ವಿಶ್ವಕಪ್ ಫೈನಲ್ ಓವರ್ ಥ್ರೋ ವಿವಾದ: ಕೊನೆಗೂ ಮೌನ ಮುರಿದ ಐಸಿಸಿ ಹೇಳಿದ್ದೇನು ಗೊತ್ತಾ?

ತೀವ್ರ ಚರ್ಚೆಗೆ ಗ್ರಾಸವಾಗಿರುವ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದ ಓವರ್ ಥ್ರೋ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಐಸಿಸಿ ಪ್ರತಿಕ್ರಿಯೆ ನೀಡಿದೆ.

Published: 17th July 2019 12:00 PM  |   Last Updated: 17th July 2019 12:52 PM   |  A+A-


ICC Finally Respond to Cricket World Cup Final Controversy, Talk About On-Field Umpire’s Decision

ಸಂಗ್ರಹ ಚಿತ್ರ

Posted By : SVN SVN
Source : Online Desk
ಲಂಡನ್: ತೀವ್ರ ಚರ್ಚೆಗೆ ಗ್ರಾಸವಾಗಿರುವ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದ ಓವರ್ ಥ್ರೋ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಐಸಿಸಿ ಪ್ರತಿಕ್ರಿಯೆ ನೀಡಿದೆ.

ಲಾರ್ಡ್ಸ್ ನಲ್ಲಿ ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದ ಅಂತಿಮ ಓವರ್ ನಲ್ಲಿನ ಓವರ್ ಥ್ರೋ ವಿವಾದ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಇಂಗ್ಲೆಂಡ್ ತಂಡಕ್ಕೆ ಆರು ರನ್ ನೀಡಿದ ಆನ್ ಫೀಲ್ಡ್ ಅಂಪೈರ್ ಕುಮಾರ ಧರ್ಮಸೇನಾ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಚರ್ಚೆ ಮುಂದುವರೆದಿರುವಂತೆಯೇ ಇತ್ತ ಐಸಿಸಿ ಕೂಡ ಈ ಬಗ್ಗೆ ತನ್ನ ಮೌನ ಮುಂದುವರೆಸಿತ್ತು. 

ಇದೀಗ ಸತತ ನಾಲ್ಕು ದಿನಗಳ ಇದೇ ಮೊದಲ ಬಾರಿಗೆ ಐಸಿಸಿ ತನ್ನ ಮೌನ ಮುರಿದಿದ್ದು, ಆನ್ ಫೀಲ್ಡ್ ಅಂಪೈರ್ ಗಳ ಬಗ್ಗೆ ಮಾತನಾಡಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಐಸಿಸಿ ವಕ್ತಾರರು, ಆನ್ ಫೀಲ್ಡ್ ಅಂಪೈರ್ ಗಳ ತೀರ್ಮಾನದ ಕುರಿತು ಮಾತನಾಡುವುದು ಐಸಿಸಿ ನಿಯಮಗಳಿಗೇ ವಿರುದ್ಧವಾದದು ಎಂದು ಹೇಳುವ ಮೂಲಕ ಅಂಪೈರ್ ತೀರ್ಮಾನಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆ. ಅಲ್ಲದೆ, ಆನ್ ಫೀಲ್ಚ್ ಅಂಪೈರ್ ಗಳು ಪಂದ್ಯದ ಆಯಾ ಪರಿಸ್ಥಿತಿಗೆ ಅನುಗುಣವಾಗಿ ಐಸಿಸಿ ನಿಯಮಾವಳಿಗೆ ಅನುಸಾರವಾಗಿ ಯಾವುದೇ ತೀರ್ಮಾನ ಕೈಗೊಳ್ಳಲು ಸ್ವತಂತ್ರರು.  ಅವರ ತೀರ್ಮಾನದ ವಿರುದ್ಧ ಅಥವಾ ಪರವಾಗಿ ಸಾರ್ವಜನಿಕವಾಗಿ ಮಾತನಾಡಬಾರದು. ಇದು ಐಸಿಸಿ ನಿಯಮ ಎಂದು ಹೇಳಿದ್ದಾರೆ.

ಲಾರ್ಡ್ಸ್ ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯ ಹಲವು ರೋಚಕ ತಿರುವು ಪಡೆದಿತ್ತು. ಪಂದ್ಯ ಟೈ ಆದ ಬಳಿಕ ನಡೆದ ಸೂಪರ್ ಓವರ್ ಕೂಡ ಟೈ ಆಗಿತ್ತು. ಬಳಿಕ ಇಂಗ್ಲೆಂಡ್ ತಂಡ ಗಳಿಸಿದ ಬೌಂಡರಿಗಳ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತ್ತು. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಗೆ ಕಠಿಣ ಪ್ರಯತ್ನದ ಜೊತೆ ಅದೃಷ್ಠ ಕೂಡ ಕೈ ಹಿಡಿದಿತ್ತು. ಬೆನ್ ಸ್ಟೋಕ್ಸ್ ಅಂತಿಮ ಓವರ್ ನಲ್ಲಿ 2 ರನ್ ಗಾಗಿ ಪ್ರಯತ್ನಿಸಿದ ವೇಳೆ ರನೌಟ್ ತಪ್ಪಿಸಲು ಡೈವ್ ಮಾಡಿದ್ದರು. ಆದರೆ ಥ್ರೋ ನೇರವಾಗಿ ಸ್ಟೋಕ್ಸ್ ಬ್ಯಾಟ್‌ ಗೆ ತಾಗಿ ಬೌಂಡರಿ ಗೆರೆ ದಾಟಿತ್ತು. ಹೀಗಾಗಿ 2 + 4 ಒಟ್ಟು 6 ರನ್ ನಿಡಲಾಗಿತ್ತು. ಇದು ಪಂದ್ಯದ ಗತಿಯನ್ನೇ ಬದಲಿಸಿತು. ಆ ಒಂದು ಘಟನೆ ನಡೆಯದಗೇ ಹೋಗಿದ್ದಲ್ಲಿ ಖಂಡಿತಾ ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸಿರುತ್ತಿತ್ತು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp