ವಿಶ್ವಕಪ್ ಕ್ರಿಕೆಟ್: ವೆಸ್ಟ್ ಇಂಡೀಸ್ ಗೆಲ್ಲಲು 269 ರನ್ ಗಳ ಟಾರ್ಗೆಟ್ ನೀಡಿದ ಭಾರತ

ನಾಯಕ ವಿರಾಟ್ ಕೊಹ್ಲಿ (72 ರನ್) ಹಾಗೂ ಅನುಭವಿ ಮಹೇಂದ್ರ ಸಿಂಗ್ ಧೋನಿ (ಅಜೇಯ 56 ರನ್) ಇವರುಗಳ ಸಮಯೋಚಿತ ಆಟದ ನೆರವಿನಿಂದ ಭಾರತ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಗೆ 268 ರನ್ ಕಲೆ ಹಾಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮ್ಯಾಂಚೆಸ್ಟರ್ : ನಾಯಕ ವಿರಾಟ್ ಕೊಹ್ಲಿ (72 ರನ್) ಹಾಗೂ ಅನುಭವಿ ಮಹೇಂದ್ರ ಸಿಂಗ್ ಧೋನಿ (ಅಜೇಯ 56 ರನ್) ಇವರುಗಳ ಸಮಯೋಚಿತ ಆಟದ ನೆರವಿನಿಂದ ಭಾರತ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಗೆ 268 ರನ್ ಕಲೆ ಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಆರಂಭ ಕಳಪೆಯಾಗಿತ್ತು. ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ 18 ರನ್ ಗಳಿಗೆ ಆಟ ಮುಗಿಸಿದರು. ಮೊದಲ ವಿಕೆಟ್ ಗೆ ರಾಹುಲ್ ಹಾಗೂ ರೋಹಿತ್ 29 ರನ್ ಜೊತೆಯಾಟದ ಕಾಣಿಕೆ ನೀಡಿದರು. 
ಎರಡನೇ ವಿಕೆಟ್ ಗೆ ರಾಹುಲ್ (48) ಜೊತೆಗೂಡಿದ ವಿರಾಟ್ ಕೊಹ್ಲಿ ತಂಡವನ್ನು ಅಪಾಯದಿಂದ ಮೇಲೆತ್ತುವ ಕೆಲಸ ಮಾಡಿದರು.ಈ ಜೋಡಿ ರನ್ ಕಲೆ ಹಾಕುವಲ್ಲಿ ಕೊಂಚ ಹಿಂದೆ ಬಿದ್ದರೂ,ವಿಕೆಟ್ ಬೀಳದಂತೆ ತಡೆಯುವಲ್ಲಿ ಸಫಲವಾಯಿತು.ವಿಂಡೀಸ್ ತಂಡದ ಬಲಿಷ್ಠ ಬೌಲರ್ ಗಳ ಚಾಣಕ್ಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಜೋಡಿ, 88 ಎಸೆತಗಳಲ್ಲಿ 69 ರನ್ ಜೊತೆಯಾಟದ ಕಾಣಿಕೆ ನೀಡಿತು. 
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ವಿಜಯ್ ಶಂಕರ್, ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಹುಸಿಯಾಗಿಸಿದರು. 14 ರನ್ ಗಳಿಸಿದ್ದಾಗ ಕೇಮರ್ ರೋಚ್ ಅವರ ಎಸೆತವನ್ನು ತಪ್ಪಾಗಿ ಗುರುತಿಸಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿದರು. 
ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಿರುವ ವಿರಾಟ್ ಕೊಹ್ಲಿ ತಂಡಕ್ಕೆ ನೆರವಾದರು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನಾಯಕನ ಆಟವಾಡಿದ ವಿರಾಟ್ ತಂಡಕ್ಕೆ ಆಧಾರವಾದರು. 
ಆಸ್ಟ್ರೇಲಿಯಾ (82), ಪಾಕಿಸ್ತಾನ (77), ಅಫ್ಘಾನಿಸ್ತಾನ್ (67) ವಿರುದ್ಧ ಅರ್ಧಶತಕ ಬಾರಿಸಿದ್ದ ಕೊಹ್ಲಿ ಮತ್ತೊಮ್ಮೆ ಮನಮೋಹಕ ಇನ್ನಿಂಗ್ಸ್ ಕಟ್ಟಿದರು.ಅಪಾಯಕಾರಿ ಹೊಡೆತವನ್ನು ಪ್ರಯೋಗಿಸದ ಕೊಹ್ಲಿ, ತಂಡಕ್ಕೆ ಆಧಾರವಾದರು. 82 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 72 ರನ್ ಬಾರಿಸಿದ ವಿರಾಟ್, ಶಾರ್ಟ್ ಆಫ್ ಲೆಂತ್ ಎಸೆತದಲ್ಲಿ ಮಿಡ್ ವಿಕೆಟ್ ನಲ್ಲಿ ಕ್ಯಾಚ್ ನೀಡಿದರು. 
ಆರನೇ ವಿಕೆಟ್ ಗೆ ಮಹೇಂದ್ರ ಸಿಂಗ್ ಧೋನಿ ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಂಡದ ರನ್ ವೇಗವನ್ನು ಹೆಚ್ಚಿಸುವಲ್ಲಿ ನೆರವಾದರು. ಈ ಜೋಡಿ ಚೇತೋಹಾರಿ ಪ್ರದರ್ಶನ ನೀಡಿ ವಿಂಡೀಸ್ ತಂಡವನ್ನು ಕಾಡಿತು. ಹಾರ್ದಿಕ್ ತಮ್ಮ ನೈಜ ಆಟದ ಮೂಲಕ ರನ್ ಕಲೆ ಹಾಕಿ ಮಿಂಚಿದರು. 
ಈ ಜೋಡಿ 70 ರನ್ ಗಳಿಸಿ ಮುನ್ನುಗುತ್ತಿದ್ದಾಗ ಕಾಟ್ರೆಲ್ ಬ್ರೇಕ್ ಹಾಕಿದರು. ಹಾರ್ದಿಕ್ 46 ರನ್ ಗಳಿಗೆ ಔಟ್ ಆದರು. ಅನುಭವಿ ಮಹೇಂದ್ರ ಸಿಂಗ್ ಧೋನಿ ಸಮಯಕ್ಕೆ ತಕ್ಕ ಬ್ಯಾಟಿಂಗ್ ನಡೆಸಿದರು. 61 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಬಾರಿಸಿದ ಧೋನಿ 56 ರನ್ ಬಾರಿಸಿ ಅಜೇಯರಾಗುಳಿದರು. ವಿಂಡೀಸ್ ಪರ ಕೆಮರ್ ರೋಚ್ 3, ಕಾಟ್ರೆಲ್ 2, ಹೋಲ್ಡರ್ 2 ವಿಕೆಟ್ ಪಡೆದರು. 
ಸಂಕ್ಷಿಪ್ತ ಸ್ಕೋರ್ 
ಭಾರತ 50 ಓವರ್ ಗಳಲ್ಲಿ 7 ವಿಕೆಟ್ ಗೆ 268
(ವಿರಾಟ್ ಕೊಹ್ಲಿ 72, ಕೆ.ಎಲ್ ರಾಹುಲ್ 48, ಧೋನಿ ಅಜೇಯ 56, ಹಾರ್ದಿಕ್ ಪಾಂಡ್ಯ 46, ಕೆಮರ್ ರೋಚ್ 36ಕ್ಕೆ 3, ಕಾಟ್ರೆಲ್ 50ಕ್ಕೆ 2, ಹೋಲ್ಡರ್ 33ಕ್ಕೆ 2).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com