ಭಾವನಾತ್ಮಕವಾಗಿ ಯೋಚಿಸದೇ, ಧೋನಿ ನಿವೃತ್ತಿ ನಿರ್ಧಾರ ಪ್ರಾಯೋಗಿಕವಾಗಿರಲಿ: ಗೌತಮ್ ಗಂಭೀರ್‌

ಮಹೇಂದ್ರ ಸಿಂಗ್‌ ಧೋನಿ ಅವರ ನಿವೃತ್ತಿ ವಿಷಯವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೆ ಪ್ರಾಯೋಗಿಕವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಸಲಹೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮಹೇಂದ್ರ ಸಿಂಗ್‌ ಧೋನಿ ಅವರ ನಿವೃತ್ತಿ ವಿಷಯವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೆ ಪ್ರಾಯೋಗಿಕವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಸಲಹೆ ನೀಡಿದ್ದಾರೆ. 
ಇಂಗ್ಲೆಂಡ್‌ ನಲ್ಲಿ ಮುಕ್ತಾಯವಾದ ಐಸಿಸಿ ವಿಶ್ವಕಪ್ ನಲ್ಲಿ ಭಾರತ ತಂಡ ಸೆಮಿಫೈನಲ್ ನಲ್ಲಿ ಹೊರ ಬಿದ್ದ ಬಳಿಕ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದ್ದ ಮಹೇಂದ್ರ ಸಿಂಗ್‌ ಧೋನಿ ಅವರ ನಿವೃತ್ತಿ ಬಗ್ಗೆ ಹಲವರು ಪ್ರಸ್ತಾಪ ಮಾಡಿದ್ದರು. ಹಾಗಾಗಿ, ಭಾರತದ ಮಾಜಿ ಆಟಗಾರ ಮತ್ತು ಹಾಲಿ ಸಂಸದ ಅವರದೇ ದಾಟಿಯಲ್ಲಿ ಧೋನಿ ರಾಜೀನಾಮೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾವನಾತ್ಮಕವಾಗಿ ಯೋಚಿಸದೇ, ಧೋನಿ ನಿವೃತ್ತಿ ನಿರ್ಧಾರ ಪ್ರಾಯೋಗಿಕವಾಗಿರಲಿ ಎಂದು ಹೇಳಿದ್ದಾರೆ. 
ವೆಸ್ಟ್ ಇಂಡೀಸ್‌ ಸರಣಿಗೆ ತಂಡ ಪ್ರಕಟಿಸುವುದಕ್ಕೂ ಮುನ್ನ ಧೋನಿ ನಿವೃತ್ತಿ ಘೋಷಿಸಿದರೆ,  ಸರಣಿಯಲ್ಲಿ ಪ್ರತಿಭಾನ್ವಿತ ಯುವ ಬ್ಯಾಟ್ಸ್ ಮನ್‌ಗಳು ಕಾಣಿಸಿಕೊಳ್ಳಲು ಅವಕಾಶ ಸಿಗಲಿದೆ ಎಂಬ  ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ಭಾರತದ ಮಾಜಿ ಆರಂಭಿಕ ಗೌತಮ್ ಗಂಭೀರ್  ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಭವಿಷ್ಯದ ದಿನಗಳತ್ತ ದೃಷ್ಟಿ ಹರಿಸೋದು ತುಂಬಾ ಮಹತ್ವವಾದುದು. ಧೋನಿಯೂ ಈ ಹಿಂದೆ ಇದನ್ನೇ  ಹೇಳಿದ್ದರು. 2008ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಕಾಮನ್ ವೆಲ್ತ್ ಬ್ಯಾಂಕ್ ಸರಣಿ  (ಸಿಬಿ ಸೀರೀಸ್) ವೇಳೆ ನಾಯಕನಾಗಿದ್ದ ಧೋನಿ, ಯುವಕರಿಗೆ ಅವಕಾಶ ನೀಡಬೇಕಾಗಿದ್ದರಿಂದ ಸಚಿನ್ ಹಾಗೂ ಸೆಹ್ವಾಗ್‌ ಒಟ್ಟಿಗೆ ಆಡಲಾರರು ಎಂದು  ಹೇಳಿದ್ದನ್ನು ಗಂಭೀರ್ ಇದೇ ವೇಳೆ ಸ್ಮರಿಸಿಕೊಂಡರು.
'ಮೈದಾನ ದೊಡ್ಡದಿರುವುದರಿಂದ ಸಿಬಿ ಸೀರೀಸ್‌ ನಲ್ಲಿ ಸಚಿನ್, ಸೆಹ್ವಾಗ್ ಒಟ್ಟಿಗೆ  ಆಡಲಾರರು ಎಂದು ಆಗ ನಾಯಕನಾಗಿದ್ದ ಧೋನಿ ನನ್ನ ಬಳಿ ಹೇಳಿದ್ದರು. ಮುಂದಿನ ವಿಶ್ವಕಪ್‌ ಗೆ  ಯುವ ಆಟಗಾರರ ಅಗತ್ಯವಿರುವುದನ್ನು ತಿಳಿಸಲು ಧೋನಿ ಹೀಗೆ ನನ್ನಲ್ಲಿ ಹೇಳಿಕೊಂಡಿದ್ದರು.  ಹೀಗಾಗಿ ಭಾವುಕರಾಗುವುದಕ್ಕಿಂತ ಪ್ರಾಯೋಗಿಕವಾಗಿ ನಿರ್ಧಾರ ತೆಗೆದುಕೊಳ್ಳುವುದರ ಅಗತ್ಯವಿದೆ' ಎಂದು ಗಂಭೀರ್ ಹೇಳಿದ್ದಾರೆ.
ಯುವ ತಾರೆಯರಿಗೆ ಅವಕಾಶಗಳನ್ನು ನೀಡಬೇಕಾದ ಸಂದರ್ಭ ಭಾರತದ ಮುಂದಿದೆ. ವಿಕೆಟ್  ಕೀಪಿಂಗ್‌ಗೆ ಸಲ್ಲಬಲ್ಲ ಅನ್ನಿಸುವ ರಿಷಬ್ ಪಂತ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್  ಇಂಥವರಿಗೆ ಹೆಚ್ಚು ಅವಕಾಶಗಳನ್ನು ನೀಡಬೇಕಿದೆ. ಈ ಮೂವರಲ್ಲಿ ಒಬ್ಬನಿಗೆ ಒಂದೂವರೆ  ವರ್ಷಗಳ ಕಾಲ ಅವಕಾಶ ನೀಡಲಿ. ಆತ ಸುಧಾರಣೆ ಕಾಣದಿದ್ದರೆ ಉಳಿದಿಬ್ಬರನ್ನು ಪರಿಗಣಿಸಲಿ.  ಆಗ ಮುಂದಿನ ವಿಶ್ವಕಪ್ ವೇಳೆ ಒಬ್ಬಾತ ವಿಕೆಟ್ ಕೀಪಿಂಗ್‌ ಗೆ ತಯಾರಾಗಿರುತ್ತಾನೆ' ಎಂದು  ಗಂಭೀರ್ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com