ಐಸಿಸಿ ವಿಶ್ವಕಪ್ 2019: ವೈರಲ್ ಆಗುತ್ತಿದೆ ರೋಹಿತ್ ಶರ್ಮಾರ 'ಸೆಂಡ್ ಆಫ್ ಡ್ಯಾನ್ಸ್'

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿರುವ ಭಾರತ ತಂಡ ಮೊದಲ ಪಂದ್ಯದಲ್ಲೇ ಸಾಕಷ್ಟು ವಿಚಾರವಾಗಿ ಸುದ್ದಿಗೆ ಗ್ರಾಸವಾಗುತ್ತಿದೆ.
ರೋಹಿತ್ ಶರ್ಮಾ ಡ್ಯಾನ್ಸ್
ರೋಹಿತ್ ಶರ್ಮಾ ಡ್ಯಾನ್ಸ್
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿರುವ ಭಾರತ ತಂಡ ಮೊದಲ ಪಂದ್ಯದಲ್ಲೇ ಸಾಕಷ್ಟು ವಿಚಾರವಾಗಿ ಸುದ್ದಿಗೆ ಗ್ರಾಸವಾಗುತ್ತಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ತನ್ನ ಮೊದಲ ಪಂದ್ಯವನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ ಪಂದ್ಯದ ಗೆಲುವಿನ ಹೊರತಾಗಿಯೂ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗುತ್ತಿದೆ. ಧೋನಿ ಸ್ಟಂಪೌಟ್, ರೋಹಿತ್ ಶರ್ಮಾ ಶತಕ ಒಂದೆಡೆಯಾದರೆ ಇದೇ ರೋಹಿತ್ ಶರ್ಮಾ ಮೈದಾನದಲ್ಲಿನ ತಮ್ಮ ನಡವಳಿಕೆ ಮೂಲಕ ಇದೀಗ ಸುದ್ದಿಯಾಗಿದ್ದಾರೆ.
ಹೌದು ನಿನ್ನೆ ಸೌಥ್ಯಾಂಪ್ಟನ್ ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ರೋಸ್ ಬಾಲ್ ನ ಬ್ಯಾಟಿಂಗ್ ಸ್ನೇಹಿ ಪಿಚ್ ನಲ್ಲಿ ಬೃಹತ್ ರನ್ ಪೇರಿಸಬೇಕು ಎನ್ನುವ ಮಹದಾಸೆಯೊಂದಿಗೇ ಕ್ರೀಡಾಂಗಣಕ್ಕೆ ಇಳಿದ ಆಫ್ರಿಕನ್ ಬ್ಯಾಟ್ಸಮನ್ ಗಳಿಗೆ ಭಾರತದ ಜಸ್ ಪ್ರೀತ್ ಬುಮ್ರಾ ಅಕ್ಷರಶಃ ಶಾಕ್ ನೀಡಿದ್ದರು. ಆಫ್ರಿಕಾ ಕೇವಲ 24 ರನ್ ಗಳಿಸುವಷ್ಟರಲ್ಲಿಯೇ ಬುಮ್ರಾ ಆರಂಭಿಕರಾದ ಹಶೀಮ್ ಆಮ್ಲಾ ಮತ್ತು ಕ್ವಿಂಟನ್ ಡಿಕಾಕ್ ರನ್ನು ಪೆವಿಲಿಯನ್ ಗೆ ಅಟ್ಟಿದ್ದರು.
ಬಳಿಕ ಬಂದ ಡಸ್ಸೆನ್ ಆಫ್ರಿಕಾ ಇನ್ನಿಂಗ್ಸ್ ಗೆ ಜೀವ ತುಂಬುವ ಭರವಸೆಯ ಆಟವಾಡಿದರಾದರೂ 22 ರನ್ ಗಳಿಸಿದ್ದ ವೇಳೆ ಚಹಲ್ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಡಸ್ಸೆನ್ ಜೊತೆಗೂಡಿದ್ದ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ 38 ರನ್ ಗಳಿಸಿ ಆಫ್ರಿಕಾಗೆ ಬೆನ್ನೆಲುಬಾಗಿ ನಿಲ್ಲುವ ವಿಶ್ವಾಸ ಮೂಡಿಸಿದ್ದರು. ಆದರೆ ಚಹಲ್ ಎಸೆದ 20ನೇ ಓವರ್ ನ ಅಂತಿಮ ಎಸೆತದಲ್ಲಿ ಡುಪ್ಲೆಸಿಸ್ ಕೂಡ ಕ್ಲೀನ್ ಬೋಲ್ಡ್ ಆದರು.
ಈ ವೇಳೆ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿದ್ದ ರೋಹಿತ್ ಶರ್ಮಾ ವಿಚಿತ್ರ ಶೈಲಿಯಲ್ಲಿ ಡ್ಯಾನ್ಸ್ ಮಾಡಿ ವಿಕೆಟ್ ಪಡೆದ ಸಂಭ್ರಮಾಚರಣೆ ಮಾಡಿದರು. ರೋಹಿತ್ ಶರ್ಮಾ ಅವರ ಈ ವಿಶೇಷ ಡ್ಯಾನ್ಸ್ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ವಿವಿಧ ಮೀಮ್ ಗಳ ತಯಾರಿಕೆಗೆ ಸ್ಪೂರ್ತಿಯಾಗುತ್ತಿದೆ. ಅಲ್ಲದೆ ಭಾರತೀಯ ಕ್ರಿಕೆಟ್ ಪ್ರೇಮಿಗಳೂ ಕೂಡ ಇದೇ ಡ್ಯಾನ್ಸ್ ಮೂಲಕ ಮೂರನೇ ಪಂದ್ಯವನ್ನೂ ಸೋತ ಆಫ್ರಿಕಾ ಆಟಗಾರರ ಕಾಲೆಳೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com