ಎಲ್ಲರಿಗೂ ಅನ್ವಯವಾಗುವ ನಿಯಮ ಧೋನಿ-ಧವನ್ ಗೆ ಮಾತ್ರ ಏಕಿಲ್ಲ?: ಸುನೀಲ್ ಗವಾಸ್ಕರ್ ಕಿಡಿ

ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗಾವಸ್ಕರ್ ಟೀಂ ಇಂಡಿಯಾದ ಮಾಜಿ ನಾಯಕ ಎಂ. ಎಸ್ ಧೋನಿ ಹಾಗೂ ಶಿಖರ್ ಧವನ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗಾವಸ್ಕರ್ ಟೀಂ ಇಂಡಿಯಾದ ಮಾಜಿ ನಾಯಕ ಎಂ. ಎಸ್ ಧೋನಿ ಹಾಗೂ ಶಿಖರ್ ಧವನ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಈ ಇಬ್ಬರು ಆಟಗಾರರು ಪಾಲ್ಗೊಳ್ಳದ ವಿಚಾರವಾಗಿ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಎಲ್ಲರಿಗೂ ಅನ್ವಯವಾಗುವ ನಿಯಮ ಈ ಇಬ್ಬರು ಆಟಗಾರರಿಗೇಕೆ ಅನ್ವಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
'ಧೋನಿ ಹಾಗೂ ಆಸ್ಟ್ರೇಲಿಯಾ ಟೆಸ್ಟ್​ ಸರಣಿಯಿಂದ ಹೊರಗುಳಿದಿರುವ ಧವನ್ ಅವರು ಸದ್ಯ ಭಾರತದಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಆದರೆ, ರಾಷ್ಟ್ರೀಯ ತಂಡದಲ್ಲಿ ಆಡದ ಅಥವಾ ಬ್ಯಾಡ್ ಫಾರ್ಮ್​ನಲ್ಲಿರುವ ಕ್ರಿಕೆಟಿಗರು ದೇಶೀಯ ಕ್ರಿಕೆಟ್​ನಲ್ಲಿ ಆಟವಾಡಬೇಕೆಂಬುದು ಬಿಸಿಸಿಐ ನಿಯಮ. ಎಲ್ಲ ಆಟಗಾರರು ಈ ನಿಯಮವನ್ನು ಪಾಲಿಸುತ್ತಾರೆ. ಆದರೆ, ಧೋನಿ ಮತ್ತು ಧವನ್​​​ ಅವರಿಗೆ ಈ ನಿಯಮ ಯಾಕೆ ಅನ್ವಯ ಆಗುತ್ತಿಲ್ಲ' ಎಂದು ಸುನೀಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.
ಸದ್ಯ ಆಸ್ಟ್ರೇಲಿಯಾದಲ್ಲಿ ಭಾರತ ತನ್ನ ಟೆಸ್ಟ್​​ ಸರಣಿಯನ್ನು ಆರಂಭಿಸಿದೆ. ಧೋನಿ ಅವರು ಈಗಾಗಲೇ ಟೆಸ್ಟ್​​ ಕ್ರಿಕೆಟ್​​ನಿಂದ ನಿವೃತ್ತಿ ಹೊಂದಿದ್ದಾರೆ. ಇತ್ತ ಧವನ್ ಆಸಿಸ್​ ವಿರುದ್ಧದ ಟೆಸ್ಟ್​​ ಸರಣಿಗೆ ಆಯ್ಕೆಯಾಗಿಲ್ಲ. ಇಬ್ಬರೂ ಆಟಗಾರರು ಬಿಡುವಿನಲ್ಲಿದ್ದಾರೆ. ಜೊತೆಗೆ ರಣಜಿ ಕ್ರಿಕೆಟ್ ನಡೆಯುತ್ತಿದೆ. ಹೀಗಾಗಿ ಬಿಸಿಸಿಐ ನಿಯಮದ ಪ್ರಕಾರ ಧೋನಿ ತನ್ನ ತವರು ತಂಡವಾದ ಜಾರ್ಖಂಡ್ ಹಾಗೂ ಧವನ್ ದೆಹಲಿ ತಂಡದ ಪರ ಆಡಬೇಕು. ಆದರೆ, ಇವರಿಬ್ಬರು ಯಾಕೆ ಆಡುತ್ತಿಲ್ಲ? ಎಂಬುದು ಗವಾಸ್ಕರ್ ಅವರ ಪ್ರಶ್ನೆಯಾಗಿದೆ. ಈ ಬಗ್ಗೆ ಬಿಸಿಸಿಐ ಧೋನಿ ಹಾಗೂ ಧವನ್ ಬಳಿ ಕೇಳಬೇಕಿದೆ ಎಂದಿದ್ದಾರೆ.
ಇಷ್ಟೇ ಅಲ್ಲದೆ ಈ ಹಿಂದೆ ಧೋನಿ ಅವರಿಗೆ ಬಿಸಿಸಿಐ ದೇಶೀಯ ಕ್ರಿಕೆಟ್​ನಲ್ಲಿ ಜಾರ್ಖಂಡ್ ತಂಡದ ಪರ ಆಡಲು ಸೂಚಿಸಿತ್ತು. ಆದರೆ, ಧೋನಿ ಅವರು ಇದನ್ನ ತಿರಸ್ಕರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com