ಸಚಿನ್ ಆಯ್ತು, ಈಗ ವಿಂಡೀಸ್ ಲೆಜೆಂಡ್ ಲಾರಾ ದಾಖಲೆಗೂ ಕೊಹ್ಲಿಯಿಂದ ಬಂತು ಕುತ್ತು!

ಕ್ರಿಕೆಟ್ ಜಗತ್ತಿನ ಲೆಜೆಂಡ್ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ದಾಖಲೆಗಳಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಂದ ಮತ್ತೆ ಕುತ್ತು ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಕ್ರಿಕೆಟ್ ಜಗತ್ತಿನ ಲೆಜೆಂಡ್ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ದಾಖಲೆಗಳಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಂದ ಮತ್ತೆ ಕುತ್ತು ಬಂದಿದೆ.
ಈ ಹಿಂದೆ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತದ ಲೆಜೆಂಡ್ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ಧೂಳಿಪಟ ಮಾಡಿರುವ ವಿರಾಟ್ ಕೊಹ್ಲಿ, ಇದೀಗ ಅವರ ಮತ್ತೊಂದು ಐತಿಹಾಸಿಕ ದಾಖಲೆಯನ್ನು ಹಿಂದಿಕ್ಕಿಲು ತುದಿಗಾಲಲ್ಲಿ ನಿಂತಿದ್ದಾರೆ. 
ಒಂದು ವೇಳೆ ಕೊಹ್ಲಿ ಈ ದಾಖಲೆಯನ್ನು ಮುರಿದಿದ್ದೇ ಆದರೆ ಕೇವಲ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮಾತ್ರವಲ್ಲ, ವೆಸ್ಟ್ ಇಂಡೀಸ್ ಲೆಜೆಂಡ್ ಆಟಗಾರ ಬ್ರಿಯಾನ್ ಲಾರಾ ಅವರ ದಾಖಲೆಯನ್ನೂ ಕೊಹ್ಲಿ ಧೂಳಿಪಟ ಮಾಡಲಿದ್ದಾರೆ.
ಇಷ್ಟಕ್ಕೂ ಯಾವುದೀ ದಾಖಲೆ ಎಂಬ ಪ್ರಶ್ನೆಗೆ ಉತ್ತರ.. ಅದುವೇ ಕ್ರಿಕೆಟ್ ಜಗತ್ತಿನ ವೇಗದ 20 ಸಾವಿರ ರನ್ ಗಳ ದಾಖಲೆ.. ಹೌದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್ನು ಕೇವಲ 104 ರನ್ ಗಳಿಸಿದರೆ, ಈ ಐತಿಹಾಸಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ ಒಟ್ಟು 415 ಇನ್ನಿಂಗ್ಸ್ ಗಳಲ್ಲಿ (131 ಟೆಸ್ಟ್, 222 ಏಕದಿನ ಮತ್ತು 62 ಟಿ20 ಇನ್ನಿಂಗ್ಸ್ ಗಳು) 19,896 ರನ್ ಗಳನ್ನು ಕಲೆಹಾಕಿದ್ದು, 20 ಸಾವಿರ ರನ್ ಗೊಂಚಲಿಗೆ ಇನ್ನು ಕೇವಲ 104 ರನ್ ಗಳ ಅವಶ್ಯಕತೆ ಇದೆ.
ಹೀಗಾಗಿ ಹಾಲಿ ವಿಶ್ವಕಪ್ ಟೂರ್ನಿಯಲ್ಲೇ ಕೊಹ್ಲಿ ಈ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಒಟ್ಟು ನಾಲ್ಕು ಪಂದ್ಯಗಳನ್ನಾಡಿದ್ದು, ಕೊಹ್ಲಿಯಿಂದ ಇನ್ನೂ ಒಂದು ಶತಕೂ ಸಿಡಿದಿಲ್ಲ. ಟೂರ್ನಿಯ ಆರಂಭಿಕ ಪಂದ್ಯ ಅಂದರೆ ಇಂಗ್ಲೆಂಡ್ ವಿರುದ್ಧ ಕೊಹ್ಲಿ 18 ರನ್ ಗಳಿಸಿದ್ದರು. ಆ ಬಳಿಕ ಪ್ರಬಲ ಆಸಿಸ್ ವಿರುದ್ಧ 82 ರನ್ ಗಳಿಸಿದ್ದರೆ, ಪಾಕಿಸ್ತಾನದ ವಿರುದ್ಧ 77 ರನ್ ಗಳಿಸಿದ್ದರು. ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ನಾಳೆ ಸೌಥ್ಯಾಂಪ್ಟನ್ ನಲ್ಲಿ ಭಾರತ ತಂಡ ಕ್ರಿಕೆಟ್ ಶಿಶು ಆಫ್ಘಾನಿಸ್ತಾನವನ್ನು ಎದುರಿಸುತ್ತಿದ್ದು, ಇದೇ ಪಂದ್ಯದಲ್ಲಿ ಕೊಹ್ಲಿ ಸಿಡಿದು ನಿಂತು ಶತಕ ಸಿಡಿಸಿದರೆ ಕೊಹ್ಲಿ ವೇಗದ 20 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗುತ್ತಾರೆ. ಇನ್ನು ಈ ಪಟ್ಟಿಯಲ್ಲಿ ಸವ್ಯಾಸಾಚಿ ಸಚಿನ್ ಮತ್ತು ಬ್ರಿಯಾನ್ ಲಾರಾ ಜಂಟಿ ಅಗ್ರಸ್ಥಾನದಲ್ಲಿದ್ದು, ಉಭಯ ಆಟಗಾರರೂ 453 ಇನ್ನಿಂಗ್ಸ್ ಗಳಲ್ಲಿ 20 ಸಾವಿರ ರನ್ ಗಳಿಸಿದ್ದಾರೆ. 2ನೇ ಸ್ಥಾನಗಲ್ಲಿ ಆಸಿಸ್ ಮಾಜಿ ನಾಯಕ ರಿಕ್ಕಿ ಪಾಟಿಂಗ್ ಇದ್ದು, ಪಾಟಿಂಗ್ ಒಟ್ಟು 468 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಗೈದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com