ದೀರ್ಘಾವಧಿ ಅಜ್ಞಾತವಾಸದತ್ತ ಜಾಗತಿಕ ಎಡಪಂಥ, ಭಾರತದ ‘ಬುದ್ಧಿಜೀವಿ’ಗಳೀಗ ಅನಾಥ? (ತೆರೆದ ಕಿಟಕಿ)

ಕೇಂದ್ರದಲ್ಲಿ ಆಡಳಿತವನ್ನು ಬಿಜೆಪಿಯೇ ನಡೆಸಿದರೂ, ಕಾಂಗ್ರೆಸ್ಸೇ ನಡೆಸಿದರೂ ಕಾರ್ಯಾನುಷ್ಠಾನ ಹಂತದಲ್ಲಿ ಹಾಗೂ ಕಥಾನಕಗಳನ್ನು ಹೆಣೆಯುವಲ್ಲಿ ಇವರದ್ದೇ ಪ್ರಭಾವ ನಡೆಯುತ್ತದೆ ಎಂಬ ಗ್ರಹಿಕೆ ಇಲ್ಲಿನ ಆಡಳಿತ ವ್ಯವಸ್ಥೆಯಲ್ಲೂ ಇದೆ.
US president Donald trump
ಅಮೇರಿಕಾ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್online desk
Updated on

ಅಮೆರಿಕ ರಾಜಕಾರಣದ ವಿಚಾರ ಬಂದಾಗಲೆಲ್ಲ ಪದಪುಂಜವೊಂದು ಪ್ರಸ್ತಾಪವಾಗುವುದನ್ನು ಕೇಳಿರುತ್ತೀರಿ. ಅದೆಂದರೆ, ‘ಡೀಪ್ ಸ್ಟೇಟ್’. ಈ ಡೀಪ್ ಸ್ಟೇಟ್ ಅಂದರೆ ಯಾರ್ಯಾರು ಎಂದೆಲ್ಲ ಖಚಿತ ಉತ್ತರವೇನೂ ಇಲ್ಲವಾದರೂ, ಬಹುವರ್ಷಗಳಿಂದ ಅಧಿಕಾರದ ಪಡಸಾಲೆಯೊಂದಿಗೆ ಸಂಪರ್ಕ ಹೊಂದಿರುವ ಉದ್ದಿಮೆದಾರರು, ನಿವೃತ್ತ ಅಧಿಕಾರಿಗಳು, ರಕ್ಷಣೆ ಮತ್ತು ರಾಜತಾಂತ್ರಿಕ ವಲಯಗಳಲ್ಲಿ ತೊಡಗಿಸಿಕೊಂಡವರು ಇತ್ಯಾದಿ ವ್ಯಕ್ತಿಗಳ ತೆರೆಮರೆಯ ಗುಂಪು ಇದು.

ಅಧ್ಯಕ್ಷರಾಗಿ ಯಾರೇ ಬದಲಾವಣೆ ಹೊಂದಿದರೂ ಕೊನೆಗೂ ಸರ್ಕಾರಗಳ ನೀತಿ ಅನುಷ್ಠಾನವಾಗುವುದು ಅಧಿಕಾರಿಗಳ ವಲಯದಿಂದಲೇ. ಇಂಥ ಅಧಿಕಾರಿ ವಲಯವನ್ನು ಈ ಗುಂಪು ತನ್ನ ಅಧೀನದಲ್ಲಿಟ್ಟುಕೊಂಡಿದೆಯಾದ್ದರಿಂದ ಇದನ್ನು ಡೀಪ್ ಸ್ಟೇಟ್ ಅರ್ಥಾತ್ ಅಧಿಕಾರದಲ್ಲಿ ಬೇರುಬಿಟ್ಟಿರುವ ವ್ಯವಸ್ಥೆ ಅಂತ ಕರೆಯಲಾಗುತ್ತದೆ.

ಭಾರತದ ರಾಜಕಾರಣದ ವಿಚಾರ ಬಂದಾಗಲೂ ಇತ್ತೀಚಿನ ದಿನಗಳಲ್ಲಿ ಪ್ರಖ್ಯಾತವಾಗಿರುವ ಸಿನಿಮಾ ಡೈಲಾಗ್ ಒಂದಿದೆ - “ಸರ್ಕಾರ ಅವರದ್ದಾದರೇನಂತೆ, ಸಿಸ್ಟಂ ನಮ್ಮದೇ ಅಲ್ಲವೇ” ಅಂತ. ಲಾಗಾಯ್ತಿನಿಂದ ಭಾರತದ ಅಕಾಡೆಮಿಕ್ ವಲಯದಲ್ಲಿ, ಉದ್ಯಮ ಸ್ತರಗಳಲ್ಲಿ, ಮಾಧ್ಯಮ ಮತ್ತು ಚಿಂತನಕೂಟಗಳಲ್ಲಿ, ಅಧಿಕಾರಿವರ್ಗದಲ್ಲಿ ತಮ್ಮನ್ನು ಪ್ರತಿಷ್ಠಾಪಿಸಿಕೊಂಡಿರುವ ಜನರ ಗುಂಪೊಂದಿದೆ. ಕೇಂದ್ರದಲ್ಲಿ ಆಡಳಿತವನ್ನು ಬಿಜೆಪಿಯೇ ನಡೆಸಿದರೂ, ಕಾಂಗ್ರೆಸ್ಸೇ ನಡೆಸಿದರೂ ಕಾರ್ಯಾನುಷ್ಠಾನ ಹಂತದಲ್ಲಿ ಹಾಗೂ ಕಥಾನಕಗಳನ್ನು ಹೆಣೆಯುವಲ್ಲಿ ಇವರದ್ದೇ ಪ್ರಭಾವ ನಡೆಯುತ್ತದೆ ಎಂಬ ಗ್ರಹಿಕೆ ಇಲ್ಲಿನ ಆಡಳಿತ ವ್ಯವಸ್ಥೆಯಲ್ಲೂ ಇದೆ. 

ಹೀಗಾಗಿಯೇ ಭಾರತದಲ್ಲೇ ಆಗಲೀ, ಅಮೆರಿಕದಲ್ಲೇ ಆಗಲೀ ಬಲಪಂಥೀಯ ರಾಜಕಾರಣವು ಜಯ ಗಳಿಸಿದೆ ಎಂದಾಕ್ಷಣ ಈ ಮೊದಲಿದ್ದ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಬಂದುಬಿಡುತ್ತದೆ ಎಂದೇನಲ್ಲ ಎಂದು ವಿಶ್ಲೇಷಕರು ವಾದಿಸುತ್ತಾರೆ. ಏಕೆಂದರೆ, ಅಧಿಕಾರದ ಶೀರ್ಷಭಾಗದಲ್ಲಿ ಯಾರೇ ಕುಳಿತರೂ ‘ಸಿಸ್ಟಂ’ ಇಲ್ಲವೇ ‘ಡೀಪ್ ಸ್ಟೇಟ್’ ಬದಲಾಗುವುದಕ್ಕೆ ತುಸು ದೀರ್ಘ ಸಮಯವೇ ಹಿಡಿಯುತ್ತದೆ. ಈ ನಡುವೆ ಹಳೆಯ ವಿಚಾರಗಳ ಪ್ರತಿಪಾದಕರಿಗೇ ನಡುವಿನಲ್ಲಿ ಮತ್ತೆ ಅಧಿಕಾರ ಸಿಕ್ಕಿದ್ದೇ ಆದರೆ ಹೊಸ ವಿಚಾರವು ಬೇರು ಹರಡಿಕೊಳ್ಳುವ ಮೊದಲೇ ಮುರುಟುತ್ತದೆ. 

ಈ ಹಿನ್ನೆಲೆಯಲ್ಲಿ, ಇತ್ತೀಚಿನ ಅಮೆರಿಕದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿಜಯವು ಅಲ್ಲಿನ ‘ಡೀಪ್ ಸ್ಟೇಟ್’ ಮೇಲೆ ಯಾವ ಪರಿಣಾಮ ಬೀರಬಲ್ಲದು ಎಂಬುದು ಈಗ ಚರ್ಚೆಯ ವಿಷಯ. ಭಾರತದ ‘ಸಿಸ್ಟಂ’ ಮೇಲೆ ಸಹ ಎಷ್ಟರಮಟ್ಟಿಗೆ ಟ್ರಂಪ್ ವಿಜಯ ಪ್ರಭಾವಿಸುತ್ತದೆ ಎಂಬುದು ಸಹ ಇದರ ಮುಂದುವರಿದ ಚರ್ಚಾಭಾಗವಾಗುತ್ತದೆ. 

ಅಮೆರಿಕದಲ್ಲಾಗಿರುವುದು ಒಂದು ಅವಧಿಯ ಅಧಿಕಾರ ಬದಲಾವಣೆ ಅಲ್ಲ!

2016ರಲ್ಲಿ ಟ್ರಂಪ್ ರಾಜಕೀಯ ವ್ಯವಸ್ಥೆಗೆ ಹೊರಗಿನವರಾಗಿ ಅಧಿಕಾರ ಸೂತ್ರ ಹಿಡಿದರು. 2020ರಲ್ಲಿ ಚುನಾವಣೆ ಸೋತ ನಂತರ ಅವರ ವಿರುದ್ಧ ಆರೋಪಗಳಾಗಿ ಪದಚ್ಯುತಿಯೂ ಆಯಿತು. 2024ರವರೆಗೆ ಡೆಮಾಕ್ರಾಟರು ಆಳಿದ್ದ ದೇಶವನ್ನು ಈಗ ಮತ್ತೊಮ್ಮೆ ರಿಪಬ್ಲಿಕನ್ನರು ಆಳಲಿದ್ದಾರೆ, ಅದನ್ನು ಅಷ್ಟೆಲ್ಲ ಚರ್ಚಿಸುವ ಅಗತ್ಯವೇನಿದೆ ಎಂದು ಕೆಲವರಿಗೆ ಅನ್ನಿಸಬಹುದು.

ಆದರೆ ಈಗೊಂದು ದಶಕದಲ್ಲಿ ಅಮೆರಿಕದ ಎಡಪಂಥವು ನಾಗರಿಕತೆಗೇ ಸವಾಲನ್ನೊಡ್ಡಿತ್ತು. ಇನ್ನೂ ಪ್ರಾಪ್ತ ವಯಸ್ಸಿಗೆ ಬಂದಿರದ ಮಗು ಸಹ ತನ್ನ ಜೈವಿಕ ಸ್ಥಿತಿಗೆ ಹೊರತಾಗಿ ತನ್ನನ್ನು ಭಾವನೆಗಳ ಆಧಾರದ ಮೇಲೆ ಗಂಡು ಇಲ್ಲವೇ ಹೆಣ್ಣು ಎಂದು ಗುರುತಿಸಿಕೊಳ್ಳಬಹುದು; ಮಕ್ಕಳಿಗೆ ತಾವಿರುವ ಸ್ಥಿತಿ ಸರಿಯಿಲ್ಲ ಎನಿಸಿದರೆ ಶಸ್ತ್ರ ಚಿಕಿತ್ಸೆ ಮೂಲಕ ಲಿಂಗ ಪರಿವರ್ತನೆ ಮಾಡಿಕೊಳ್ಳಬಹುದು; ಅಮೆರಿಕಕ್ಕೆ ಅಕ್ಕಪಕ್ಕದ ದೇಶಗಳಿಂದ ವಲಸೆ ಬರುವುದಕ್ಕೆ ಔದಾರ್ಯ ತೋರುವುದು; ಭಾರತೀಯರು ಅಥವಾ ಇನ್ಯಾರನ್ನೇ ಅಮೆರಿಕದ ಉದ್ದಿಮೆಗಳು ಕೇವಲ ಪ್ರತಿಭೆ ಆಧರಿಸಿ ಉದ್ಯೋಗಕ್ಕೆ ಸೇರಿಸಿಕೊಳ್ಳದೇ, ಜನಾಂಗೀಯ ಪ್ರಾತಿನಿಧ್ಯ ಕೊಡುವುದು… ಇಂಥದೇ ಹಲವು ನೀತಿಗಳನ್ನು ಅದು ಪ್ರತಿಪಾದಿಸಿಕೊಂಡಿತ್ತು. ಡೆಮಾಕ್ರಾಟರ ನಡಾವಳಿಗಳು ಇದಕ್ಕೆ ಪೂರಕವಾಗಿದ್ದವು. ಅಕ್ರಮ ವಲಸೆಯತ್ತ ಬೈಡೆನ್ ಆಡಳಿತ ಕುರುಡಾಗಿತ್ತು.

ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಾಳೆಯವು ಈ ಅರಾಜಕ ಎಡಪಂಥೀಯ ನಿಲವುಗಳಿಗೆ ವಿರುದ್ಧವಾಗಿದ್ದುಕೊಂಡು ಚುನಾವಣೆ ಜಯಿಸಿತು ಎಂಬುದು ಈ ಗೆಲುವಿನಲ್ಲಿರುವ ವಿಶಿಷ್ಟ ಅಂಶ. ಸಿಐಎ-ಎಫ್ಬಿಐ ಸೇರಿದಂತೆ ಕಾರ್ಯತಂತ್ರದ ಜಾಗಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಂದಿಯನ್ನು ನುಗ್ಗಿಸಿರುವ ಎಡಪಂಥ ನೀತಿ ಕೊನೆಗಾಣಿಸಿ ಅಲ್ಲೆಲ್ಲ ಅಗತ್ಯವಿಲ್ಲದವರನ್ನು ಮನೆಗೆ ಕಳುಹಿಸುವೆ ಎಂದಿದ್ದಾರೆ ಟ್ರಂಪ್. ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿದ್ದುಕೊಂಡು ಪ್ಯಾಲಸ್ತೀನ್ ಪರ ಘೋಷಣೆ ಕೂಗುವವರಿಗೂ ಇದೇ ದಾರಿ ತೋರಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಈ ಎಲ್ಲ ಕಾರಣದಿಂದ, ಅಮೆರಿಕದ ಬೌದ್ಧಿಕ ವಿಭಾಗದಲ್ಲಿ ದುಡ್ಡು-ಖ್ಯಾತಿ-ಪ್ರಭಾವಗಳನ್ನೆಲ್ಲ ಅನುಭವಿಸಿಕೊಂಡಿದ್ದ, ಆ ಮೂಲಕ ಭಾರತವೂ ಸೇರಿದಂತೆ ಹಲವು ದೇಶಗಳ ರಾಜಕಾರಣವನ್ನು ಪ್ರಭಾವಿಸುತ್ತಿದ್ದ ‘ಗ್ಲೋಬಲ್ ಲೆಫ್ಟ್’ ಟ್ರಂಪ್ ಅವರ ಈ ಅವಧಿಯಲ್ಲಿ ದೊಡ್ಡ ಹೊಡೆತವನ್ನೇ ತಿನ್ನಲಿಕ್ಕಿದೆ.

US president Donald trump
ಇರಾನ್-ಭಾರತ ಅಥವಾ ಪರ್ಶಿಯಾ-ಹಿಂದುಸ್ಥಾನ: ಚರಿತ್ರೆ ಕಟ್ಟಿಕೊಡುತ್ತಿದೆ ಈ ಎಲ್ಲ ಕಂಪನ! (ತೆರೆದ ಕಿಟಕಿ)

ಅಮೆರಿಕದಲ್ಲಿ ಗ್ಲೋಬಲ್ ಲೆಫ್ಟ್ ಅಸ್ಥಿರವಾದರೆ ಭಾರತಕ್ಕಿದೆ ಲಾಭ!

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಳೆಯವು ಭರ್ಜರಿ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಜೆ ಎನ್ ಯುದಲ್ಲಿ ಎಡಪಂಥೀಯರ ಗಲಾಟೆ ಪ್ರಖರವಾಗಿಯೇ ಇತ್ತು. ಅದುವರೆಗೆ ಒಂದು ವಿಚಾರಧಾರೆಯ ಭಾಗವಾಗಿದ್ದ ಸಾಹಿತಿಗಳು, ಬುದ್ಧಿಜೀವಿಗಳು, ವಿದ್ಯಾಕೇಂದ್ರಗಳ ನೀತಿ ನಿರೂಪಕರಿಂದ ಪ್ರಶಸ್ತಿ ವಾಪಸಾತಿ ಎಂಬ ನಡೆಯ ಮೂಲಕ ಸರ್ಕಾರದ ವಿಶ್ವಾಸಾರ್ಹತೆಯನ್ನು ತಗ್ಗಿಸುವ ಪ್ರಯತ್ನಗಳು ದೊಡ್ಡಮಟ್ಟದಲ್ಲಾದವು. ಒಟ್ಟಾರೆ ಮೋದಿ ಸರ್ಕಾರದ ಮೊದಲ ಐದು ವರ್ಷಗಳ ಅವಧಿಯಲ್ಲಿ ಎಡಪಂಥೀಯ ಹಿಡಿತವು ದೇಶದ ಸಂಸ್ಥೆಗಳ ಮೇಲೆ ಇನ್ನೂ ಢಾಳಾಗಿದೆ ಎಂಬುದು ಪಕ್ಕಾ ಆಗಿತ್ತು. ಯಾವಾಗ, ಎರಡನೇ ಅವಧಿಗೂ ಮತ್ತಷ್ಟು ಬಹುಮತದೊಂದಿಗೆ ಮೋದಿ ಸರ್ಕಾರದ ಪುನರಾಗಮನವಾಯಿತೋ, ಆ ನಂತರದಲ್ಲಿ ಬಲಪಂಥೀಯ ಎಂದು ಕರೆಸಿಕೊಳ್ಳುವ ಚಿಂತನೆಗೆ ‘ವ್ಯವಸ್ಥೆ’ಯಲ್ಲಿ ಸ್ವಲ್ಪ ಜಾಗ ಸಿಗುವುದಕ್ಕೆ ಶುರುವಾಯಿತು. 

ಈ ನಿಧಾನಗತಿ ಬದಲಾವಣೆಗೂ ಕಾರಣಗಳಿದ್ದವು. ಅಕಾಡೆಮಿಕ್, ಚಿಂತನ ಕೂಟ, ನೀತಿ-ನಿರೂಪಣೆ ಇಲ್ಲೆಲ್ಲ ಹೊಸ ವಿಚಾರಧಾರೆಯವರನ್ನು ತರುವುದಕ್ಕೆ ಏಕಾಏಕಿ ಸಿದ್ಧ ಭೂಮಿಕೆ ಇರಲಿಲ್ಲ. ಮುಂದಿನ ಅವಧಿಗೆ ಮತ್ತೆ ಹಳಬರ ವ್ಯವಸ್ಥೆಯೇ ಬಂದರೆ ಏನು ಕತೆ ಎಂಬ ಹಿಂಜರಿಕೆ ಬಲಪಂಥ ಎಂದು ಕರೆಸಿಕೊಳ್ಳುವವರಲ್ಲೂ ಇತ್ತು ಹಾಗೂ ಅಧಿಕಾರ ಇನ್ನೈದು ವರ್ಷಗಳಲ್ಲಿ ಮರಳುತ್ತದೆ ಎಂಬ ವಿಶ್ವಾಸ ಎಡಪಂಥ ಎಂದು ಕರೆಸಿಕೊಳ್ಳುವ ಪಟ್ಟಭದ್ರರಲ್ಲೂ ಇತ್ತು. 

ಇವೆಲ್ಲವನ್ನು ಮೀರಿದ್ದ ಸಂಗತಿಯೊಂದು ಎಡಪಂಥದವರ ಪಾಲಿಗಿತ್ತು. ಅದೆಂದರೆ, ಭಾರತದಲ್ಲಿ ಎಡಪಂಥಕ್ಕೆ ರಾಜಕೀಯ ಹಿನ್ನಡೆ ಉಂಟಾಗಿದ್ದರೂ ‘ಗ್ಲೋಬಲ್ ಲೆಫ್ಟ್’ ಎಂಬುದು ಅಮೆರಿಕದ ಡೀಪ್ ಸ್ಟೇಟ್ ಮುಖಾಂತರ ಜೀವಂತವಾಗಿದೆಯಾದ್ದರಿಂದ ತಮಗೊಂದು ಜೀವನಾಡಿ ಇದ್ದೇ ಇರುತ್ತದೆಂಬ ಉತ್ಸಾಹದಲ್ಲಿದ್ದರವರು. ಅದಕ್ಕೆ ಸರಿಯಾಗಿ ವಿದೇಶದ ಎಡರಂಗ ವೇದಿಕೆಗಳು, ಜಾರ್ಜ್ ಸೊರೊಸ್ ಥರದ ಹಣವಂತರು ಭಾರತದ ಪ್ರಜಾ ಆಯ್ಕೆಯ ಸರ್ಕಾರದ ಮೇಲೆ ‘ಸರ್ವಾಧಿಕಾರ’ದ ಆರೋಪ ಮಾಡಿಕೊಂಡಿದ್ದರು. ಈ ಹಂತದಲ್ಲಿ, ಇಲ್ಲಿನ ಎನ್ಜಿಒಗಳಿಗೆ ಬರುವ ವಿದೇಶಿ ಫಂಡಿಂಗ್ ಮೇಲೆ ಮೋದಿ ಸರ್ಕಾರ ನಿಯಂತ್ರಣ ಹೇರಿದ್ದೊಂದು ಬಹಳ ಮುಖ್ಯ ಕ್ರಮ. ಎರಡನೇ ಅವಧಿಯಲ್ಲಿ, ಭಾರತವು ವಿದೇಶ ಸಚಿವಾಲಯದ ಮುಖಾಂತರವೂ ಜಾಗತಿಕ ಎಡಪಂಥ ವ್ಯವಸ್ಥೆಗೆ ಮುಲಾಜಿಲ್ಲದ ಉತ್ತರ ಹೇಳುತ್ತ ಬಂತು. 

ಈ ಎಡಪಂಥ ವ್ಯವಸ್ಥೆ ಕೇವಲ ಸಾಹಿತ್ಯ-ಸಿದ್ಧಾಂತಗಳ ವಿಷಯದಲ್ಲಿ ಕೆಲಸ ಮಾಡುತ್ತದೆ ಎಂದುಕೊಳ್ಳಬೇಕಿಲ್ಲ. ಭಾರತವು ತನ್ನ ಸಾಂಪ್ರದಾಯಿಕ ಶಸ್ತ್ರ ಪೂರೈಕೆದಾರರ ಹೊರತಾಗಿ, ಫ್ರಾನ್ಸ್ ಮೂಲಕ ರಫೈಲ್ ಯುದ್ಧವಿಮಾನ ಖರೀದಿಗೆ ಮುಂದಾಗುತ್ತಲೇ ವಿವಾದ ಎಬ್ಬಿಸುವ ಪ್ರಯತ್ನಗಳು ಆಗಿದ್ದರಲ್ಲಿ ಈ ಗ್ಲೋಬಲ್ ಲೆಫ್ಟ್ ಗುಂಪಿನ ಪಾಲುದಾರಿಕೆ ಇದೆ. ಥರಹೇವಾರಿ ಸೂಚ್ಯಂಕಗಳ ಮೂಲಕ ಭಾರತವನ್ನು ಪಾಕಿಸ್ತಾನ, ಬಾಂಗ್ಲಾದೇಶ ಇತ್ಯಾದಿಗಳಿಗಿಂತ ಕೆಳಮಟ್ಟದ ಸ್ಥಾನಗಳಲ್ಲಿ ತೋರಿಸಿ, ಆ ಮೂಲಕ ಭಾರತದ ಆತ್ಮವಿಶ್ವಾಸಕ್ಕೆ ಪೆಟ್ಟು ಕೊಡುವ ವ್ಯಾಖ್ಯಾನಗಳನ್ನು ಹೆಣೆಯುವುದರಲ್ಲೂ ಇದು ಕೆಲಸ ಮಾಡಿದೆ. ಕಾಶ್ಮೀರದಿಂದ ಹಿಡಿದು ಕೃಷಿ ಕಾಯ್ದೆವರೆಗೆ ಭಾರತದಲ್ಲಿ ಎಡಪಂಥೀಯರು ಎನಿಸಿಕೊಂಡವರು ಏನೆಲ್ಲ ತಕರಾರುಗಳನ್ನು ತೆಗೆದರೋ ಆ ಪೈಕಿ ಹೆಚ್ಚಿನವರಿಗೆ ಶಕ್ತಿ ಒದಗಿಬಂದಿದ್ದು ಅಮೆರಿಕದ ಗ್ಲೋಬಲ್ ಲೆಫ್ಟ್ ವ್ಯವಸ್ಥೆಯಿಂದಲೇ. 

ಇದೀಗ, ಮೂರನೇ ಅವಧಿಗೂ ಭಾರತದಲ್ಲಿ ಎನ್ಡಿಎ ಸರ್ಕಾರವೇ ಅಸ್ತಿತ್ವದಲ್ಲಿರುವುದು ಹಾಗೂ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಬಂದಿರುವುದು ಗ್ಲೋಬಲ್ ಲೆಫ್ಟ್ ಅಸ್ತಿತ್ವವನ್ನೇ ಅಲುಗಾಡಿಸುವುದಕ್ಕೆ ಹೊರಟಿರುವ ವಿದ್ಯಮಾನ. ಕೇವಲ ನಾಲ್ಕು ವರ್ಷಗಳ ಟ್ರಂಪ್ ಅಧ್ಯಕ್ಷೀಯ ಅವಧಿಯನ್ನು ಈ ಗ್ಲೋಬಲ್ ಲೆಫ್ಟ್ ಹೇಗಾದರೂ ತಾಳಿಕೊಂಡುಬಿಡುತ್ತಿತ್ತು. ಆದರೆ ಈ ಬಾರಿ ಟ್ರಂಪ್ ವಿಜಯವು 2016ರ ಮೊದಲ ಅವಧಿಗಿಂತ ಭಿನ್ನವಾಗಿದೆ. ಏಕೆಂದರೆ, ಈ ಬಾರಿ ಅದಾಗಲೇ ರಿಪಬ್ಲಿಕನ್ ವ್ಯವಸ್ಥೆಗೆ ಉತ್ತರಾಧಿಕಾರಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಅಮೆರಿಕನ್ ಉದ್ಯಮಿ ಎಲಾನ್ ಮಸ್ಕ್, ಟ್ರಂಪ್ ಪ್ರಚಾರದಲ್ಲಿ ಮುಂಚೂಣಿಯಲ್ಲಿ ಪಾಲ್ಗೊಂಡಿದ್ದ ವಿವೇಕ ರಾಮಸ್ವಾಮಿ, ಉಪಾಧ್ಯಕ್ಷ ಪಟ್ಟಕ್ಕೇರುತ್ತಿರುವ ಜೆಡಿ ವಾನ್ಸ್ ಇವರೆಲ್ಲರೂ ಟ್ರಂಪ್ ಅವಧಿ ಮುಗಿದ ನಂತರದಲ್ಲೂ ಬಲಪಂಥೀಯ ರಾಜಕೀಯ ವಿಚಾರಧಾರೆಯನ್ನು ಪ್ರಖರವಾಗಿಡುವ ಸೂಚನೆಯನ್ನು ಅದಾಗಲೇ ಕೊಟ್ಟಿದ್ದಾರೆ. ಅಮೆರಿಕದ ಸಂವಿಧಾನದ ಪ್ರಕಾರ ಒಬ್ಬ ವ್ಯಕ್ತಿ ಎರಡು ಅವಧಿಗಳಿಗೆ ಮಾತ್ರವೇ ಅಧ್ಯಕ್ಷನಾಗಬಹುದು. ಹೀಗಾಗಿ, ಟ್ರಂಪ್ ನಂತರ ಮುಂದಿನ ಚುನಾವಣೆಯಲ್ಲಿ ಎಲಾನ್ ಮಸ್ಕ್ ಕಣಕ್ಕಿಳಿಯಬಹುದಾ ಎಂಬ ನಿರೀಕ್ಷೆ-ವಿಶ್ಲೇಷಣೆಗಳು ಈಗಾಗಲೇ ಗರಿಗೆದರಿವೆ.

US president Donald trump
ಖಾಲಿಸ್ಥಾನಿಗಳಿಗೇಕೆ ಕೆನಡಾದ ಆಶ್ರಯ? ಇವರ ಹಿಂದು ದ್ವೇಷಕ್ಕಿರುವ ಪ್ರಚೋದನೆಯಾದರೂ ಏನು? (ತೆರೆದ ಕಿಟಕಿ)

ಡೀಪ್ ಸ್ಟೇಟ್, ಎಡಪಂಥವನ್ನು ದೀರ್ಘಾವಧಿಗೆ ಪಕ್ಕ ತಳ್ಳುವುದು ಸಾಧ್ಯವಾ?

ಪ್ರತಿಭಾವಂತರಿಗೆ ಅಮೆರಿಕವು ಯಾವತ್ತೂ ತೆರೆದುಕೊಂಡಿರಬೇಕು ಎಂಬ ಪ್ರತಿಪಾದನೆ ಎಲಾನ್ ಮಸ್ಕ್ ಅವರದ್ದು. ಮಕ್ಕಳ ಮೇಲೆ ಪಾಲಕರ ಹಕ್ಕಿಲ್ಲ, ಅವರು ಲಿಂಗ ಬದಲಾವಣೆಗೆ ಸ್ವತಂತ್ರರು ಎಂಬೆಲ್ಲ ಸ್ವೇಚ್ಛಾಚಾರದ ನೀತಿಗಳಿಗೆ ಮಸ್ಕ್ ಅವರದ್ದು ಕಡು ವಿರೋಧ. ವಿವೇಕ ರಾಮಸ್ವಾಮಿ ಅವರಂತೂ ಭಾರತದ ನಾಗರಿಕ ಚಿಂತನೆಯನ್ನೇ ಧ್ವನಿಸುವಂಥವರು. ರಿವರ್ಸ್ ರೇಸಿಸಂ ಅನ್ನೋದು ಸಹ ರೇಸಿಸಂ ಅಂತ ಘಂಟಾಘೋಷವಾಗಿ ಸಾರಿದವರು ಅವರು. ಅಂದರೆ ಕಪ್ಪು ವರ್ಣದ ಅಮೆರಿಕನ್ ಪ್ರಜೆಯನ್ನು ಆತನ ಜನಾಂಗದ ಕಾರಣಕ್ಕಾಗಿ ಕೀಳಾಗಿ ಕಾಣುವುದು ಹೇಗೆ ಅಪರಾಧವೋ, ಅದೇ ರೀತಿ ಬಿಳಿಯ ಅಮೆರಿಕನ್ ಎಂದಕೂಡಲೇ ಆತನನ್ನು ಶೋಷಕನ ಸ್ಥಾನದಲ್ಲಿರಿಸೋದೂ ಜನಾಂಗೀಯ ನಿಂದನೆಯೇ ಆಗುತ್ತದೆ ಎಂದರವರು. ಭಾರತದಲ್ಲಿ ಎಲ್ಲವಕ್ಕೂ ಮೇಲ್ವರ್ಗದವರನ್ನೇ ದೂರುವ ಬುದ್ಧಿಜೀವಿಗಳನ್ನೊಮ್ಮೆ ನೆನಪು ಮಾಡಿಕೊಂಡರೆ, ಇದೇ ಜಾಡಿನ ಪ್ರತಿಪಾದನೆ ನಮಗೂ ಎಷ್ಟು ಮುಖ್ಯ ಎಂದು ಅರ್ಥವಾಗುತ್ತದೆ. 

ಪ್ರಾಯೋಗಿಕವಾಗಿ ನೋಡಿದಾಗಲೂ, ಇದೀಗ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರಿಗೆ ದೀರ್ಘಾವಧಿಗೆ ತಮ್ಮ ಸ್ಥಾನ ಬಲಪಡಿಸಿಕೊಳ್ಳಬೇಕಾದ ಅಗತ್ಯವಿದೆ. ಜಾರ್ಜ್ ಸೊರೊಸ್, ಬಿಲ್ ಗೇಟ್ಸ್ ಥರದ ಡೀಪ್ ಸ್ಟೇಟ್ ಆಟಗಾರರನ್ನು ಪಕ್ಕಕ್ಕೆ ಸರಿಸಿಯೇ ಎಲಾನ್ ಮಸ್ಕ್ ತಮ್ಮ ಆಟ ಕಟ್ಟಬೇಕಾಗುತ್ತದೆ. ಈ ಹಿಂದಿನ ಡೀಪ್ ಸ್ಟೇಟ್ ಶ್ರೀಮಂತರಿಗೆ ರಕ್ಷಣಾ ಉದ್ಯಮಕ್ಕೆ ಸೇರಿದಂತೆ ಹಿತಾಸಕ್ತಿಗಳಿದ್ದವು. ಹಾಗೆಂದೇ ಜಗತ್ತಿನಲ್ಲಿ ಯುದ್ಧಗಳಾಗುತ್ತಿದ್ದರೆ ಅವರಿಗೆ ಲಾಭವಾಗುತ್ತಿರುತ್ತಿತ್ತು ಎಂಬ ವಾದವಿದೆ. ಇದೀಗ ಮಸ್ಕ್’ಗೆ ಬೇಕಿರುವುದು ಚಂದ್ರಯಾನ-ಮಂಗಳಯಾನ, ನವೀನ ತಂತ್ರಜ್ಞಾನದ ಸಂಪರ್ಕ ಸಾಧನಗಳು ಇತ್ಯಾದಿಗಳ ಮೂಲಕ ನಡೆಯುವ ವಿಶ್ವ ವ್ಯಾಪಾರ. ಹೀಗಾಗಿ ಎಡಪಂಥ ಪೋಷಕರಾದ ಹಳೆಯ ಧನಿಕರೆಲ್ಲ ನೇಪಥ್ಯಕ್ಕೆ ಸರಿಯಲಿದ್ದಾರೆ.

ಎಡಪಂಥೀಯರ ಆಡುಂಬೊಲವಾಗಿದ್ದ, ಅವರಿಗೆ ಸಲ್ಲದವರನ್ನು ಸೆನ್ಸಾರ್ ಮಾಡುತ್ತಿದ್ದ ಟ್ವಿಟ್ಟರ್ ಅನ್ನು ಖರೀದಿಸಿ ಅದನ್ನು ಎಕ್ಸ್ ಆಗಿ ಪರಿವರ್ತಿಸಿ ಬಲಪಂಥಕ್ಕೊಂದು ಮಾಧ್ಯಮ ವ್ಯವಸ್ಥೆ ರೂಪಿಸಿದವರು ಮಸ್ಕ್. ಹಾಗೆಂದೇ ಈ ಬಾರಿ ಅಮೆರಿಕದ ಮುಖ್ಯವಾಹಿನಿ ಮಾಧ್ಯಮ ವೇದಿಕೆಗಳೆಲ್ಲ ಟ್ರಂಪ್ ವಿರೋಧಿ ಸುದ್ದಿ-ವಿಶ್ಲೇಷಣೆಗಳನ್ನೇ ಕೊಟ್ಟರೂ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಲಾಗಲಿಲ್ಲ. ಆ ಮೂಲಕ ಅಮೆರಿಕದ ಎಡಪಂಥೀಯ ಮಾಧ್ಯಮ ಜಗತ್ತು ಸಹ ತನ್ನ ಪ್ರಸ್ತುತತೆ ಕಳೆದುಕೊಂಡಿದೆಯೆಂಬುದನ್ನು ಮಸ್ಕ್ ಸಾರಿದರು. ಮಸ್ಕ್ ಆಗಲೀ, ಇನ್ಯಾವುದೇ ಶ್ರೀಮಂತನಾಗಲೀ ಕೇವಲ ನಾಲ್ಕು ವರ್ಷಗಳ ಅವಧಿಯ ಒಬ್ಬ ವ್ಯಕ್ತಿಯ ಅಧಿಕಾರಾವಧಿ ಬೆಂಬಲಕ್ಕಾಗಿ ಇಷ್ಟೆಲ್ಲ ಮಾಡುವುದಿಲ್ಲ. ಟ್ರಂಪ್ ಅವಧಿ ಮುಗಿಯುತ್ತಲೇ ಇನ್ನೊಬ್ಬ ಪ್ರಬಲ ರಿಪಬ್ಲಿಕನ್ ಕೈಗೆ ಅಮೆರಿಕದ ಅಧಿಕಾರ ಸಿಗುವಂತೆ ಮಾಡುವುದಕ್ಕೆ ಮಸ್ಕ್ ಹಾಗೂ ಟ್ರಂಪ್ ಸಮೀಪವರ್ತಿಗಳೆಲ್ಲರ ಪ್ರಯತ್ನವಿದ್ದಿರುತ್ತದೆ. 

ಹೀಗಾಗಿಯೇ ಜಾಗತಿಕ ಎಡಪಂಥ ಎನ್ನುವುದು ದೀರ್ಘಾವಧಿ ಅಜ್ಞಾತವಾಸವೊಂದಕ್ಕೆ ಅಭಿಮುಖವಾಗಿ ನಿಂತಿದೆ!

- ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com