ದೆಹಲಿಗೆ ಸೋಲು: ಫಿರೋಜ್‌ ಶಾ ಕೋಟ್ಲಾ ಪಿಚ್‌ ಬಗ್ಗೆ ಕಿಡಿಕಾರಿದ ರಿಕಿ ಪಾಂಟಿಂಗ್‌!

ಫಿರೋಜ್ ಶಾ ಕೋಟ್ಲಾ ಪಿಚ್ ಅತ್ಯಂತ ಕಳಪೆಯಿಂದ ಕೂಡಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತುದಾರ ರಿಕಿ ಪಾಂಟಿಂಗ್ ಪಿಚ್ ಕ್ಯೂರೆಟರ್ ವಿರುದ್ಧ ಕಿಡಿಕಾರಿದ್ದಾರೆ.

Published: 05th April 2019 12:00 PM  |   Last Updated: 05th April 2019 03:11 AM   |  A+A-


Ricky Ponting

ರಿಕಿ ಪಾಂಟಿಂಗ್

Posted By : VS VS
Source : Online Desk
ನವದೆಹಲಿ: ಫಿರೋಜ್ ಶಾ ಕೋಟ್ಲಾ ಪಿಚ್ ಅತ್ಯಂತ ಕಳಪೆಯಿಂದ ಕೂಡಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತುದಾರ ರಿಕಿ ಪಾಂಟಿಂಗ್ ಪಿಚ್ ಕ್ಯೂರೆಟರ್ ವಿರುದ್ಧ ಕಿಡಿಕಾರಿದ್ದಾರೆ.

ಗುರುವಾರ ರಾತ್ರಿ ನಡೆದ 12ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತ್ತು. ನಂತರ ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ 18.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ 5 ವಿಕೆಟ್ ಗಳಿಂದ ಜಯ ಸಾಧಿಸಿತ್ತು. 

ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಂಟಿಂಗ್,  ಫಿರೋಜ್ ಶಾ ಕೋಟ್ಲಾ ಪಿಚ್ ಅತ್ಯಂತ ಕಳಪೆಯಾಗಿದೆ. ಹಾಗಾಗಿ, ಪಂದ್ಯ ಸೋಲಬೇಕಾಯಿತು. ಪಂದ್ಯಕ್ಕೂ ಮುನ್ನ ಪಿಚ್ ಕ್ಯೂರೇಟರ್ ಬಳಿ ಮಾತನಾಡಿದಾಗ, ಪಿಚ್ ಉತ್ತಮವಾಗಿದೆ ಎಂದು ಹೇಳಿದ್ದರು. ಆದರೆ, ಪಂದ್ಯದ ವೇಳೆ ಪಿಚ್ ಸ್ವಲ್ಪ ಬೌನ್ಸಿ ಹಾಗೂ ನಿಧಾನ ಗತಿಯಿಂದ ಕೂಡಿತ್ತು ಎಂದು ಪಿಚ್ ಕ್ಯೂರೇಟರ್ ವಿರುದ್ಧ ದೂರಿದರು.

ತವರು ನೆಲದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಡೆಲ್ಲಿ, ನೈಟ್ ರೈಡರ್ಸ್ ವಿರುದ್ಧ ಸೂಪರ್ ಓವರ್‌ನಲ್ಲಿ ಗೆಲುವು ಪಡೆದಿತ್ತು. ಇನ್ನುಳಿದ ಎರಡು ಪಂದ್ಯಗಳನ್ನು ಕೈಚೆಲ್ಲಿಕೊಂಡಿದೆ.

ಇಲ್ಲಿನ ಅಂಗಳದ ವಾತಾವರಣಕ್ಕೆ ಹೊಂದಿಕೊಂಡು ಸನ್‌ ರೈಸರ್ಸ್‌ ಬೌಲರ್‌ಗಳು ಕೌಶಲಭರಿತವಾಗಿ ಬೌಲಿಂಗ್ ಮಾಡಿದ್ದರು. ಹಾಗಾಗಿ, ಆತಿಥೇಯ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು” ಎಂದರು.

ತವರು ನೆಲದಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಆಡುವುದನ್ನು ಡೆಲ್ಲಿ ಕ್ಯಾಪಿಟಲ್ಸ್ ಕಲಿಯಬೇಕು. ಎದುರಾಳಿ ತಂಡ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಆಡಿದ ರೀತಿಯಲ್ಲೇ ನಮ್ಮ ತಂಡದ ಆಟಗಾರರು ಆಡಲು ಪ್ರಯತ್ನಿಸಬೇಕು. ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ತವರು ಮಣ್ಣಿನಲ್ಲಿ ಸೋಲು ಅನುಭವಿಸಿದ್ದೇವೆ. ಮುಂದಿನ ಪಂದ್ಯಗಳಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಪಾಂಟಿಂಗ್ ಹೇಳಿದ್ದಾರೆ.

ಏ.7 ರಂದು ಡೆಲ್ಲಿ ಕ್ಯಾಪಿಟಲ್ಸ್, ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಯನ್ನು ಎದುರಿಸಲಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp