ಆರ್‏ಸಿಬಿಗೆ ಮತ್ತೊಂದು ಹಿನ್ನಡೆ: ಭುಜದ ಗಾಯದಿಂದ ಡೇಲ್‌ ಸ್ಟೈನ್‌ ಔಟ್‌!

ಇತ್ತೀಚಿಗಷ್ಟೆ ಆರ್‌ಸಿಬಿ ತಂಡಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್‌ ಸ್ಟೈನ್‌ ಅವರು ಭುಜದ ಉರಿಯೂತ ಸಮಸ್ಯೆಯಿಂದಾಗಿ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದರಿಂದಾಗಿ ವಿರಾಟ್‌ ಕೊಹ್ಲಿಗೆ ತಲೆ ನೋವಾಗಿ ಪರಿಣಮಿಸಿದೆ.

Published: 25th April 2019 12:00 PM  |   Last Updated: 25th April 2019 04:51 AM   |  A+A-


Dale Steyen

ಡೇಲ್‌ ಸ್ಟೈನ್‌

Posted By : ABN ABN
Source : UNI
ಬೆಂಗಳೂರು: ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಗೆದ್ದು ವಿಶ್ವಾಸದಲ್ಲಿರುವ ರಾಯಲ್‌ ಚಾಲೆಂಜರ್ಸ್‌ಗೆ ಇದೀಗ ಬಹುದೊಡ್ಡ ಹೊಡೆತ ಬಿದ್ದಿದೆ. ಇತ್ತೀಚಿಗಷ್ಟೆ ಆರ್‌ಸಿಬಿ ತಂಡಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್‌ ಸ್ಟೈನ್‌ ಅವರು ಭುಜದ ಉರಿಯೂತ ಸಮಸ್ಯೆಯಿಂದಾಗಿ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದರಿಂದಾಗಿ ವಿರಾಟ್‌ ಕೊಹ್ಲಿಗೆ ತಲೆ ನೋವಾಗಿ ಪರಿಣಮಿಸಿದೆ.

ಏ.21 ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್‌ ಮಾಡಿದ್ದ ಸ್ಟೈನ್‌ ಅವರಿಗೆ ಬಳಿಕ ಭುಜದ ಉರಿಯೂತ ಸಮಸ್ಯೆ ಉಂಟಾಗಿತ್ತು. ಇದಾದ ಬಳಿಕ ಅವರು ಬುಧವಾರ ನಡೆದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿದಿರಲಿಲ್ಲ. ಮೇ 30ರಂದು ಐಸಿಸಿ ವಿಶ್ವಕಪ್‌ ಇರುವ ಹಿನ್ನೆಲೆಯಲ್ಲಿ ಬಹುಬೇಗ ಚೇತರಿಸಿಕೊಳ್ಳುವ ಉದ್ದೇಶದಿಂದ ಅವರು ಸ್ವದೇಶಕ್ಕೆ ತೆರಳಲಿದ್ದಾರೆ.

"ಡೇಲ್‌ ಸ್ಟೈನ್‌ ಅವರು ಭುಜದ ಉರಿಯೂತದಿಂದ ಬಳಲುತ್ತಿದ್ದು, ಅವರು ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರ ಉಪಸ್ಥಿತಿಯಲ್ಲಿ ಆರ್‌ಸಿಬಿ ಬೌಲಿಂಗ್‌ ವಿಭಾಗ ಬಲಿಷ್ಟವಾಗಿತ್ತು. ಅಲ್ಲದೇ, ಯುವ ವೇಗಿಗಳಿಗೆ ಅವರು ಸ್ಫೂರ್ತಿ ತುಂಬಿದ್ದರು. ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ನಷ್ಟವಾಗಲಿದೆ" ಎಂದು ಆರ್‌ಸಿಬಿ ತಂಡದ ಮುಖ್ಯಸ್ಥ ಸಂಜೀವ್‌ ಚೂರಿವಾಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಐಪಿಎಲ್‌ ಇನ್ನುಳಿದ ಪಂದ್ಯಗಳಿಗೆ ಸ್ಟೈನ್‌ ಬದಲಿಗೆ ನ್ಯೂಜಿಲೆಂಡ್‌ ಟಿಮ್ ಸೌಥೆ ಅವರಿಗೆ ಅವಕಾಶ ನೀಡಬಹುದು. ಇಲ್ಲವಾದಲ್ಲಿ ಭಾರತದ ಹೊಸ ಬೌಲರ್‌ಗಳಿಗೆ ಮಣೆ ಹಾಕುವ ಸಾಧ್ಯತೆ ಇದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡಿದ್ದ ಡೇಲ್‌ ಸ್ಟೈನ್‌, 4 ಓವರ್‌ಗಳಲ್ಲಿ 29 ರನ್‌ ನೀಡಿ ಎರಡು ವಿಕೆಟ್‌ ಪಡೆದಿದ್ದರು. ಇದಕ್ಕೂ ಮುನ್ನ ಕೆಕೆಆರ್‌ ವಿರುದ್ಧ 4 ಓವರ್‌ಗಳಿಗೆ 40 ರನ್‌ ನೀಡಿ ಎರಡು ವಿಕೆಟ್‌ ಪಡೆದಿದ್ದರು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp