ಐಸಿಸಿ ವಿಶ್ವಕಪ್ 2019; ಇಂಗ್ಲೆಂಡ್ ಗೆ ಹಾರಲಿದ್ದಾರೆ 80 ಸಾವಿರ ಮಂದಿ ಭಾರತೀಯರು!

ಈಗಷ್ಟೇ ಭಾರತೀಯ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಗುಂಗಿನಿಂದ ಹೊರ ಬರುತ್ತಿದ್ದು, ಅದಾಗಲೇ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಜ್ವರ ಆರಂಭವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಈಗಷ್ಟೇ ಭಾರತೀಯ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಗುಂಗಿನಿಂದ ಹೊರ ಬರುತ್ತಿದ್ದು, ಅದಾಗಲೇ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಜ್ವರ ಆರಂಭವಾಗಿದೆ.
ಹೌದು. ಬಿಸಿಸಿಐನ ಮಿಲಿಯನ್ ಡಾಲರ್ ಬೇಬಿ ಐಪಿಎಲ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ಭಾರತೀಯ ಕ್ರಿಕೆಟ್ ಪ್ರೇಮಿಗಳ ಚಿತ್ತ ಐಸಿಸಿ ವಿಶ್ವಕಪ್ ಟೂರ್ನಿಯತ್ತ ಬಿದ್ದಿದ್ದು, ಟೂರ್ನಿಯ ಲೈವ್ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ಸುಮಾರು 80 ಸಾವಿರ ಮಂದಿ ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಅಂಕಿ ಅಂಶಗಳು ಲಭ್ಯವಾಗಿವೆ.
ಈ ಬಗ್ಗೆ ದೆಹಲಿಯಲ್ಲಿರುವ ಬ್ರಿಟೀಷ್ ರಾಯಭಾರ ಕಚೇರಿ ಮಾಹಿತಿ ನೀಡಿದ್ದು, ಇದೇ ಜೂನ್ 5 ರಿಂದ ಆರಂಭವಾಗಲಿರುವ ವಿಶ್ವಕಪ್ ಟೂರ್ನಿ ವೀಕ್ಷಣೆಗೆ ವಿಶ್ವದ ಮೂಲೆ ಮೂಲೆಯಿಂದಲೂ ಜನ ಲಂಡನ್ ಗೆ ಪ್ರಯಾಣ ಬೆಳೆಸಿದ್ದು, ಭಾರತದಿಂದಲೇ ಗರಿಷ್ಠ ಮಂದಿ ಲಂಡನ್ ನತ್ತ ಪ್ರಯಾಣಿಸುತ್ತಿದ್ದಾರೆ ಎಂದು ರಾಯಭಾರ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂಲಗಳ  ಪ್ರಕಾರ ಸುಮಾರು 80 ಸಾವಿರ ಮಂದಿ ಕ್ರಿಕೆಟ್ ಪ್ರೇಮಿಗಳು ಲಂಡನ್ ನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಮುಖವಾಗಿ ಜೂನ್ 16ರಂದು ಓಲ್ಡ್ ಟ್ರಾಫೋರ್ಡ್ ನಲ್ಲಿ ನಡೆಯಲಿರುವ ಇಂಡೋ-ಪಾಕ್ ಪಂದ್ಯಕ್ಕಾಗಿ ಅತೀ ಹೆಚ್ಚಿನ ಮಂದಿ ಟಿಕೆಟ್ ಗಳನ್ನು ಕಾಯ್ದಿರಿಸಿದ್ದು, ಜುಲೈ 14ರ ಪಂದ್ಯಕ್ಕೂ ಈಗಿನಿಂದಲೇ ಸಾವಿರಾರು ಮಂದಿ ಭಾರತೀಯ ಟಿಕೆಟ್ ಕಾಯ್ದಿರಿಸಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಅಂದರೆ 2018ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸುಮಾರು 515,000 ಭಾರತೀಯರು ಬ್ರಿಟನ್ ಪ್ರಯಾಣಿಸಿದ್ದರು. ಆದರೆ ಈ ವರ್ಷಾರಂಭದಲ್ಲಿ ಈ ಪ್ರಮಾಣದಲ್ಲಿ ಶೇ. 2ರಷ್ಟು ಪ್ರಮಾಣದ ಪ್ರವಾಸಿಗರ ಕಡಿತವಾಗಿತ್ತು. ಇದೀಗ ವಿಶ್ವಕಪ್ ಟೂರ್ನಿ ಅರಂಭವಾಗುತ್ತಿರುವ ಹಿನ್ನಲೆಯಲ್ಲಿ ಇದನ್ನೂ ಮೀರಿದ ಪ್ರವಾಸಿಗರು ಬ್ರಿಟನ್ ನತ್ತ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದೆಹಲಿಯಲ್ಲಿರುವ ಬ್ರಿಟೀಷ್ ರಾಯಭಾರ ಕಚೇರಿಗೆ ಸುಮಾರು 2 ಲಕ್ಷಕ್ಕೂ ಅಧಿಕ ವೀಸಾ ಅರ್ಜಿಗಳು ಬಂದಿದ್ದು, ಪ್ರತಿನಿತ್ಯ ಸುಮಾರು 3500 ಅರ್ಜಿಗಳು ಆಗಮಿಸುತ್ತಿವೆ ಎಂದು ಕಚೇರಿ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com