ಐಸಿಸಿ ವಿಶ್ವಕಪ್‌: ಏ.15 ರಂದು ಭಾರತ ತಂಡ ಪ್ರಕಟ

ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆಯುವ 2019ರ ಐಸಿಸಿ ವಿಶ್ವಕಪ್ ಮಹತ್ವದ ಟೂರ್ನಿಗೆ ಭಾರತ ತಂಡವನ್ನು ಇದೇ 15 ರಂದು ಪ್ರಕಟಿಸಲಾಗುತ್ತದೆ.

Published: 08th April 2019 12:00 PM  |   Last Updated: 08th April 2019 07:44 AM   |  A+A-


ICC World Cup 2019: Indian team to be announced on April 15

ಐಸಿಸಿ ವಿಶ್ವಕಪ್‌: ಏ.15 ರಂದು ಭಾರತ ತಂಡ ಪ್ರಕಟ

Posted By : SBV SBV
Source : UNI
ನವದೆಹಲಿ: ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆಯುವ 2019ರ ಐಸಿಸಿ ವಿಶ್ವಕಪ್ ಮಹತ್ವದ ಟೂರ್ನಿಗೆ ಭಾರತ ತಂಡವನ್ನು ಇದೇ 15 ರಂದು ಪ್ರಕಟಿಸಲಾಗುತ್ತದೆ. 

ಮುಂದಿನ ಸೋಮವಾರ (ಏ.15) ದಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಹಿರಿಯ ಆಯ್ಕೆ ಸಮಿತಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮುಂಬೈನಲ್ಲಿ ಭೇಟಿಯಾಗುತ್ತಿದ್ದು, ಈ ವೇಳೆ 15 ಆಟಗಾರರ ಭಾರತ ತಂಡವನ್ನು ಪ್ರಕಟಿಸಲಾಗುತ್ತಿದೆ. ಇದೇ ದಿನ ಸಂಜೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. 

ವಿಶ್ವಕಪ್‌ ಭಾರತ ತಂಡವನ್ನು ಅಂತಿಮಗೊಳಿಸಲು ಏಪ್ರಿಲ್‌ 23 ರಂದು ಕೊನೆಯ ದಿನಾಂಕವಾಗಿದೆ. ಹಾಗಾಗಿ, ಭಾರತೀಯ ಕ್ರಿಕೆಟ್‌ ಆಯ್ಕೆ ಸಮಿತಿಯು 8 ದಿನ ಮೊದಲೇ ತಂಡವನ್ನು ಅಂತಿಮಗೊಳಿಸಿ ಆಟಗಾರರಿಗೆ ಮಾನಸಿಕವಾಗಿ ತಯಾರಿಯಾಗಲು ಹೆಚ್ಚಿನ ಸಮಯ ನೀಡುವ ಉದ್ದೇಶದಿಂದ ಇದೇ 15 ರಂದು ಆಯ್ಕೆ ಮಾಡಲು ತೀರ್ಮಾನಿಸಿದೆ. 

"ಕಳೆದ ಫೆಬ್ರವರಿಯಲ್ಲೇ ಐಸಿಸಿ ವಿಶ್ವಕಪ್‌ಗೆ 20 ಸದಸ್ಯರ ಭಾರತ ತಂಡವನ್ನು ಗುರುತಿಸಲಾಗಿದೆ. 20 ಆಟಗಾರರಿಂದ ಇದೀಗ 15 ಮಂದಿ ಸದಸ್ಯರನ್ನು ಕಡಿಮೆಗೊಳಿಸಲಾಗುವುದು. 15 ಸದಸ್ಯರ ಭಾರತ ತಂಡದಲ್ಲಿ ಇನ್ನೂ ಒಂದೇ ಒಂದು ಸ್ಥಾನ ಮಾತ್ರ ಖಾಲಿ ಉಳಿದಿದ್ದು, ಅಂತಿಮ ಕ್ಷಣಗಳಲ್ಲಿ ಆ ಸ್ಥಾನ ಭರ್ತಿಯಾಗಲಿದೆ " ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್‌ ತಿಳಿಸಿದ್ದಾರೆ.

"ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ ಟೂರ್ನಿಯ ಪ್ರದರ್ಶನ ಆಯ್ಕೆಗೆ ಪರಿಗಣಿಸುವುದಿಲ್ಲ ಎಂದು ನೇರವಾಗಿ ಹೇಳಿರುವ ಅವರು,  ಈಗಾಗಲೇ ಹೆಚ್ಚುವರಿ ಆಟಗಾರರು ಸೇರಿದಂತೆ ಒಟ್ಟು 20 ಮಂದಿ ಆಟಗಾರರನ್ನು ಗುರುತಿಸಿದ್ದೇವೆ. ಈ ಆಟಗಾರರನ್ನು ಮಾತ್ರ ಐಪಿಎಲ್‌ನಲ್ಲಿ ಗಮನಿಸುತ್ತಿದ್ದೇವೆ. ಈ ಆಟಗಾರರ ಪ್ರದರ್ಶನ ಗಮನಿಸಿ ಕೊನೆಯದಾಗಿ ಖಾಲಿ ಉಳಿದ ಸ್ಥಾನಗಳಿಗೆ ಭರ್ತಿ ಮಾಡಲಾಗುವುದು ಎಂದರು.

ಅಂಬಾಟಿ ರಾಯುಡು, ಕೆ.ಎಲ್‌ ರಾಹುಲ್‌, ದಿನೇಶ್‌ ಕಾರ್ತಿಕ್‌ ಹಾಗೂ ರಿಷಭ್ ಪಂತ್‌ ವಿಶ್ವಕಪ್‌ ಭಾರತ ತಂಡದ ರೇಸ್‌ನಲ್ಲಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ ಪಂತ್‌ ಮೇಲೆ ಆಯ್ಕೆದಾರರ ಕಣ್ಣಿದೆ. ಭಯವಿಲ್ಲದೆ ಬ್ಯಾಟ್‌ ಬೀಸುವ ಪಂತ್‌, ಆಡಿರುವುದು ಕೇವಲ 5 ಏಕದಿನ ಪಂದ್ಯಗಳು ಮಾತ್ರ. ಸ್ಪಿನ್ನರ್‌ ಹಾಗೂ ಮಧ್ಯಮ ವೇಗಿಗಳನ್ನು ಸರಿಯಾಗಿ ದಂಡಿಸುವ ಸಾಮರ್ಥ್ಯ ಪಂತ್‌ಗಿದೆ. ಹಾಗಾಗಿ, ಮಧ್ಯಮ ಕ್ರಮಾಂಕದಲ್ಲಿ ಪಂತ್‌ ಅವರನ್ನು ಆಡಿಸುವ ಬಗ್ಗೆ ಆಯ್ಕೆದಾರರಿಗೆ ಒಲವು ಹೆಚ್ಚಿದೆ. 

ಐಸಿಸಿ ವಿಶ್ವಕಪ್ ಮೇ 30 ರಿಂದ ಆರಂಭಗೊಂಡು ಜುಲೈ 14ರಂದು ಫೈನಲ್ ಬಳಿಕ ಅಂತ್ಯವಾಗಲಿದೆ.  ಭಾರತ ಮೊದಲನೇ ಪಂದ್ಯದಲ್ಲಿ ಜೂ.5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp