2019 ವಿಶ್ವಕಪ್ ಕ್ರಿಕೆಟ್ : ಭಾರತವೇ ಗೆಲ್ಲುವ ಫೇವರಿಟ್ ತಂಡ- ಗಂಗೂಲಿ ಭವಿಷ್ಯ

ಈ ಬಾರಿ ವಿಶ್ವಕಪ್ ಪ್ರಶಸ್ತಿಯನ್ನು ಭಾರತವೇ ಗೆಲ್ಲಲಿದೆ ಎಂದು ಮಾಜಿ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ಭವಿಷ್ಯ ನುಡಿದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಶ್ಚಿಮ ಬಂಗಾಳ: ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಉತ್ತಮ  ಪ್ರದರ್ಶನ ತೋರುತ್ತಿರುವಂತೆ  ಮಾಜಿ ಟೀಂ ಇಂಡಿಯಾ ನಾಯಕ  ಸೌರವ್ ಗಂಗೂಲಿ ಈ ಬಾರಿ ವಿಶ್ವಕಪ್ ಪ್ರಶಸ್ತಿಯನ್ನು ಭಾರತವೇ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ಕೇವಲ ಒಂದು ಸರಣಿ ಸೋತಿರುವ ಟೀಂ ಇಂಡಿಯಾ, ಉಳಿದ ಒಂಬತ್ತು ಸರಣಿಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ವಿಶ್ವಕಪ್ ಟೂರ್ನಿಯಿಂದ ಭಾರತವು ಶೇ. 67.09ರಲ್ಲಿ 53 ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದೆ. ನಂಬರ್ 1 ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡ ಶೇ, 66.23 ರಲ್ಲಿ 51 ಗೆಲುವು ಸಾಧಿಸಿದೆ.

2015ರ ವಿಶ್ವಕಪ್ ಟೂರ್ನಿಯಿಂದ 39 ಶತಕ ಸೇರಿದಂತೆ  ಶೇ, 50 ಕ್ಕಿಂತಲೂ ಹೆಚ್ಚು ರನ್ ಪಡೆಯುತ್ತಿರುವ  ಮೊದಲ ( ಟಾಪ್ ಆರ್ಡರ್ ) ಕ್ರಮಾಂಕದ ಬಗ್ಗೆ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸರಣಿಯಲ್ಲಿ ಮೂವರು ಬ್ಯಾಟ್ಸ್ ಮನ್ ಗಳು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ.

ಆಸ್ಟ್ರೇಲಿಯಾಕ್ಕಿಂತಲೂ ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರುತ್ತಿದೆ.ತವರೂ ನೆಲ ಹಾಗೂ ವಿದೇಶದಲ್ಲೂ  ಸಂಪೂರ್ಣ ಪ್ರಾಬಲ್ಯ ಸಾಧಿಸುತ್ತಿದ್ದು, ಆತ್ಮವಿಶ್ವಾಸ ಹೆಚ್ಚಿಸಿದೆ.   ಬೌಲರ್ ಗಳು ಉತ್ತಮ ಪ್ರದರ್ಶನ ತೋರುತ್ತಿದ್ದು, ಏಕದಿನ  ಪಂದ್ಯಗಳಲ್ಲಿ ಭಾರತಕ್ಕೆ ಇದು ಅತ್ಯುತ್ತಮ ವರ್ಷವಾಗಿದೆ ಎಂದು ಗಂಗೂಲಿ ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ  14 ವಿಕೆಟ್ ಗಳನ್ನು ಪಡೆದಿರುವ ಕುಲದೀಪ್ ಯಾದವ್ ಹಾಗೂ ಯುಜವೇಂದ್ರ ಚಾಹೆಲ್  ಅವರನ್ನು  ಗಂಗೂಲಿ ಹೊಗಳಿದ್ದಾರೆ. ಈ ಜೋಡಿ ಸ್ವದೇಶದಲ್ಲಿ ಮಾತ್ರವಲ್ಲ, ವಿದೇಶಿ ನೆಲದಲ್ಲೂ ಕೂಡಾ ಹಿಡಿತ ಸಾಧಿಸಿದ್ದು, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ,  ಆರ್. ಅಶ್ವಿನ್,  ಮತ್ತು ರವೀಂದ್ರ ಜಡೇಜಾ ಅವರಿಗಿಂತ  ಹೆಚ್ಚಿನ ವಿಕೆಟ್ ಪಡೆದುಕೊಳ್ಳಲಿದ್ದಾರೆ ಎಂದಿದ್ದಾರೆ.

ರೋಹಿತ್ ಶರ್ಮಾ ಹಾಗೂ ಕೊಹ್ಲಿ ನಿರಂತರವಾಗಿ ಪ್ರದರ್ಶನ ಕಾಯ್ದುಕೊಂಡಿದ್ದು, ಇಂತಹ ಟಾಪ್ ಆರ್ಡರ್ ವಿಶ್ವದ ಬೇರೆ ಯಾವ ತಂಡದಲ್ಲೂ ಇಲ್ಲ. ಒಟ್ಟಾರೇ ಟೀಂ ಇಂಡಿಯಾ ಅತ್ಯುತ್ತಮ ರೀತಿಯಲ್ಲಿ ಪ್ರದರ್ಶನ  ತೋರುತ್ತಿದ್ದು,  ಈ ಬಾರಿಯ ವಿಶ್ವಕಪ್ ಗೆಲ್ಲುವುದನ್ನು ನಾವೆಲ್ಲರೂ ಸಾಕ್ಷಿಕರಿಸಲಿದ್ದೇವೆ ಎಂದು ಸೌರವ್ ಗಂಗೂಲಿ ವಿಶ್ವಾಸ  ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com