ವಿಶ್ವಕಪ್ ಆಟಗಾರರ ಆಯ್ಕೆ; ಒತ್ತಡದಲ್ಲಿ ರಾಹುಲ್, ರಾಯುಡು, ಧವನ್, ಮ್ಯಾಜಿಕ್ ಮಾಡ್ತಾರಾ ಬೇಬಿ ಸಿಟ್ಟರ್ 'ಪಂತ್'

ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದೇ ಕಾರಣಕ್ಕೆ ಬಿಸಿಸಿಐ ಮತ್ತು ನಾಯಕ ವಿರಾಟ್ ಕೊಹ್ಲಿ ತಂಡದ ಬಲಾಬಲ ಪರೀಕ್ಷೆ ಮುಂದಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದೇ ಕಾರಣಕ್ಕೆ ಬಿಸಿಸಿಐ ಮತ್ತು ನಾಯಕ ವಿರಾಟ್ ಕೊಹ್ಲಿ ತಂಡದ ಬಲಾಬಲ ಪರೀಕ್ಷೆ ಮುಂದಾಗಿದ್ದಾರೆ.
ಹಾಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಬಾಕಿ ಉಳಿದಿರುವ ಅಂತಿಮ 2 ಪಂದ್ಯಗಳು ಟೀಂ ಇಂಡಿಯಾ ಪಾಲಿಗೆ ಅಕ್ಷರಶಃ ವಿಶ್ವಕಪ್ ಆಡಿಷನ್ ಆಗಿ ಪರಿವರ್ತನೆಯಾಗಿದ್ದು, ಇಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು ವಿಶ್ವಕಪ್ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.
ಇನ್ನು ವಿಶ್ವಕಪ್ ತಂಡಕ್ಕೆ ಧೋನಿ ಅಂತಿಮ ಆಯ್ಕೆಯಾಗಿದ್ದರೂ, ಎರಡನೇ ವಿಕೆಟ್ ಕೀಪರ್ ನಿಟ್ಟಿನಲ್ಲಿ ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಮುಂದಿನ 2 ಏಕದಿನ ಪಂದ್ಯಗಳಿಗೆ ಆಯ್ಕೆಯಾಗಿರುವ ರಿಷಬ್ ಪಂತ್ ಶತಾಯಗತಾಯ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲೇ ಬೇಕಿದೆ.
ಉಳಿದಂತೆ ತಂಡದಲ್ಲಿ ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ಶಿಖರ್ ಧವನ್, ಕೆಎಲ್ ರಾಹುಲ್ ಮತ್ತು ಅಂಬಾಟಿ ರಾಯುಡು ಮೇಲೆ ತೂಗುಗತ್ತಿ ವಾಲುತ್ತಿದ್ದು, ಆಸಿಸ್ ವಿರುದ್ಧದ ಏಕದಿನ ಸರಣಿಯಲ್ಲಿ ಈ ಮೂವರೂ ಉತ್ತಮ ಪ್ರದರ್ಶನ ತೋರಲೇಬೇಕಿದೆ. ಟೀಂ ಇಂಡಿಯಾದ ಟಾಪ್ ಆರ್ಡರ್ ಪದೇ ಪದೇ ವಿಫಲವಾಗುತ್ತಿರುವುದು ನಾಯಕ ಕೊಹ್ಲಿಗೆ ತಲೆನೋವಾಗಿ ಪರಿಣಮಿಸಿದ್ದು, ಇದೇ ಕಾರಣಕ್ಕೆ ಆಸಿಸ್ ವಿರುದ್ಧದ ಬಾಕಿ 2 ಪಂದ್ಯಗಳಲ್ಲಿ ಬದಲಾವಣೆ ತರಲು ನಿರ್ಧರಿಸಿದ್ದಾರೆ. ಪದೇ ಪದೇ ಕಳಪೆ ಪಾರ್ಮ್ ನಿಂದ ಬಳಲುತ್ತಿರುವ ಶಿಖರ್ ಧವನ್ ಗೆ ಇದು ಕೊನೆಯ ಅವಕಾಶವಾಗಿರಲಿದೆ. ಕಳೆದ ಮೂರು ಪಂದ್ಯಗಳಿಂದ ಧವನ್ ಕೇವಲ 22 ರನ್ ಕಲೆಹಾಕಿದ್ದು, ಕೈಗೆ ಸಿಕ್ಕಿರುವ ಅವಕಾಶವನ್ನು ತಾವೇ ತಮ್ಮ ಕೈಯ್ಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಂಬಾಟಿ ರಾಯುಡು ಮತ್ತು ಕೆಎಲ್ ರಾಹುಲ್ ಕೂಡ ತಂಡದಲ್ಲಿನ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಸಾಕಷ್ಚು ಬೆವರು ಹರಿಸಲೇಬೇಕು. ಇತ್ತ ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾದವ್ ಉತ್ತಮವಾಗಿ ಆಡುತ್ತಿರುವುದರಿಂದ ರಾಯುಡು ವೈಫಲ್ಯ ತಂಡಕ್ಕೆ ದೊಡ್ಡ ಅಪಾಯ ತಂದೊಡ್ಡಿಲ್ಲವಾದರೂ ರಾಯುಡು ಎಚ್ಚೆತ್ತುಕೊಂಡು ಆಡಬೇಕಿದೆ. ಇನ್ನು ಕಳಪೆ ಫಾರ್ಮ್ ನಿಂದ ಬೆಂಚ್ ಕಾಯುತ್ತಿರುವ ಕೆಎಲ್ ರಾಹುಲ್ ಕೂಡ ತಮಗೆ ಸಿಕ್ಕ ಅಂತಿಮ ಅವಕಾಶವನ್ನು ಬಳಸಿಕೊಂಡು ವಿಶ್ವಕಪ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕಿದೆ.
ಇನ್ನು ಬೌಲಿಂಗ್ ನಲ್ಲಿ ಭುವಿ, ಶಮಿ ಉತ್ತಮ ಜುಗಲ್ ಬಂದಿಯಾಗಿದ್ದು, ಮೂರನೇ ಪಂದ್ಯದಲ್ಲಿ ಗಾಯಗೊಂಡ ಶಮಿ ಬದಲಿಗೆ ಭುವನೇಶ್ವರ್ ಕುಮಾರ್ ಭಾರತದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಭುವಿಗೆ ಬುಮ್ರಾ, ವಿಜಯ್ ಶಂಕರ್ ಸಾಥ್ ನೀಡಲಿದ್ದು, ಸ್ಪಿನ್ ವಿಭಾಗದಲ್ಲಿ ಜಡೇಜಾ, ಕುಲದೀಪ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪಾರ್ಟ್ ಟೈಮ್ ಬೌಲರ್ ಆಗಿ ಕೇದಾರ್ ಜಾದವ್ ಬಳಕೆ ಪರಿಣಾಮಕಾರಿಯಾಗಬಲ್ಲರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com