
ರೋಬೊ ಅಡ್ವೈಸರಿ (ಸಾಂಕೇತಿಕ ಚಿತ್ರ)
ರೋಬೊ ಅಡ್ವೈಸರ್ಸ್ (robo advisors) ಎನ್ನುವುದು ಆನ್ಲೈನ್ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಸರ್ವಿಸ್ (Online investment management service). ಇಲ್ಲಿ ಗ್ರಾಹಕರಿಗೆ ಮ್ಯಾಥಮೆಟಿಕಲ್ ಆಲ್ಗರಿದಮ್ಸ್ ಮೂಲಕ ಹಣಕಾಸು ಸಲಹೆಗಳನ್ನ ನೀಡಲಾಗುತ್ತದೆ.
ಇಲ್ಲಿ human intervention ಅಂದರೆ ಮನುಷ್ಯನ ಹಸ್ತಕ್ಷೇಪ ಕಡಿಮೆಯಿರುತ್ತದೆ. ಈ ರೀತಿಯ ಆಲ್ಗರಿದಮ್ಸ್ ಬಳಸಿಕೊಂಡು ಗ್ರಾಹಕರ ಅಸೆಟ್ ಅಲೊಕೇಶನ್ ಅತ್ಯಂತ ದಕ್ಷವಾಗಿ ಮಾಡುವುದರಲ್ಲಿ ಇದು ಸಹಾಯ ಮಾಡುತ್ತದೆ. ಈ ರೀತಿಯ ಸೇವೆಗೆ ರೋಬೊ ಅಡ್ವೈಸರಿ ಅಥವಾ ರೋಬೊ ಅಡ್ವೈಸರ್ಸ್ ಎನ್ನಲಾಗುತ್ತದೆ.
ಇದೊಂದು ಆನ್ಲೈನ್ ಪ್ರಶ್ನೋತ್ತರ ಮಾಲಿಕೆಯಾಗಿದ್ದು, ಇಲ್ಲಿ ಗ್ರಾಹಕನ ಅಪಾಯ ತೆಗೆದುಕೊಳ್ಳುವ ಕ್ಷಮತೆ, ಹಣಕಾಸು ಪರಿಸ್ಥಿತಿ, ಎಷ್ಟು ರಿಟರ್ನ್ ಅಥವಾ ಲಾಭವನ್ನ ಬಯಸುತ್ತಾರೆ ಇತ್ಯಾದಿಗಳ ಆಧಾರದ ಮೇಲೆ ಹೂಡಿಕೆಯ ಸಲಹೆಯನ್ನ ನೀಡಲಾಗುತ್ತದೆ. ಇಲ್ಲಿ ಹೂಡಿಕೆದಾರನನ್ನ ಕಡಿಮೆ ಅಪಾಯ ಬಯಸುವ, ಮಧ್ಯಮ ಮತ್ತು ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಎಂದು ವರ್ಗಿಕರಣ ಮಾಡಲಾಗುತ್ತದೆ. ಮತ್ತು ಅದರ ಆಧಾರದ ಮೇಲೆ ಹೂಡಿಕೆಯ ಸಲಹೆಯನ್ನ ನೀಡಲಾಗುತ್ತದೆ.
ಇಂತಹ ಸಲಹೆಗಳು ಹೆಚ್ಚು ಖರ್ಚು ಬೇಡುವುದಿಲ್ಲ, ಮತ್ತು ವೇಗವಾಗಿ ಸಲಹೆಗಳು ಸಿಗುತ್ತದೆ. ಆದರೆ ಇದು ಪೂರ್ಣ ಪ್ರಮಾಣವಾಗಿ ಹೂಡಿಕೆದಾರನ ಬೇಕುಗಳನ್ನ ಅರ್ಥ ಮಾಡಿಕೊಳ್ಳುವುದಿಲ್ಲ, ಹೀಗಾಗಿ ಎಲ್ಲಾ ಸಮಯದಲ್ಲೂ ಇದು ಉತ್ತಮವಾಗಿ ಮತ್ತು ದಕ್ಷತೆಯಿಂದ ಕೆಲಸ ಮಾಡುತ್ತದೆ ಮತ್ತು ಫಲಿತಾಂಶ ನೀಡುತ್ತದೆ ಎನ್ನುವಂತಿಲ್ಲ.
ಇದನ್ನೂ ಓದಿ: ಷೇರು ಮಾರುಕಟ್ಟೆ: ಅಲ್ಗೊ ಟ್ರೇಡಿಂಗ್ ಎಂದರೇನು? ನೀವು ತಿಳಿಯಬೇಕಾದ ಅಂಶಗಳು...
ರೋಬೊ ಆಡ್ವೈಸರಿ ಒಳ್ಳೆಯದ? ಓಕೆ ನಾ? ಇದು ಸುರಕ್ಷಿತವೇ? ಇಂತಹ ಪ್ರಶ್ನೆಗಳು ಕೂಡ ಹೂಡಿಕೆದಾರರ ಮುಂದೆ ಬರುತ್ತದೆ. ಗಮನಿಸಿ ನೋಡಿ ಈ ಸರ್ವಿಸ್ ನಲ್ಲಿ ಫೀಸ್ ಬಹಳವೇ ಕಡಿಮೆ ಇರುತ್ತದೆ. ನೀವು ನೀಡಿದ ಮಾಹಿತಿಯ ಆಧಾರದ ಮೇಲೆ ಇಲ್ಲಿ ಹೂಡಿಕೆ ಮಾಡಿ ಎಂದ ಮೇಲೆ ಅಲ್ಲಿಗೆ ಮುಗಿಯಿತು, ಬೇರೆಯ ಮಾತುಕತೆಗೆ ಅಲ್ಲಿ ಅವಕಾಶವಿಲ್ಲ. ಇನ್ನು ಇದು ಸುರಕ್ಷಿತವೇ ಎನ್ನುವ ಪ್ರಶ್ನೆಗೆ ಉತ್ತರ ಹೌದು ಮತ್ತು ಇಲ್ಲ. ಹೌದು ಏಕೆಂದರೆ ಅವರೇನೂ ನಿಮಗೆ ಮೋಸ ಮಾಡಿ ಹಣ ಹೊಡೆದುಕೊಳ್ಳುವುದಿಲ್ಲ, ನೀವು ನೀಡಿದ ಮಾಹಿತಿಯ ಆಧಾರದ ಮೇಲೆ ನಿಮಗೆ ಅವರು ಹತ್ತಾರು ಆಯ್ಕೆಗಳನ್ನ ನೀಡುತ್ತಾರೆ, ನಮ್ಮ ಅಪಾಯ ತೆಗೆದುಕೊಳ್ಳುವ ಕ್ಷಮತೆ, ಎಷ್ಟು ಲಾಭ ಬೇಕು ಇತ್ಯಾದಿಗಳನ್ನ ಗಣನೆಗೆ ತೆಗೆದುಕೊಂಡು ಕೂಡ ಇಲ್ಲೇ ಹೂಡಿಕೆ ಮಾಡು ಎನ್ನುವುದಿಲ್ಲ, ಬದಲಿಗೆ ಅಲ್ಲೂ ಹತ್ತಾರು ಆಯ್ಕೆಗಳನ್ನ ನಿಮ್ಮ ಮುಂದಿಡುತ್ತದೆ. ಹೀಗಾಗಿ ಮತ್ತದೇ ದ್ವಂದ್ವ! ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಪ್ರಶ್ನೆ ಉಳಿಯುತ್ತದೆ. ನೀವು ಈ ವಿಷಯದಲ್ಲಿ ವೃತ್ತಿಪರರಲ್ಲ ಹೀಗಾಗಿ ಸಲಹೆ ಕೇಳಿದ್ದೀರಿ, ಮತ್ತೆ ಹತ್ತಾರು ಚಾಯ್ಸ್ ಇಟ್ಟು ಆಯ್ಕೆ ಮಾಡಿಕೊಳ್ಳಿ ಎಂದರೆ ಸಲಹೆಯ ಪ್ರಯೋಜನವೇನು? ಇದು ಸಂಶಯದಲ್ಲಿರುವ ಹೂಡಿಕೆದಾರರಿಗೆ ಖಂಡಿತ ಸರಿಯಾದ ಮಾರ್ಗವಲ್ಲ. ಈಗಾಗಲೇ ಅಲ್ಪಸ್ವಲ್ಪ ಅರಿವಿದ್ದು, ಇನ್ನಷ್ಟು ನಿಖರತೆ ಬಯಸುವವರು ಈ ಸಲಹೆಯನ್ನ ಪಡೆದುಕೊಳ್ಳಬಹುದು.
ಇದನ್ನೂ ಓದಿ: ವಿದೇಶಕ್ಕೆ ವಲಸೆ ಹೋಗುವ ಮುನ್ನಾ ತಪ್ಪದಿರಲಿ ಲೆಕ್ಕಾಚಾರ!
ಮಾರುಕಟ್ಟೆಯಲ್ಲಿ ಈ ಸೇವೆಯನ್ನ ನೀಡುವ ಹಲವಾರು ಆನ್ಲೈನ್ ಪೋರ್ಟಲಗಳಿವೆ ಅವುಗಳಲ್ಲಿ ಮುಖ್ಯವಾದವು, ವೆಲ್ತ್ ಸಿಂಪಲ್, ವೆಲ್ತ್ ಫ್ರಂಟ್, ಬೆಟರ್ಮೆಂಟ್, ಸೋಫಿ ಆಟೋಮೇಟೆಡ್ ಇನ್ವೆಸ್ಟಿಂಗ್. ಸೊನ್ನೆಯಿಂದ 0.4 ಪ್ರತಿಶತ ಫೀಸ್ಗಳನ್ನ ಇವು ಚಾರ್ಜ್ ಮಾಡುತ್ತವೆ. ಹಲವಾರು ವೆಬ್ ಪೋರ್ಟಲ್ಗಳು ಕನಿಷ್ಠ ಇನ್ವೆಸ್ಟ್ಮೆಂಟ್ ಕೂಡ ಕೇಳುವುದಿಲ್ಲ. ವೆಬ್ ಪೋರ್ಟಲ್ ಆಯ್ಕೆ ಮಾಡಿಕೊಳ್ಳುವ ಮುನ್ನ ಒಂದಷ್ಟು ಅದರ ಬಗ್ಗೆ ಅಧ್ಯಯನ ಮಾಡುವುದು ಒಳ್ಳೆಯದು. ಎಲ್ಲೆವೆಸ್ಟ್ ಎನ್ನುವ ಪೋರ್ಟಲ್ 0.25 ಪ್ರತಿಶತ ಶುಲ್ಕ ಚಾರ್ಜ್ ಮಾಡುತ್ತದೆ, ಇಷ್ಟೇ ಕನಿಷ್ಠ ಹೂಡಿಕೆ ಇರಬೇಕು ಎನ್ನುವ ಕಡ್ಡಾಯವಿಲ್ಲ, ಈ ಪೋರ್ಟಲ್ ವಿಶೇಷವಾಗಿ ಹೇಳಲು ಕಾರಣ ಇದು ಮಹಿಳೆಯರಿಂದ ಮಹಿಳಾ ಹೂಡಿಕೆದಾರರಿಗಾಗಿ ಎನ್ನುವ ಅಂಶದ ಮೇಲೆ ಕಟ್ಟಲ್ಪಟ್ಟಿದೆ. ಮಹಿಳಾ ಹೂಡಿಕೆದಾರರು, ಸಂಭಾವ್ಯ ಹೂಡಿಕೆದಾರ ಓದುಗ ಹೆಣ್ಣು ಮಕ್ಕಳು ಇದನ್ನ ಗಮನಿಸಿ.
ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸಸ್
ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸ್ ಎನ್ನುವುದು ಒಂದು ಸೇವೆ ಅಥವಾ ಸೌಲಭ್ಯ. ಇಂತಹ ಸೇವೆ ಅಥವಾ ಸೌಲಭ ನೀಡುವ ಸಂಸ್ಥೆಗಳು ಗ್ರಾಹಕ ಅಥವಾ ಹೂಡಿಕೆದಾರನ ಬಯಕೆಗಳಿಗೆ ಅನುಗುಣವಾಗಿ ಹಣವನ್ನ ಸ್ಟಾಕ್ಸ್, ಫಿಕ್ಸೆಡ್ ಇನ್ಕಮ್, ಕಮಾಡಿಟಿಸ್ , ರಿಯಲ್ ಎಸ್ಟೇಟ್, ಕ್ಯಾಶ್ ಜೊತೆಗೆ ಇನ್ನಷ್ಟು ಅಸೆಟ್ ಕ್ಲಾಸ್ನಲ್ಲಿ ಹೂಡಿಕೆ ಮಾಡುತ್ತಾರೆ. ಹೀಗೆ ಹೂಡಿಕೆಯ ಮೇಲ್ವಿಚಾರಣೆಯನ್ನ ಹೊತ್ತವರನ್ನ ಪೋರ್ಟ್ಫೋಲಿಯೋ ಮ್ಯಾನೇಜರ್ ಎನ್ನುತ್ತಾರೆ. ಇವರು ಸಾಮಾನ್ಯವಾಗಿ ಲೈಸೆನ್ಸ್ಡ್ ಇನ್ವೆಸ್ಟ್ಮೆಂಟ್ ಪ್ರೊಫೆಷನಲ್ ಆಗಿರುತ್ತಾರೆ. ಹೂಡಿಕೆಯ ಅಬ್ಜೆಕ್ಟಿವ್ ಏನು ಎನ್ನುವುದನ್ನ ಅರ್ಥ ಮಾಡಿಕೊಂಡು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರೀತಿಯ ಇನ್ಸ್ಟ್ರುಮೆಂಟ್ ಗಳ ಮೇಲೆ ಹೂಡಿಕೆಯನ್ನ ಮಾಡುತ್ತಾರೆ. ಮಾರುಕಟ್ಟೆಯ ಬಹುತೇಕ ಎಲ್ಲಾ ಅಸೆಟ್ ಕ್ಲಾಸ್ ಜ್ಞಾನ ಇವರಲ್ಲಿ ಇರುವ ಕಾರಣ ಸಾಮಾನ್ಯ ಹೂಡಿಕೆದಾರನಿಗಿಂತ ಉತ್ತಮವಾದ ನಿರ್ಧಾರವನ್ನ ತೆಗೆದುಕೊಳ್ಳುವ ಸ್ಥಾನದಲ್ಲಿ ಇವರಿರುತ್ತಾರೆ.
ಇದನ್ನೂ ಓದಿ: ಪ್ರೈಮರಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ?
ಸಾಮಾನ್ಯವಾಗಿ ಈ ಸೇವೆ ಅಥವಾ ಸೌಲಭ್ಯ HNI ಗಳಿಗೆ ಅಂದರೆ ಹೈ ನೆಟ್ ವರ್ತ್ ಇಂಡಿವಿಜುಯಲ್ ಗಳಿಗೆ ನೀಡಲಾಗುತ್ತದೆ. ಕನಿಷ್ಠ ೫೦ ಲಕ್ಷ ಹಣವನ್ನ ಇಲ್ಲಿ ಹೂಡಿಕೆ ಮಾಡ ಬೇಕಾಗುತ್ತದೆ. ಹೀಗಾಗಿ ಈ ಸೌಲಭವನ್ನ ಸಣ್ಣಪುಟ್ಟ ಹೂಡಿಕೆದಾರರು ಪಡೆದುಕೊಳ್ಳಲು ಆಗುವುದಿಲ್ಲ. ಇಲ್ಲಿನ ಹೂಡಿಕೆಯನ್ನ ಪ್ರತಿ ಹೂಡಿಕೆದಾರನ ಇಚ್ಚೆಗೆ ತಕ್ಕಂತೆ ಮಾಡಲಾಗುತ್ತದೆ. ಅಂದರೆ ಇದು ಒಬ್ಬರಿಗೆ ಇದ್ದಂತೆ ಇನ್ನೊಬ್ಬರಿಗೆ ಇರುವುದಿಲ್ಲ. ಪ್ರತಿಯೊಬ್ಬರ ಹೂಡಿಕೆಯ ಮೇಲಿನ ಲಾಂಭಾಂಶ, ರಿಸ್ಕ್ ಅಪಿಟೈಟ್ ಹೀಗೆ ಅಭಿರುಚಿಗೆ ತಕ್ಕಂತೆ ಪೋರ್ಟ್ಫೋಲಿಯೋ ಸಿದ್ಧಪಡಿಸಲಾಗುತ್ತದೆ.
ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಪ್ರೋಸೆಸ್ ನಲ್ಲಿ ಮೂರು ಹೆಜ್ಜೆಗಳಿವೆ. ಪ್ಲಾನಿಂಗ್, ಎಕ್ಸಿಕ್ಯೂಶನ್ ಮತ್ತು ಫೀಡ್ಬ್ಯಾಕ್ . ಪ್ಲಾನಿಂಗ್ ನಲ್ಲಿ ಇನ್ವೆಸ್ಟರ್ಸ್ ಪಾಲಿಸಿ ಸ್ಟೇಟ್ಮೆಂಟ್ ತಯಾರಿಸಲ್ಪುಡುತ್ತದೆ, ಎರಡನೇ ಹಂತದಲ್ಲಿ ಸರಿಯಾದ ಅಸೆಟ್ ಕ್ಲಾಸ್ ನಲ್ಲಿ IPS - ಇನ್ವೆಸ್ಟರ್ಸ್ ಪಾಲಿಸಿ ಸ್ಟೇಟ್ಮೆಂಟ್ ಪ್ರಕಾರ ಅಲೊಕೇಶನ್ ಮಾಡಲಾಗುತ್ತದೆ. ಮೂರನೇ ಹೆಜ್ಜೆಯಲ್ಲಿ , ಅಂದುಕೊಂಡ ROI ಸಾಧಿಸಲಾಗದೆ ಇರುವ ಸಮಯದಲ್ಲಿ ಯಾವ ಬದಲಾವಣೆ ಮಾಡಿಕೊಳ್ಳಬೇಕು, ರಿ ಅಲೋಕೇಷನ್ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನ ನೀಡಲಾಗುತ್ತದೆ. ಒಟ್ಟಾರೆ ಅಂದುಕೊಂಡ ಪಲಿತಾಂಶವನ್ನ ಸಾಧಿಸುವುದು ಮೂಲ ಉದ್ದೇಶವಾಗಿರುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com