ಹೀಮೋಫಿಲಿಯಾ: ಭಯ ಬೇಡ, ಎಚ್ಚರಿಕೆ ಇರಲಿ (ಕುಶಲವೇ ಕ್ಷೇಮವೇ)

ಹೀಮೋಫಿಲಿಯಾ ಒಂದು ಆನುವಂಶಿಕ ರಕ್ತಸ್ರಾವದ ಕಾಯಿಲೆ. ಈ ಕಾಯಿಲೆ ಇದ್ದರೆ ರಕ್ತವು ಸರಿಯಾಗಿ ಹೆಪ್ಪುಗಟ್ಟುವುದಿಲ್ಲ. ಅಂದರೆ ಗಾಯಗಳು ಅಥವಾ ಶಸ್ತ್ರಚಿಕಿತ್ಸೆಯ ನಂತರ ರಕ್ತಸ್ರಾವವಾದರೆ ಅದು ನಿಲ್ಲುವುದಿಲ್ಲ. ಹೀಗಾಗಿ ಇದೊಂದು ಗಂಭೀರ ಸಮಸ್ಯೆಯಾಗಿದೆ. 
ಹೀಮೋಫಿಲಿಯಾ
ಹೀಮೋಫಿಲಿಯಾ

ಹೀಮೋಫಿಲಿಯಾ ಒಂದು ಆನುವಂಶಿಕ ರಕ್ತಸ್ರಾವದ ಕಾಯಿಲೆ. ಈ ಕಾಯಿಲೆ ಇದ್ದರೆ ರಕ್ತವು ಸರಿಯಾಗಿ ಹೆಪ್ಪುಗಟ್ಟುವುದಿಲ್ಲ. ಅಂದರೆ ಗಾಯಗಳು ಅಥವಾ ಶಸ್ತ್ರಚಿಕಿತ್ಸೆಯ ನಂತರ ರಕ್ತಸ್ರಾವವಾದರೆ ಅದು ನಿಲ್ಲುವುದಿಲ್ಲ. ಹೀಗಾಗಿ ಇದೊಂದು ಗಂಭೀರ ಸಮಸ್ಯೆಯಾಗಿದೆ. 

ಹೀಮೋಫಿಲಿಯಾ ರೋಗ ಎಂದರೇನು?

ಸಾಮಾನ್ಯವಾಗಿ ರಕ್ತದಲ್ಲಿ ರಕ್ತವನ್ನು ಹೆಪ್ಪುಗಟ್ಟುವ ಪ್ರೊಟೀನ್‍ಗಳಿರುತ್ತವೆ. ಅವುಗಳು ಗಾಯಗಳು ಅಥವಾ ಶಸ್ತ್ರಚಿಕಿತ್ಸೆಯ ನಂತರ ಹೆಪ್ಪುಗಟ್ಟಿ ರಕ್ತದ ಹೊರಹರಿವನ್ನು ನಿಲ್ಲಿಸಲು ಸಹಾಯ ಮಾಡುತ್ತವೆ. ಆದರೆ ಹೀಮೋಫೀಲಿಯಾ ಇದ್ದವರಿಗೆ ರಕ್ತಸ್ರಾವ ನಿಲ್ಲುವುದಿಲ್ಲ. ಅವರಿಗೆ ಒಂದು ಚಿಕ್ಕ ಗಾಯವಾದರೂ ಬಹಳ ರಕ್ತ ನಷ್ಟವಾಗುತ್ತದೆ. ಕೆಲವೊಮ್ಮೆ ತಿಳಿದಿರುವ ಅಥವಾ ಗುರುತಿಸಬಹುದಾದ ಕಾರಣವಿಲ್ಲದೆ ರಕ್ತಸ್ರಾವವು ಉಂಟಾಗಬಹುದು.  

ಹೀಮೋಫಿಲಿಯಾ ರಕ್ತ ಹೆಪ್ಪುಗಟ್ಟುವಿಕೆಯಲ್ಲಿನ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗುವ ರೋಗ. ತಾಯಿಯಿಂದ ಮಗನಿಗೆ ಬಳವಳಿಯಾಗಿ ಬರುವ ಕಾಯಿಲೆ ಇದಾಗಿದೆ. ಎಕ್ಸ್ ಎಂಬ ವರ್ಣತಂತುಗಳಲ್ಲಿ ಈ ರೋಗ ಸಾಗಿಸಲ್ಪಡುವುದರಿಂದ ಇದು ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಹಿಳೆಯರಿಗೆ ಈ ರೋಗ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಕನ್ನಡದಲ್ಲಿ ಇದನ್ನು ಕುಸುಮ ರೋಗ ಎಂದು ಕರೆಯಲಾಗುತ್ತದೆ. 

ಹೀಮೋಫಿಲಿಯಾ ವಿಧಗಳು

ಹೀಮೋಫಿಲಿಯಾದಲ್ಲಿ ಎ, ಬಿ, ಸಿ ಎಂಬ ಮೂರು ವಿಧಗಳಿವೆ. ರಕ್ತಹೆಪ್ಪುಗಟ್ಟಲು ನೆರವಾಗುವ 13 ಘಟಕಗಳಲ್ಲಿ (ಫ್ಯಾಕ್ಟರ್‍ಗಳಲ್ಲಿ) 8ನೇ ಫ್ಯಾಕ್ಟರ್ ಅಥವಾ ಘಟಕ ಕಡಿಮೆ ಇದ್ದರೆ ಅದನ್ನು ಟೈಪ್ ಎ ಎಂದು, 9ನೇ ಫ್ಯಾಕ್ಟರ್ ಕಡಿಮೆ ಇದ್ದರೆ ಟೈಪ್ ಬಿ ಎಂದು ಕರೆಯಲಾಗುತ್ತದೆ. ಟೈಪ್ ಎ ಹಿಮೋಫಿಲಿಯಾ ಹೆಚ್ಚಾಗಿ ಕಾಣಿಸುತ್ತದೆ. ಬಿ ಮತ್ತು ಸಿ ಹಿಮೋಫಿಲಿಯಾ ಕಾಯಿಲೆ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. ರೋಗದ ತೀವ್ರತೆಗೆ ತಕ್ಕಂತೆ ಸೌಮ್ಯ ಹಿಮೋಫಿಲಿಯಾ, ಸಾಧಾರಣ ಹಿಮೋಫಿಲಿಯಾ ಮತ್ತು ತೀವ್ರ ಹಿಮೋಫಿಲಿಯಾ ಎಂದು ವಿಂಗಡಿಸಲಾಗುತ್ತದೆ.

ಹೀಮೋಫಿಲಿಯಾ ರೋಗದ ಪರಿಣಾಮಗಳು

ಹೀಮೋಫಿಲಿಯಾ ಇದ್ದಾಗ ಗಂಟು, ಕೀಲು, ಸ್ನಾಯು ಮತ್ತು ಮಾಂಸಖಂಡಗಳಲ್ಲಿ ರಕ್ತಸ್ರಾವ ಆಗಬಹುದು. ಮೂಗಿನಲ್ಲಿ ರಕ್ತಸ್ರಾವ, ಹಲ್ಲಿನ ವಸಡಿನಲ್ಲಿ ರಕ್ತಸ್ರಾವ, ಸಂಧಿನೋವು, ಊತ, ಕೆಲವರಿಗೆ ಮಲ ಮತ್ತು ಮೂತ್ರದಲ್ಲಿಯೂ ರಕ್ತ ಸ್ರಾವವಾಗಬಹುದು. ಹೆಚ್ಚು ರಕ್ತಸ್ರಾವವಾದರೆ ತಕ್ಷಣವೇ ವೈದ್ಯರಿಂದ ಚುಚ್ಚುಮದ್ದು ತೆಗೆದುಕೊಳ್ಳಬೇಕು.

ಮೊಣಕಾಲು, ಹಿಂಗಾಲು ಮತ್ತು ಮೊಣಕೈಗಳಲ್ಲಿ ದೀರ್ಘಕಾಲ ರಕ್ತಸ್ರಾವವು ಇದ್ದರೆ ಮೃದ್ವಸ್ಥಿ ಮತ್ತು ಮೂಳೆಗಳಿಗೆ ಹಾನಿ ಉಂಟಾಗುತ್ತದೆ. ಇದರಿಂದಾಗಿ ದೀರ್ಘಕಾಲಿಕ ಸಂಧಿವಾತ ಮತ್ತು ಗಂಟು ಸಮಸ್ಯೆಯು ಬರಬಹುದು. ತೊಡೆಯ ಭಾಗದಲ್ಲಿ ಇರುವಂತಹ ಗಂಟುಗಳಿಗೆ ರಕ್ತಸ್ರಾವ ಪರಿಣಾಮ ಬೀರುವುದು. ಹೀಗಾಗಿ ನಿಯಮಿತ ವ್ಯಾಯಾಮ ಮತ್ತು ಅದನ್ನು ಪರೀಕ್ಷೆ ಮಾಡಿಸುವ ಮೂಲಕ ಸುರಕ್ಷಿತವಾಗಿ ಇರಬಹುದು.

ಹೀಮೋಫಿಲಿಯಾ ಮತ್ತು ದೈಹಿಕ ಚಟುವಟಿಕೆ

ಹೀಮೋಫಿಲಿಯಾ ಇರುವ ಜನರು ವ್ಯಾಯಾಮ ಮಾಡುವುದು ಮತ್ತು ಕ್ರೀಡೆಗಳಲ್ಲಿ ಆಡುವುದು ತುಂಬಾ ಅಪಾಯಕಾರಿ ಎಂದು ತಿಳಿಯಬಾರದು. ಎಚ್ಚರಿಕೆಯಿಂದ ಮಾಡಿದರೆ ಯಾವುದೇ ರೀತಿಯ ವ್ಯಾಯಾಮವನ್ನು ಮಾಡಬಹುದು. ವ್ಯಾಯಾಮವು ಸ್ನಾಯುಗಳನ್ನು ಬಲಪಡಿಸುವುದು, ಮತ್ತು ಸಮನ್ವಯತೆಯನ್ನು ಹೆಚ್ಚಿಸುವುದು.

ಹೀಮೋಫಿಲಿಯಾ ಇರುವವರು ತಮ್ಮ ದೈಹಿಕ ಚಟುವಟಿಕೆಗಳನ್ನು ತುಂಬಾ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ಈಜು, ಸೈಕ್ಲಿಂಗ್, ನಡೆಯುವುದು ಮತ್ತು ಬ್ಯಾಡ್ಮಿಂಟನ್ ನಂತಹ ಕೆಲವು ಆಟಗಳನ್ನು ಆಡುವುದು ಸುರಕ್ಷಿತ ಮತ್ತು ಆರೋಗ್ಯಕಾರಿ ಕೂಡ. 

ಹೀಮೋಫಿಲಿಯಾ ರೋಗಿಗಳಿಗೆ ಆಹಾರಕ್ರಮ

ತಾಜಾ ಹಣ್ಣುಗಳು, ಸೊಪ್ಪುಗಳು ಮತ್ತು ತರಕಾರಿಗಳನ್ನು ಹೀಮೋಫಿಲಿಯಾ ಇದ್ದವರು ಹೆಚ್ಚಾಗಿ ಸೇವಿಸಬೇಕು. ವಿಶೇಷವಾಗಿ ಸಿಹಿ ಗೆಣಸು ಮತ್ತು ಬ್ರೊಕೊಲಿಯನ್ನು ಬಳಸಬೇಕು. ಹೆಚ್ಚು ಪ್ರೊಟೀನ್ ಇರುವ ಆಹಾರಗಳಾದ ಬೀನ್ಸ್, ನಟ್ಸ್, ಟೋಫು, ಚಿಕನ್ ಮತ್ತು ಮೀನುಗಳನ್ನು ತಿನ್ನಬೇಕು. ಕೊಬ್ಬಿನಂಶ ಕಡಿಮೆ ಇರುವ ಹಾಲನ್ನು ಕುಡಿಯಬೇಕು. ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಬೇಕು. ಬೆಣ್ಣೆ ಹಣ್ಣು, ಸೋಯಾಬೀನ್ ಮತ್ತು ಆಲೀವ್ ಸೇವನೆ ಬಹಳ ಉತ್ತಮ. 

ಹಿಮೋಫಿಲಿಯಾ ರೋಗಿಗಳು ಕಬ್ಬಿಣಾಂಶದ ಮಟ್ಟವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ ಪ್ರತಿ 15 ಮಿಲಿ ರಕ್ತದೊಂದಿಗೆ ಅಂದಾಜು 0.75 ಮೈಕ್ರೋಗ್ರಾಂಗಳಷ್ಟು ಕಬ್ಬಿಣವು ನಷ್ಟವಾಗುತ್ತದೆ. ಕಬ್ಬಿಣಾಂಶವಿರುವ ಆಹಾರಗಳಾದ ಕೆಂಪು ಮಾಂಸ, ಕೋಳಿ, ಎಲೆಗಳ ಹಸಿರು ತರಕಾರಿಗಳಾದ ಪಾಲಕ, ಕೋಸುಗಡ್ಡೆ, ಒಣಗಿದ ಬೀನ್ಸ್, ಧಾನ್ಯಗಳು, ಬೀಟ್‍ರೂಟ್, ಸೊಪ್ಪುಗಳು, ಅಂಜೂರ, ಅಕ್ರೋಟ್ ಮತ್ತು ಒಣದ್ರಾಕ್ಷಿಗಳನ್ನು ಅವರು ಸೇವಿಸಬೇಕು.

ಹೀಮೋಫಿಲಿಯಾ ರೋಗಿಗಳು ಹೊರಹೋಗುವಾಗ ತಮ್ಮ ರೋಗದ ವಿವರ ಮತ್ತ ಮನೆಯವರ ಫೋನ್ ನಂಬರ್‍ ಗಳನ್ನು ಇಟ್ಟುಕೊಂಡಿದ್ದರೆ ಒಳ್ಳೆಯದು. ಏನಾದರೂ ಅಪಾಯವಾದರೆ ಅಥವಾ ಕಷ್ಟಕರ ಪರಿಸ್ಥಿತಿಯಿದ್ದರೆ ಅವರ ಮನೆಯವರನ್ನು ಸಂಪರ್ಕಿಸಲು ಇದರಿಂದ ಉಪಯೋಗವಾಗುವುದು. ನಮ್ಮ ರಾಜ್ಯದಲ್ಲಿ ಹೀಮೋಫಿಲಿಯಾ ರೋಗಿಗಳ ಕಲ್ಯಾಣಕ್ಕಾಗಿ ದಾವಣಗೆರೆಯಲ್ಲಿ ಡಾ. ಸುರೇಶ್ ಹಾನಗವಾಡಿಯವರು ಕರ್ನಾಟಕ ಹೀಮೋಫಿಲಿಯಾ ಸೊಸೈಟಿಯನ್ನು ಸ್ಥಾಪಿಸಿ (1990) ಕಾರ್ಯನಿರತರಾಗಿದ್ದಾರೆ. ಕಳೆದ 30 ವರ್ಷಗಳಲ್ಲಿ 1000ಕ್ಕೂ ಹೆಚ್ಚು ರೋಗಿಗಳು ಈ ಸೊಸೈಟಿಯ ಸಹಾಯದಿಂದ ಚಿಕಿತ್ಸೆ ಪಡೆದಿದ್ದಾರೆ ಜೊತೆಗೆ 850 ರೋಗಿಗಳು ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡ ರೋಗಿಗಳಿಗೆ ಸಬ್ಸಿಡಿ ದರದಲ್ಲಿ ಔಷಧ ಕೊಡಿಸುವುದರ ಜೊತೆಗೆ ಕಡು ಬಡವರಿಗೆ ಉಚಿತ ಚಿಕಿತ್ಸೆಯನ್ನು ಇಲ್ಲಿ ನೀಡಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಕರ್ನಾಟಕ ಹಿಮೊಫೀಲಿಯಾ ಸೊಸೈಟಿಯ ಜಿಲ್ಲಾ ಘಟಕಗಳು ಕಾರ್ಯನಿರತವಾಗಿವೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com