ಒತ್ತಡ ಅಥವಾ Stress: ಆರೋಗ್ಯದ ಮೇಲೆ ಪರಿಣಾಮ ಹೇಗೆ? (ಕುಶಲವೇ ಕ್ಷೇಮವೇ)
ರೋಗಕ್ಕೆ ಕಾರಣವಾದ ಅಂಶಗಳ ಕುರಿತ ಕುತೂಹಲ ಪ್ರತಿ ವ್ಯಕ್ತಿಗೆ ಇರುತ್ತದೆ. ನಾವು ವೈದ್ಯರನ್ನು 'ಸರ್ ನನಗೇಕೆ ಈ ತೊಂದರೆಯುಂಟು ಎಂದು ಪ್ರಶ್ನಿಸಿದಾಗ ಅವರಿಂದ ಸಾಮಾನ್ಯವಾಗಿ ಒಂದು ಉತ್ತರ ದೊರೆಯುತ್ತದೆ. "ಜಾಸ್ತಿ ಟೆನ್ಶನ್ ಮಾಡ್ಕೊಬೇಡಿ."
Published: 28th May 2022 11:09 AM | Last Updated: 05th November 2022 12:25 PM | A+A A-

ಒತ್ತಡ
ರೋಗಕ್ಕೆ ಕಾರಣವಾದ ಅಂಶಗಳ ಕುರಿತ ಕುತೂಹಲ ಪ್ರತಿ ವ್ಯಕ್ತಿಗೆ ಇರುತ್ತದೆ. ನಾವು ವೈದ್ಯರನ್ನು 'ಸರ್ ನನಗೇಕೆ ಈ ತೊಂದರೆಯುಂಟು ಎಂದು ಪ್ರಶ್ನಿಸಿದಾಗ ಅವರಿಂದ ಸಾಮಾನ್ಯವಾಗಿ ಒಂದು ಉತ್ತರ ದೊರೆಯುತ್ತದೆ. "ಜಾಸ್ತಿ ಟೆನ್ಶನ್ ಮಾಡ್ಕೊಬೇಡಿ." ಏನಿದು ಟೆನ್ಶನ್? ಒತ್ತಡ ಅಥವಾ stress ಅನ್ನು ನಾವು ಟೆನ್ಶನ್, ಚಿಂತೆ ಎಂಬಿತ್ಯಾದಿ ಅನ್ವರ್ಥಕ ನಾಮಗಳಿಂದ ಗುರುತಿಸುತ್ತೇವೆ. ಒತ್ತಡ ಎನ್ನುವುದು ದೈಹಿಕ ಅಥವಾ ಮಾನಸಿಕ ಒತ್ತಡವಾಗಿರಬಹುದು. ಚಿಂತೆ ಮಾನಸಿಕ ಒತ್ತಡದ ಸ್ವರೂಪಗಳಲ್ಲೊಂದಾಗಿದೆ. ನಮ್ಮ ದೇಹ ಆರೋಗ್ಯವಾಗಿದೆ ಎಂದಾಗ ಅದು ತನ್ನ ಕಾರ್ಯಚಟುವಟಿಕೆಗಳ ಮೂಲಕ 'ಸಮತೋಲನ ಕಾಯ್ದುಕೊಳ್ಳಲು ಸಮರ್ಥವಾಗಿದೆ ಎಂದರ್ಥ. ಈ 'ಸಮತೋಲನ'ವನ್ನು ತಪ್ಪಿಸುವ ಅಂಶಗಳೆಲ್ಲವನ್ನೂ ಬಾಹ್ಯ ಒತ್ತಡಗಳನ್ನಬಹುದು. ದೇಹ ತನ್ನನ್ನು ಈ ಒತ್ತಡಗಳಿಂದ ರಕ್ಷಿಸಿಕೊಳ್ಳಲು ನಾನಾ ರಕ್ಷಣಾತ್ಮಕ ತಂತ್ರಗಳನ್ನು ಹೊಂದಿದೆ. ಆದರೆ ವಯಸ್ಸಾದಂತೆ ಈ ರಕ್ಷಣಾತ್ಮಕ ಮಾರ್ಗಗಳು ದುರ್ಬಲಗೊಳ್ಳುತ್ತವೆ, ಮಾತ್ರವಲ್ಲ ಕೃತಕ ಬದುಕನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ಇಂದು ಬಾಹ್ಯ ಒತ್ತಡಗಳು ಪರಿಸರದಲ್ಲಿ ಅಧಿಕಗೊಳ್ಳುತ್ತಿವೆ. ಇವು ಇಂದು ಒತ್ತಡ ಸಂಬಂಧಿ ದೀರ್ಘಕಾಲಿಕ ಕಾಯಿಲೆಗಳಿಗೆ ನಾವು ತುತ್ತಾಗಲು ಕಾರಣವಾಗುತ್ತಿವೆ. ಈ ಚಿಂತೆ-ಒತ್ತಡಗಳು ನಮ್ಮನ್ನು ಹೇಗೆ ಕುಗ್ಗಿಸುತ್ತವೆ ಎಂಬುದನ್ನು ನೋಡೋಣ.
ಟೆನ್ಶನ್ ನಿಂದ ಅನಾರೋಗ್ಯ
ಬಾಹ್ಯ ಹಾಗೂ ಆಂತರಿಕ ಒತ್ತಡಗಳಲ್ಲಿ ಮಾನಸಿಕ ಅಂಶಗಳಿಗೆ ಇಂದು ಸಿಂಹಪಾಲು ಎಂದರೆ ತಪ್ಪಾಗಲಾರದು. ಹಿಂಸೆ- ಸಂಘರ್ಷ, ನಿಂದನೆ-ತಿರಸ್ಕಾರ, ಮಕ್ಕಳ ಹಾಗೂ ಹದಿಹರೆಯದವರ ಮನಗಳಲ್ಲಿ ದುಷ್ಪರಿಣಾಮ ಬೀರುತ್ತದೆ. ಇವು ಅವರಲ್ಲಿ ಋಣಾತ್ಮಕ ಚಿಂತನೆ, ಪ್ರಚೋದನಾತ್ಮಕ ನಡುವಳಿಕೆ, ಖಿನ್ನತೆ ಹಾಗೂ ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಲ್ಲದು. ನಿರುದ್ಯೋಗ, ಆಪ್ತರ ಸಾವು ನೋವು, ಆತ್ಮಹತ್ಯೆ, ಕುಟುಂಬದ ಆಂತರಿಕ ಸಂಘರ್ಷ, ವಿಚ್ಛೇದಿತ ಪಾಲಕರು, ದೀರ್ಘಾವಧಿ ಕಾಯಿಲೆಗಳು, ಯುದ್ಧ-ಅಪಘಾತದಂತಹ ಘಟನೆಗಳು ಆತಂಕ ಹಾಗೂ ಖಿನ್ನತೆ ಸಂಬಂಧಿ ಕಾಯಿಲೆಗಳಿಗೆ ಮುನ್ನುಡಿಯಾಗಿರುತ್ತವೆಂದು ವೈದ್ಯಕೀಯ ವಲಯ ಪರಿಗಣಿಸುತ್ತದೆ. ಮಾನಸಿಕ ಒತ್ತಡಗಳು, ನಿದ್ರಾಹೀನತೆ, ಗೊಂದಲಮಯ ಆಲೋಚನೆ, ಅತಿಪ್ರಚೋದನೆ, ತಾತ್ಕಾಲಿಕ ಮರಗಟ್ಟುವಿಕೆಯ ಅನುಭವಕ್ಕೂ ಕಾರಣವಾಗಬಲ್ಲವಾಗಿವೆ. ಸಮಾನ ವಯಸ್ಕರ ಒತ್ತಡ (peer pressure) ಅತಿಪ್ರಚೋದಕವಾದವುಗಳಲ್ಲಿ ಒಂದಾಗಿದೆ. ಈ ಒತ್ತಡದಲ್ಲಿ ಕೊಚ್ಚಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಯುವಕ-ಯುವತಿಯರನ್ನು ನಿಯಂತ್ರಿಸಲು ಹೆಣಗುತ್ತಿರುವ ವಯಸ್ಕ ಪಾಲಕರು ಕೂಡ ನಾನಾ ಬಗೆಯ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಮಾನಸಿಕ ಒತ್ತಡ ನಾನಾ ದೈಹಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹಾಗಾಗಿ ವಯಸ್ಕ ಪಾಲಕರಿಗೆ 'ಟೆನ್ಶನ್' ನೀಡದಿರುವುದು ಎಲ್ಲ ಮಕ್ಕಳ ಕರ್ತವ್ಯವಾಗಬೇಕಿದೆ.
ಒತ್ತಡದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳು
ಒತ್ತಡಮಯ ಸನ್ನಿವೇಶಗಳು ದೇಹದ ನರಮಂಡಲ, ಹೃದಯ-ರಕ್ತನಾಳ, ರಕ್ಷಣಾ ವ್ಯವಸ್ಥೆ, ಹಾರ್ಮೋನುಗಳ ಕಾರ್ಯಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತವೆ. ಒತ್ತಡದ ಸನ್ನಿವೇಶದಲ್ಲಿ ಹೃದಯಾಘಾತ ಹೃದಯ ಬಡಿತ ಲಯದಲ್ಲಿನ ತೀವ್ರ ಏರಿಕೆ ಹಾಗೂ ವ್ಯತ್ಯಾಸವನ್ನು (Arrhythmias) ತರಬಹುದಲ್ಲದೇ ಇದು ಆಕಸ್ಮಿಕ ಮರಣಕ್ಕೂ ಕಾರಣವಾಗಬಲ್ಲದು, ಒತ್ತಡಮಯ ಬದುಕು ಧೂಮಪಾನ, ಕುಡಿತ, ಜಡವಾದ ಜೀವನಶೈಲಿಗೆ ಪ್ರೇರೇಪಿಸುತ್ತದೆ. ಈ ದುಶ್ಚಟಗಳು ಹೃದಯ ಸಂಬಂಧಿ ಕಾಯಿಲೆಯ ಅಪಾಯ ಹೆಚ್ಚಿಸುತ್ತವೆ. ನಿರಂತರ ಕೆಲಸದೊತ್ತಡ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಕುಟುಂಬ ನಮ್ಮ ಸಾಮಾಜಿಕ ಮತ್ತು ಕೆಲಸ ಸಂಬಂಧಿ ಒತ್ತಡಗಳನ್ನು ಹೀರಿಕೊಳ್ಳುವ Shock absorber ಗಳಂತೆ ವರ್ತಿಸುತ್ತದೆ. ಕುಟುಂಬದಲ್ಲೂ ಸಮಸ್ಯೆ-ವ್ಯಾಜ್ಯ ತಲೆದೋರಿದರೆ ಅದರ ಸದಸ್ಯರೆಲ್ಲರೂ ಬಹುಬೇಗನೇ ಕುಗ್ಗಿ ಹೋಗುವ ಸಾಧ್ಯತೆ ಇರುತ್ತದೆ. ಮಹಿಳೆಯರಲ್ಲಿ ತಲೆನೋವಿನ ಸಮಸ್ಯೆ ಹೆಚ್ಚು. ಅಧಿಕ ಶ್ರಮ ಹಾಗೂ ಮಾನಸಿಕ ಒತ್ತಡವೂ ಮೈಗ್ರೇನ್ ಎಂಬ ತಲೆನೋವಿನ ಸಮಸ್ಯೆ ತೀವ್ರಗೊಳ್ಳಲು ಕಾರಣವಾಗುತ್ತದೆ. ತಲೆಯ ನೋವಿಗೂ ಮಾನಸಿಕ ಒತ್ತಡಕ್ಕೂ ಹತ್ತಿರದ ಸಂಬಂಧವಿರುವುದರಿಂದ ನಾವು ಒತ್ತಡದಿಂದ ಕೆಲಸ ಕಾರ್ಯಗಳಿಗೆ, “ಆ ಕೆಲಸ ದೊಡ್ಡ ತಲೆನೋವು ಮಾರಾಯರೇ" ಎಂದು ಉದ್ಧರಿಸುವುದು. ಟೆನನ್ ವ್ಯಕ್ತಪಡಿಸಲು "ಮಂಡೆ ಬಿಸಿ “ತಲೆ ಬಿಸಿ" ಎಂಬ ಪದ ಬಳಕೆಯೂ ಈ ಕಾರಣಕ್ಕಾಗಿಯೇ ಆರಂಭವಾಗಿರಬೇಕೆನಿಸುತ್ತದೆ.
ಹೆಚ್ಚು ಚಿಂತೆಯುಳ್ಳವರು ಕಾರ್ಟಿಸೋಲ್ ಪರಿಣಾಮದಿಂದಾಗಿ ಬೊಜ್ಜಿನ ಸಮಸ್ಯೆ ಎದುರಿಸುತ್ತಾರೆ. ಈ ಹಾರ್ಮೋನ್ ಪರಿಣಾಮದಿಂದಾಗಿ ಕೊಬ್ಬು ಕಿಬ್ಬೊಟ್ಟೆಯ ಭಾಗದಲ್ಲಿ ಶೇಖರಣೆಗೊಂಡು ಅತಿ ಕೊಲೆಸ್ಟ್ರಾಲ್ (Central Obesity) ಗೆ ಕಾರಣವಾಗುತ್ತದೆ. ಅಧಿಕವಾದ ಬೊಜ್ಜು ದೀರ್ಘಾವಧಿ ಸಮಸ್ಯೆ ತಲೆದೋರಲು ಕಾರಣವಾಗುತ್ತದೆ. ಚಿಂತೆ ಅಥವಾ ಒತ್ತಡದಿಂದಾಗಿ ಅಲ್ಸರ್ (ಹುಣ್ಣ), ಎದೆಯುರಿ (heartburn) - ಆತಿಸಾರ-ಮಲಬದ್ಧತೆಯ ಕಿರಿಕಿರಿ ಉಂಟಾಗಬಲ್ಲವು. ಒತ್ತಡದಲ್ಲಿರುವಾಗ ದೇಹದ ಶಕ್ತಿ ಬಳಕೆಯ ಪ್ರಮಾಣ ಹಾಗೂ ಬೇಡಿಕೆ ಹೆಚ್ಚುವುದರಿಂದ ವ್ಯಕ್ತಿ ಕೃಶವಾಗುತ್ತಾ ಹೋಗುತ್ತಾನೆ. ಮಾನಸಿಕ ಮರೆಗುಳಿತನ, ಮೆದುಳಿನ ಸಂಬಂಧಿ ಆಲ್ಜಮರ್ಸ್ ಗೆ (Alzheimers diseases) ಕಾರಣವಾಗಬಲ್ಲದು. ಅಧಿಕ ಮಾನಸಿಕ ಒತ್ತಡ ಹಾಗೂ ರಕ್ತದೊತ್ತಡದಿಂದಾಗಿ ಕೆಲವೊಮ್ಮೆ ಮೆದುಳಿಗೆ ಅಸ್ಥಿರ ರಕ್ತಸಂಚಲನದ ಕಾರಣದಿಂದಾಗಿ ರಕ್ತಕೊರತೆ ಯಿಂದ ಸ್ಟ್ರೋಕ್' (stroke) ನಂತಹ ಆಘಾತಕಾರಿ ಅನುಭವವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಒತ್ತಡ ನಿಭಾಯಿಸುವುದು ಸುಲಭವಲ್ಲ
ಮನಸ್ಸನ್ನು ನಿಗ್ರಹಿಸುವುದು ಕಷ್ಟ ಎಂದು ಅರ್ಜುನ ಮಹಾಭಾರತದಲ್ಲಿ ಒಪ್ಪಿಕೊಂಡಿದ್ದಾನೆ. ಚಂಚಲತೆಯಿಂದ ಕೂಡಿದ ಮನವನ್ನು ನಿಗ್ರಹಿಸಿ ಒತ್ತಡವನ್ನು ನಿಭಾಯಿಸುವುದು ಸುಲಭವಲ್ಲ. ಅತಿಯಾದ ನಿರೀಕ್ಷೆ, ಕೃತಕವಾದ ಆವಶ್ಯವಲ್ಲದ ಅನಗತ್ಯ ಜವಾಬ್ದಾರಿಗಳು, ಹೆಚ್ಚುತ್ತಿರುವ ಮೋಸದ ವಾತಾವರಣ, ಇತ್ಯಾದಿ ಮನಸ್ಥಿತಿಯನ್ನು ಹದಗೆಡಿಸುತ್ತಿದೆ. ಹಾಗಾಗಿ ದೇಹದ ಮೇಲ್ವಿಚಾರಣೆಯೊಡನೆ ಮನಸ್ಸಿನ ಸ್ಥಿತಿ-ಗತಿಯ ಮೇಲೂ ನಿಗಾವಹಿಸುವುದು ಅಗತ್ಯ. ಸಿಟ್ಟಿನಲ್ಲಿ ಪ್ರತಿಕ್ರಿಯೆಯನ್ನು ನಾವು ನೀಡಬಾರದು. ದಿನನಿತ್ಯ ವಾಯುವಿಹಾರ, ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಎಂಡೋರ್ಫಿನ್ ಉತ್ಪತ್ತಿಯಾಗುತ್ತದೆ. ಇವು ಉತ್ಸಾಹಕ್ಕೆ ಕಾರಣವಾಗುತ್ತದೆ. ನಿದ್ರಾಹೀನತೆಯಿಂದ ದೂರವಿರಲು ಚಹಾ-ಕಾಫಿಗೆ ಕಡಿವಾಣ ಹಾಕಿ, ಏಳರಿಂದ ಎಂಟು ಗಂಟೆಯ ನಿದ್ರೆ ಒತ್ತಡ ನಿವಾರಿಸಲು ಸಹಕರಿಸುತ್ತದೆ. ನಿದ್ರೆ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ಒದಗಿಸುತ್ತದೆ. ಒತ್ತಡದಲ್ಲಿರುವವರು ಕುಟುಂಬದಿಂದ ದೂರವಿರಲು ಯತ್ನಿಸದೆ, ಅವರೊಡನೆ ತಮ್ಮ ಕಷ್ಟ-ಸುಖ ಹಂಚಿಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಒತ್ತಡ ನಿರ್ವಹಣೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವುದರಿಂದ ಮಾನಸಿಕ ಸ್ವಾಸ್ಥ್ಯಕ್ಕಾಗಿ ತಜ್ಞ ವೈದ್ಯರ ಸಹಾಯ ಪಡೆಯುವುದು ಕೂಡ ಸೂಕ್ತವೇ ಆಗಿದೆ.
ಆಸೆಯೇ ದುಃಖಕ್ಕೆ ಮೂಲವೆಂದು ಬುದ್ಧ ಜಗತ್ತಿಗೆ ಸಾರಿದನು. ಚಿಂತೆ-ಒತ್ತಡಗಳೇ ಅನೇಕ ರೋಗಗಳಿಗೆ ಮೂಲವೆಂದು ವೈದ್ಯಕೀಯ ವಲಯ ಹೇಳುತ್ತಿದೆ. ದೈಹಿಕ ಆರೋಗ್ಯದೊಡನೆ ಮಾನಸಿಕ ಆರೋಗ್ಯ ನೆಮ್ಮದಿಗೂ ನಾವು ಪ್ರಾಮುಖ್ಯತೆ ನೀಡಬೇಕು. ಹಣ ಸಂಪಾದನೆ, ಉದ್ಯೋಗಗಳಿಗಿಂತ ಕುಟುಂಬ ಮೌಲ್ಯ, ನೆಮ್ಮದಿ, ಶಾಂತಿ, ಆರೋಗ್ಯವಂತ ಬದುಕಿಗೆ ಬಹುಮುಖ್ಯವೆನ್ನುವುದನ್ನು ಅರಿಯಬೇಕು.
ಡಾ. ವಸುಂಧರಾ ಭೂಪತಿ
ಮೊಬೈಲ್: 9986840477
ಇ-ಮೇಲ್: bhupathivasundhara@gmail.com