ಐಸಿಸಿ ವಿಶ್ವಕಪ್ 2019: ಬಾಂಗ್ಲಾ ವಿರುದ್ಧ ಪಾಕಿಸ್ತಾನಕ್ಕೆ 94 ರನ್ ಗಳ ಜಯ

ಐಸಿಸಿ ವಿಶ್ವಕಪ್ 2019 ಟೂರ್ನಿಯ ತನ್ನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಬಾಂಗ್ಲಾದೇಶದ ವಿರುದ್ಧ 94 ರನ್ ಗಳ ಜಯ ದಾಖಲಿಸಿದ್ದು, ಗೆಲುವಿನ ಮೂಲಕ ವಿಶ್ವಕಪ್ ಟೂರ್ನಿಗೆ ವಿದಾಯ ಹೇಳಿದೆ.
ಲಂಡನ್: ಐಸಿಸಿ ವಿಶ್ವಕಪ್ 2019 ಟೂರ್ನಿಯ ತನ್ನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಬಾಂಗ್ಲಾದೇಶದ ವಿರುದ್ಧ 94 ರನ್ ಗಳ ಜಯ ದಾಖಲಿಸಿದ್ದು, ಗೆಲುವಿನ ಮೂಲಕ ವಿಶ್ವಕಪ್ ಟೂರ್ನಿಗೆ ವಿದಾಯ ಹೇಳಿದೆ.
ಪಾಕಿಸ್ತಾನ ನೀಡಿದ 315 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ 44.1 ಓವರ್ ನಲ್ಲಿ 221 ರನ್ ಗಳಿಸಿ ಆಲೌಟ್ ಆಯಿತು. ಬಾಂಗ್ಲಾದೇಶ ಪರ ಶಕೀಬ್ ಅಲ್ ಹಸನ್ 64 ರನ್ ಗಳಿಸಿ ಬಾಂಗ್ಲಾ ಇನ್ನಿಂಗ್ಸ್ ಗೆ ಜೀವ ತುಂಬಿದರು. ಬಳಿಕ ಲಿಟನ್ ದಾಸ್ (32 ರನ್) ಮತ್ತು ಮಹಮದುಲ್ಲಾ (29ರನ್) ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯುವ ಪ್ರಯತ್ನ ಮಾಡಿದರಾದರೂ ಉಳಿದ ಬ್ಯಾಟ್ಸ್ ಮನ್ ಗಳಿಂದ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ಮೂಡಲಿಲ್ಲ. ಪರಿಣಾಮ ಬಾಂಗ್ಲಾದೇಶ 221 ರನ್ ಗಳಿಗೆ ಆಲೌಟ್ ಆಯಿತು.
ಅತ್ತ ಪಾಕಿಸ್ತಾನದ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಉದಯೋನ್ಮುಖ ಬೌಲರ್ ಶಾಹೀನ್ ಅಫ್ರಿದಿ ಈ ಪಂದ್ಯದಲ್ಲಿ 6 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಶದಾಬ್ ಖಾನ್ 2 ಮತ್ತು, ವಹಾಬ್ ರಿಯಾಜ್, ಮಹಮದ್ ಆಮೀರ್ ತಲಾ 1 ವಿಕೆಟ್ ಪಡೆದರು. ಬಾಂಗ್ಲಾ ವಿರುದ್ಧ 6 ವಿಕೆಟ್ ಪಡೆದು ಮಿಂಚಿದ ಪಾಕ್ ವೇಗಿ ಶಾಹೀನ್ ಅಫ್ರಿದಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಪಂದ್ಯದ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಭಿಯಾನ ಅಂತ್ಯವಾಗಿದ್ದು, ಉಭಯ ತಂಡಗಳು ತಲಾ 9 ಪಂದ್ಯಗಳನ್ನಾಡಿವೆ. ಈ ಪೈಕಿ ಪಾಕಿಸ್ತಾನ ಐದು ಪಂದ್ಯ ಗೆದ್ದು 3ರಲ್ಲಿ ಸೋಲು ಕಂಡಿದೆ. ಪ್ರಮುಖವಾಗಿ ಭಾರತದ ವಿರುದ್ಧದ ಸೋಲು ಪಾಕಿಸ್ತಾನವನ್ನು ಟೂರ್ನಿಯಿಂದಲೇ ಹೊರದಬ್ಬುವ ಹಂತಕ್ಕೆ ತಂದು ನಿಲ್ಲಿಸಿತು. ಅಲ್ಲದೆ ಇಂಗ್ಲೆಂಡ್ ವಿರುದ್ಧ ಭಾರತದ ಸೋಲು ಕೂಡ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಇನ್ನು ಬಾಂಗ್ಲಾದೇಶ 3ರಲ್ಲಿ ಗೆದ್ದು ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಬಾಂಗ್ಲಾಪರ ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಆಲ್ರೌಂಡರ್ ಶಕೀಬ್ ಅಲ್ ಹಸನ್ 606 ರನ್ ಗಳ ಮೂಲಕ ಪ್ರಸ್ತುತ ಟೂರ್ನಿಯ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್ ಮನ್ ಆಗಿದ್ದಾರೆ. ಅಂತೆಯೇ ಟೂರ್ನಿಯಲ್ಲಿ 7 ಅರ್ಧಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com