'ಇದು ನನ್ನ ಅನಿರೀಕ್ಷಿತ ಬ್ಯಾಟಿಂಗ್‌': ಸಿಕ್ಸರ್ ಗಳ ಮೂಲಕವೇ ದಾಖಲೆ ಬರೆದ ಇಂಗ್ಲೆಂಡ್ ನಾಯಕ ಮಾರ್ಗನ್!

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿ ದಿನಕ್ಕೊಂದು ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದು, ಈ ಪಟ್ಟಿಗೆ ಇದೀಗ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಕೂಡ ಸೇರ್ಪಡೆಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿ ದಿನಕ್ಕೊಂದು ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದು, ಈ ಪಟ್ಟಿಗೆ ಇದೀಗ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಕೂಡ ಸೇರ್ಪಡೆಯಾಗಿದ್ದಾರೆ.
ನಿನ್ನೆ ಆಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಮಾರ್ಗನ್ ಕೇವಲ 71 ಎಸೆತಗಳಲ್ಲಿ 148 ರನ್ ಗಳನ್ನು ಚಚ್ಚಿದರು. ಆಫ್ಘಾನಿಸ್ತಾನ ಬೌಲರ್ ಗಳನ್ನು ಬಿಟ್ಟೂ ಬಿಡದೆ ಕಾಡಿದ ಮಾರ್ಗನ್ 4 ಬೌಂಡರಿ ಮತ್ತು 17 ಸಿಕ್ಸರ್ ಗಳ ನೆರವಿನಿಂದ 148 ರನ್ ಗಳಿಸಿದರು. ಮಾರ್ಗನ್ ಅವರ ಈ ಅಮೋಘ ಇನ್ನಿಂಗ್ಸ್ ಇದೀಗ ದಾಖಲೆಯ ಪುಟ ಸೇರಿದ್ದು, ತಾವು ಸಿಡಿಸಿದ ಸಿಕ್ಸರ್ ಗಳ ಮೂಲಕ ಮಾರ್ಗನ್ ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್ ಮತ್ತು ಭಾರತ ರೋಹಿತ್ ಶರ್ಮಾ ಅವರ ದಾಖಲೆಗಳನ್ನು ಪುಡಿಗಟ್ಟಿದ್ದಾರೆ.
ಮಂಗಳವಾರ ನಡೆದ ಐಸಿಸಿ ವಿಶ್ವಕಪ್‌ ಅಫ್ಘಾನಿಸ್ತಾನ ವಿರುದ್ಧ ಇಯಾನ್‌ ಮಾರ್ಗನ್‌ ಅವರು 17 ಸಿಕ್ಸರ್‌ಗಳೊಂದಿಗೆ 148 ರನ್‌ ಸ್ಫೋಟಿಸಿದ್ದರು. ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ಇಂಗ್ಲೆಂಡ್‌ ನಾಯಕ ಪಾತ್ರರಾಗಿದ್ದರು. ವಿಶ್ವಕಪ್‌ ಇತಿಹಾಸದಲ್ಲಿ ಅತಿ ವೇಗವಾಗಿ ಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್‌ಮನ್‌ ಎಂಬ ಗೌರವಕ್ಕೂ ಮಂಗಳವಾರ ಮಾರ್ಗನ್‌ ಭಾಜನರಾಗಿದ್ದರು. 
ಅಂತೆಯೇ ಏಕದಿನ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಗಳನ್ನು ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್ ಮತ್ತು ರೋಹಿತ್ ಶರ್ಮಾ 16 ಸಿಕ್ಸರ್ ಗಳನ್ನು ಸಿಡಿಸಿ ಜಂಟಿ ಅಗ್ರಸ್ಥಾನಿಗಳಾಗಿದ್ದ ಈ ಮೂವರನ್ನೂ 17 ಸಿಕ್ಸರ್ ಗಳ ಮೂಲಕ ಇಯಾನ್ ಮಾರ್ಗನ್ ಹಿಂದಿಕ್ಕಿದ್ದಾರೆ. ಆ ಮೂಲಕ ಮಾರ್ಗನ್ ಏಕದಿನ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ ಮನ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಇನ್ನು ಆಫ್ಘನ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ರನ್ ಗಳ ಪ್ರವಾಹವನ್ನೇ ಹರಿಸಿದ್ದು, ನಿಗದಿತ 50 ಓವರ್ ಗಳಲ್ಲಿ ಕೇವಲ ಆರು ವಿಕೆಟ್ ಕಳೆದು ಕೊಂಡು ಬರೊಬ್ಬರಿ 397ರನ್ ಪೇರಿಸಿತು. ಇಂಗ್ಲೆಂಡ್ ಪಾಲಿಗೆ ಇದು ಆ ತಂಡದ ವಿಶ್ವಕಪ್ ಟೂರ್ನಿಯ ಗರಿಷ್ಠ ರನ್ ಗಳಿಕೆಯಾಗಿದೆ. ಇನ್ನು ಈ ಪಂದ್ಯದಲ್ಲಿ ಒಟ್ಟು 33 ಸಿಕ್ಸರ್ ಗಳು ಸಿಡಿದಿದ್ದು, ಈ ಪೈಕಿ ಇಂಗ್ಲೆಂಡ್ ತಂಡದಿಂದಲೇ 25 ಸಿಕ್ಸರ್ ಗಳು ಬಂದಿವೆ. ಆಫ್ಘಾನಿಸ್ತಾನ ತಂಡದಿಂದ 8 ಸಿಕ್ಸರ್ ಗಳು ಸಿಡಿದಿವೆ.
ಈ ತರಹದ ಬ್ಯಾಟಿಂಗ್‌ ನಿರೀಕ್ಷೆ ಮಾಡಿರಲಿಲ್ಲ: ಮಾರ್ಗನ್‌
ಇನ್ನು ಪಂದ್ಯ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾರ್ಗನ್, ಅಫ್ಘಾನಿಸ್ತಾನ ವಿರುದ್ಧ ದಾಖಲೆಯ ಶತಕ ಸಿಡಿಸುವ ಬಗ್ಗೆ ಎಂದೂ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.  ಎಂದು ಇಂಗ್ಲೆಂಡ್‌ ತಂಡದ ನಾಯಕ ಇಯಾನ್‌ ಮಾರ್ಗನ್‌ ತಿಳಿಸಿದ್ದಾರೆ.  'ಮಂಗಳವಾರ ನಮ್ಮ ಪಾಲಿಗೆ ಅದ್ಭುತ ದಿನ. ಬ್ಯಾಟಿಂಗ್‌ ಮಾಡಲು ವಿಕೆಟ್‌ ತುಂಬಾ ಚೆನ್ನಾಗಿತ್ತು. ಆರಂಭಿಕರಾದ ಜಾನಿ ಬೈರ್‌ಸ್ಟೋ ಹಾಗೂ  ಜೋ ರೂಟ್‌ ಅತ್ಯುತ್ತಮ ಆರಂಭ ನೀಡಿದ್ದರು. ಇದೇ ಲಯವನ್ನು ನಾವು ಮುಂದುವರಿಸಿದೆವು. ಈ ರೀತಿ ನಾನು ಬ್ಯಾಟಿಂಗ್‌ ಮಾಡುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಬೆನ್ನು ನೋವು ಇದ್ದರೂ ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಮಂಗಳವಾರ ನನ್ನ ದಿನವಾಗಿತ್ತು. ಹಾಗಾಗಿ, ಅದ್ಭುತ ಬ್ಯಾಟಿಂಗ್‌ ಮಾಡಿದೆ. ದಾಖಲೆಯ ಇನಿಂಗ್ಸ್‌ ಆಡುತ್ತೇನೆಂದು ಭಾವಿಸಿರಲಿಲ್ಲ' ಎಂದು ಮಾರ್ಗನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com