ವಿವಾದಿತ ತೀರ್ಪಿಗೆ ಜೇಸನ್ ರಾಯ್ ಬಲಿ, ಮೈದಾನದಲ್ಲೇ ಅಂಪೈರ್ ಜೊತೆ ವಾಗ್ವಾದ, ಐಸಿಸಿ ದಂಡ

ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಮೈದಾನದಲ್ಲಿ ಅಂಪೈರ್ ಗಳೊಂದಿಗೆ ವಾಗ್ವಾದ ನಡೆಸಿದ್ದ ಇಂಗ್ಲೆಂಡ್ ಬ್ಯಾಟ್ಸ್ ಮನ್ ಜೇಸನ್ ರಾಯ್ ಗೆ ಐಸಿಸಿ ದಂಡ ಹಾಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಮೈದಾನದಲ್ಲಿ ಅಂಪೈರ್ ಗಳೊಂದಿಗೆ ವಾಗ್ವಾದ ನಡೆಸಿದ್ದ ಇಂಗ್ಲೆಂಡ್ ಬ್ಯಾಟ್ಸ್ ಮನ್ ಜೇಸನ್ ರಾಯ್ ಗೆ ಐಸಿಸಿ ದಂಡ ಹಾಕಿದೆ.
ನಿನ್ನೆ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 224 ರನ್ ಗಳ ಸಾಮಾನ್ಯ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ 32.1 ಓವರ್ ನಲ್ಲಿಯೇ 2 ವಿಕೆಟ್ ಕಳೆದುಕೊಂಡು 226 ರನ್ ಗಳಿಸಿ ಗುರಿ ಮುಟ್ಟಿತು.
ಇಂಗ್ಲೆಂಡ್ ತಂಡ ಈ ಅಮೋಘ ಬ್ಯಾಟಿಂಗ್ ನಲ್ಲಿ ಜೇಸನ್ ರಾಯ್ ಅವರ ಕೊಡುಗೆ ಪ್ರಮುಖವಾಗಿತ್ತು. ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ರಾಯ್, 65 ಎಸೆತಗಳಲ್ಲಿ ಐದು ಭರ್ಜರಿ ಸಿಕ್ಸರ್ ಗಳು ಮತ್ತು 9 ಬೌಂಡರಿಗಳ ನೆರವಿನಿಂದ 85 ರನ್ ಸಿಡಿಸಿದ್ದರು. ಆದರೆ ಈ ಹಂತದಲ್ಲಿ ಪ್ಯಾಟ್ ಕಮಿನ್ಸ್ ಎಸೆದ 20ನೇ ಓವರ್ ನಲ್ಲಿ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ನಾಲ್ಕನೆ ಎಸೆತವನ್ನು ಅಪ್ಪರ್ ಹುಕ್ ಮಾಡಲು ರಾಯ್ ಯತ್ನಿಸಿದರಾದರೂ, ಚೆಂಡು ವಿಕೆಟ್ ಕೀಪರ್ ಕೈ ಸೇರಿತ್ತು. 
ಈ ವೇಳೆ ಆಸಿಸ್ ಆಟಗಾರರು ಔಟ್ ಗೆ ಮನವಿ ಸಲ್ಲಿಸಿದರು. ಅಂಪೈರ್ ಕುಮಾರ ಧರ್ಮಸೇನಾ ಔಟ್ ಎಂದು ತೀರ್ಪು ನೀಡಿದರು. ಕೂಡಲೇ ರಿವ್ಯೂ ಪಡೆಯಲು ರಾಯ್ ಮುಂದಾದರು. ಆದರೆ ಅಷ್ಟು ಹೊತ್ತಿಗಾಗಲೇ ಇಂಗ್ಲೆಂಡ್ ತಂಡ ತನ್ನ ಎಲ್ಲ ರಿವ್ಯೂಗಳನ್ನು ಪಡೆದುಕೊಂಡಿತ್ತು. ಹೀಗಾಗಿ ರಾಯ್ ಅಂಪೈರ್ ತೀರ್ಪಿಗೆ ಮೈದಾನದಲ್ಲೇ ವಿರೋಧ ವ್ಯಕ್ತಪಡಿಸಿದರು. ಬಳಿಕ ಅದು ಟಿವಿ ರಿಪ್ಲೇನಲ್ಲೂ ಕೂಡ ನಾಟೌಟ್ ಎಂದು ತಿಳಿದಿತ್ತು. ಚೆಂಡು ಬ್ಯಾಟ್ ಗೆ ಅಥವಾ ರಾಯ್ ಅವರ ಗ್ಲೌಸ್ ಗೆ ಟಚ್ ಆಗಿರಲಿಲ್ಲ. ಆದರೆ ಚೆಂಡು ತೀರಾ ಸಮೀಪದಲ್ಲಿ ಹೋಗಿತ್ತು. ಹೀಗಾಗಿ ತಬ್ಬಿಬ್ಬಾದ ಅಂಪೈರ್ ಧರ್ಮಸೇನಾ ಔಟ್ ನೀಡಿದರು.
ಇನ್ನು ಆನ್ ಫೈಲ್ಡ್ ಅಂಪೈರ್ ಜೊತೆ ವಾಗ್ವಾದ ನಡೆಸಿದ ರಾಯ್ ಗೆ ಐಸಿಸಿ ದಂಡ ವಿಧಿಸಿದೆ. ಐಸಿಸಿಯ ನಿಯಮಾಳಿ 2.8ಅನ್ನು ಮೀರಿದ್ದು ಸಾಬೀತಾಗಿದ್ದು, ಹೀಗಾಗಿ ರಾಯ್ ಗೆ ಪಂದ್ಯದ ಸಂಭಾವನೆಯ ಶೇ. 30ರಷ್ಟು ದಂಡ ಹಾಕಿ ಎಚ್ಚರಿಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com