಲಿನ ಲಾಭವನ್ನ ಕಾಪಾಡುವುದಕ್ಕೆ ಇಂತಹ ಒಂದು ಕಾನೂನನ್ನ ಅವರು ತಂದಿದ್ದಾರೆ. ಯಾವುದೇ ಕಾರಣಕ್ಕೂ ನಿಗದಿ ಪಡಿಸಿದ ಲಾಭಂಶಕ್ಕಿಂತ ಕಡಿಮೆ ಗಳಿಸಬಾರದು ಎನ್ನುವುದು ಉದ್ದೇಶ. ಅಂತಹ ಸಮಯದಲ್ಲಿ ಸರಕಾರ ಇವರ ಸಹಾಯಕ್ಕೆ ನಿಲ್ಲುತ್ತದೆ.
- ಅಗ್ರಿಕಲ್ಚರ್ ರಿಸ್ಕ್ ಕವರೇಜ್ (ಎಆರ್ ಸಿ) ಮತ್ತು ಪ್ರೈಸ್ ಲಾಸ್ ಕವರೇಜ್ (ಪಿಸಿಸಿ): ಗಮನಿಸಿ ಎ ಆರ್ ಸಿ ಯಲ್ಲಿ ಒಟ್ಟಾರೆಯಾಗಿ ಕೃಷಿ ವೃತ್ತಿಯನ್ನ ಅವಲಂಬಿಸುವದರಿಂದ ಆಗಬಹುದಾದ ಸಂಭಾವ್ಯ ಅಪಾಯವನ್ನ ಗ್ರಹಿಸಿ ಅದಕ್ಕೆ ತಕ್ಕಂತೆ ಅವರ ಜೀವನವನ್ನ ಸುಭದ್ರಗೊಳಿಸಲು ಬೇಕಾದ ತಯಾರಿಗಳನ್ನ ಮಾಡಿಕೊಳ್ಳುವುದು. ಪ್ರೈಸ್ ಲಾಸ್ ನಲ್ಲಿ ಬೆಳೆದ ಎಲ್ಲಾ ಬೆಳೆಗಳೂ ಕುಸಿತವಾಗ ಬೇಕಿಲ್ಲ. ಯಾವುದೇ ಉತ್ಪನ್ನದ ಬೆಲೆಯಲ್ಲಿ ಕುಸಿತವಾಗಿ ನಿಗದಿತ ಬೆಲೆಗಿಂತ ಕಡಿಮೆಗೆ ಮಾರಬೇಕಾದ ಸನ್ನಿವೇಶದಲ್ಲಿ ರೈತರ ಹಿತವನ್ನ ಕಾಯಲು ಬೇಕಾದ ಸಿದ್ಧತೆಗಳನ್ನ ಈ ವಿಧೇಯಕ ಹಾರಿಗೆ ತಂದಿದೆ.
- ರೈತರಿಗೆ ಸಾಲದ ಸಹಾಯ: ಮೇ 17, 2019 ರಿಂದ ಬದಲಾವಣೆ ಜಾರಿಗೆ ಬಂದಿದ್ದು ಅದರ ಪ್ರಕಾರ ರೈತರಿಗೆ ನೇರ ಸಾಲದ ರೂಪದಲ್ಲಿ 6 ಲಕ್ಷ ಅಮೆರಿಕನ್ ಡಾಲರ್ ತನಕ ನೀಡಬಹುದು. ಗ್ಯಾರಂಟೀಡ್ ಲೋನ್ ಎನ್ನುವ ಅಡಿಯಲ್ಲಿ ಈ ಮೊತ್ತವನ್ನ 17 ಲಕ್ಷ 50 ಸಾವಿರದ ವರೆಗೆ ಗರಿಷ್ಟ ನೀಡಲಾಗುತ್ತದೆ. ಹೀಗೆ ಸಾಲಕ್ಕೆ ಅರ್ಜಿ ಸಲ್ಲಿಸುವ ಪ್ರಜೆ ಕನಿಷ್ಠ 3 ವರ್ಷ ರೈತನಾಗಿ ದುಡಿದ ಅನುಭವ ಹೊಂದಿರಬೇಕು ಎನ್ನುವುದು ಪ್ರಮುಖ ನಿಬಂಧನೆಯಾಗಿದೆ.
ರೈತರ ಉತ್ಪನ್ನಗಳನ್ನ ಮಾರಲು ಮಾರ್ಕೆಟಿಂಗ್ ಕೂಡ ಮಾಡಲು ಕಾರ್ಯಕ್ರಮಗಳಿವೆ:
ರೈತರ ಮಾರುಕಟ್ಟೆ ತೆರೆಯುವುದು ಆ ಮೂಲಕ ನೇರವಾಗಿ ಗ್ರಾಹಕ-ರೈತನ ಭೇಟಿಗೆ ಅನುವು ಮಾಡಿಕೊಡುವುದರ ಜೊತೆಗೆ ಸ್ಥಳೀಯ ಆಹಾರ ಪದಾರ್ಥಗಳನ್ನ ಕೊಳ್ಳುವಂತೆ ಅದರ ಕುರಿತು ಕಾರ್ಯಕ್ರಮಗಳನ್ನ ಏರ್ಪಡಿಸುವುದು ತನ್ಮೂಲಕ ಉತ್ಪನಗಳ ಮಾರಾಟಕ್ಕೆ ಸಹಾಯ ಮಾಡುವುದು ಕೂಡ ಸರಕಾರದ ಆದೇಶದ ಮೇರೆಗೆ ಮಾಡಲು ಪ್ರತ್ಯೇಕ ವಿಭಾಗಗಳಿವೆ.
ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ನೀಡಲಿದೆ ಹೊಸ ಆಯಾಮ!
ಆರ್ಗಾನಿಕ್ ಅಥವಾ ರಾಸಾಯನಿಕಗಳ ಬಳಕೆಯಿಲ್ಲದೆ ಬೆಳೆದ ಸಾವಯವ ಕೃಷಿ ಉತ್ಪನ್ನಗಳನ್ನ ವಿದೇಶಕ್ಕೆ ರಫ್ತು ಮಾಡಲು ಇಂತಹ ಬೆಳೆಗಾರರ ಗುಂಪುಗಳನ್ನ ಅಥವಾ ಪುಟ್ಟ ಸಂಘಗಳನ್ನ ಕಟ್ಟಲು ಪ್ರೇರೇಪಿಸುವುದು ಜೊತೆಗೆ ಇವರ ಉತ್ಪನ್ನಗಳು ಹೆಚ್ಚು ಬೇರೆಡೆಗೆ ತಲುಪಲು ಸಹಾಯ ಮಾಡುವುದಕ್ಕೆ ಕೂಡ ಬೇರೆಯ ವಿಭಾಗವಿದೆ.
ಹೀಗೆ ಅಮೇರಿಕಾದಲ್ಲಿ ಕೃಷಿ ಅಡಿಯಲ್ಲಿ ಎಲ್ಲವನ್ನೂ ವ್ಯವಸ್ಥಿತವಾಗಿ ವಿಭಾಗಿಸಲಾಗಿದೆ. ಹೀಗೆ ವಿಭಜಿಸಲ್ಪಟ್ಟ ಎಲ್ಲರೂ ತಮ್ಮ ಕಾರ್ಯವನ್ನ ಆಸ್ಥೆಯಿಂದ ಮಾಡುತ್ತಾರೆ. ಒಟ್ಟಾರೆ ವರ್ಷ ಪೂರ್ತಿ ಕಷ್ಟಪಟ್ಟು ದುಡಿಯುವ ಕೃಷಿಕನ ಬೆವರಿನ ಬೆಲೆಯನ್ನ ಈ ದೇಶ ತಿಳಿದುಕೊಂಡಿದೆ. ಅದಕ್ಕೆ ಕೊಡಬೇಕಾದ ಗೌರವವನ್ನ ಆತನಿಗೆ ನಷ್ಟವಾಗದ ಹಾಗೆ ನೋಡಿಕೊಂಡು ನೀಡುತ್ತಿದೆ.
ಯೂರೋಪಿಯನ್ ಒಕ್ಕೂಟದಲ್ಲಿ ಕೃಷಿಯ ಕಾನೂನು ಹೇಗಿದೆ?
1950 ಮತ್ತು 1960ರ ಸಮಯದಲ್ಲಿ ಇಲ್ಲಿನ ಒಕ್ಕೂಟದಲ್ಲಿ ಕೃಷಿಯ ಕುರಿತು ಒಮ್ಮತದ, ಎಲ್ಲರೂ ಒಪ್ಪುವ ಒಂದು ಕಾನೂನು ಇರಲಿಲ್ಲ. ಹೀಗಾಗಿ ಬೆಳೆಗಳನ್ನ ಬೆಳೆಯುವುದರಲ್ಲಿ ನಿಖರತೆ ಇರುತ್ತಿರಲಿಲ್ಲ. ಒಕ್ಕೂಟದ ಎಲ್ಲಾ ದೇಶಗಳೂ ಒಂದೇ ಬೆಳೆಯನ್ನ ಬೆಳೆದರೆ ಅದಕ್ಕೆ ಬೇಡಿಕೆ ಇಲ್ಲದೆ ಧಾನ್ಯ ನಷ್ಟವಾಗುತಿತ್ತು. ಅಂದರೆ ಒಕ್ಕೂಟದ ದೇಶಗಳ ನಡುವೆ ಯಾರು ಏನು ಬೆಳೆಯುತ್ತಿದ್ದಾರೆ? ಯಾವುದು ಬೆಳೆಯಬೇಕು? ಯಾವುದಕ್ಕೆ ಬೇಡಿಕೆ ಹೆಚ್ಚು? ಹೀಗೆ ಇಂತಹ ಮಾಹಿತಿಗಳ ಕೊರತೆ ಬಹಳವಿತ್ತು. ಹೀಗಾಗಿ 1962ರಲ್ಲಿ ಕಾಮನ್ ಅಗ್ರಿಕಲ್ಚರ್ ಪಾಲಿಸಿ (ಸಿಎಪಿ) ಯನ್ನ ಜಾರಿಗೆ ತರಲಾಗುತ್ತದೆ. ಇದರ ಮೂಲ ಧ್ಯೇಯ ಕೃಷಿಯ ಉಳಿಯುವಿಕೆ ಮತ್ತು ಬೆಳೆಯುವಿಕೆ. (ಸಸ್ಟೈನೆಬಿಲಿಟಿ ಮತ್ತು ಗ್ರೋಥ್ )
1962 ರಿಂದ ಇಲ್ಲಿಯವರೆಗೆ ಈ ಕಾನೂನು ಬಹಳಷ್ಟು ತಿದ್ದುಪಡಿಗೆ ಒಳಪಟ್ಟಿದೆ. ಇತ್ತೀಚಿಗೆ ಅಂದರೆ 2018 ರಲ್ಲಿ ಇದು ಬದಲಾವಣೆಗೆ ಒಗ್ಗಿಕೊಂಡಿದೆ. ಇದರ ಪ್ರಕಾರ
- ರೈತರ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯನ್ನ ಸೃಷ್ಟಿಸುವುದು ಮತ್ತು ರೈತರಿಗೆ ಉತ್ತಮ ಒಪ್ಪಂದವನ್ನ ಮಾಡಿಕೊಡುವುದು.
- ಭವಿಷ್ಯದಲ್ಲಿ ಭದ್ರತೆಗೆ ಆದ್ಯತೆಯನ್ನ ನೀಡುವುದು. ರೈತರ ಬದುಕು ಯಾವುದೇ ಕಾರಣದಿಂದ ಸಮಸ್ಯೆಗೆ ಸಿಲುಕದಂತೆ ನೋಡಿಕೊಳ್ಳುವುದು.
- ಸಹಜ ಮತ್ತು ನೈಸರ್ಗಿಕ ಕೃಷಿಗೆ ಹೆಚ್ಚಿನ ಆದ್ಯತೆಯನ್ನ ನೀಡುವುದು ತನ್ಮೂಲಕ ಪ್ರಕೃತಿಯನ್ನ ಹಾಳಾಗದಂತೆ ತಡೆಯುವುದು.
- ರೈತ ವೃತ್ತಿಯನ್ನ ಯೂರೋಪಿಯನ್ ಸಮಾಜದಲ್ಲಿ ಹೃದಯ ಭಾಗದಲ್ಲಿ ಕೂರಿಸಲು ಶ್ರಮಿಸುವುದು. ಅಂದರೆ ರೈತ ವೃತ್ತಿ ಅತ್ಯಂತ ಉತ್ತಮವಾದ ಮತ್ತು ಉನ್ನತ ವೃತ್ತಿ ಎನ್ನುವುದನ್ನ ಮತ್ತು ಆತನಿಗೆ ಅತ್ಯಂತ ಹೆಚ್ಚಿನ ಗೌರವ ಸಮಾಜದಲ್ಲಿ ಸಿಗುವಂತೆ ಮಾಡುವುದು.
ಪ್ರಕೃತಿಯನ್ನ ಹಾಳಾಗದಂತೆ ತಡೆಯುವುದು, ಶ್ರಮಿಸುವುದು ಮತ್ತು ರೈತನಿಗೆ ಹೆಚ್ಚಿನ ಬೇಡಿಕೆಯನ್ನ ಸೃಷ್ಟಿಸುವ ಕಾರ್ಯ ಸೂಚಿಗಳನ್ನ ಹೊತ್ತ ಈ ವಿಧೇಯಕವನ್ನ ಕಾಮನ್ ಅಗ್ರಿಕಲ್ಚರ್ ಪಾಲಿಸಿ ಬದಲಾಗಿ ಫ್ಯೂಚರ್ ಅಗ್ರಿಕಲ್ಚರ್ ಪಾಲಿಸಿ ಎನ್ನಬಹದು.
ಮಿನಿಮಮ್ ಪ್ರೈಸ್ ಗ್ಯಾರಂಟಿ ಜೊತೆಗೆ ಪ್ರೈಸ್ ಲಾಸ್ ಪಾಲಿಸಿ ಇವುಗಳು ಕೂಡ ಚಾಲನೆಯಲ್ಲಿರುವುದರಿಂದ ಮತ್ತು ರೈತರೂ ಕೂಡ ಸೋಶಿಯಲ್ ಸೆಕ್ಯುರಿಟಿ ಅಡಿಯಲ್ಲಿ ಬರುವುದರಿಂದ ಯೂರೋಪಿಯನ್ ಒಕ್ಕೂಟದ ರೈತರು ಬೇರೆ ದೇಶದ ರೈತರಿಗಿಂತ ಪುಣ್ಯವಂತರು.
ಕೃಷಿ ಮತ್ತು ಜಪಾನ್: ಕಳೆದ ಹತ್ತು ವರ್ಷದಿಂದ ಜಪಾನ್ ಕೃಷಿಗೆ ನೀಡಬೇಕಾದ ಬೆಂಬಲ ಮತ್ತು ಗಮನವನ್ನ ನೀಡಿಲ್ಲ ಎಂದು ಧಾರಾಳವಾಗಿ ಹೇಳಬಹುದು. ಜಪಾನ್ ತಂತ್ರಜ್ಞಾನದಲ್ಲಿ ಹೆಚ್ಚೆಚ್ಚು ಸಾಧನೆ ಮಾಡುತ್ತಾ ಹೋದಂತೆಲ್ಲ ಕೃಷಿಯ ಕಡೆಗೆ ಅದರ ಗಮನ ಅಷ್ಟಕಷ್ಟೇ. ಆದರೆ ಈ ದಿನಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳು ಶುರುವಾಗಿದೆ. ಯುವ ಜನತೆ ಹಳ್ಳಿಯ ಕಡೆಗೆ ಹೋಗುವುದು ಮತ್ತು ಹಳ್ಳಿಯ ಬದುಕನ್ನ ಇಷ್ಟ ಪಡುವುದು ನಿಧಾನವಾಗಿ ಹೆಚ್ಚಾಗುತ್ತಿದೆ.
ಜಪಾನ್ ಕೃಷಿ ನೀತಿಯ ಪ್ರಮುಖ ಅಂಶ ಮಾರ್ಕೆಟ್ ಪ್ರೈಸ್ ಸಪೋರ್ಟ್ (ಎಂಪಿಎಸ್) ಇದು ಕೇವಲ ಬೆಳೆಗಾರರಿಗೆ ಮಾತ್ರ ಅನ್ವಯ. ಅಂದರೆ ಯಾವುದೇ ಕೃಷಿ ಉತ್ಪನ್ನವನ್ನ ಬೆಳೆದ ಬೆಳೆಗಾರ ಅಥವಾ ರೈತ ಮಾರುಕಟ್ಟೆಯ ಬೆಲೆಯಲ್ಲಿ ಇನ್ನಿಲ್ಲದ ಇಳಿತವಾದರೆ ಆತನಿಗೆ ಸಪೋರ್ಟ್ ಅಥವಾ ಬೆಂಬಲ ಬೆಲೆ ಸಿಗುತ್ತದೆ. ಇಂತಹ ಉತ್ಪನ್ನವನ್ನ ರೈತನಿಂದ ಮಧ್ಯವರ್ತಿ ಅಥವಾ ಸೂಪರ್ ಮಾರ್ಕೆಟ್ ಕೊಂಡು ನಂತರ ಮಾರುಕಟ್ಟೆಯಲ್ಲಿ ಪದಾರ್ಥದ ಕುಸಿತವಾದರೆ ಆಗ ಬೆಂಬಲ ಬೆಲೆ ಸಿಕ್ಕುವುದಿಲ್ಲ. 80 ಪ್ರತಿಶತ ರೈತರ ಬದುಕನ್ನ ಕವರ್ ಮಾಡುತ್ತಿದೆ.
ಕೃಷಿ ಎಂದರೆ ಇಸ್ರೇಲ್ ಎನ್ನುವ ಮಟ್ಟಕ್ಕೆ ಪ್ರಸಿದ್ಧಿ ಪಡೆದಿರುವ ಇಸ್ರೇಲ್ ಕೃಷಿ ನೀತಿಯೇನು?
ಇಸ್ರೇಲ್ ಅತ್ಯಂತ ಪುಟ್ಟ ದೇಶ. ಜೊತೆಗೆ ಬಹಳಷ್ಟು ಪ್ರದೇಶವೇನಿದೆ ಅದು ಮರಳುಗಾಡು ಅಥವಾ ಬಂಜರು ಪ್ರದೇಶ. ಜಗತ್ತಿನ ಎಲ್ಲಾ ಯಹೂದಿಗಳು ಇಸ್ರೇಲ್ ಗೆ ಬಂದು ನೆಲಸುವ ನಿರ್ಧಾರ ಮಾಡಿದಾಗ ಊರಿನಿಂದ ಆಚೆಗೆ ಮತ್ತು ಸರಹದ್ದು ಪ್ರದೇಶದಲ್ಲಿ ವ್ಯವಸಾಯ ಶುರು ಮಾಡಿದರು. ಇಂದಿಗೂ ಇಸ್ರೇಲಿನ ಬಹುತೇಕೆ ಕೃಷಿ ಪ್ರದೇಶಗಳನ್ನ ನಾವು ಬಾರ್ಡರ್ ನಲ್ಲಿ ಕಾಣಬಹುದು. ಅಂದರೆ ತನ್ನ ಸುತ್ತಮುತ್ತಲಿನ ದೇಶಗಳ ಸರಹದ್ದಿಗೆ ಹೊಂದಿಕೊಂಡಂತೆ ಬೇಲಿಯ ರೂಪದಲ್ಲಿ ಇಸ್ರೇಲ್ ಕೃಷಿಯಲ್ಲಿ ತೊಡಗಿಕೊಂಡಿದೆ.
2019ರಲ್ಲಿ ಇಲ್ಲಿನ ಕೃಷಿ ನೀತಿಯನ್ನ ಬದಲಾಯಿಸಲಾಯಿತು. ಅಲ್ಲಿಯವರೆಗೆ ಕೃಷಿ ಉತ್ಪನ್ನಗಳ ಮೇಲೆ ಮಿನಿಮಮ್ ಪ್ರೈಸ್ ಎನ್ನುವ ಒಂದು ಬೆಲೆಯನ್ನ ಸರಕಾರ ನಿಗದಿಪಡಿಸುತ್ತಿತ್ತು . ಇದರ ಪ್ರಕಾರ ರೈತರ ಹಿತ ರಕ್ಷಣೆಯಾಗುತ್ತಿತ್ತು. ಹೊಸ ನಿಯಮದಲ್ಲಿ ಇಷ್ಟೇ ಬೆಲೆಗೆ ಮಾರಬೇಕು, ಇಷ್ಟಕ್ಕೆ ಕೊಳ್ಳಬೇಕು ಎನ್ನುವ ಯಾವ ಅಂಶವೂ ಇಲ್ಲ. ಇದರಿಂದ ಇಲ್ಲಿನ ರೈತರು ಬಹಳ ಆಕ್ರೋಶಗೊಂಡಿದ್ದಾರೆ. ಇವರ ಆದಾಯದಲ್ಲಿ ಬಹಳ ಕಡಿಮೆಯಾಗಿದೆ. ವರ್ಷ ಪೂರ್ತಿ ಬೆವರು ಸುರಿಸಿ ದುಡಿಯುವುದು ನಾವು ಲಾಭ ಮಾಡುವುದು ಸೂಪರ್ ಮಾರ್ಕೆಟ್ ನವರು ಎನ್ನುವುದು ಸಾಮಾನ್ಯ ರೈತನ ನೋವಿನ ಧ್ವನಿ. ಇಂದಿಗೂ ಇದು ಮುಂದುವರೆದಿದೆ. ಹೀಗಾಗಿ ಹಣ್ಣು ಮತ್ತು ತರಕಾರಿ ಬೆಳೆಯುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಕುಸಿಯುತ್ತಿದೆ.
ಕೊನೆ ಮಾತು: ದೇಶ ಯಾವುದೇ ಇರಲಿ ಅಲ್ಲಿನ ಕೃಷಿಕನ ಬೆವರನ್ನ ಗೌರವಿಸುವ, ಆತನ ಉತ್ಪನ್ನಕ್ಕೆ ಸಿಗಬೇಕಾದ ಬೆಲೆ ಸಿಗುವಂತೆ ಅಲ್ಲಿನ ಕೃಷಿ ಕಾನೂನು ಇರಬೇಕು. ಆಯಾ ದೇಶದ ಇತರ ಹುಬ್ಬೇರಿಸುವ ವೃತ್ತಿಯ ಸಮಕ್ಕೆ ಕೃಷಿಗೆ ಮತ್ತು ಕೃಷಿಕನಿಗೆ ಸ್ಥಾನಮಾನ ಸಿಗಬೇಕು. ಕೃಷಿ ಬದುಕನ್ನ ಕೇವಲ ಬವಣೆಯ ಬದುಕು ಎನ್ನವಂತೆ ಮಾಡಿದರೆ ಮುಂಬರುವ ವರ್ಷಗಳಲ್ಲಿ ಈ ವೃತ್ತಿಯನ್ನ ಮಾಡಲು ಯಾರೂ ಮುಂದೆ ಬರುವುದಿಲ್ಲ. ನಾವು ಬದುಕಿನ ಇತರ ರಂಗದಲ್ಲಿ ಎಷ್ಟೇ ಮುಂದುವರಿಯಲಿ ಸಹಜ ಮತ್ತು ಸಾವಯವ ಆಹಾರ ಮಾತ್ರ ನಮ್ಮ ಸಾಧನೆಗಳನ್ನ ಆಸ್ವಾದಿಸಲು ನಮಗೆ ಬೇಕಾದ ಆರೋಗ್ಯ ಮತ್ತು ಆಯಸ್ಸನ್ನ ನೀಡಬಲ್ಲದು. ಕಂಪ್ಯೂಟರ್ ಪರದೆಯ ಮೇಲಿನ ಕೋಟಿಗಟ್ಟಲೆ ಹಣ ನಮಗೆ ಆರೋಗ್ಯ ಮತ್ತು ಆಯಸ್ಸು ಎರಡನ್ನೂ ನೀಡುವುದಿಲ್ಲ . ಇದನ್ನ ಅರಿತುಕೊಂಡು ಎಲ್ಲಾ ದೇಶಗಳೂ ತಮ್ಮ ಕೃಷಿ ನೀತಿಯನ್ನ ಅಳವಡಿಸಿಕೊಳ್ಳಬೇಕಾಗಿದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com