ಇನ್ನೆರಡು ತಿಂಗಳು ಭಾರತ ತಂಡಕ್ಕೆ ಧೋನಿ ಅಲಭ್ಯ.. ಏನ್ ಮಾಡ್ತಿದ್ದಾರೆ ಗೊತ್ತಾ?

ಮಹೇಂದ್ರ ಸಿಂಗ್ ಧೋನಿ ತಾವು ಇನ್ನೆರಡು ತಿಂಗಳು ಭಾರತ ತಂಡಕ್ಕೆ ಲಭ್ಯವಾಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದು, ಇಷ್ಟಕ್ಕೂ ಈ 2 ತಿಂಗಳ ಕಾಲ ಧೋನಿ ಏನು ಮಾಡಲಿದ್ದಾರೆ ಎಂದು ತಿಳಿದರೇ ನೀವು ಕೂಡ ಹೆಮ್ಮೆ ಪಡುತ್ತಿರೀ..!
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಧೋನಿ ನಿವೃತ್ತಿ ಕುರಿತ ಸುದ್ದಿಗಳು ಮಾಧ್ಯಮಗಳಲ್ಲಿ ವ್ಯಾಪಕ ಹರಿದಾಡುತ್ತಿರುವಂತೆಯೇ ಇತ್ತ ಮಹೇಂದ್ರ ಸಿಂಗ್ ಧೋನಿ ಅವರೇ ತಾವು ಇನ್ನೆರಡು ತಿಂಗಳು ಭಾರತ ತಂಡಕ್ಕೆ ಲಭ್ಯವಾಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇಷ್ಟಕ್ಕೂ ಈ 2 ತಿಂಗಳ ಕಾಲ ಧೋನಿ ಏನು ಮಾಡಲಿದ್ದಾರೆ ಎಂದು ತಿಳಿದರೇ ನೀವು ಕೂಡ ಹೆಮ್ಮೆ ಪಡುತ್ತಿರೀ..!
ಹೌದು.. ಐಸಿಸಿ ವಿಶ್ವಕಪ್ ಟೂರ್ನಿಯ ಸೋಲಿನ ಬಳಿಕ ಭಾರತ ತಂಡ ತನ್ನ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಇದರ ನಡುವೆಯೇ ಭಾರತ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವಿಚಾರ ಮಾಧ್ಯಮಗಳಿಗೆ ಮಾತ್ರವಲ್ಲ ಬಿಸಿಸಿಐ ಆಯ್ಕೆ ಸಮಿತಿಗೂ ಗೊಂದಲ ಮೂಡಿಸಿತ್ತು. ವೆಸ್ಟ್ ಇಂಡೀಸ್ ಸರಣಿಗೆ ಧೋನಿ ಅವರನ್ನು ಪರಿಗಣಿಸಬೇಕೇ ಬೇಡವೇ ಎಂಬ ಗೊಂದಲದಲ್ಲಿ ಆಯ್ಕೆ ಸಮಿತಿ ಇರುವಾಗಲೇ ಧೋನಿ ಅಚ್ಚರಿ ನಿರ್ಣಯವೊಂದನ್ನು ತೆಗೆದುಕೊಂಡಿದ್ದಾರೆ.
ಆ ನಿರ್ಣಯದಿಂದಾಗಿಯೇ ಅವರು ಬರೊಬ್ಬರಿ ಇನ್ನೆರಡು ತಿಂಗಳ ಕಾಲ ಭಾರತ ಕ್ರಿಕೆಟ್ ತಂಡದಿಂದ ದೂರ ಉಳಿಯಲಿದ್ದಾರೆ. ಇಷ್ಟಕ್ಕೂ ಆ ನಿರ್ಣಯ ಏನು ಗೊತ್ತಾ..?
ಮಹೇಂದ್ರ ಸಿಂಗ್ ಧೋನಿ ಓರ್ವ ಕ್ರಿಕೆಟಿಗನಾಗಿಯೇ ಎಲ್ಲರಿಗೂ ಚಿರಪರಿಚಿತ. ಆದರೆ ಧೋನಿ ಓರ್ವ ಸೈನಿಕ ಎಂದು ಸಾಕಷ್ಟು ಮಂದಿಗೆ ತಿಳಿದಿಲ್ಲ. ಧೋನಿ ಅವರ ಕ್ರಿಕೆಟ್ ಸೇವೆಯನ್ನು ಗುರುತಿಸಿ ಭಾರತೀಯ ಸೇನೆ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಗೌರವ ನೀಡಿದೆ. ಇದೇ ಕಾರಣಕ್ಕೆ ಧೋನಿ ಇನ್ನೆರಡು ತಿಂಗಳ ಕಾಲ ಭಾರತ ಕ್ರಿಕೆಟ್ ತಂಡಕ್ಕೆ ಅಲಭ್ಯರಾಗಲಿದ್ದಾರೆ. ಪ್ಯಾರಾಚೂಟ್ ರೆಜಿಮೆಂಟ್ ನಲ್ಲಿರುವ ಧೋನಿ ತಮ್ಮ ಸಹೋದ್ಯೋಗಿ ಸೈನಿಕರೊಂದಿಗೆ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ಕ್ಯಾಂಪ್ ನಲ್ಲಿ ಸಮಯ ಕಳೆಯಲಿದ್ದಾರೆ. ಆ ಮೂಲಕ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಿದ್ದಾರೆ.
ಈ ವಿಚಾರವನ್ನು ಸ್ವತಃ ಬಿಸಿಸಿಐ ಅಧಿಕಾರಿಗಳೇ ಬಹಿರಂಗ ಪಡಿಸಿದ್ದಾರೆ. ಆ ಮೂಲಕ ಧೋನಿ ತಮ್ಮ ಅಲಭ್ಯತೆ ಸ್ಪಷ್ಟವಾಗಿದ್ದು, ಆಯ್ಕೆ ಸಮಿತಿ ಗೊಂದಲ ಕೂಡ ನಿವಾರಣೆಯಾಗಿದೆ. ಇನ್ನು ನಾಳೆ ಮುಂಬೈನಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ವಿಂಡೀಸ್ ಪ್ರವಾಸಕ್ಕೆ ತಂಡದ ಆಟಗಾರರ ಆಯ್ಕೆ ನಡೆಯಲಿದೆ. ಧೋನಿ ಬದಲಿಗೆ ರಿಷಬ್ ಪಂತ್ ಅಥವಾ ವೃದ್ದಿಮಾನ್ ಸಹಾ ಆಯ್ಕೆಯಾಗುವ ಸಾಧ್ಯತೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com