ಎಂಎಸ್ ಧೋನಿ ಭವಿಷ್ಯ ನಾಳೆ ನಿರ್ಧಾರ; ವಿರಾಟ್ ಗೆ ವಿಶ್ರಾಂತಿ ಸಾಧ್ಯತೆ?

ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಸೋತು ನಿರಾಸೆ ಅನುಭವಿಸಿರುವ ಟೀಮ್ ಇಂಡಿಯಾ, ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ...
ಎಂಎಸ್ ಧೋನಿ-ವಿರಾಟ್ ಕೊಹ್ಲಿ
ಎಂಎಸ್ ಧೋನಿ-ವಿರಾಟ್ ಕೊಹ್ಲಿ
ನವದೆಹಲಿ: ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಸೋತು ನಿರಾಸೆ ಅನುಭವಿಸಿರುವ ಟೀಮ್ ಇಂಡಿಯಾ, ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಶುಕ್ರವಾರ ತಂಡದ ಆಯ್ಕೆ ಮಾಡಲಿದ್ದು, ಎಲ್ಲರ ಚಿತ್ತ ಮಹೇಂದ್ರ ಸಿಂಗ್ ಧೋನಿ ಸ್ಥಾನದ ಮೇಲೆ ನೆಟ್ಟಿದೆ. 
ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಬಳಿಕ ಧೋನಿ ನಿವೃತ್ತಿ ಘೋಷಿಸುವ ಮಾತುಗಳು ಕೇಳಿ ಬಂದಿದ್ದವು. ವಿಂಡೀಸ್ ಪ್ರವಾಸದಲ್ಲಿ ನಡೆಯಲಿರುವ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸ್ಥಾನ ಲಭಿಸುವುದೋ, ಇಲ್ಲವೋ ಎಂಬ ಕುತೂಹಲ ಮೂಡಿಸಿದೆ. ಇನ್ನು ಧೋನಿ ಅವರನ್ನು ಹೊರತು ಪಡಿಸಿದರೆ, ಆಯ್ಕೆಯ ವೇಳೆ ವಿರಾಟ್ ಕೊಹ್ಲಿ ಅವರ ಬಗ್ಗೆಯೂ ಚರ್ಚೆ ಆಗುವ ಸಾಧ್ಯತೆ ಇದೆ. ವಿರಾಟ್ ಅವರಿಗೆ ಹಲವು ದಿನಗಳಿಂದ ವಿಶ್ರಾಂತಿ ನೀಡಿಲ್ಲ. ಆದ್ದರಿಂದ, ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಇವರನ್ನು ಹೊರತು ಪಡಿಸಿದರೆ ವೇಗಿ ಜಸ್ಪ್ರಿತ್ ಬೂಮ್ರಾ ಅವರಿಗೂ ವಿಶ್ರಾಂತಿ ನೀಡುವ ಸಂಭವವಿದೆ. ಬೂಮ್ರಾ ಅವರು ವಿಶ್ವಕಪ್ ನಲ್ಲಿ ವಿಕೆಟ್ ಕಬಳಿಸಿ ಎಲ್ಲರ ಮನ ಗೆದ್ದಿದ್ದರು. 
ಆಗಸ್ಟ್ ಮೂರರಿಂದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಪಂದ್ಯ ಆಡಲಿದೆ. ಈ ಪ್ರವಾಸದಲ್ಲಿ ತಂಡ ಟಿ-20, ಏಕದಿನ ಹಾಗೂ ಟೆಸ್ಟ್ ಪಂದ್ಯ ಆಡಲಿದೆ. 
ಧೋನಿ ಅವರು ವಿಶ್ವಕಪ್ ನಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ ಟೀಕೆಗೆ ಒಳಗಾಗಿದ್ದರು. ವಿಂಡೀಸ್ ಪ್ರವಾಸದ ವೇಳೆ ಆಯ್ಕೆ ಸಮಿತಿ ರಿಷಭ್ ಪಂತ್ ಅವರಿಗೆ ಮಣೆ ಹಾಕುವ ಸಾಧ್ಯತೆ ಇದ್ದು, ಇವರನ್ನು ಧೋನಿ ಉತ್ತರಾಧಿಕಾರಿ ಎಂದು ಬಿಂಬಿಸಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ಮನದಲ್ಲಿಟ್ಟುಕೊಂಡು ಹೊಸ ಮುಖಗಳಿಗೆ ಮಣೆ ಹಾಕುವ ಇರಾದೆ ಆಯ್ಕೆ ಸಮಿತಿಯದ್ದಾಗಿದೆ. ವಿಂಡೀಸ್ ಪ್ರವಾಸದಲ್ಲಿ ತಂಡವನ್ನು ಸೇರುವ ಮೊದಲ ಆದ್ಯತೆ ಪಂತ್ ಅವರಿಗೆ ನೀಡಲಾಗುತ್ತಿದೆ. 
ಸದ್ಯ ವಿಂಡೀಸ್ ಪ್ರವಾಸದಲ್ಲಿ ಭಾರತ ‘ಎ’ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಆತಿಥೇಯ ತಂಡದ ವಿರುದ್ಧ ಐದು ಏಕದಿನ ಸರಣಿಯ ಮೂರೂ ಪಂದ್ಯಗಳನ್ನು ಗೆದ್ದು ಬೀಗಿದೆ. ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಕರ್ನಾಟಕದ ಮಯಾಂಕ್ ಅಗರ್ ವಾಲ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಬಲ್ಲ ಆಟಗಾರ. ಇವರು ದೇಶಿಯ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಯುವ ಆಟಗಾರರಾದ ಶುಭ್ ಮನ್ ಗಿಲ್ ಹಾಗೂ ಪೃಥ್ವಿ ಶಾ ಅವರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ. 
ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ದಿನೇಶ್ ಕಾರ್ತಿಕ್ ಹಾಗೂ ಕೇದಾರ್ ಜಾದವ್ ಅವರಿಗೂ ತಂಡದಲ್ಲಿ ಸ್ಥಾನ ದೊರೆಯುವುದು ಅನುಮಾನವಾಗಿದೆ. ಶಿಖರ್ ಧವನ್ ಅವರು ಗಾಯದ ಚೇತರಿಕೆಯನ್ನು ನೋಡಿಕೊಂಡು ಅವರಿಗೆ ಮಣೆ ಹಾಕಲಾಗುತ್ತದೆ. ಉಳಿದಂತೆ ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಕುಲ್ ದೀಪ್ ಯಾದವ್, ಯಜುವೇಂದ್ರ ಚಹಾಲ್ ತಮ್ಮ ಸ್ಥಾನ ಉಳಿಸಿಕೊಳ್ಳಬಹುದು. ದೀಪಕ್ ಚಹಾರ್ ಅವರಿಗೂ ತಂಡದಲ್ಲಿ ಸ್ಥಾನ ಸಿಗುವ ಸಂಭವವಿದೆ. 
ವೇಗಿ ನವದೀಪ್ ಸೈನಿ ಭಾರತ ‘ಎ’ ಪರ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅವೇಶ್ ಖಾನ್, ಖಲೀಲ್ ಅಹ್ಮದ್ ಅವರ ಮೇಲೂ ಆಯ್ಕೆ ಸಮಿತಿ ಕಣ್ಣು ನೆಟ್ಟಿದೆ. ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಅವರಿಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಟೆಸ್ಟ್ ತಂಡದಲ್ಲಿ ಪಂತ್ ಅವರಿಗೆ ವಿಕೆಟ್ ಕೀಪರ್ ಸ್ಥಾನ  ನೀಡಬಹುದು. ಆದರೆ, ಅನುಭವಿ ವೃದ್ಧಿಮನ್ ಸಹಾ ಅವರು ಗಾಯದಿಂದ ಚೇತರಿಸಿಕೊಂಡಿದ್ದರಿಂದ ಆಯ್ಕೆ ಸಮಿತಿಯ ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು ಕಾದು ನೋಡಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com