ಖಂಡಿತಾ ಶಿಖರ್ ಧವನ್ ಅನುಪಸ್ಥಿತಿ ಭಾರತವನ್ನು ಕಾಡಲಿದೆ: ರಾಸ್ ಟೇಲರ್

ಗಾಯಾಳು ಶಿಖರ್ ಧವನ್ ಅವರ ಅನುಪಸ್ಥಿತಿ ಖಂಡಿತಾ ಟೀಂ ಇಂಡಿಯಾವನ್ನು ಕಾಡಲಿದೆ ಎಂದು ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸಮನ್ ರಾಸ್ ಟೇಲರ್ ಹೇಳಿದ್ದಾರೆ.

Published: 13th June 2019 12:00 PM  |   Last Updated: 13th June 2019 01:15 AM   |  A+A-


India vs New Zealand: India Will Miss Injured Shikhar Dhawan, Says Ross Taylor

ಸಂಗ್ರಹ ಚಿತ್ರ

Posted By : SVN SVN
Source : Online Desk
ಲಂಡನ್: ಗಾಯಾಳು ಶಿಖರ್ ಧವನ್ ಅವರ ಅನುಪಸ್ಥಿತಿ ಖಂಡಿತಾ ಟೀಂ ಇಂಡಿಯಾವನ್ನು ಕಾಡಲಿದೆ ಎಂದು ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸಮನ್ ರಾಸ್ ಟೇಲರ್ ಹೇಳಿದ್ದಾರೆ.

ಇಂದು ಟ್ರೆಂಟ್ ಬ್ರಿಡ್ಜ್ ನ ನಾಟಿಂಗ್ ಹ್ಯಾಮ್ ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್ ಮನ್ ರಾಸ್ ಟೇಲರ್, ನಾನು ಧವನ್ ಬ್ಯಾಟಿಂಗ್ ನೋಡಿದ್ದೇನೆ. ಆದರೆ ಇಂದಿನ ಪಂದ್ಯದಲ್ಲಿ ಧವನ್ ಅಲಭ್ಯರಾಗಲಿದ್ದಾರೆ. ಖಂಡಿತಾ ಭಾರತ ತಂಡಕ್ಕೆ ಅವರ ಅನುಪಸ್ಥಿತಿ ಕಾಡಸಲಿದೆ. ಆದರೂ ನಾವು ಭಾರತ ತಂಡವನ್ನು ಕಡೆಗಣಿಸುವಂತಿಲ್ಲ. ಭಾರತ ತಂಡ ಪ್ರಬಲ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ. ಅಲ್ಲದೆ ಟ್ರೆಂಟ್ ಬ್ರಿಡ್ಜ್ ನ ನಾಟಿಂಗ್ ಹ್ಯಾಮ್ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆ ಹೊಂದಿದೆ ಎಂದು ಹೇಳಿದ್ದಾರೆ.

ಅಂತೆಯೇ ತಂಡದ ಕುರಿತು ಮಾತನಾಡಿದ ಟೇಲರ್, ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ, ಉತ್ತಮ ಲಯದಲ್ಲಿದ್ದಾರೆ. ಆದರೆ ರೋಹಿತ್ ಗೆ ಧವನ್ ಸಾಥ್ ನೀಡುತ್ತಿಲ್ಲ. ಇವರಿಬ್ಬರ ಎಡಗೈ ಮತ್ತು ಬಲಗೈ ಬ್ಯಾಟಿಂಗ್ ನಿಂದ ಉತ್ತಮ ಪ್ರದರ್ಶನ ಹೊರಬಂದಿತ್ತು. ಇಂತಹ ಜೋಡಿ ಖಂಡಿತಾ ಯಾವುದೇ ತಂಡದ ಬೌಲರ್ ಗಳ ಮೇಲೆ ಒತ್ತಡ ಹೇರಬಲ್ಲರು. ನಾವೂ ಇದೇ ಮಾದರಿಯ ಬ್ಯಾಟಿಂಗ್ ನಿಂದ ಸಫಲತೆ ಕಂಡಿದ್ದೆವು. ಆದರೆ ಇಂದು ಇದರ ಲಾಭ ಭಾರತ ತಂಡಕ್ಕೆ ಸಿಗುತ್ತಿಲ್ಲ. 

ಇತ್ತೀಚಿನ ದಿನಗಳಲ್ಲಿ ನಾವು ಭಾರತ ತಂಡದೊಂದಿಗೆ ಸಾಕಷ್ಟು ಪಂದ್ಯಗಳನ್ನಾಡಿದ್ದೇವೆ. ಹಾಲಿ ಭಾರತ ತಂಡದ ಬಹುತೇಕ ಎಲ್ಲ ಆಟಗಾರರನ್ನೂ ನಾವು ಎದುರಿಸಿದ್ದೇವೆ.  ಈ ಅನುಭವ ಇಂದು ನಮ್ಮ ನೆರವಿಗೆ ಬರುವ ವಿಶ್ವಾಸವಿದೆ. ಭಾರತ ತಂಡ ಪ್ರಬಲ ಸ್ಪಿನ್ ವಿಭಾಗವನ್ನು ಹೊಂದಿದೆ, ಕುಲದೀಪ್ ಯಾದವ್ ಕಳೆದ ಬಾರಿಯ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಂತೆಯೇ ಯಜುವೇಂದ್ರ ಚಹಲ್ ಕೂಡ ಉತ್ತಮ ಲಯದಲ್ಲಿದ್ದಾರೆ.  ಬಾಂಗ್ಲಾದೇಶದ ವಿರುದ್ಧದ ಸಕ್ಸಸ್ ನಮಗೆ ಇಂದು ನೆರವಾಗಲಿದೆ ಎಂದು ಟೇಲರ್ ಹೇಳಿದ್ದಾರೆ.

ನ್ಯೂಜಿಲೆಂಡ್ ತಂಡ ತಾನಾಡಿರುವ ಮೂರು ಪಂದ್ಯಗಳನ್ನೂ ಗೆದ್ದು ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದು, 2 ಪಂದ್ಯಗಳನ್ನು ಗೆದ್ದಿರುವ ಭಾರತ ಕೂಡ ಅಜೇಯ ತಂಡವಾಗಿ ಉಳಿದಿದೆ. ಇನ್ನು  ಈ ಹಿಂದೆ ಕಿವೀಸ್ ಪ್ರವಾಸ ಕೈಗೊಂಡಿದ್ದ ಭಾರತ ತಂಡ ಅಲ್ಲಿ 4-1 ಅಂತರದಲ್ಲಿ ಏಕದಿನ ಸರಣಿ ಗೆದ್ದಿತ್ತು. ಹೀಗಾಗಿ ಇಂದಿನ ಪಂದ್ಯ ನ್ಯೂಜಿಲೆಂಡ್ ಪಾಲಿಗೆ ಸೇಡಿನ ಪಂದ್ಯವಾಗಿರಲಿದ್ದು, ಇಂದಿನ ಪಂದ್ಯ ಗೆದ್ದು, ಏಕದಿನ ಸರಣಿ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಇಂದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದ್ದು, ಮಳೆ ಬಾರದೇ ಹೋದರೆ ಅಭಿಮಾನಿಗಳಿಗೆ ಕ್ರಿಕೆಟ್ ರಸದೌತಣ ನೀಡುವುದರಲ್ಲಿ ಎರಡು ಮಾತಿಲ್ಲ. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp