ಚೊಚ್ಚಲ ವಿಶ್ವಕಪ್‌ ಮೇಲೆ ಇಂಗ್ಲೆಂಡ್‌-ನ್ಯೂಜಿಲೆಂಡ್‌ ಕಣ್ಣು! ಲಾರ್ಡ್ಸ್ ಕ್ರೀಡಾಂಗಣದಲ್ಲಿ ಮುಖಾಮುಖಿ

ಚೊಚ್ಚಲ ವಿಶ್ವಕಪ್‌ ಗೆಲ್ಲುವ ತುಡಿತದಲ್ಲಿರುವ ಆತಿಥೇಯ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ತಂಡಗಳು 2019ರ ಐಸಿಸಿ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ನಾಳೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ.

Published: 13th July 2019 12:00 PM  |   Last Updated: 13th July 2019 06:07 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : UNI
ಲಂಡನ್: ಚೊಚ್ಚಲ ವಿಶ್ವಕಪ್‌ ಗೆಲ್ಲುವ ತುಡಿತದಲ್ಲಿರುವ ಆತಿಥೇಯ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ತಂಡಗಳು 2019ರ ಐಸಿಸಿ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ನಾಳೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ.  

ಕಳೆದ 27 ವರ್ಷಗಳ ಬಳಿಕ ಫೈನಲ್ ತಲುಪಿರುವ ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ ತವರು ಅಭಿಮಾನಿಗಳ ಎದುರು ವಿಶ್ವಕಪ್‌ ಗೆಲ್ಲಲ್ಲು ಇದೊಂದು ಸುವರ್ಣ ಅವಕಾಶ. ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ 2011ರ ಚಾಂಪಿಯನ್‌ ಭಾರತ ವಿರುದ್ಧ ತೀವ್ರ ಒತ್ತಡದ ನಡುವೆಯೂ ಗೆದ್ದಿದ್ದ ನ್ಯೂಜಿಲೆಂಡ್‌ಗೆ ಭಾನುವಾರ ಆಂಗ್ಲರ ಎದುರು ಮತ್ತೊಂದು ಪರೀಕ್ಷೆ ಎದುರಾಗಲಿದೆ. 

ಐಸಿಸಿ ಮೂಲಗಳ ಪ್ರಕಾರ ಲಂಡನ್‌ನಲ್ಲಿನ ವಾತಾವರಣ ಉತ್ತಮವಾಗಿದ್ದು, ಪಂದ್ಯ ಯಶಸ್ವಿಯಾಗಿ ನಡೆಯಲಿದೆ. ಭಾನುವಾರ ಮೋಡ ಕವಿದ ವಾತಾವರಣ ಇರುವುದಿಲ್ಲ. ಆಕಾಶ ಸಂಪೂರ್ಣ ನೀಲಿಯಾಗಿರಲಿದೆ. ಹಾಗಾಗಿ, ಪಂದ್ಯಕ್ಕೆ ಮಳೆಯ ಕಾಟವಿಲ್ಲ ಎಂದು ತಿಳಿದುಬಂದಿದೆ. 

ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ತೋರಿದ ಪ್ರದರ್ಶನವನ್ನು ಆಧರಿಸಿ ಹಲವರು ಆತಿಥೇಯ ಇಂಗ್ಲೆಂಡ್‌ ವಿಶ್ವಕಪ್‌ ಗೆಲ್ಲುವ ಅತ್ಯಂತ ನೆಚ್ಚಿನ ತಂಡ ಎಂದು ವ್ಯಾಖ್ಯಾನಿಸುತ್ತಿದ್ದಾರೆ. 

ಕಳೆದ ಪಂದ್ಯದಲ್ಲಿ ಜೊಫ್ರಾ ಆರ್ಚರ್‌ ಹಾಗೂ ಕ್ರಿಸ್‌ ವೋಕ್ಸ್‌  ಆಸ್ಟ್ರೇಲಿಯಾ ಮೊತ್ತ 14 ರನ್‌ ಇರುವಾಗಲೇ ಮೂರು ವಿಕೆಟ್‌ ಕಿತ್ತು ಆಘಾತ ನೀಡಿದ್ದರು. ಮಧ್ಯಮ ಓವರ್‌ಗಳಲ್ಲಿ ಆದಿಲ್‌ ರಶೀದ್ ಅವರು ಮೂರು ವಿಕೆಟ್‌ ಕಬಳಿಸಿ ರನ್‌ ವೇಗಕ್ಕೆ ಕಡಿವಾಣ ಹಾಕಿದ್ದರು. ನಂತರ, ಜೇಸನ್‌ ರಾಯ್‌ ಹಾಗೂ ಜಾನಿ ಬೈರ್‌ಸ್ಟೋ ಆರಂಭಿಕ ಜೋಡಿ ತೋರಿದ ಅಮೋಘ ಬ್ಯಾಟಿಂಗ್‌ ಪ್ರದರ್ಶನ ಏಕದಿನ ದಿನ ಇತಿಹಾಸದಲ್ಲೇ ಯಶಸ್ವಿ ಜೋಡಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿತ್ತು. 

ಮತ್ತೊಂದೆಡೆ ನ್ಯೂಜಿಲೆಂಡ್‌ ಪರ ಸಮಯೋಜಿತ ಬೌಲಿಂಗ್ ನಿರ್ವಹಣೆ ತೋರುತ್ತಿರುವ ಎಡಗೈ ವೇಗಿ ಟ್ರೆಂಟ್‌ ಬೌಲ್ಟ್‌ ಹಾಗೂ ಪಂದ್ಯವೀಡಿ ಒಬ್ಬರೇ ಕ್ರೀಸ್‌ನಲ್ಲಿ ನಿಂತು ತಂಡಕ್ಕೆ ಹಲವು ಬಾರಿ ನೆರವಾಗಿರುವ ನಾಯಕ ಕೇನ್‌ ವಿಲಿಯಮ್ಸನ್‌ ಅವರ ಬಲ ತಂಡಕ್ಕೆ ಅತಿ ಮುಖ್ಯವಾಗಿದೆ. ಇವರ ಜತೆ ಮಧ್ಯಮ ಕ್ರಮಾಂಕದಲ್ಲಿ ರಾಸ್‌ ಟೇಲರ್‌ ಅಗತ್ಯದ ಸಂದರ್ಭಗಳಲ್ಲಿ ಉತ್ತಮ ಸಾಥ್‌ ನೀಡುತ್ತಿದ್ದಾರೆ. 

ಟೂರ್ನಿಯಲ್ಲಿ ಕಿವೀಸ್‌ ಬೌಲಿಂಗ್‌ ವಿಭಾಗ ಸ್ಥಿರ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಟ್ರೆಂಟ್‌ ಬೌಲ್ಟ್‌ ಬಿಟ್ಟರೆ ಲೂಕಿ ಫರ್ಗೂಸನ್‌ ಕೂಡ ಸನ್ನಿವೇಶಕ್ಕೆ ತಕ್ಕಂತೆ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಭಾರತದ ವಿರುದ್ಧ ಮೊದಲ ಸೆಮಿಫೈನಲ್‌ನಲ್ಲಿ  18 ರನ್‌ಗಳ ಗೆಲುವು ಸಾಧಿಸಿದ್ದು, ತನ್ನ ಬೌಲಿಂಗ್‌ ಅಸ್ತ್ರದಿಂದಲೇ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

ಭಾರತದ ಮೊತ್ತ 5 ರನ್‌ ಇರುವಾಗಲೇ ಬೌಲ್ಟ್ ಹಾಗೂ ಮ್ಯಾಟ್‌ ಹೆನ್ರಿ ಅವರು ಅಗ್ರ ಕ್ರಮಾಂಕದ ಮೂರು ವಿಕೆಟ್‌ಗಳನ್ನು ಉರುಳಿಸಿದ್ದರು. ಬಳಿಕ, ಮಿಚೆಲ್‌ ಸ್ಯಾಂಟ್ನರ್‌ ಕೂಡ ಉತ್ತಮ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಮೂಲಕ ಗಮನ ಸೆಳೆಯುವ ಮೂಲಕ ಕೇನ್‌ ವಿಲಿಯಮ್ಸನ್‌ ಹಾಗೂ ರಾಸ್‌ ಟೇಲರ್‌ ಅವರ ಅರ್ಧಶತಕಗಳಿಗೆ ಮೌಲ್ಯ ತಂದುಕೊಟ್ಟಿದ್ದರು. 

1992ರಲ್ಲಿ ಇಂಗ್ಲೆಂಡ್‌ ಫೈನಲ್‌ನಲ್ಲಿ ಸೋಲು ಅನುಭವಿಸಿ ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತ್ತು. ಆದರೆ, ನ್ಯೂಜಿಲೆಂಡ್‌ 2015ರ ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ  ಮೆಲ್ಬೋರ್ನ್‌ನಲ್ಲಿ ಸೋಲು ಅನುಭವಿಸಿತ್ತು. ಇದೀಗ ಇವೆರಡೂ ತಂಡಗಳು ಚೊಚ್ಚಲ ವಿಶ್ವಕಪ್‌ ಗೆಲ್ಲುವ ಕಡೆ ಗಮನಹರಿಸಲಿವೆ. 

ಸಂಭಾವ್ಯ ಆಟಗಾರರು
ನ್ಯೂಜಿಲೆಂಡ್‌:
ಮಾರ್ಟಿನ್ ಗುಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಟಾಮ್ ಲಥಾಮ್ (ವಿ.ಕೀ), ಜೇಮ್ಸ್ ನಿಶಾಮ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲೂಕಿ ಫರ್ಗುಸನ್ ಮತ್ತು ಟ್ರೆಂಟ್ ಬೌಲ್ಟ್.

ಇಂಗ್ಲೆಂಡ್‌
ಜಾನಿ ಬೈರ್‌ ಸ್ಟೋವ್, ಜೇಸನ್ ರಾಯ್, ಜೋ ರೂಟ್, ಇಯಾನ್ ಮಾರ್ಗಾನ್ (ನಾಯಕ), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿ.ಕೀ), ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಜೊಫ್ರಾ ಆರ್ಚರ್, ಮತ್ತು ಮಾರ್ಕ್ ವುಡ್.

ಸಮಯ: ನಾಳೆ ಮಧ್ಯಾಹ್ನ 03:00
ಸ್ಥಳ: ದಿ ಲಾರ್ಡ್ಸ್, ಲಂಡನ್‌
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp