US Trade war: ಆರ್ಥಿಕ ದೈತ್ಯರ ಅಂಕುಶ ತೀವ್ರವಾದಾಗಲೆಲ್ಲ ಹುಟ್ಟಿವೆ ಅನ್ವೇಷಣೆಗಳು! (ತೆರೆದ ಕಿಟಕಿ)

ಚೀನಾ, ಕೆನಡಾ, ಮೆಕ್ಸಿಕೊಗಳಿಂದ ತರಿಸಿಕೊಳ್ಳುವ ವಸ್ತುಗಳ ಮೇಲೆ ದೊಡ್ಡಮಟ್ಟದಲ್ಲಿ ಸುಂಕ ಏರಿಸಿದ್ದು ಆಗಿದೆ. ಇದೀಗ ಕೆನಡಾ ಮತ್ತು ಮೆಕ್ಸಿಕೊಗಳಿಂದಲೂ ಅದೇ ರೀತಿಯ ಪ್ರತಿಕ್ರಿಯೆಗಳು ಬರುತ್ತಿರುವ ಹೊತ್ತಿನಲ್ಲಿ ಟ್ರಂಪ್ ಆಡಳಿತ ಒಂದೆರಡು ಹೆಜ್ಜೆ ಹಿಂದೆ ಇಡಬಹುದೇನೋ ಎಂಬ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ.
Trade war- new Discoveries (file pic)
ಟ್ರೇಡ್ ವಾರ್- ಅನ್ವೇಷಣೆ (ಸಂಗ್ರಹ ಚಿತ್ರ)online desk
Updated on

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಬಂದಿದ್ದೇ ಬಂದಿದ್ದು, ಈಗ ನಿರ್ಬಂಧಗಳದ್ದೇ ಚರ್ಚೆ. ಒಂದು ಕಡೆ ಇಸ್ರೇಲ್ ಕೇಂದ್ರಿತ ಕದನಗಳು ಹಾಗೂ ಇತ್ತ ರಷ್ಯ-ಉಕ್ರೇನ್ ಸಂಘರ್ಷಗಳೆಲ್ಲ ನಿಲ್ಲಬಹುದೆಂಬ ಸೂಚನೆಗಳು ಸಿಗುತ್ತಿವೆ. ಆದರೆ, ಅವನ್ನೆಲ್ಲ ನಿಲ್ಲಿಸುವುದಕ್ಕೆ ಉತ್ಸುಕವಾಗಿರುವ ಟ್ರಂಪ್ ಆಡಳಿತವು ವ್ಯಾಪಾರ ಸಮರವನ್ನಂತೂ ತೀವ್ರತೆಯಲ್ಲಿಡುವುದಕ್ಕೆ ನೋಡುತ್ತಿರುವಂತಿದೆ.

ಚೀನಾ, ಕೆನಡಾ, ಮೆಕ್ಸಿಕೊಗಳಿಂದ ತರಿಸಿಕೊಳ್ಳುವ ವಸ್ತುಗಳ ಮೇಲೆ ದೊಡ್ಡಮಟ್ಟದಲ್ಲಿ ಸುಂಕ ಏರಿಸಿದ್ದು ಆಗಿದೆ. ಇದೀಗ ಕೆನಡಾ ಮತ್ತು ಮೆಕ್ಸಿಕೊಗಳಿಂದಲೂ ಅದೇ ರೀತಿಯ ಪ್ರತಿಕ್ರಿಯೆಗಳು ಬರುತ್ತಿರುವ ಹೊತ್ತಿನಲ್ಲಿ ಟ್ರಂಪ್ ಆಡಳಿತ ಒಂದೆರಡು ಹೆಜ್ಜೆ ಹಿಂದೆ ಇಡಬಹುದೇನೋ ಎಂಬ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ. ಅದೇನೇ ಇದ್ದರೂ ಟ್ರಂಪ್ ಆಡಳಿತವು ಈ  ಅವಧಿಯಲ್ಲಿ ಅಮೆರಿಕದಿಂದ ಹೊರಹೋಗುವ ಹಣದ ಬಗ್ಗೆ ಬಹಳ ಎಚ್ಚರವಹಿಸಲಿದೆ ಎಂಬುದಂತೂ ಸ್ಪಷ್ಟವಾಗುತ್ತಿದೆ. ಹೀಗಾಗಿ ಈ ವ್ಯಾಪಾರಸಂಘರ್ಷ ನಾನಾ ತಿರುವುಗಳನ್ನು ಪಡೆಯುತ್ತ ಮುಂದೆ ಸಾಗಲಿಕ್ಕಿದೆ ಎಂಬುದಂತೂ ನಿಶ್ಚಿತ. 

ಹಾಗೆ ನೋಡಿದರೆ, ಭಾರತದ ಇಂದಿನ ನಾಯಕತ್ವಕ್ಕೆ ಇವೆಲ್ಲದರ ಬಗ್ಗೆ ಒಂದು ಮುಂದಾಲೋಚನೆ ಇತ್ತೆನಿಸುತ್ತದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹೊಸ್ತಿಲಲ್ಲೇ ಭಾರತದ ವಿದೇಶ ಸಚಿವ ಎಸ್ ಜೈಶಂಕರ್ ಅವರಿಗೆ ಸಹಜವಾಗಿಯೇ ಪ್ರಶ್ನೆಗಳು ಎದುರಾಗಿದ್ದವು. ಅಮೆರಿಕದ ರಾಜಕೀಯ ನೇತೃತ್ವದಲ್ಲಾಗಬಹುದಾದ ಬದಲಾವಣೆ ಹೇಗಿರಬಹುದೆಂದು ಭಾರತ ಊಹಿಸುತ್ತಿದೆ ಅಥವಾ ನಿರೀಕ್ಷಿಸುತ್ತಿದೆ ಎಂಬುದೇ ಆ ಪ್ರಶ್ನೆಯಾಗಿತ್ತು. “ನೋಡಿ, ಅಮೆರಿಕದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಭಾರತದ ಬಾಂಧವ್ಯ ಅವರೊಂದಿಗೆ ದೃಢವಾಗಿರಲಿದೆ” ಎಂಬ ಮಾಮೂಲಿನ ಉತ್ತರದ ಬೆನ್ನಲ್ಲೇ ಜೈಶಂಕರ್ ಹೇಳಿದ್ದ ಇನ್ನೊಂದು ಮಾತೆಂದರೆ - “ಅಲ್ಲಿ ಅಧಿಕಾರಕ್ಕೆ ಬರುವವರು ಡೆಮಾಕ್ರಾಟ್ ಆಗಿರಲಿ, ರಿಪಬ್ಲಿಕನ್ನರಾಗಿರಲಿ ಇನ್ನುಮುಂದೆ ಅಮೆರಿಕವು ಜಾಗತಿಕ ಅರ್ಥವ್ಯವಸ್ಥೆಗೆ ಮೊದಲಿನಂತೆ ತೆರೆದುಕೊಳ್ಳದೇ ಸಾಗುತ್ತದೆ. ಮೊದಲಿನ ಉದಾರವಾದ ಇರುವುದಿಲ್ಲ, ತನ್ನ ಆಂತರಿಕ ವ್ಯವಸ್ಥೆಯ ಮೇಲೆ ಹೆಚ್ಚು ಕೇಂದ್ರೀಕೃತಗೊಳ್ಳಲಿದೆ” ಎಂದು ವಿಶ್ಲೇಷಿಸಿದ್ದರು. ಅದು ನಿಜವಾಗುತ್ತಿದೆ! ವಿಶ್ವ ಆರೋಗ್ಯ ಸಂಸ್ಥೆಗೆ ಹಣಕಾಸು ನೀಡುವುದರಿಂದ ಹಿಂತೆಗೆದುಕೊಂಡಿರುವುದು, ವಿದೇಶಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಸಂಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದು ಇವೆಲ್ಲವೂ ಟ್ರಂಪ್ ಆಡಳಿತ ವಹಿಸಿಕೊಂಡ ಎರಡೇ ವಾರಗಳಲ್ಲೇ ನಡೆದಿವೆ.

ಅಮೆರಿಕದ ಈ ಭಿನ್ನಹಾದಿ ಒಳ್ಳೆಯದೋ, ಕೆಟ್ಟದ್ದೋ ಎಂಬ ಬಗ್ಗೆ ಹಲವು ಬಗೆಯಲ್ಲಿ ವಿಶ್ಲೇಷಣೆಗಳಿದ್ದಿರಬಹುದು. ಆದರೆ ಅಮೆರಿಕವು ಹೀಗೆ ಜಗತ್ತಿನ ಪಾಲಿಗೆ ಹೆಚ್ಚು ಮುಚ್ಚಿಕೊಳ್ಳುತ್ತ ಸಾಗುವುದು ಇತ್ತೀಚಿನ ಚರಿತ್ರೆಯಲ್ಲಿ ಒಂದು ಹೊಸ ಅನುಭವ. ಇದರ ಪರಿಣಾಮಗಳಂತೂ ಜಗತ್ತನ್ನು ತಾಗಿಯೇ ತಾಗುತ್ತವೆ. ಏಕೆಂದರೆ, ಅಮೆರಿಕವು ಸ್ವಕೇಂದ್ರಿತವಾಗುವುದೆಂದರೆ ಅಲ್ಲಿಂದ ಬರುತ್ತಿದ್ದ ಹಣಕಾಸು ನಿಯಂತ್ರಿತಗೊಳ್ಳುತ್ತದೆ ಎಂಬುದನ್ನಷ್ಟೇ ಸೂಚಿಸುತ್ತಿಲ್ಲ. ಬದಲಿಗೆ ಅಲ್ಲಿಂದ ಬರುವ ತಂತ್ರಜ್ಞಾನದ ಹರಿವೂ ನಿಯಂತ್ರಣಕ್ಕೆ ಸಿಲುಕಬಹುದು. ಅಂದರೆ, ಅಮೆರಿಕವು ಜಗತ್ತಿನ ಮೇಲೆ ಒಂದು ಸಣ್ಣಮಟ್ಟದ ಅಘೋಷಿತ ಆರ್ಥಿಕ ದಿಗ್ಬಂಧನವನ್ನೇ ಹಾಕಿದಂತೆ.

ಸ್ವಾರಸ್ಯ ಇರುವುದು ಇಲ್ಲಿಯೇ. ಆರ್ಥಿಕ ದಿಗ್ಬಂಧನ ಎಂಬ ಶಬ್ದ ಮೊದಲ ಬಾರಿಗೆ ಬೆಚ್ಚಿ ಬೀಳಿಸುತ್ತದೆ. ಆದರೆ, ವಾಸ್ತವದಲ್ಲಿ ಪ್ರಮುಖ ಆರ್ಥಿಕ ಶಕ್ತಿಯೊಂದು ಜಗತ್ತಿನ ಮೇಲೆ ನಿಯಂತ್ರಣವೊಂದನ್ನು ತರಲು ಹೊರಟಾಗಲೆಲ್ಲ ಅದು ಅನ್ವೇಷಣೆಗಳಿಗೆ ವೇದಿಕೆ ಒದಗಿಸಿದೆ. ಹಾಗೆಂದೇ, ಈ ಬಾರಿ ಅಮೆರಿಕವು ತನ್ನನ್ನು ತಾನು ಚಿಪ್ಪಿನಲ್ಲಿ ಒಳಗೆಳೆದುಕೊಳ್ಳುತ್ತಹೋದಂತೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಏನೆಲ್ಲ ಅನ್ವೇಷಣೆಗಳು ಹುಟ್ಟಿಕೊಳ್ಳಲಿವೆ ಎಂಬುದು ಆಸಕ್ತಿಕರ ಅಂಶ.

Trade war- new Discoveries (file pic)
Maha Kumbh 2025: ಕುಂಭಮೇಳ ಬಗ್ಗೆ "ಬುದ್ಧಿಜೀವಿ" ವಿಶ್ಲೇಷಣೆಗಳಿಗೆ ಪ್ರತಿಕ್ರಿಯೆ ಬೇಕಿಲ್ಲ, ಆದರೆ… (ತೆರೆದ ಕಿಟಕಿ)

ಎಐ ಮೂಲಕ ಚೀನಾದ ಅನ್ವೇಷಣಾ ಪ್ರತ್ಯುತ್ತರ

ಸದ್ಯಕ್ಕೆ ಎಲ್ಲರ ಮುಂದಿರುವ ಉದಾಹರಣೆ ಎಂದರೆ ಚೀನಾ, ಅದರ ಡೀಪ್ ಸೀಕ್ ಎಐ ತಂತ್ರಾಂಶದ ಉದಾಹರಣೆಯ ಮೂಲಕ. ಅಮೆರಿಕದ ಕಂಪನಿಗಳು, ಮುಖ್ಯವಾಗಿ ಎನ್ವಿಡಿಯಾ, ಚೀನಾಕ್ಕೆ ಸುಧಾರಿತ ಚಿಪ್ ಮಾರದೇ ಇರುವಂತೆ ಅಮೆರಿಕವು ನೋಡಿಕೊಂಡಿತು. ಇತ್ತೀಚಿಗಂತೂ ಈ ಬಗ್ಗೆ ನಿರ್ದಿಷ್ಟ ಆದೇಶವನ್ನೇ ಹೊರಡಿಸಿತ್ತು. ಯಾವುದೇ ಎಐ ಮಾಹಿತಿ ಸಂಗ್ರಹಣ ಘಟಕಕ್ಕೆ ಬೇಕಾಗುವ ಗ್ರಾಫಿಕ್ ಪ್ರಾಸೆಸಿಂಗ್ ಯುನಿಟ್ ಹಾಗೂ ಅವುಗಳಲ್ಲಿ ಅಡಕವಾಗಿರುವ ಅತಿಸೂಕ್ಷ್ಮ ಚಿಪ್ ಇವುಗಳಿಲ್ಲದೆಯೇ ಎಐ ಅಭಿವೃದ್ಧಿ ಸಾಧ್ಯವಿಲ್ಲವಾದ್ದರಿಂದ ಚೀನಾವನ್ನು ಈ ವಿಷಯದಲ್ಲಿ ಹಣಿದಿರುವುದಾಗಿ ಅಮೆರಿಕ ಅಂದುಕೊಂಡಿದ್ದರೆ ಆ ಲೆಕ್ಕಾಚಾರ ಬುಡಮೇಲಾಯಿತು. ಹಾಗಾಗುವುದಕ್ಕೆ ಕಾರಣವಾಗಿದ್ದು ಡೀಪ್ ಸೀಕ್ ನಲ್ಲಿ ವ್ಯಕ್ತವಾಗಿರುವ ಚೀನಾದ ಅನ್ವೇಷಣೆಯ ಅಂಶ. ಅದು ಪ್ರತಿಪಾದಿಸುತ್ತಿರುವ ಪ್ರಕಾರ, ಸುಧಾರಿತ ಚಿಪ್ ಇಲ್ಲದೆಯೂ ಎಐ ಮಾದರಿಯನ್ನು ತರಬೇತುಗೊಳಿಸಬಹುದು. ಈ ಅಂಶವೇ ಈಗ ಭಾರತವೂ ಸೇರಿದಂತೆ ಹಲವು ದೇಶಗಳಿಗೆ ತಮ್ಮದೇ ಎಐ ಮಾದರಿಗಳನ್ನು ಹೊಂದುವುದಕ್ಕೆ ಪ್ರೇರೇಪಿಸುವಂತಾಗಿದೆಯಲ್ಲದೇ, ಒಂದರ್ಥದಲ್ಲಿ ಪಾಶ್ಚಾತ್ಯರು ಸೃಷ್ಟಿಸಿದ್ದ ಮಾರುಕಟ್ಟೆ ಪ್ರತಿಬಂಧಗಳನ್ನು ಇಲ್ಲವಾಗಿಸಿದೆ.

ಇನ್ನೊಂದೆಡೆ, ತನ್ನ ಮೇಲೆ ಚಿಪ್ ಹಾಗೂ ಸೆಮಿಕಂಡಕ್ಟರ್ ವಿಭಾಗದಲ್ಲಿ ನಿಯಂತ್ರಣಗಳು ಬೀಳುತ್ತಲೇ ಆ ವಿಭಾಗದಲ್ಲಿ ತನ್ನ ಸ್ವಂತ ಸಾಮಾರ್ಥ್ಯಾಭಿವೃದ್ಧಿ ಮಾಡಿಕೊಂಡಿರುವ ಚೀನಾ ಸಾಧನೆಯೂ ಗಮನಾರ್ಹ. 7 ನ್ಯಾನೊ ಮೀಟರ್ ಸೂಕ್ಷ್ಮತೆಯವರೆಗಿನ ಚಿಪ್ ಅಭಿವೃದ್ಧಿಯಲ್ಲಿ ಅದಾಗಲೇ ಚೀನಾದ ಕಂಪನಿಗಳು ಯಶ ಸಾಧಿಸಿವೆ. ಅದಕ್ಕೆ ಎನ್ವಿಡಿಯಾವನ್ನೋ, ತೈವಾನ್ ಕಂಪನಿಗಳನ್ನೋ ಅವಲಂಬಿಸಬೇಕಾದ ದರ್ದು ಚೀನಾಕ್ಕಿಲ್ಲ. ಅಮೆರಿಕದ ಸೆಮಿಕಂಡಕ್ಟರ್ ವಲಯವು ಇದಕ್ಕಿಂತ ಸೂಕ್ಷ್ಮ ನ್ಯಾನೊ ಮೀಟರ್ ಚಿಪ್ ಉತ್ಪಾದನೆ ಮಾಡಬಲ್ಲುದಾದರೂ ಚೀನಾವೂ ಕೆಲ ಸಮಯಗಳಲ್ಲಿ ಅದನ್ನು ಸಾಧಿಸುವ ಸಾಧ್ಯತೆ ಇದ್ದೇ ಇದೆ.

ಪಾಶ್ಚಾತ್ಯರ ಪ್ರತಿಬಂಧಗಳಿಗೆ ಅನ್ವೇಷಣೆಯ ಉತ್ತರ ಕೊಟ್ಟಿತ್ತು ಭಾರತ

ಸದ್ಯದ ಉದಾಹರಣೆಯನ್ನಿಟ್ಟುಕೊಂಡು ಇದು ಕೇವಲ ಚೀನಾ ಹೆಚ್ಚುಗಾರಿಕೆ ಎಂದೇನೂ ಅಂದುಕೊಳ್ಳಬೇಕಿಲ್ಲ. ತನ್ನ ಮೇಲೆ ಅಮೆರಿಕದ ಪ್ರತಿಬಂಧಗಳು ಬಿದ್ದಾಗ ಭಾರತವು ಸಹ ಸ್ವಂತ ಬಲದ ಮೇಲೆ ಅನ್ವೇಷಣೆಗಳನ್ನು ಸಾಧಿಸಿದೆ. 

ಇವತ್ತಿಗೆ ಭಾರತವು ತನ್ನದೇ ಆದ ಉಪಗ್ರಹಾಧರಿತ ದಿಕ್ಸೂಚಿ ವ್ಯವಸ್ಥೆ ನಾವಿಕ್ ಅನ್ನು ಹೊಂದಿದೆ. ಅಂದರೆ, ಅಮೆರಿಕವು ಒಂದೊಮ್ಮೆ ಜಿಪಿಎಸ್ ವ್ಯವಸ್ಥೆಯನ್ನು ನಿರಾಕರಿಸಿದರೂ ನಿಭಾಯಿಸಬಲ್ಲ ಸ್ಥಿತಿಯಲ್ಲಿ ಭಾರತವಿದೆ. ಇದಕ್ಕೆಲ್ಲ ಕಾರಣವಾದ ಅಂಶವೇನು? 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದುರ್ಗಮ ಪರ್ವತ ಪ್ರದೇಶಗಳ ತುದಿಯಲ್ಲಿ ಕುಳಿತಿದ್ದ ವೈರಿಯ ಜಾಡನ್ನು ಪತ್ತೆಹಚ್ಚುವುದಕ್ಕೆ ತಂತ್ರಜ್ಞಾನದ ಸಹಾಯ ಬೇಕಿತ್ತು. ಆಗ ಅಮೆರಿಕವು ಭಾರತಕ್ಕೆ ಮಿಲಿಟರಿ ಹಂತದ ಜಿಪಿಎಸ್ ಸೇವೆಯನ್ನು ನಿರಾಕರಿಸಿಬಿಟ್ಟಿತು. ಆ ಕಹಿ ಅನುಭವವೇ ಮುಂದೆ ಭಾರತವು ಇಸ್ರೊ ನೇತೃತ್ವದಲ್ಲಿ ನಾವಿಕ್ ದಿಕ್ಸೂಚಿ ಹೊಂದುವುದಕ್ಕೆ ಪ್ರೇರೇಪಿಸಿತು. ಇವತ್ತಿಗೆ ಮ್ಯಾಪ್ ಮೈ ಇಂಡಿಯಾದಂಥ ಗೂಗಲ್ ಮ್ಯಾಪಿಗೆ ಸಂವಾದಿಯಾಗಿರುವ ಭಾರತೀಯ ಕಂಪನಿಗಳು ನಾವಿಕ್ ವ್ಯವಸ್ಥೆಯ ಮೇಲೆಯೇ ನಿಂತಿವೆ.

ಭಾರತವು ತೊಂಬತ್ತರ ದಶಕದಲ್ಲಿ ಪರಮ್ ಎಂಬ ತನ್ನದೇ ಸೂಪರ್ ಕಂಪ್ಯೂಟರ್ ವ್ಯವಸ್ಥೆಯನ್ನು ಸಾಧಿಸಿಕೊಂಡಿತು. ಈಗದರ ಸರಣಿಯಲ್ಲಿ ಸುಧಾರಿತ ಅವತರಣಿಗಳು ಸಿದ್ಧವಾಗುತ್ತ ಬಂದಿವೆ. ಅದರ ಹುಟ್ಟಿಗೆ ಕಾರಣವಾಗಿದ್ದೂ ಅಮೆರಿಕದ ಪ್ರತಿಬಂಧಗಳೇ. 1998ರಲ್ಲಿ ಭಾರತವು ಪೊಖ್ರಾನ್ ನಲ್ಲಿ ಅಣ್ವಸ್ತ್ರ ಪರೀಕ್ಷೆಗಳನ್ನು ಮಾಡುತ್ತಲೇ ಅಮೆರಿಕವು ಆರ್ಥಿಕ ದಿಗ್ಬಂಧನವನ್ನು ಹೇರಿತು. ತನ್ನ ಶಕ್ತಿಶಾಲಿ ಉಪಗ್ರಹಗಳ ಕಣ್ಣುತಪ್ಪಿಸಿ ಭಾರತವು ನಡೆಸಿದ ಪ್ರಯೋಗವು ಅಮೆರಿಕದ ಪ್ರತಿಷ್ಠೆಯನ್ನೇ ಮಣ್ಣಾಗಿಸಿತ್ತು. ಹಾಗೆಂದೇ ಅದು ಅವತ್ತಿನ ಕಾಲಕ್ಕೆ ರಕ್ಷಣಾ ವಿಭಾಗಕ್ಕೆ ಸ್ವಲ್ಪವೇ ಸಹಾಯವಾಗುತ್ತದೆ ಎಂದು ಎನಿಸಿದ ಯಾವುದೇ ಹಾರ್ಡ್ವೇರ್ ಹಾಗೂ ಸಾಫ್ಟ್ವೇರ್ ಭಾರತಕ್ಕೆ ಮಾರಾಟವಾಗದಂತೆ ಪ್ರತಿಬಂಧಗಳನ್ನು ಹೇರಿತು. ನಾಗರಿಕ ಬಳಕೆಗೆ ಬೇಕಿದ್ದ ಹಾರ್ಡ್ ಡಿಸ್ಕ್ ಥರದವೂ ಪ್ರತಿಬಂಧಕ್ಕೆ ಒಳಗಾದವು. ಭಾರತಕ್ಕೆ ಅವತ್ತಿಗೆ ತನ್ನ ಉಪಗ್ರಹಗಳಿಂದ ಸಂಗ್ರಹಿಸಿದ ಹವಾಮಾನ ಕುರಿತ ಮಾಹಿತಿಗಳನ್ನು ಸಂಸ್ಕರಿಸುವುದೂ ಕಷ್ಟವಾಗಿ ಹೋಯಿತು. 

ಅಣ್ವಸ್ತ್ರ ಸಾಧಿಸಿಕೊಂಡಿರುವ ಭಾರತವನ್ನು ಬೇರೆ ರೀತಿಯಲ್ಲಿ ಕಟ್ಟಿಹಾಕಬೇಕು ಎಂಬ ಯೋಚನೆ ಎಂಟಿಸಿಆರ್ (ಮಿಸೈಲ್ ಟೆಕ್ನಾಲಜಿ ಕಂಟ್ರೊಲಿ ರಿಜಿಮ್) ಅಂದರೆ ಕ್ಷಿಪಣಿ ಹೊಂದಿರುವ ದೇಶಗಳ ಒಕ್ಕೂಟದ ತೀವ್ರ ತಂತ್ರಜ್ಞಾನ ನಿರ್ಬಂಧಕ್ಕೂ ಕಾರಣವಾಯಿತು.  ಈ ಹಂತದಲ್ಲಿಯೇ ಇಸ್ರೊ ಮತ್ತು ಸಿ-ಡಾಕ್ (ಸೆಂಟರ್ ಫಾರ್ ಡಿವಲಪ್ಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್) ಒಟ್ಟಿಗೆ ಬಂದು ಪರಮ್ ಸೂಪರ್ ಕಂಪ್ಯೂಟರ್ ಅಭಿವೃದ್ಧಿಗೆ ರೂಪುರೇಷೆ ಹಾಕಿದವು. ಯಾವೆಲ್ಲ ಹಾರ್ಡ್ವೇರ್ ಗಳಿಗೆ ಪ್ರತಿಬಂಧವಿತ್ತೋ ಅವನ್ನೆಲ್ಲ ಈ ದೇಶದ ಖಾಸಗಿ ಉತ್ಪಾದಕ ಕಂಪನಿಗಳ ಸಹಯೋಗದಲ್ಲಿ ದೇಶೀಯವಾಗಿಯೇ ಸಾಧಿಸಿಕೊಳ್ಳುವ ಪ್ರಯತ್ನಗಳಾದವು. 

Trade war- new Discoveries (file pic)
ಜಗತ್ತಿನ AI ಉದ್ದಿಮೆಯನ್ನೇ ಅಲ್ಲಾಡಿಸಿರುವ ಚೀನಾದ DeepSeek ಕಂಪನ! ಭಾರತಕ್ಕೇನಿದೆ ಪಾಠ? (ತೆರೆದ ಕಿಟಕಿ)

ಇದೇ ಮಾದರಿಯನ್ನೇ ಕ್ಷಿಪಣಿ ಅಭಿವೃದ್ಧಿಯಲ್ಲೂ ಅನುಸರಿಸಲಾಯಿತು. ಇವತ್ತಿಗೆ ಭಾರತವು ರಷ್ಯದೊಂದಿಗೆ ಅಭಿವೃದ್ಧಿಪಡಿಸಿರುವ ಬ್ರಹ್ಮೊಸ್ ಕ್ಷಿಪಣಿಗಳ ರಫ್ತಿಗೆ ಯೋಚಿಸುತ್ತಿರುವ ಹಂತಕ್ಕೆ ಬಂದು ನಿಂತಿದೆ ಎಂದರೆ ಅದರ ಬೇರುಗಳಿರುವುದು 1998ರ ನಂತರದ ಆರ್ಥಿಕ ದಿಗ್ಬಂಧನದ ದಿನಗಳಲ್ಲಿ ಅಬ್ದುಲ್ ಕಲಾಂ ಅಂಥವರ ನೇತೃತ್ವದಲ್ಲಿ ಭಾರತವು ಕಂಡುಕೊಂಡ ಆತ್ಮನಿರ್ಭರ ಮಾರ್ಗದ ಕ್ಷಿಪಣಿ ವ್ಯವಸ್ಥೆಯಲ್ಲಿ. ಅಗ್ನಿ ಮತ್ತು ಪ್ರಥ್ವಿ ಶ್ರೇಣಿಯ ಕ್ಷಿಪಣಿಗಳು ಹಾಗೂ ತೇಜಸ್ ಫೈಟರ್ ಜೆಟ್ ಇವೆಲ್ಲ ಪ್ರತಿಬಂಧದ ನೆರಳಲ್ಲಿ ಬೆಳೆದ ಭಾರತದ ವ್ಯವಸ್ಥೆಗಳು. ಇದೇ ಮುಂದೆ ಚಂದ್ರಯಾನ, ಮಂಗಳಯಾನದಂಥವುಗಳಿಗೂ ಪ್ರೇರಣೆಯಾಯಿತು. 

ಪ್ರತಿಬಂಧ ಮತ್ತು ಅನ್ವೇಷಣೆಯ ನಂಟು

ಯಾವುದೋ ಉಪಕರಣ, ಇನ್ಯಾವುದೋ ತಂತ್ರಜ್ಞಾನವು ಒಂದು ದೇಶದಿಂದ ಖರೀದಿಗೆ ಲಭ್ಯ ಎಂದಾದಾಗ ಆ ಬಗ್ಗೆ ಸ್ವಂತ ಅಭಿವೃದ್ಧಿಯ ಶ್ರಮಕ್ಕೆ ಬೀಳದೇ ಖರೀದಿಗೆ ಮುಂದಾಗುವುದು ಒಂದು ಸ್ವಾಭಾವಿಕ ಪ್ರಕ್ರಿಯೆಯೇ. ಇದಕ್ಕೆ ಪ್ರತಿಬಂಧ ಇಲ್ಲವೇ ಅಡ್ಡಿಗಳು ಸೃಷ್ಟಿಯಾದಾಗಲೇ ಪರ್ಯಾಯವಾಗಿ ಅನ್ವೇಷಣೆಗಳು ಹುಟ್ಟಿಕೊಳ್ಳುತ್ತವೆ.

ಶೀತಲಯುದ್ಧದ ಸಂದರ್ಭದಲ್ಲಿ ಆಗಿನ ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ಅಮೆರಿಕ ನಿರ್ಬಂಧಿಸಿತು ಎಂಬ ಕಾರಣವೇ ಅವತ್ತಿನ ಸೋವಿಯತ್ ಒಕ್ಕೂಟಕ್ಕೆ ಸ್ಪುಟ್ನಿಕ್ ಎಂಬ ಉಪಗ್ರಹ ವ್ಯವಸ್ಥೆ ಕಟ್ಟುವುದಕ್ಕೆ ಪ್ರೇರೇಪಿಸಿತು. 2014ರಲ್ಲಿ ರಷ್ಯವು ಕ್ರಿಮಿಯಾವನ್ನು ಆಕ್ರಮಿಸಿಕೊಂಡಾಗ ಅಮೆರಿಕವು ಹೇರಿದ್ದ ಸ್ವಿಫ್ಟ್ ಅಂತಾರಾಷ್ಟ್ರೀಯ ಪಾವತಿ ನಿರ್ಬಂಧಕ್ಕೆ ಉತ್ತರ ಹುಡುಕಿಕೊಳ್ಳುತ್ತ, ರಷ್ಯವು ಎಂಐಆರ್ ಎಂಬ ಬದಲಿ ವ್ಯವಸ್ಥೆ ಅನ್ವೇಷಿಸಿಕೊಳ್ಳುವುದಕ್ಕೆ ಕಾರಣವಾಯಿತು.

ಪಾಶ್ಚಾತ್ಯ ನಿರ್ಬಂಧಗಳ ನಡುವೆ ತನ್ನ ರಕ್ಷಣಾ ಉದ್ಯಮವನ್ನು ಹೇಗಾದರೂ ಉಳಿಸಿಕೊಳ್ಳುವ ಇರಾನಿನ ಅನಿವಾರ್ಯತೆಯೇ ಇವತ್ತಿಗೆ ಅದು ಡ್ರೋನ್ ಉತ್ಪಾದನೆ ವಿಭಾಗದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ. ಎರಡನೇ ವಿಶ್ವಯುದ್ಧದ ನಂತರದ ಜಾಗತಿಕ ನಿರ್ಬಂಧಗಳ ಪ್ರಭಾವದಿಂದ ಹೊರಗೆ ಬಂದು ತನ್ನದೊಂದು ಹೊಸ ಔದ್ಯಮಿಕ ಐಡೆಂಟಿಟಿ ಕಂಡುಕೊಳ್ಳುವುದಕ್ಕೆ ಜಪಾನ್ ಎಲೆಕ್ಟ್ರಾನಿಕ್ ವಿಭಾಗದಲ್ಲಿ ತನ್ನೆಲ್ಲ ಶಕ್ತಿ ವ್ಯಯಿಸಿ ಸೋನಿ, ಪ್ಯಾನಸೊನಿಕ್, ತೊಶಿಬಾದಂಥ ಕಂಪನಿಗಳ ಪ್ರವರ್ಧಮಾನಕ್ಕೆ ಕಾರಣವಾಯಿತು. ಇದೇ ಜಪಾನ್ 2019ರ ನಂತರ ತನ್ನೊಂದಿಗೆ ನಡೆಸಿದ ವ್ಯಾಪಾರ ಸಮರಕ್ಕೆ ಉತ್ತರ ಕಂಡುಕೊಳ್ಳುತ್ತ ದಕ್ಷಿಣ ಕೊರಿಯಾವು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಛಾಪು ಮೂಡಿಸಿ ಸ್ಯಾಮ್ಸಂಗ್ ಥರದ ಕಂಪನಿಗಳು ಜಾಗತಿಕ ಪ್ರಸ್ತುತತೆ ಕಂಡುಕೊಳ್ಳುವುದಕ್ಕೆ ನೆರವಾಯಿತು. 

ಇದೀಗ ಅಮೆರಿಕವು, ವ್ಯಾಪಾರ ನಿರ್ಬಂಧಗಳ ಮೂಲಕ ಜಾಗತಿಕ ಅರ್ಥವ್ಯವಸ್ಥೆಯನ್ನು ಮರುನಿರೂಪಣೆಗೆ ಒಳಪಡಿಸುವುದಕ್ಕೆ ಹೊರಟಿರುವಾಗ, ಇಲ್ಲಿ ಎದುರಾಗಬಹುದಾದ ನೋವುಗಳನ್ನು ಯಾವೆಲ್ಲ ದೇಶಗಳು ನಾವೀನ್ಯತೆಗೆ ಮತ್ತು ಅನ್ವೇಷಣೆಗೆ ಹೊರಳಿಸಿಕೊಳ್ಳಲಿವೆ ಎಂಬುದರ ಮೇಲೆ ಹೊಸ ಹೊಸ ಸಮೀಕರಣಗಳು ಹುಟ್ಟಿಕೊಳ್ಳುವ ಸಾಧ್ಯತೆಗಳಿವೆ. 

- ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com