
ಗಿಲ್ಲೆನ್-ಬ್ಯಾರಿ ಸಿಂಡ್ರೋಮ್
ಕೆಲವು ವರ್ಷಗಳ ಹಿಂದೆ ನನ್ನ ಕ್ಲಿನಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದ ಪದ್ಮಾ ಅವರು ಒಂದು ದಿನ ತಮ್ಮ ಮಗನಿಗೆ ಇದ್ದಕ್ಕಿದ್ದಂತೆ ಮೈಯ್ಯಲ್ಲಿ ವೀಕ್‌ನೆಸ್ ಕಾಣಿಸಿಕೊಂಡಿದ್ದು ಮೈಜುಮ್ಮೆನ್ನಿಸುವುದು ಮತ್ತು ನಡೆಯಲು ಆಗದ ಪರಿಸ್ಥಿತಿ ಇದೆ ಎಂದು ಹೇಳಿದರು. ನಾನು ಅವನ ಪರೀಕ್ಷೆ ಮಾಡಿದಾಗ ಅವರು ಹೇಳಿದ ಲಕ್ಷಣಗಳ ಜೊತೆಗೆ ರೋಗನಿರೋಧಕತೆ (ಇಮ್ಯುನಿಟಿ) ಕುಸಿದುಹೋಗಿ ಉಸಿರಾಡಲು ಕಷ್ಟವಾಗಿರುವುದು ಕಂಡುಬಂತು. ಅವನನ್ನು ತಕ್ಷಣ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದೆ. ಅಲ್ಲಿ ತಜ್ಞ ವೈದ್ಯರು ಸೂಕ್ತ ಪರೀಕ್ಷೆ ಮಾಡಿದಾಗ ಆವನಿಗೆ ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಆಗಿರುವುದು ಪತ್ತೆಯಾಯಿತು. ಅಲ್ಲಿ ತಕ್ಷಣ ಚಿಕಿತ್ಸೆ ಶುರುಮಾಡಿದರು. ಕೆಲ ತಿಂಗಳುಗಳಲ್ಲಿ ಆತ ನಿಧಾನವಾಗಿ ಸರಿಹೋದನು.
ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಎಂದರೇನು?
ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ (ಜಿಬಿಎಸ್) ಒಂದು ಗಂಭೀರ ವೈದ್ಯಕೀಯ ಸ್ಥಿತಿ. ಇದರಲ್ಲಿ ವ್ಯಕ್ತಿಯ ಸ್ವರಕ್ಷಣಾ ವ್ಯವಸ್ಥೆಯು ಬಾಹ್ಯ ನರಗಳ ಮೇಲೆ ದಾಳಿ ಮಾಡುತ್ತದೆ. ಇದು ಯಾವುದೇ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು. ಆದರೆ ವಯಸ್ಕರು ಮತ್ತು ಪುರುಷರಲ್ಲಿ ಈ ಕಾಯಿಲೆ ಕಂಡುಬರುತ್ತದೆ. ಇದರ ಅತ್ಯಂತ ತೀವ್ರ ಸಮಸ್ಯೆಗಳಿಂದ ಹೆಚ್ಚಿನ ಜನರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಇದು ಸಂಪೂರ್ಣ ಪಾರ್ಶ್ವವಾಯುವಿಗೆ (ಸ್ಟ್ರೋಕ್) ಕಾರಣವಾಗಬಹುದು.
ಫ್ರೆಂಚ್ ನರರೋಗಶಾಸ್ತ್ರಜ್ಞರಾದ ಜಾರ್ಜಸ್ ಗಿಲ್ಲೆನ್ ಮತ್ತು ಜೀನ್ ಅಲೆಕ್ಸಾಂಡ್ ಬ್ಯಾರಿಯವರು ಆಂಡ್ರೆ ಸ್ಟ್ರಾಹ್ಲ್ ಎಂಬ ವೈದ್ಯರೊಂದಿಗೆ ಸೇರಿ 1916ರಲ್ಲಿ ಈ ರೋಗದ ಲಕ್ಷಣಗಳನ್ನು ವಿವರಿಸಿದದ್ದರಿಂದ ಇದಕ್ಕೆ ಅವರ ಹೆಸರನ್ನೇ (ಗಿಲ್ಲೆನ್-ಬ್ಯಾರಿ) ಇಡಲಾಗಿದೆ.
ಇದನ್ನೂ ಓದಿ: ಡಿಸ್ಲೆಕ್ಸಿಯಾ: ಇದು ಕಾಯಿಲೆ ಅಲ್ಲ; ಆತಂಕ ಬೇಡ, ಕಾಳಜಿ ಇರಲಿ (ಕುಶಲವೇ ಕ್ಷೇಮವೇ)
ಈ ಕಾಯಿಲೆ ಬಂದರೆ ಜನರಿಗೆ ತ್ವರಿತವಾಗಿ ಸೂಕ್ತ ಚಿಕಿತ್ಸೆ ನೀಡಬೇಕು ಮತ್ತು ಹೆಚ್ಚು ಉಪಚಾರ ಮಾಡಬೇಕು. ಕೆಲವರಿಗೆ ತೀವ್ರ ನಿಗಾ ಅಗತ್ಯವಿರಬಹುದು. ಈ ರೋಗದ ಚಿಕಿತ್ಸೆಯು ಹೆಚ್ಚುವರಿ ಆರೈಕೆ ಮತ್ತು ಕೆಲವು ರೋಗನಿರೋಧಕ ಚಿಕಿತ್ಸೆಗಳನ್ನು (ಇಮ್ಯುನೋಪಥಿ) ಒಳಗೊಂಡಿದೆ.
ಸಾಮಾನ್ಯವಾಗಿ ಈ ಕಾಯಿಲೆಯು ಯಾವುದಾದರೂ ತೀವ್ರತರ ಸೋಂಕಿನ ಮುಂಚೆ ಉಂಟಾಗುತ್ತದೆ. ಇದು ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕು ಆಗಿರಬಹುದು. ಯಾವುದಾದರೂ ಲಸಿಕೆ ಹಾಕಿಸಿಕೊಂಡಾಗ ಅಥವಾ ಶಸ್ತ್ರಚಿಕಿತ್ಸೆಯಿಂದಲೂ ಬರಬಹುದು. ಝೀಕಾ ವೈರಸ್ ಸೋಂಕು ಹೆಚ್ಚಾಗಿದ್ದ ದೇಶಗಳಲ್ಲಿ ಈ ರೋಗದ ಪ್ರಕರಣಗಳು ಕಾಣಿಸಿಕೊಂಡಿದ್ದವು. ಈ ರೋಗದ ಪ್ರಚೋದನೆಯಾಗಿ ಹಲವೆಡೆ ಝೀಕಾ ವೈರಸ್ ಸೋಂಕು ಉಂಟಾಯಿತು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಹೆಚ್ಚಾಗಿ ಜಂಕ್ ಫುಡ್ ಮತ್ತು ಹಲವಾರು ವರ್ಷಗಳ ಕಾಲ ಉತ್ತಮ ಸ್ಥಿತಿಯಲ್ಲಿಡಲು ರಸಾಯನಿಕಗಳನ್ನು ಹಾಕಿರುವ ಆಹಾರ ಪದಾರ್ಥಗಳನ್ನು ಸೇವಿಸಿದಾಗಲೂ ಈ ಸಮಸ್ಯೆ ಉಂಟಾಗಬಹುದು. ಅಮೆರಿಕ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ, ಭಾರತದಲ್ಲಿ ಈ ಪ್ರಕರಣಗಳು ಅಪರೂಪ.
ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಲಕ್ಷಣಗಳು
ಗಿಲ್ಲೆನ್-ಬ್ಯಾರಿ ಸಿಂಡ್ರೋಮಿನ ಮುಖ್ಯ ಲಕ್ಷಣಗಳೆಂದರೆ ಕಾಲು, ತೋಳುಗಳ ಮತ್ತು ಮುಖದ ನರಗಳ ದೌರ್ಬಲ್ಯ, ಮೈ ಜುಮ್ಮೆನಿಸುವಿಕೆ, ಸ್ನಾಯುಗಳಲ್ಲಿ ಶಕ್ತಿಯಿಲ್ಲದಿರುವುದು ಮತ್ತು ಎದೆಯ ಸ್ನಾಯುಗಳು ದುರ್ಬಲವಾಗಿ ಉಸಿರಾಟ ಕಷ್ಟವಾಗುವುದು (ಶೇಕಡಾ 20ರಿಂದ 30ರಷ್ಟು ಜನರಲ್ಲಿ). ತೀವ್ರ ಸಮಸ್ಯೆಯಾಗಿದ್ದಲ್ಲಿ ಮಾತನಾಡಲು ಮತ್ತು ಆಹಾರ ನುಂಗಲು ಕಷ್ಟವಾಗುವುದು. ಇಂತಹ ಪ್ರಕರಣಗಳನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ ಮತ್ತು ಪೀಡಿತ ವ್ಯಕ್ತಿಗಳನ್ನು ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಹೆಚ್ಚಿನ ಜನರು ಇಂತಹ ಅತ್ಯಂತ ಗಂಭೀರ ಸಮಸ್ಯೆಗಳಿಂದ ಸೂಕ್ತ ಚಿಕಿತ್ಸೆ ಪಡೆದು ಕ್ರಮೇಣ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಎಲ್ಲೋ ಕೆಲವರು ಸ್ವಲ್ಪ ಹೆಚ್ಚು ಸಮಯ ದೌರ್ಬಲ್ಯ ಅನುಭವಿಸುತ್ತಾರೆ. ಇದರಿಂದಾಗಿ ಸಾಯುವ ಜನರ ಪ್ರಮಾಣ ಅತ್ಯಲ್ಪ. ಒಟ್ಟಾರೆ ಹೇಳುವುದಾದರೆ ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಉಸಿರಾಟ, ರಕ್ತದ ಸೋಂಕು, ಶ್ವಾಸಕೋಶದ ಹೆಪ್ಪುಗಟ್ಟುವಿಕೆ ಅಥವಾ ಹೃದಯ ಸ್ತಂಭನವನ್ನು ನಿಯಂತ್ರಿಸುವ ಸ್ನಾಯುಗಳ ಪಾರ್ಶ್ವವಾಯುವನ್ನು ಒಳಗೊಂಡಿದೆ.
ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಗೆ ಚಿಕಿತ್ಸೆ ಹೇಗೆ?
ಈ ಕಾಯಿಲೆ ಜೀವಕ್ಕೆ ಎರವಾಗುವ ಸಂಭವ ಇರುವುದರಿಂದ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಕೆಲ ಕಾಲ ಚಿಕಿತ್ಸೆ ಮತ್ತು ಆರೈಕೆ ಮಾಡಬೇಕು. ತೀವ್ರ ನಿಗಾ ವಹಿಸುವುದು ಬಹಳ ಮುಖ್ಯ. ಸದಾ ಕಾಲ ರೋಗಿಗಳ ಉಸಿರಾಟ, ಹೃದಯ ಬಡಿತ ಮತ್ತು ರಕ್ತದ ಒತ್ತಡದ ಮೇಲೆ ಗಮನ ಇಡಬೇಕು. ಉಸಿರಾಡಲು ಕಷ್ಟವಾದಾಗ ಬಹಳಷ್ಟು ಜನರಿಗೆ ದೀರ್ಘಾವಧಿಯ ವೆಂಟಿಲೇಟರ್ ಸಪೋರ್ಟ್ ಕೆಲವೊಮ್ಮೆ ಬೇಕಾಗಬಹುದು. ಎಲ್ಲಾ ರೋಗಿಗಳನ್ನು ಸೋಂಕುರಹಿತರನ್ನಾಗಿ ಇಡಬೇಕು ಮತ್ತು ಅವರಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಬೇಕು.
ಇದನ್ನೂ ಓದಿ: ಹಿಮ್ಮಡಿ ನೋವು: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)
ಇಲ್ಲಿಯವರೆಗೆ ಈ ರೋಗಕ್ಕೆಂದೇ ನಿಖರವಾದ ಔಷಧಿ ಸಿಕ್ಕಿಲ್ಲ. ಆದರೆ ರೋಗ ಲಕ್ಷಣಗಳಿಗೆ ಅನುಸಾರವಾಗಿ ನೀಡುವ ಚಿಕಿತ್ಸೆಗಳು ವಾಸಿಯಾಗಲು ಬಹಳ ಸಹಾಯ ಮಾಡುತ್ತವೆ ಮತ್ತು ರೋಗದ ಅವಧಿಯನ್ನು ಕಡಿಮೆ ಮಾಡುತ್ತವೆ. ಸೂಕ್ತ ಚಿಕಿತ್ಸೆ ದೊರೆತರೆ ಕೆಲ ಕಾಲದಲ್ಲಿ ಗುಣವಾಗಬಹುದು. ರಕ್ತ ಅಥವಾ ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್‌ನಿಂದ ಪ್ರತಿಕಾಯಗಳನ್ನು (ಆಂಟಿಬಾಡೀಸ್) ತೆಗೆದುಹಾಕಲು ಪ್ಲಾಸ್ಮಾ ವಿನಿಮಯ ಮಾಡಬಹುದು. ಅನಾರೋಗ್ಯದ ತೀವ್ರ ಹಂತದ ನಂತರ ಸ್ನಾಯು ದೌರ್ಬಲ್ಯವು ಮುಂದುವರಿದರೆ ರೋಗಿಗಳ ಸ್ನಾಯುಗಳನ್ನು ಬಲಪಡಿಸಲು ಮತ್ತು ಚಲನೆಯನ್ನು ಮೊದಲಿನಂತೆ ಮಾಡಲು ಪುನರ್ವಸತಿ ಸೇವೆಗಳ ಅಗತ್ಯವಿರುತ್ತದೆ.
ಇಂದು ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳು ಬಹಳ ದುಬಾರಿಯಾಗಿರುವುದರಿಂದ ಎಲ್ಲರೂ ಅಲ್ಲಿಗೆ ಹೋಗಲಾಗುವುದಿಲ್ಲ. ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ಲಭ್ಯವಿವೆ. ಉದಾಹರಣೆಗೆ ಬೆಂಗಳೂರಿನ ನಿಮ್ಹಾನ್ಸ್. ಇಲ್ಲಿ ನರರೋಗಗಳಿಗೆಂದೇ ಪ್ರತ್ಯೇಕ ವಿಭಾಗವಿದ್ದು ನುರಿತ ತಜ್ಞ ವೈದ್ಯರಿದ್ದಾರೆ. ರೋಗಿಗಳು ಇಲ್ಲಿನ ಸೇವೆಗಳನ್ನು ಖಾಸಗಿ ಆಸ್ಪತ್ರೆಗಳಿಗಿಂತ ಎಷ್ಟೋ ಪಾಲು ಕಡಿಮೆ ಹಣ ವ್ಯಯಿಸಿ ಪಡೆದು ಗುಣಮುಖರಾಗಬಹುದು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com