ಮಿಚೆಲ್ ಸ್ಟಾರ್ಕ್ ಮಾರಕ ದಾಳಿಗೆ ತತ್ತರಿಸಿದ ವಿಂಡೀಸ್, ಆಸ್ಟ್ರೇಲಿಯಾಗೆ 15 ರನ್ ಗಳ ರೋಚಕ ಗೆಲುವು

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ ತಂಡ 15 ರನ್ ಗಳ ರೋಚಕ ಜಯ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನಾಟಿಂಗ್ ಹ್ಯಾಮ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ ತಂಡ 15 ರನ್ ಗಳ ರೋಚಕ ಜಯ ಕಂಡಿದೆ.
ಟ್ರೆಂಟ್ ಬ್ರಿಡ್ಜ್ ನ ನಾಟಿಂಗ್ ಹ್ಯಾಮ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ವಿಂಡೀಸ್ ಬೌಲರ್ ಗಳು ಆಸಿಸ್ ಗೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾದರು. ಕೇವಲ 26 ರನ್ ಗಳಿಗೆ ಆಸ್ಟ್ರೇಲಿಯಾದ ಆರಂಭಿಕರಾದ ಡೇವಿಡ್ ವಾರ್ನರ್ (3 ರನ್) ಮತ್ತು ಆ್ಯರೋನ್ ಫಿಂಚ್ (6 ರನ್) ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು.
ಬಳಿಕ ಬಂದ ಉಸ್ಮಾನ್ ಖವಾಜ ಕೂಜ 13 ರನ್ ಗಳಿಸಿ ನಿರ್ಗಮಿಸಿದರೆ, ಮಾಜಿ ನಾಯಕ ಸ್ಟೀವನ್ ಸ್ಮಿತ್ ಮಾತ್ರ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತು ಆಸಿಸ್ ಬ್ಯಾಟಿಂಗ್ ಜೀವ ತುಂಬಿದರು. ಸ್ನಿತ್ ಗೆ ಅಲೆಕ್ಸ್ ಕರೆ (45 ರನ್) ಉತ್ತಮ ಸಾಥ್ ನೀಡಿದರು. ಬಳಿಕ ಆಲ್ ರೌಂಡರ್ ನಾಥನ್ ಕಾಲ್ಟರ್ ನೈಲ್ 92ರನ್ ಗಳಿಸಿ ಆಸಿಸ್ ರನ್ ಗಳಿಕೆಯನ್ನು 250ರನ್ ಗಳ ಗಡಿ ದಾಟಿಸಿದರು. ಅಂತಿಮವಾಗಿ ಆಸಿಸ್ ತಂಡ 49 ಓವರ್ ಗಳಲ್ಲಿ 288 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.
ವಿಂಡೀಸ್ ಪರ ಕಾರ್ಲೋಸ್ ಬ್ರಾಥ್ ವೇಟ್ 3 ವಿಕೆಟ್ ಪಡೆದರೆ, ಥಾಮಸ್, ಕಾಟ್ರೆಲ್ ಮತ್ತು ಆ್ಯಂಡ್ರೆ ರಸೆಲ್ ತಲಾ 2 ವಿಕೆಟ್ ಪಡೆದರು. ನಾಯಕ ಜೇಸನ್ ಹೋಲ್ಟರ್ ಕೂಡ 1 ವಿಕೆಟ್ ಪಡೆದರು.
ಆಸ್ಟ್ರೇಲಿಯಾ ನೀಡಿದ 289 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ವೆಸ್ಟ್ ಇಂಡೀಸ್ ತಂಡ ಆಸಿಸ್ ವೇಗಿ ಮಿಚೆಲ್ ಸ್ಚಾರ್ಕ್ ದಾಳಿಗೆ ತತ್ತರಿಸಿ ಹೋಯಿತು. ಆರಂಭದಲ್ಲೇ ಇವನ್ ಲೂಯಿಸ್ ವಿಕೆಟೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವಿಂಡೀಸ್ ಗೆ ಶಾಯ್ ಹೋಪ್ (68 ರನ್) ಮತ್ತು ಪೂರನ್ (40 ರನ್) ಉತ್ತಮ ಜೊತೆಯಾಟ ಆಡಿ ವಿಂಡೀಸ್ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಲು ನೆರವಾದರು. ಬಳಿಕ ನಾಯಕ ಜೇಸನ್ ಹೋಲ್ಟರ್ ಕೂಡ 51 ರನ್ ಗಳಿಸಿ ವಿಂಡೀಸ್ ಬ್ಯಾಟಿಂಗ್ ಗೆ ಜೀವ ತುಂಬಿದರಾದರೂ ಆ ಬಳಿಕ ಬಂದ ಬ್ಯಾಟ್ಸಮನ್ ಗಳು ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲಲ್ಲಿಲ್ಲ. ಪರಿಣಾಮ ವಿಂಡೀಸ್ ತಂಡ 50 ಓವರ್ ಗಳಲ್ಲಿ 273 ರನ್ ಗಳನ್ನಷ್ಟೇ ಗಳಿಸ ಶಕ್ತವಾಯಿತು. ಆ ಮೂಲಕ 15 ರನ್ ಗಳ ಅಂತರದಲ್ಲಿ ಆಸ್ಟ್ರೇಲಿಯಾಗೆ ಶರಣಾಯಿತು. 
ಆಸಿಸ್ ಪರ ಮಿಚೆಲ್ ಸ್ಟಾರ್ಕ್ 5 ವಿಕೆಟ್ ಕಬಳಿಸಿದರೆ, ಪ್ಯಾಟ್ ಕಮಿನ್ಸ್ 2 ಮತ್ತು ಆ್ಯಡಂ ಜಂಪಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com