ಐಸಿಸಿ ವಿಶ್ವಕಪ್‌ 2019: ಈ ಐವರು ಬೌಲರ್‌ಗಳ ಮೇಲೆ ಎಲ್ಲರ ಚಿತ್ತ, ಯಾರು ಮಿಂಚುತ್ತಾರೆ ಆ ತಂಡಕ್ಕೆ ಕಪ್!

ಇದೇ 30 ರಿಂದ ಆರಂಭವಾಗುವ ಐಸಿಸಿ ವಿಶ್ವಕಪ್‌ ಟೂರ್ನಿಯು ಸಾಕಷ್ಟು ಕುತೂಹಲ ಕೆರಳಿಸಿದ್ದು, ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ ವಿಭಾಗದಲ್ಲಿಯೂ ಯಾರು ಮಿಂಚಲಿದ್ದಾರೆ...
ಜಸ್ಪ್ರೀತ್-ರಬಾಡಾ-ಜೋಫ್ರಾ-ಬೌಲ್ಟ್-ತಾಹೀರ್
ಜಸ್ಪ್ರೀತ್-ರಬಾಡಾ-ಜೋಫ್ರಾ-ಬೌಲ್ಟ್-ತಾಹೀರ್
ಇದೇ 30 ರಿಂದ ಆರಂಭವಾಗುವ ಐಸಿಸಿ ವಿಶ್ವಕಪ್‌ ಟೂರ್ನಿಯು ಸಾಕಷ್ಟು ಕುತೂಹಲ ಕೆರಳಿಸಿದ್ದು, ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ ವಿಭಾಗದಲ್ಲಿಯೂ ಯಾರು ಮಿಂಚಲಿದ್ದಾರೆ ಎಂಬಂತೆ ಪ್ರಶ್ನೆಗಳು ಎಲ್ಲರಲ್ಲಿಯೂ ಕಾಡುವುದು ಸಹಜ. ಕಳೆದ ಹಲವು ವರ್ಷಗಳಿಂದ ಸ್ಥಿರ ಪ್ರದರ್ಶನ ಹಾಗೂ ಪ್ರಸ್ತುತ ಲಯ ಗಮನಿಸಿ ಈ ಕೆಳಗೆ ನೀಡಿರುವ ಅಗ್ರ ಐವರು ಮಹತ್ವದ ಟೂರ್ನಿಯಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ. 
1.ಜಸ್ಪ್ರೀತ್‌ ಬೂಮ್ರಾ: 
ವಿಶ್ವದ ಅಗ್ರ ಕ್ರಮಾಂಕದ ಬೌಲರ್‌ ಭಾರತದ ಜಸ್ಪ್ರೀತ್‌ ಬೂಮ್ರಾ ಅವರು ಕಳೆದ ಹಲವು ವರ್ಷಗಳಿಂದ ಟೀಂ ಇಂಡಿಯಾ ಬೌಲಿಂಗ್‌ ವಿಭಾಗದಲ್ಲಿ ಸಂಚಲನ ಮೂಡಿಸಿದ್ದಾರೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಗುರುತಿಸಿಕೊಂಡಿದ್ದ ಅವರು ಹಂತ- ಹಂತವಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಬೌಲಿಂಗ್‌ ಕೌಶಲವನ್ನು ಮೈಗೂಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಬೂಮ್ರಾ ಟೆಸ್ಟ್‌, ಏಕದಿನ ಹಾಗೂ ಟಿ-20 ಮಾದರಿಯಲ್ಲಿ ಗುಣಮಟ್ಟದ ಬೌಲರ್‌ ಆಗಿದ್ದಾರೆ. ಅವರ ವಿಶಿಷ್ಠ ಶೈಲಿಯ ಬೌಲಿಂಗ್ ಹೆಚ್ಚು ಗಮನ ಸೆಳೆದಿದ್ದು, ಅವರ ಯಾರ್ಕರ್‌ ಎಸೆತಗಳನ್ನು ಎದುರಿಸುವಲ್ಲಿ ಬ್ಯಾಟ್ಸ್‌ಮನ್‌ಗಳು ತಡಕಾಡುತ್ತಾರೆ. ಸದ್ಯ 774 ಅಂಕಗಳೊಂದಿಗೆ ಐಸಿಸಿ ಶ್ರೇಯಾಂಕದಲ್ಲಿ ಬೂಮ್ರಾ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಸ್ತುತ ವಿಶ್ವಕಪ್‌ನಲ್ಲಿ ಅವರ ಬೌಲಿಂಗ್‌ ಹೆಚ್ಚು ಗಮನಸೆಳೆಯಲಿದ್ದಾರೆ.
2.ಕಗಿಸೋ ರಬಾಡ: 
ದಕ್ಷಿಣ ಆಫ್ರಿಕಾದ ಯುವ ವೇಗಿ ಕಗಿಸೋ ರಬಾಡ ವಿಶ್ವದಲ್ಲೇ ತನ್ನ ವೇಗದ ಬೌಲಿಂಗ್‌ನಿಂದ ಗಮನ ಸೆಳೆದಿದ್ದಾರೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದಂತೆ ಕ್ರಿಕೆಟ್‌ ಜಗತ್ತನ್ನೆ ತನ್ನತ್ತಾ ಸೆಳೆಯುವಂತೆ ಬೌಲಿಂಗ್‌ ಪ್ರದರ್ಶನ ತೋರಿದ್ದರು. ತನ್ನ ಬೌಲಿಂಗ್‌ನಲ್ಲಿ ವೇಗ ಹಾಗೂ ನಿಧಾನಗತಿಯಲ್ಲಿ ನಿಯಂತ್ರಣ ಹೊಂದಿದ್ದಾರೆ. ನಾಯಕ ಸೂಚಿಸುವಂತೆ ಸನ್ನಿವೇಶಕ್ಕೆ ತಕ್ಕಂತೆ ತಂಡಕ್ಕೆ ಆಸರೆಯಾಗುವ ಸಾಮಾರ್ಥ್ಯ ಇವರ ಬೌಲಿಂಗ್‌ ಶೈಲಿಯಲ್ಲಿದೆ. ಇತ್ತೀಚೆಗೆ ಮುಕ್ತಾಯವಾಗಿದ್ದ ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ರಬಾಡ ಎರಡನೇ ಸ್ಥಾನದಲ್ಲಿದ್ದಾರೆ. ಐಸಿಸಿ ಶ್ರೇಯಾಂಕದಲ್ಲಿ ರಬಾಡ 702 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಇವರ ಡೆತ್‌ ಓವರ್‌ಗಳಲ್ಲಿ ಅದ್ಭುತವಾಗಿ ಒತ್ತಡವನ್ನು ನಿಭಾಯಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
3. ಜೋಫ್ರಾ ಆರ್ಚರ್‌: 
ಕಳೆದ ಮಾರ್ಚ್‌ನಲ್ಲಿ ಇಂಗ್ಲೆಂಡ್‌ ಪೌರತ್ವ ಪಡೆದ ಜೋಫ್ರಾ ಆರ್ಚರ್‌, ಇಂಗ್ಲೆಂಡ್‌ ಪರ ಆಡಿದ ಬೆರಳೆಣಿಕೆ ಪಂದ್ಯಗಳಲ್ಲಿ ತನ್ನ ಸಾಮಾರ್ಥ್ಯ ಏನೆಂಬುದನ್ನೂ ಸಾಭೀತುಪಡಿಸಿದ್ದಾರೆ. ಐಪಿಎಲ್‌ಗೆ ಚೊಚ್ಚಲ ಪದಾರ್ಪಣೆ ಮಾಡಿದ್ದ ಆರ್ಚರ್‌, ರಾಜಸ್ಥಾನ್‌ ರಾಯಲ್ಸ್‌ ಪರ ಅಮೋಘ ಬೌಲಿಂಗ್‌ ಮಾಡಿದ್ದರು. ಒಂದೇ ಪಂದ್ಯದಲ್ಲಿ ಅವರು ಆರು ವಿಕೆಟ್‌ ಪಡೆದು ವಿಶಿಷ್ಠ ಸಾಧನೆಯನ್ನು ಮಾಡಿದ್ದರು. ಐಪಿಎಲ್‌ನಲ್ಲಿ ಇವರ ಪ್ರತಿಭೆ ಗುರುತಿಸಿದ ಇಂಗ್ಲೆಂಡ್‌, ಪಾಕಿಸ್ತಾನ ವಿರುದ್ಧ ಏಕದಿನ ಸರಣಿಗೆ ಚೊಚ್ಚಲ ಅವಕಾಶ ನೀಡಿತ್ತು. ಅದರಂತೆ, ಅವರು, ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಅದ್ಭುತ ಬೌಲಿಂಗ್‌ ಮಾಡಿದ್ದರು. ವೇಗ ಹಾಗೂ ಸ್ವಿಂಗ್‌ ನೊಂದಿಗೆ ಚೆಂಡನ್ನು ನಿಯಂತ್ರಿಸುವ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಅಲ್ಲದೇ, ಡೆತ್‌ ಓವರ್‌ಗಳಲ್ಲಿ ನಾಯಕನ ಸೂಚಿಸಿದಂತೆ ಬೌಲಿಂಗ್‌ ನಿಭಾಯಿಸಲಿದ್ದಾರೆ.
4. ಟ್ರೆಂಟ್‌ ಬೌಲ್ಟ್‌: 
ನ್ಯೂಜಿಲೆಂಡ್‌ ತಂಡದ ಹಿರಿಯ ವೇಗಿ ಟ್ರೆಂಟ್‌ ಬೌಲ್ಟ್‌ ವಿಶ್ವದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು.
ಕಳೆದ ಹಲವು ವರ್ಷಗಳಿಂದ ನ್ಯೂಜಿಲೆಂಡ್‌ ಕ್ರಿಕೆಟ್‌ಗೆ ತನ್ನದೇ ಆದ ಕೊಡುಗೆ ನೀಡುವಲ್ಲಿ ಸಫಲರಾಗಿದ್ದಾರೆ. 759 ಅಂಕಗಳನ್ನು ತನ್ನ ಖಾತೆಯಲ್ಲಿ ಇರಿಸಿಕೊಂಡಿರುವ ಬೌಲ್ಟ್‌, ಐಸಿಸಿ ವಿಶ್ವ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅದ್ಭುತ ಲಯದಲ್ಲಿರುವ ಅವರು ಭಾರತದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಪಡೆಯುವ ಮೂಲಕ ನ್ಯೂಜಿಲೆಂಡ್‌ಗೆ ಸುಲಭ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಇವರ ಮೇಲೂ ಕೂಡ ವಿಶ್ವಕಪ್‌ ಟೂರ್ನಿಯಲ್ಲಿ ಬಹಳಷ್ಟು ನಿರೀಕ್ಷೆ ಇಡಲಾಗಿದೆ. 79 ಏಕದಿನ ಪಂದ್ಯಗಳಾಡಿರುವ ಇವರು ಒಟ್ಟು 147 ವಿಕೆಟ್‌ ಕಬಳಿಸಿದ್ದಾರೆ. 
5. ಇಮ್ರಾನ್‌ ತಾಹೀರ್‌: 
ಪ್ರಸ್ತುತ ವಿಶ್ವದ ಗುಣಮಟ್ಟದ ಸ್ಪಿನ್ನರ್‌ಗಳಲ್ಲಿ ದಕ್ಷಿಣ ಆಫ್ರಿಕಾದ ಇಮ್ರಾನ್‌ ತಾಹೀರ್‌ ಮುಂಚೂಣಿಯಲ್ಲಿದ್ದಾರೆ. ಇತ್ತೀಚೆಗೆ ಮುಕ್ತಾಯವಾಗಿದ್ದ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಿದ್ದ ತಾಹೀರ್‌ ಅದ್ಭುತ ಬೌಲಿಂಗ್‌ ಮಾಡಿದ್ದರು. ಐಪಿಎಲ್‌ನಲ್ಲಿ 17 ಪಂದ್ಯಗಳಾಡಿದ್ದ ತಾಹೀರ್‌, ಒಟ್ಟು 26 ವಿಕೆಟ್‌ ಪಡೆದಿದ್ದರು. ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎಂಬ ಕೀರ್ತಿಗೆ ಅವರು ಭಾಜನರಾಗಿದ್ದರು. ಕಳೆದ ಹಲವು ವರ್ಷಗಳಿಂದ ದಕ್ಷಿಣ ಆಫ್ರಿಕಾ ತಂಡದ ಸ್ಪಿನ್‌ ವಿಭಾಗದಲ್ಲಿ ಅವರು ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. 703 ಅಂಕಗಳೊಂದಿಗೆ ತಾಹೀರ್‌ ಐಸಿಸಿ ಬೌಲಿಂಗ್‌ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com