ಐಸಿಸಿ ಎಚ್ಚರಿಕೆಯನ್ನೂ ಮರೆತ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗೆ ಪೆವಿಲಿಯನ್ ದಾರಿ ತೋರಿದ ಧೋನಿ!

ಐಸಿಸಿ ಎಚ್ಚರಿಕೆಯನ್ನೂ ಮರೆತ ದಕ್ಷಿಣ ಆಪ್ರಿಕಾ ಬ್ಯಾಟ್ಸ್ ಮನ್ ಗೆ ಎಂಎಸ್ ಧೋನಿ ಪೆವಿಲಿಯನ್ ದಾರಿ ತೋರಿಸುವ ಮೂಲಕ ಮತ್ತೆ ತಮ್ಮ ಕೈಚಳಕ ಪ್ರದರ್ಶನ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಐಸಿಸಿ ಎಚ್ಚರಿಕೆಯನ್ನೂ ಮರೆತ ದಕ್ಷಿಣ ಆಪ್ರಿಕಾ ಬ್ಯಾಟ್ಸ್ ಮನ್ ಗೆ ಎಂಎಸ್ ಧೋನಿ ಪೆವಿಲಿಯನ್ ದಾರಿ ತೋರಿಸುವ ಮೂಲಕ ಮತ್ತೆ ತಮ್ಮ ಕೈಚಳಕ ಪ್ರದರ್ಶನ ಮಾಡಿದ್ದಾರೆ.
ವಿಶ್ವ ಕ್ರಿಕೆಟ್ ನಲ್ಲಿ ಅತ್ಯಂತ ಯಶಸ್ವೀ ವಿಕೆಟ್ ಕೀಪರ್ ಗಳ ಸಾಲಿನಲ್ಲಿ ಭಾರತದ ಮಹೇಂದ್ರ ಸಿಂಗ್ ಧೋನಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ. ಕಾರಣ ವಿಕೆಟ್ ಹಿಂದೆ ಧೋನಿ ಎಷ್ಟು ಚಾಕಚಕ್ಯತೆಯಿಂದ ಕಾರ್ಯ ನಿರ್ವಹಿಸುತ್ತಾರೆ ಎಂದರೆ ಬ್ಯಾಟ್ಸ್ ಮನ್ ಗಳು ಮಾಡುವ ಸಣ್ಣ ತಪ್ಪಿಗೂ ಧೋನಿ ಅವರನ್ನು ಬಲಿ ಪಡೆಯುತ್ತಾರೆ. ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಸ್ಟಂಪಿಂಗ್  ದಾಖಲೆ ಇರುವುದು ಇದೇ ಧೋನಿ ಹೆಸರಲ್ಲಿ ಎಂಬುದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಕೂಡ ಈ ಹಿಂದೆ ಧೋನಿ ವಿಕೆಟ್ ಕೀಪಿಂಗ್ ಸಾಮರ್ಥ್ಯಕ್ಕೆ ಮಾರುಹೋಗಿ ಬ್ಯಾಟ್ಸ್ ಮನ್ ಗಳಿಗೆ ಸಲಹೆಕೂಡ ನೀಡಿತ್ತು. ಅದೇನೆಂದರೆ ವಿಕೆಟ್ ಹಿಂದೆ ಧೋನಿ ಇರುವಾಗ ಕ್ರೀಸ್ ಬಿಟ್ಟು ಮುಂದೆ ಹೋಗಿ ಆಡುವ ದುಸ್ಸಾಹಸ ಬೇಡ ಎಂದು ಐಸಿಸಿ ಟ್ವೀಟ್ ಮಾಡಿತ್ತು. ಈ ಟ್ವೀಟ್ ವ್ಯಾಪಕ ವೈರಲ್ ಕೂಡ ಆಗಿತ್ತು. ಆದರೆ ಐಸಿಸಿ ಈ ಹಳೇ ಟ್ವೀಟ್ ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಇದಕ್ಕೆ ಕಾರಣ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಪೆಹ್ಲುಕ್ವಾಯೋ.
ನಿನ್ನೆ ಸೌಥ್ಯಾಂಪ್ಟನ್ ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಪೆಹ್ಲುಕ್ವಾಯೋ ರನ್ನು ಅದ್ಭುತ ರೀತಿಯಲ್ಲಿ ಸ್ಟಂಪೌಟ್ ಮಾಡಿದ್ದರು. ಯಜುವೇಂದ್ರ ಚಹಲ್ ಎಸೆದ ಪಂದ್ಯದ 40ನೇ ಓವರ್ ನ 3ನೇ ಎಸೆತದಲ್ಲಿ ಪೆಹ್ಲುಕ್ವಾಯೋ ಕ್ರೀಸ್ ಬಿಟ್ಟು ಮುಂದೆ ಬಂದು ದೊಡ್ಡ ಹೊಡೆತ ಭಾರಿಸುವ ಪ್ರಯತ್ನ ಮಾಡಿದರು. ಆದರೆ ಬಾಲ್ ಅವರ ಬ್ಯಾಟ್ ಅನ್ನು ವಂಚಿಸಿ ವಿಕೆಟ್ ಹಿಂದೆ ಇದ್ದ ಧೋನಿ ಕೈ ಸೇರಿತ್ತು. ಒಂದು ಸೆಕೆಂಡ್ ಕೂಡ ತಡ ಮಾಡದ ಧೋನಿ ಕ್ಷಣ ಮಾತ್ರದಲ್ಲಿ ಬೇಲ್ಸ್ ಎಗರಿಸಿದ್ದರು. 
ಕ್ರೀಸ್ ಬಿಟ್ಟು ಮುಂದೆ ಹೋಗಿದ್ದ ಪೆಹ್ಲುಕ್ವಾಯೋ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿಯೇ ವಿಕೆಟ್ ಕಳೆದುಕೊಂಡು ಪೇಚುಮುಖ ಹಾಕಿಕೊಂಡು ಪೆವಿಲಿಯನ್ ದಾರಿ ಹಿಡಿಯಬೇಕಾಯಿತು. ಇದು ಧೋನಿ ವೃತ್ತಿ ಜೀವನದ 121ನೇ ಸ್ಟಂಪಿಂಗ್ ಆಗಿದೆ. 
ಇನ್ನು ವಿಶ್ವಕ್ರಿಕೆಟ್ ನಲ್ಲಿ ಅತೀಹೆಚ್ಚು ಸ್ಟಂಪಿಂಗ್ ಮಾಡಿರುವ ವಿಕೆಟ್ ಕೀಪರ್ ಗಳ ಪಟ್ಟಿಯಲ್ಲಿ ಧೋನಿ ಅಗ್ರ ಸ್ಥಾನದಲ್ಲಿದ್ದು, ಧೋನಿ ಒಟ್ಟು 342 ಪಂದ್ಯಗಳ ಮೂಲಕ 121 ಸ್ಚಂಪಿಂಗ್ ಮಾಡಿದ್ದಾರೆ. 99 ಸ್ಟಂಪಿಂಗ್ ಮಾಡಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ 2ನೇ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com