
ಎಸ್ ಬಿಐ
ಈ ವರ್ಷದ ಮೊದಲ ತ್ರೈಮಾಸಿಕ ಲೆಕ್ಕಪತ್ರದಲ್ಲಿ ಹೆಚ್ಚಿನ ನಿವ್ವಳ ಲಾಭವನ್ನು ಗಳಿಸಿದ ಪ್ರಮುಖ ಹತ್ತು ಸಂಸ್ಥೆಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.
ಅದಕ್ಕೂ ಮೊದಲಿಗೆ ನಿಮಗೆಲ್ಲಾ ಒಂದು ವಿಷಯ ಗೊತ್ತಿರಲಿ, ಕ್ಯಾಪಿಟ್ಲೈನ್ ಎನ್ನುವ ಡಿಜಿಟಲ್ ಡೇಟಾಬೇಸ್ ನಲ್ಲಿ 35 ಸಾವಿರಕ್ಕೂ ಹೆಚ್ಚು ಲಿಸ್ಟೆಡ್ ಮತ್ತು ಲಿಸ್ಟೆಡ್ ಅಲ್ಲದ ಸಂಸ್ಥೆಗಳಿವೆ. ಇಂತಹ 35 ಸಾವಿರ ಸಂಸ್ಥೆಗಳಲ್ಲಿ ಮೊದಲ ಹತ್ತರಲ್ಲಿ ಸ್ಥಾನ ಪಡೆದುಕೊಳ್ಳುವುದು ಅತಿ ದೊಡ್ಡ ಸಾಧನೆ.
ಇನ್ನೊಂದು ಅಂಶವೂ ನಿಮ್ಮನ್ನು ಅಚ್ಚರಿಗೊಳಿಸಬಹುದು. ಭಾರತೀಯ ಸ್ಟೇಟ್ ಬ್ಯಾಂಕ್, ಎಸ್ ಬಿ ಐ ಎಂದು ಗ್ರಾಹಕರ ಮನದಲ್ಲಿ ನೆಲೆ ನಿಂತಿರುವ ಬ್ಯಾಂಕು, ಕಳೆದ ಸೆಪ್ಟೆಂಬರ್ 2022 ರಿಂದ ಜೂನ್ 2023ರ ವರೆಗೆ ಸತತವಾಗಿ ಈ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ, ಹೀಗೆ ಇದು ಪ್ರಥಮ ಸ್ಥಾನಕ್ಕೆ ಏರಲು ಹಿಂದೆ ಹಾಕಿದ್ದು ರಿಲಯನ್ಸ್ ಸಂಸ್ಥೆಯನ್ನು ಎನ್ನುವುದು ಗಮನಿಸಬೇಕಾದ ಅಂಶ. ಈ ವರ್ಷದ ಮೊದಲ ತ್ರೈಮಾಸಿಕ ಅಂದರೆ ಏಪ್ರಿಲ್ ನಿಂದ ಜೂನ್ 2023ರ ಫಲಿತಾಂಶದಲ್ಲಿ ಕೂಡ ಎಸ್ಬಿಐ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ: ಷೇರು ಮಾರುಕಟ್ಟೆಯನ್ನ ಉತ್ತೇಜಿಸುವ ಅಂಶಗಳೇನು? (ಹಣಕ್ಲಾಸು)
ಮೊದಲ ಹತ್ತು ಸಂಸ್ಥೆಗಳ ವಿವರಗಳನ್ನು ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ. ಗಮನಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರು, ಅಥವಾ ಪೂರ್ಣ ಪ್ರಮಾಣದಲ್ಲಿ ಹೂಡಿಕೆದಾರರಾಗಿಲ್ಲದಿದ್ದರೂ ಷೇರು ಮಾರುಕಟ್ಟೆಯಲ್ಲಿ ಅಭಿರುಚಿ ಹೊಂದಿರುವವರು ಈ ಸಂಸ್ಥೆಗಳಲ್ಲಿ ಹೂಡಿಕೆ ಮಾಡಬಹುದು. ಎಷ್ಟರ ಮಟ್ಟಿನ ಹೂಡಿಕೆ ಮಾಡಬೇಕು, ಒಂದರಲ್ಲಿ ಮಾಡುವುದು ಸರಿಯೇ? ಇವುಗಳಲ್ಲಿ ಯಾವುದು ಬೆಸ್ಟ್? ಇತ್ಯಾದಿ ಪ್ರಶ್ನೆಗಳನ್ನು ಆಯಾ ಹೂಡಿಕೆದಾರರ ಪೂರ್ಣ ಮಾಹಿತಿ ನಂತರ ಮಾತ್ರ ವಿವರವಾಗಿ ಹೇಳಬಹುದು. ಆದರೆ ಸ್ಥೂಲವಾಗಿ ಕೆಳಗಿನ ಪ್ರಥಮ ಹತ್ತು ಬೆಸ್ಟ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವುದು ಕ್ಷೇಮ. ಹೂಡಿದ ಹಣವೂ ಸುರಕ್ಷಿತವಾಗಿರುತ್ತದೆ. ಜೊತೆಗೆ ಅದು ವೃದ್ಧಿಯನ್ನು ಕೂಡ ಕಾಣುತ್ತದೆ. ಡಿವಿಡೆಂಡ್ ಕೂಡ ಬ್ಯಾಂಕ್ ಬಡ್ಡಿಗಿಂತ ಖಂಡಿತ ಹೆಚ್ಚಾಗಿರುತ್ತದೆ. ಹಣವನ್ನು ಸರಿಯಾಗಿ ದುಡಿಸಿಕೊಳ್ಳುವುದು ಒಂದು ಕಲೆ. ಓದುಗರಲ್ಲಿ ಕೆಲವರಾದರೂ ಇದರಿಂದ ಪ್ರಯೋಜನ ಪಡೆದುಕೊಂಡರೆ ಅಷ್ಟು ಸಾಕು.
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI ): 2023ರ ಪ್ರಥಮ ತ್ರೈಮಾಸಿಕದಲ್ಲಿ ಒಟ್ಟು ನಿವ್ವಳ 18,376 ಕೋಟಿ ರೂಪಾಯಿ ಆದಾಯವನ್ನು ಗಳಿಸಿ ಪ್ರಥಮ ಸ್ಥಾನದಲ್ಲಿದೆ. ಮಾರುಕಟ್ಟೆಯಲ್ಲಿನ ಒಟ್ಟು ಬಂಡವಾಳ, ಮಾರ್ಕೆಟ್ ಕ್ಯಾಪಿಟಲೈಸಷನ್ ಐದು ಲಕ್ಷದ ಹನ್ನೆರೆಡು ಸಾವಿರದ ನಾನ್ನೋರ ಐವತ್ತೊಂದು ಕೋಟಿ ರೂಪಾಯಿಗಳು. ಷೇರು ಮಾರುಕಟ್ಟೆಯಲ್ಲಿ ಮುಕ್ತವಾಗಿ ಟ್ರೇಡಿಂಗ್ ಆದ ಮತ್ತು ನಿರ್ಬಂಧಿತ ಷೇರುಗಳ, ಇಂಟರ್ನಲ್ ಷೇರುಗಳು ಹೀಗೆ ಒಟ್ಟಾರೆ ಎಲ್ಲಾ ಟ್ರೇಡೆಡ್ ಮೌಲ್ಯವನ್ನು ಮಾರ್ಕೆಟ್ ಕ್ಯಾಪ್ ಅಥವಾ ಕ್ಯಾಪಿಟಲೈಸಷನ್ ಎನ್ನಲಾಗುತ್ತದೆ.
- ರಿಲಯನ್ಸ್ ಇಂಡಸ್ಟ್ರೀಸ್: ರಿಲಯನ್ಸ್ ಸಮೂಹ ಸಂಸ್ಥೆಗಳ ನಿವ್ವಳ ಲಾಭ, ಪ್ರಥಮ ತ್ರೈಮಾಸಿಕದಲ್ಲಿ 18,258 ಕೋಟಿ ರೂಪಾಯಿಗಳು. ಇದು ಎಸ್ಬಿಐ ಗಿಂತ ಸ್ವಲ್ಪ ಕಡಿಮೆ ಇದ್ದು, ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಆಯಿಲ್ ನಿಂದ ಹಿಡಿದು ಟೆಲಿಕಾಂ ವರೆಗೆ ರಿಲಯನ್ಸ್ ಎಲ್ಲೆಡೆ ತನ್ನ ವ್ಯಾಪಾರವನ್ನು ವಿಸ್ತರಿಸಿಕೊಂಡಿದೆ.
- ಇಂಡಿಯನ್ ಆಯಿಲ್ ಕಾರ್ಪೋರೇಶನ್: ಭಾರತದ ಟಾಪ್ ಆಯಿಲ್ ರಿಫೈನರಿ ಎನ್ನಿಸಿಕೊಂಡಿರುವ ಐಓಸಿ ಪ್ರಥಮ ತ್ರೈಮಾಸಿಕದಲ್ಲಿ ಸಿಕ್ಸರ್ ಹೊಡೆದಿದೆ. 14,735 ಕೋಟಿ ರೂಪಾಯಿ ನಿವ್ವಳ ಲಾಭವನ್ನು ದಾಖಲಿಸಿದೆ. ಇಷ್ಟೊಂದು ದೊಡ್ಡ ಮಟ್ಟದ ಲಾಭವನ್ನು ದಾಖಲಿಸಲು ಪ್ರಮುಖ ಕಾರಣ ಸತತವಾಗಿ ಏರುತ್ತಿರುವ ತೈಲ ಬೆಲೆ. ಈ ವರ್ಷ ತೈಲಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 30 ಪ್ರತಿಶತ ಏರಿಕೆಯನ್ನು ಕಂಡಿದೆ.
- ಹೆಚ್ ಡಿ ಎಫ್ ಸಿ ಬ್ಯಾಂಕ್: ಜಗತ್ತಿನಲ್ಲಿ ಏಳನೇ ಅತಿ ದೊಡ್ಡ ಬ್ಯಾಂಕ್ ಎಂದು ಹೆಗ್ಗಳಿಕೆ ಗಳಿಸಿರುವ ಹೆಚ್ ಡಿ ಎಫ್ ಸಿ ಬ್ಯಾಂಕ್, ಈ ವರ್ಷದ ಪ್ರಥಮ ಮೂರು ತಿಂಗಳಲ್ಲಿ ಅಂದರೆ ಏಪ್ರಿಲ್ ನಿಂದ ಜೂನ್ ವರೆಗಿನ ನಿವ್ವಳ ಲಾಭವನ್ನು 12,403 ಕೋಟಿ ಎಂದು ಘೋಷಿಸಿದೆ. ತನ್ನ ಮಾತೃ ಸಂಸ್ಥೆಯೊಂದಿಗೆ ವಿಲೀನವಾಗಿರುವುದು ಜಾಗತಿಕ ಕಾರ್ಪೊರೇಟ್ ಜಗತ್ತಿನ ಅತಿ ದೊಡ್ಡ ವಿಲೀನ ಎಂದು ದಾಖಲಾಗಿದೆ.
- ಟಾಟಾ ಕನ್ಸಲ್ಟೇನ್ಸಿ ಸರ್ವಿಸಸ್: ಇವತ್ತು ಟಿಸಿಎಸ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಟಿಸಿಎಸ್ ಅಷ್ಟು ಪ್ರಸಿದ್ಧ. ಇದು ಭಾರತ ಮಾತ್ರವಲ್ಲ, ಜಗತ್ತಿನ ಅತಿ ಹೆಚ್ಚು ಮೌಲ್ಯವುಳ್ಳ ಐಟಿ ಸರ್ವಿಸ್ ಬ್ರಾಂಡ್ ಎನ್ನುವ ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ. ಪ್ರಥಮ ತ್ರೈಮಾಸಿಕದಲ್ಲಿ 11,120 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ.
- ಐ ಸಿ ಐ ಸಿ ಐ ಬ್ಯಾಂಕ್: ವರ್ಷದಿಂದ ವರ್ಷಕ್ಕೆ ನೆಟ್ ಇಂಟರೆಸ್ಟ್ ಇನ್ಕಮ್ (NII) ಹೆಚ್ಚಿಸಿಕೊಂಡು ಬರುತ್ತಿರುವ ಲೀಡಿಂಗ್ ಪ್ರೈವೇಟ್ ಬ್ಯಾಂಕ್ ಎನ್ನುವ ಖ್ಯಾತಿ ಈ ಬ್ಯಾಂಕಿಗೆ ಸಲ್ಲುತ್ತದೆ. ವರ್ಶದಿಂದ ವರ್ಷಕ್ಕೆ 38 ಪ್ರತಿಶತ NII ಏರಿಸಿಕೊಂಡು ಬರುತ್ತಿದೆ. ಈ ವರ್ಷದ ಪ್ರಥಮ ತ್ರೈ ಮಾಸಿಕ ನಿವ್ವಳ ಲಾಭ 11,015 ಕೋಟಿ ರೂಪಾಯಿಗಳು.
- ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್: ಏಳನೇ ಸ್ಥಾನದಲ್ಲಿ 10, 644 ಕೋಟಿ ನಿವ್ವಳ ಗಳಿಕೆಯೊಂದಿಗೆ BPCL ಸ್ಥಾನ ಪಡೆದುಕೊಂಡಿದೆ. ಹೆಚ್ಚಿದ ಪೆಟ್ರೋಲಿಯಂ ಪದಾರ್ಥಗಳ ಬಳಕೆ ಮತ್ತು ಬೆಲೆ ಎರಡೂ ಹೆಚ್ಚಿದ ಲಾಭಕ್ಕೆ ದೇಣಿಗೆ ನೀಡಿವೆ.
- ಅದಾನಿ ಪವರ್: ಅದಾನಿ ಸಂಸ್ಥೆಗಳಲ್ಲಿನ ಏರಿಳಿತದ ನಡುವೆಯೂ, ಅದಾನಿ ಪವರ್ 8,759 ಕೋಟಿ ರೂಪಾಯಿ ನಿವ್ವಳ ಲಾಭವನ್ನು ದಾಖಲಿಸಿ ಎಂಟನೇ ಸ್ಥಾನದಲ್ಲಿದೆ.
- ಕೋಲ್ ಇಂಡಿಯಾ: ಜಗತ್ತಿನ ಅತಿ ದೊಡ್ಡ ಮೈನಿಂಗ್ ಸಂಸ್ಥೆ ಎನ್ನಿಸಿಕೊಂಡಿರುವ ಕೋಲ್ ಇಂಡಿಯಾ, ಪ್ರಥಮ ತ್ರೈ ಮಾಸಿಕದಲ್ಲಿ 7,941 ಕೋಟಿ ರೂಪಾಯಿ ನಿವ್ವಳ ಲಾಭವನ್ನು ದಾಖಲಿಸಿದೆ. ಪ್ರಥಮ ತ್ರೈಮಾಸಿಕದಲ್ಲಿ 9 ಪ್ರತಿಶತ ಹೆಚ್ಚಿನ ಉತ್ಪಾದನೆಯನ್ನು ಕೂಡ ದಾಖಲಿಸಿದೆ.
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್: HPCL ಎಂದು ಪ್ರಸಿದ್ದವಾಗಿರುವ ಈ ಸಂಸ್ಥೆ ಕಳೆದ ವರ್ಷದ ಪ್ರಥಮ ಟ್ರೈ ಮಾಸಿಕದಲ್ಲಿ 8,557 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿತ್ತು! ಈ ವರ್ಷದ ಪ್ರಥಮ ತ್ರೈ ಮಾಸಿಕದಲ್ಲಿ 6,766 ಕೋಟಿ ರೂಪಾಯಿ ನಿವ್ವಳ ಗಳಿಕೆಯೊಂದಿಗೆ ಪ್ರಥಮ ಹತ್ತು ದೊಡ್ಡ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶ್ವಸಿಯಾಗಿದೆ.
ಇದನ್ನೂ ಓದಿ: ಗುಜರಾತಿಗಳೇಕೆ ಹೆಚ್ಚು ಶ್ರೀಮಂತರು? (ಹಣಕ್ಲಾಸು)
ಕೊನೆಮಾತು: ಎಸ್ಬಿಐ ಪ್ರಥಮ ಸ್ಥಾನ ಗಳಿಸಿರುವುದು ಒಂದು ರೀತಿಯಲ್ಲಿ ಖುಷಿ, ಅದೊಂದು ಸಾಧನೆ. ಅದೇ ಸಮಯದಲ್ಲಿ ಇದೊಂದು ಅತೀವ ದುಃಖ ತರುವ ವಿಷಯವೂ ಹೌದು. ಎಸ್ಬಿಐ ತನ್ನ ಗ್ರಾಹಕರಿಗೆ ಸರಿಯಾದ ಸೇವೆಯನ್ನು ನೀಡುತ್ತಿಲ್ಲ. ಶಾಖೆಗಳ ಕೊರತೆ, ಸಿಬ್ಬಂದಿ ಕೊರತೆ, ಅದು ನೀಡುವ ಸೇವೆಗಳಲ್ಲಿ ದೊಡ್ಡ ಹೊಡೆತವನ್ನು ನೀಡುತ್ತಿದ್ದೆ. ನೀವು ಯಾವ ಸಮಯದಲ್ಲಾದರೂ ಸರಿಯೇ ಈ ಬ್ಯಾಂಕ್ ಪ್ರವೇಶಿಸಿ ಅಲ್ಲಿ ನೀವು ಜನ ಸಾಗರವನ್ನು ಕಾಣಬಹುದು. ಡಿಡಿ ಪಡೆಯಬೇಕೆ, ಒಂದು ದಿನ ಮುಂಚೆ ಹೋಗಿರಬೇಕು! ಯಾವಾಗಲೂ ಪ್ರಿಂಟರ್ ಕೆಲಸ ಮಾಡುತ್ತಿಲ್ಲ, ಸರ್ವರ್ ಡೌನ್ ಎನ್ನುವ ಕಾರಣಗಳು ಸಿದ್ಧವಾಗಿರುತ್ತವೆ. ಇನ್ನು ಹಿರಿಯ ನಾಗರಿಕರು ಸೇವೆ ಪಡೆಯಲು ದಿನದ ಹೆಚ್ಚಿನ ಭಾಗ ಇಲ್ಲಿ ವ್ಯಯಿಸುವುದು ನೀವು ಕಾಣಬಹುದು. ಇಷ್ಟೆಲ್ಲಾ ಕುಂದುಕೊರತೆಗಳ ನಡುವೆ ಪ್ರಥಮ ಸ್ಥಾನ ಪಡೆದಿದೆ ಎಂದರೆ ಉತ್ತಮ ಸೇವೆ ನೀಡಿದರೆ ಎಸ್ಬಿಐ ಆ ಸ್ಥಾನವನ್ನು ಅಭಾದಿತವಾಗಿ ಉಳಿಸಿಕೊಳ್ಳಬಹುದು. ಪ್ರಯತ್ನ ಬೇಕಷ್ಟೆ, ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಲಿ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com