ವಿಶ್ವಕಪ್ ಕ್ರಿಕೆಟ್ : ಮ್ಯಾಂಚೆಸ್ಟರ್ ನಲ್ಲಿ ವಿಜಯ್ ಶಂಕರ್ ಪಾಕಿಸ್ತಾನ ವಿರುದ್ಧ ಆಡುವ ಸಾಧ್ಯತೆ

ಇಂದು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ- ಪಾಕಿಸ್ತಾನ ಹೈ ವೊಲ್ಟೇಜ್ ಪಂದ್ಯದಲ್ಲಿ ರಿಷಬ್ ಪಂತ್ ಆಡುವುದು ಅನುಮಾನ, ತಮಿಳುನಾಡಿನ ಆಲ್ ರೌಂಡರ್ ವಿಜಯ್ ಶಂಕರ್ ಮೈದಾನಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.
ವಿಜಯ್ ಶಂಕರ್
ವಿಜಯ್ ಶಂಕರ್
ಮ್ಯಾಂಚೆಸ್ಟರ್ : ಇಂದು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ- ಪಾಕಿಸ್ತಾನ ಹೈ ವೊಲ್ಟೇಜ್  ಪಂದ್ಯಕ್ಕೆ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವಂತೆ  ಶಿಖರ್ ಧವನ್ ಗಾಯಗೊಂಡಿದ್ದರಿಂದ ಲಂಡನ್ ಗೆ ಟಿಕೆಟ್ ಪಡೆದಿದ್ದ ರಿಷಭ್ ಪಂತ್ ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. 
 ತಮಿಳುನಾಡಿನ ಆಲ್ ರೌಂಡರ್  ವಿಜಯ್ ಶಂಕರ್  ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ನಿಚ್ಚಳವಾಗಿದೆ. ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್  ಆರಂಭಿಕರಾಗಿ ಕಣಕ್ಕಿಳಿದರೆ, ವಿಜಯ್ ಶಂಕರ್  ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. 
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಾಹುಲ್ ನಂತರ ನಾಲ್ಕನೇ ಬ್ಯಾಟ್ಸ್ ಮನ್ ಆಗಿ ವಿಜಯ್ ಶಂಕರ್ ನೆಟ್ ನಲ್ಲಿ ತಾಲೀಮು ನಡೆಸಿದ್ದಾರೆ. ತರಬೇತಿದಾರ ರವಿಶಾಸ್ತ್ರೀ ಅಂಪೈರ್  ಸ್ಥಾನದಲ್ಲಿ ನಿಂತು ವೀಕ್ಷಿಸಿದ್ದು, ವಿಜಯ್ ಶಂಕರ್ ಚೆನ್ನಾಗಿ ಕನೆಕ್ಟ್ ಮಾಡಿದ್ದಾರೆ.  ದಿನೇಶ್ ಕಾರ್ತಿಕ್ ಕೂಡಾ ಬ್ಯಾಟಿಂಗ್ ಮಾಡಿದರಾದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಈ ಮಧ್ಯೆ ಬೌಲಿಂಗ್ ತರಬೇತುದಾರ ಭರತ್ ಅರುಣ್ ಅವರೊಂದಿಗೆ ಬೌಲರ್ ಗಳಾದ ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ನೆಟ್ ಪ್ರಾಕ್ಟಿಸ್ ಮಾಡಿದ್ದರು.  ಕುಲದೀಪ್ ಯಾದವ್  ರವೀಂದ್ರ ಜಡೇಜಾಗೆ ಬೌಲಿಂಗ್ ಮಾಡುತ್ತಿದ್ದರು. 
ಪರಿಸ್ಥಿತಿಗೆ ಅನುಗುಣವಾಗಿ ಯಾವ ರೀತಿ ಬೌಲಿಂಗ್ ಮಾಡಬೇಕೆಂದು ನಿರ್ಧರಿಸಲಾಗುತ್ತದೆ. ಈ ಪಂದ್ಯದಲ್ಲಿ ಹೇಗೆ ಆಡಬಹುದು ಎಂಬುದು ಹವಾಮಾನ ನಿರ್ಧರಿಸುತ್ತದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇಂದು ಬೆಳಗ್ಗೆ ಸೂರ್ಯ ಕಾಣಿಸಿಕೊಂಡಿದ್ದಾನೆ. ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರು ಭರ್ಜರಿ ತಾಲೀಮು ನಡೆಸಿದ್ದಾರೆ. ಆದಾಗ್ಯೂ, ಎಲ್ಲರ ಕಣ್ಣು ಆಕಾಶದತ್ತ ನೆಟ್ಟಿದೆ. ಮಳೆ ಬಾರದೆ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಗೆಲ್ಲಲಿ ಎಂಬುದೇ ಕೋಟ್ಯಂತರ ಭಾರತೀಯ ಅಭಿಮಾನಿಗಳ ಆಶಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com