ಕೊನೆಯ ವಿಕೆಟ್ ವರೆಗೂ ಗೆಲುವಿಗಾಗಿ ಹೋರಾಡಿದರು: ಬಾಂಗ್ಲಾ ಹೋರಾಟಕ್ಕೆ ಕೊಹ್ಲಿ ಶ್ಲಾಘನೆ!

ಕೊನೆಯ ವಿಕೆಟ್ ವರೆಗೂ ಬಾಂಗ್ಲಾದೇಶ ಗೆಲುವಿಗಾಗಿ ಹೋರಾಡಿತು. ಗೆಲುವಿಗಾಗಿ ನಾವು ಕೊಂಚ ಹೆಚ್ಚೇ ಬೆವರು ಹರಿಸಿದೆವು, ಆದರೆ ಗೆಲುವು ಖುಷಿ ಕೊಟ್ಟಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ಲಂಡನ್: ಕೊನೆಯ ವಿಕೆಟ್ ವರೆಗೂ ಬಾಂಗ್ಲಾದೇಶ ಗೆಲುವಿಗಾಗಿ ಹೋರಾಡಿತು. ಗೆಲುವಿಗಾಗಿ ನಾವು ಕೊಂಚ ಹೆಚ್ಚೇ ಬೆವರು ಹರಿಸಿದೆವು, ಆದರೆ ಗೆಲುವು ಖುಷಿ ಕೊಟ್ಟಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇಂದು ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 28 ರನ್ ಗಳ ಅಂತರದಲ್ಲಿ ಗೆದ್ದು, ವಿಶ್ವಕಪ್ ಟೂರ್ನಿಯಲ್ಲಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿತು. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಂಗ್ಲಾದೇಶದ ಹೋರಾಟವನ್ನು ತುಂಬು ಹೃದಯದಿಂದ ಶ್ಲಾಘಿಸಿದರು.
'ನಿಜಕ್ಕೂ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಉತ್ತಮ ಹೋರಾಟ ನೀಡಿತು. ಗೆಲುವಿಗಾಗಿ ನಾವು ಕೊಂಚ ಹೆಚ್ಚೇ ಬೆವರು ಹರಿಸಿದೆವು. ಕೊನೆಯ ವಿಕೆಟ್ ವರೆಗೂ ಬಾಂಗ್ಲಾದೇಶ ಗೆಲುವಿಗಾಗಿ ಹೋರಾಡಿತು. ಇಂದಿನ ಪಂದ್ಯ ಮಾತ್ರವಲ್ಲ. ಇಡೀ ಟೂರ್ನಿಯಲ್ಲಿ ಬಾಂಗ್ಲಾದೇಶ ಗಮನಾರ್ಹ ಪ್ರದರ್ಶನ ನೀಡಿದೆ. ಯಾವುದೇ ಪಂದ್ಯವನ್ನೂ ಸುಲಭವಾಗಿ ಸೋತಿಲ್ಲ ಎಂದು ಕೊಹ್ಲಿ ಹೇಳಿದರು.
ಇದೇ ವೇಳೆ ಗೆಲುವಿನ ಕುರಿತು ಮಾತನಾಡಿದ ಕೊಹ್ಲಿ, ಖಂಡಿತಾ ಯಾವುದೇ ತಂಡಕ್ಕೂ ಗೆಲುವು ಖುಷಿ ನೀಡುತ್ತದೆ. ಇಲ್ಲಿಯವರೆಗೂ ಟೂರ್ನಿಯಲ್ಲಿ ನಾವು ಏನು ಮಾಡಿದ್ದೆವೊ ಅದನ್ನೇ ಇಂದೂ ಕೂಡ ಮುಂದುವರೆಸಿದ್ದೇವೆ. ಇದೀಗ ನಮ್ಮ ಗುರಿ ಸೆಮಿಫೈನಲ್ ಮೇಲಿದ್ದು, ಮತ್ತಷ್ಟು ಶ್ರಮ ವಹಿಸಿ ಮುಂದಿನ ಪಂದ್ಯಗಳಿಗೆ ಕಾರ್ಯತಂತ್ರ ರೂಪಿಸುತ್ತೇವೆ. ಸೆಮಿಫೈನಲ್ ಗೂ ಮುನ್ನ ನಾವು ಇನ್ನೂ ಒಂದು ಪಂದ್ಯವನ್ನಾಡಲಿದ್ದು, ನಿಜಕ್ಕೂ ಇದು ನಮ್ಮ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು ಅವಕಾಶ ನೀಡಿದಂತಾಗಿದೆ.  ಬೌಲಿಂಗ್ ನಲ್ಲಿ ಹಾರ್ದಿಕ್ ಪಾಂಡ್ಯಾ ಕಮ್ ಬ್ಯಾಕ್ ತಂಡಕ್ಕೆ ಮತ್ತಷ್ಟು ಬಲ ತಂದಿದೆ. ಬೌಲಿಂಗ್ ಮಾಡುವಾಗ ಹಾರ್ದಿಕ್ ಓರ್ವ ಬ್ಯಾಟ್ಸಮನ್ ರೀತಿ ಯೋಚಿಸುತ್ತಾನೆ. ಇದು ಆತನಿಗೆ ಮತ್ತು ತಂಡಕ್ಕೆ ತುಂಬಾ ನೆರವಾಗಿದೆ. ಬ್ಯಾಟ್ಸ್ ಮನ್ ಗಳ ದೈಹಿಕ ಭಾಷೆ ಅಥವಾ ಆಂಗಿಕ ಚಲನೆಯನ್ನು ಗಮನಿಸಿ ಬೌಲಿಂಗ್ ಮಾಡುತ್ತಾರೆ. ಇದು ಅವರ ಯಶಸ್ಸಿಗೆ ಕಾರಣವಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಅಂತೆಯೇ ಐದು ಬೌಲರ್ ಗಳೊಡನೆ ಆಡುವುದು ಕೊಂಚ ಸವಾಲೇ ಸರಿ.. ಆದರೂ  ಆಟಗಾರರ ಸಂಯೋಜನೆಯನ್ನು ನಾವು ಪರೀಕ್ಷಿಸಬೇಕು. ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಕ್ಕೂ ಮುನ್ನ ತಂಡಕ್ಕೆ ಸೂಕ್ತ ಆಟಗಾರರ ಸಂಯೋಜನೆಯನ್ನು ಶೋಧಿಸಬೇಕಿದೆ. ಪ್ರತೀ ಪಂದ್ಯದಲ್ಲೂ ಒಂದೇ ರೀತಿಯ ಆಟಗಾರರ ಸಂಯೋಜನೆಯೊಂದಿಗೆ ಕಣಕ್ಕಿಳಿಯಲು ಸಾಧ್ಯವಿಲ್ಲ. ಪ್ರತೀ ಪಿಚ್ ಅಥವಾ ಪರಿಸ್ಥಿತಿ ಒಂದೇ ರೀತಿಯದ್ದಾಗಿರುವುದಿಲ್ಲ. ಆಯಾ ವಾತಾವರಣ, ಪರಿಸ್ಥಿತಿ ಮತ್ತು ಪಿಚ್ ಗಳಿಗೆ ಅನುಗುಣವಾಗಿ ನಾವೂ ಕೂಡ ತಂಡದಲ್ಲಿ ಬದಲಾವಣೆ ಮಾಡಬೇಕು ಎಂದು ಕೊಹ್ಲಿ ಹೇಳಿದ್ದಾರೆ.
ರೋಹಿತ್ ಶರ್ಮಾ ವಿಶ್ವದ ಶ್ರೇಷ್ಠ ಏಕದಿನ ಆಟಗಾರ
ಇದೇ ವೇಳೆ ತಂಡದ ಆರಂಭಿಕ ಆಟಗಾರ ಹಾಗೂ ಉಪನಾಯಕ ರೋಹಿತ್ ಶರ್ಮಾರನ್ನು ಕೊಂಡಾಡಿದ ಕೊಹ್ಲಿ, ನಾನು ರೋಹಿತ್ ರ ಆಟವನ್ನು ಸುಮಾರು ವರ್ಷಗಳಿಂದ ನೋಡುತ್ತಿದ್ದೇನೆ. ಈ ಹಿಂದೆಯೂ ಸಾಕಷ್ಟು ಬಾರಿ ಬಹಿರಂಗವಾಗಿ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ನನ್ನ ಪ್ರಕಾರ ರೋಹಿತ್ ಶರ್ಮಾ ವಿಶ್ವದ ಶ್ರೇಷ್ಠ ಏಕದಿನ ಆಟಗಾರ. ಆತ ಕ್ರೀಸ್ ನಲ್ಲಿದ್ದರೆ ನಾವು ದೊಡ್ಡ ಮೊತ್ತದ ಕನಸು ಕಾಣುತ್ತೇವೆ. ನಿಜಕ್ಕೂ ಆತನ ಬ್ಯಾಟಿಂಗ್ ವೈಖರಿ ಖುಷಿ ನೀಡುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.
ಬುಮ್ರಾ ನಂಬರ್ 1 ಬೌಲರ್
ಇನ್ನು ಬೌಲಿಂಗ್ ವಿಭಾಗದ ಕುರಿತು ಮಾತನಾಡಿದ ಕೊಹ್ಲಿ, ಜಸ್ ಪ್ರೀತ್ ಬುಮ್ರಾ ನಂಬರ್ 1 ಬೌಲರ್ ಎಂದು ಶ್ಲಾಘಿಸಿದರು. ಹಾಲಿ ಪರಿಸ್ಥಿತಿಯಲ್ಲಿ ಬುಮ್ರಾ ಶ್ರೇಷ್ಠ ಬೌಲರ್... ಎಂತಹ ಕಠಿಣ ಪರಿಸ್ಥಿತಿಯಲ್ಲೂ ಬ್ಯಾಟ್ಸ್ ಮನ್ ಗಳನ್ನು ತಬ್ಬಿಬ್ಬು ಮಾಡುವ ಸಾಮರ್ಥ್ಯ ಬುಮ್ರಾಗಿದೆ ಎಂದು ಕೊಹ್ಲಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com